Basavanagudi Kadalekai Parishe: ನೋಡ ಬನ್ನಿ ಬಸವನಗುಡಿ ಪರಿಷೆಯಾ..

By Suvarna News  |  First Published Nov 21, 2022, 11:04 AM IST

ಬೆಂಗಳೂರು ಐಟಿ ಸಿಟಿ, ಟ್ರಾಫಿಕ್ ಸಿಟಿ ಎಂದೆಲ್ಲಾ ಕರೆಸಿಕೊಂಡಿದ್ದರೂ, ಈ ಮಹಾನಗರ ತನ್ನ ಐತಿಹಾಸಿಕ ಪರಂಪರೆಯನ್ನೂ ಹಾಗೆಯೇ ಉಳಿಸಿಕೊಂಡಿದೆ. ದೇಸೀ ಸೊಗಡಿನ ಹಬ್ಬ, ಜಾತ್ರೆಗಳು ಇಲ್ಲಿ ಆಗಿಂದಾಗೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಉತ್ತಮ ಸಾಕ್ಷಿ, ಅತ್ಯದ್ಭುತವಾಗಿ ನಡೆಯುವ ಬಸವನಗುಡಿ ಕಡಲೇಕಾಯಿ ಪರಿಷೆ. ನಿನ್ನೆಯಿಂದ ಆರಂಭಗೊಂಡಿರುವ ಕಡಲೇಕಾಯಿ ಪರಿಷೆಗೆ ಜನಸಾಗರವೇ ಹರಿದುಬರುತ್ತಿದೆ. ಆ ಬಗ್ಗೆ ಇನ್ನಷ್ಟು ವಿಚಾರ ತಿಳ್ಕೊಳ್ಳೋಣ ಬನ್ನಿ. 


ಬೆಂಗಳೂರು: ಮಹಾನಗರ ಅದೆಷ್ಟೇ ಅಭಿವೃದ್ಧಿಯಾಗಿದ್ದರೂ ಇಂದಿಗೂ ಅದೆಷ್ಟೋ ಏರಿಯಾಗಳು ತಮ್ಮ ಹಳೇ ಶ್ರೀಮಂತ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡಿವೆ. ಹಲವು ದೇವಾಲಯಗಳಿಂದ ಸುತ್ತುವರೆದಿರುವ ಬಸವನಗುಡಿಯಲ್ಲಿ ಪೂಜೆ ಪುನಸ್ಕಾರಗಳು, ಹಬ್ಬಹರಿದಿನಗಳು, ಜಾತ್ರೆಗಳು ಜೋರಾಗಿಯೇ ನಡೆಯುತ್ತವೆ. ಅದರಲ್ಲೊಂದು ಐತಿಹಾಸಿನ ಬಸವನಗುಡಿ ಕಡಲೇಕಾಯಿ ಪರಿಷೆ. ವರ್ಷಕ್ಕೊಮ್ಮೆ ನವೆಂಬರ್‌ ತಿಂಗಳಿನಲ್ಲಿ ನಡೆಯುವ ಈ ಜಾತ್ರೆ ತುಂಬಾ ಪ್ರಸಿದ್ಧಿಯಾಗಿದೆ. ಈ ಬಾರಿ ಕಡೇ ಕಾರ್ತಿಕ ಸೋಮವಾರದ ಮುನ್ನ ದಿನ ಭಾನುವಾರ (ನ. 20ರ) ಅಂದ್ರೆ ನಿನ್ನೆ  ಕಡಲೆಕಾಯಿ (Peanuts) ಪರಿಷೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. 

ಬಸವನಗುಡಿ ರಸ್ತೆ (Basavangudi Road) ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು,ಜನರು ನಗರದ ವಿವಿಧ ಬಡಾವಣೆಗಳಿಂದ ಪರಿಷೆಗೆ ಆಗಮಿಸಿ, ದೇವರ ದರ್ಶನ ಪಡೆದು ಖುಷಿಪಡುತ್ತಿದ್ದಾರೆ. ಬುಲ್‌ ಟೆಂಪಲ್‌ ಮುಖ್ಯರಸ್ತೆಯ ಇಕ್ಕೆಲದಲ್ಲಿ ಸಾವಿರಕ್ಕೂ ಹೆಚ್ಚಿನ ತರಹೇವಾರಿ ಮಳಿಗೆಗಳು ತೆರೆದುಕೊಂಡಿವೆ. ಕಹಳೆ ಬಂಡೆ ರಸ್ತೆ, ಪಶ್ಚಿಮ ಆಂಜನೇಯ ಗುಡಿ ರಸ್ತೆ, ಮೌಂಟ್‌ ರಾಯ್‌ ರಸ್ತೆಗಳಲ್ಲೂ ಪರಿಷೆ ಕಳೆಗಟ್ಟಿದೆ. 

Tap to resize

Latest Videos

ವೆರೈಟಿ ಕಡಲೇಕಾಯಿ: ನಾಟಿ, ಮರಲು, ಬೆಳ್ಳಿಕಾಯಿ, ಗಡಂಗ್‌, ಕೆಂಪುಗಡಲೆ, ಕಪ್ಪುಕಡಲೆ, ದೊಡ್ಡ ಗಾತ್ರದ ಬೋಂಡಾ ಕಡಲೆಕಾಯಿ ರಾಶಿಗಳು ರಸ್ತೆಯ ಎರಡು ಬದಿಯಲ್ಲಿ ಗಮನ ಸೆಳೆಯುತ್ತಿದೆ. ಚಿಂತಾಮಣಿ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ವ್ಯಾಪಾರಿಗಳು, ರೈತರು ಕಡಲೆಕಾಯಿಯನ್ನು ಮಾರಾಟಕ್ಕೆ (Sale) ತಂದಿದ್ದಾರೆ. 

ಬೆಲೆ ಕೊಂಚ ಹೆಚ್ಚು: ಸಾಮಾನ್ಯವಾಗಿ ಯಾವಾಗಲೂ ಖರೀದಿಸುವ ಕಡಲೇಕಾಯಿ ಬೆಲೆಗೆ ಹೋಲಿಸಿದರೆ, ಪರಿಷೆಯಲ್ಲಿ ಕಡಲೇಕಾಯಿ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಬಸವನಗುಡಿ ಪರಿಷೆ ಮನಸ್ಸಿಗೆ ಹೆಚ್ಚು ಆಪ್ತವಾಗಿರುವ ಕಾರಣ ಇಲ್ಲಿಗೆ ಆಗಮಿಸುವ ಭಕ್ತರು ಕನಿಷ್ಟ ಒಂದು ಸೇರು ಕಡಲೇಕಾಯಿಯನ್ನಾದರೂ ಖರೀದಿಸಿ ಕೊಂಡೊಯ್ಯುತ್ತಾರೆ.

ನಂದಿ ತೆಪ್ಪೋತ್ಸವ: ಕಾರ್ತಿಕ ಸೋಮವಾರದಂದು ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆಯ ಪ್ರಮುಖ ಧಾರ್ಮಿಕ ವಿಧಿಗಳು ಜರುಗಲಿವೆ. ಮುಖ್ಯವಾಗಿ ದಶಕದ ಬಳಿಕ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಕೋವಿಡ್‌ ನಿರ್ಬಂಧವಿಲ್ಲದ ಕಾರಣ ಎರಡು ವರ್ಷದ ಬಳಿಕ ಪರಿಷೆ ಹಿಂದಿನ ವೈಭವಕ್ಕೆ ಮರಳಿದೆ.

ಜಾತ್ರೆ ಜೊತೆಗೆ ಶಾಪಿಂಗ್‌: ಕಡಲೇಕಾಯಿ ಪರಿಷೆ ಎಂದ ಮಾತ್ರಕ್ಕೆ ಇಲ್ಲಿ ಕೇವಲ ಕಡಲೇಕಾಯಿ ಮಾತ್ರ ಸಿಗುವುದಲ್ಲ, ಭರ್ಜರಿಯಾಗಿ ಇತರ ವಸ್ತುಗಳನ್ನು ಸಹ ಶಾಪಿಂಗ್ ಮಾಡಬಹುದು. ಹೋಮ್‌ ಡೆಕೋರ್ ಐಟಂ, ಜ್ಯುವೆಲ್ಲರಿ, ಸ್ವೀಟ್ಸ್‌, ಖಾರದ ತಿಂಡಿಗಳು, ಬ್ಯಾಗ್ಸ್‌ ಎಲ್ಲವೂ ಕಡಿಮೆ ಬೆಲೆಯಲ್ಲಿ ದೊರಕುತ್ತದೆ.

1537ರಲ್ಲಿ ಆರಂಭವಾಗಿರುವ ಕಡಲೆಕಾಯಿ ಪರಿಷೆ:
1537 ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದ ಮೇಲೆ ದೊಡ್ಡ ಬಸವ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯವನ್ನು ಸದ್ಯ ಬುಲ್ ಟೆಂಪಲ್ ಎಂದು ಕರೆಯಲಾಗುತ್ತಿದೆ. 1537 ಕ್ಕೂ ಹಿಂದೆ ಸ್ವರ್ಗದಿಂದ ನಂದಿ ಬಂದು ದೇವಸ್ಥಾನದ ಸುತ್ತಮುತ್ತಲು ರೈತರು ಬೆಳೆಯುತ್ತಿದ್ದ ಬೆಳೆಯನ್ನ ತಿಂದು ಹೋಗುತ್ತಿತ್ತು. ಹಿನ್ನಲೆ ಬೆಟ್ಟದ ಮೇಲೆ ದೊಡ್ಡ ಬಸವಣ್ಣವ ದೇವಾಲಯ ಸ್ಥಾಪಿಸಿ ಪ್ರತಿವರ್ಷ ತಾವು ಬೆಳೆದ ಕಡಲೆಕಾಯಿಯನ್ನ ನಂದಿಗೆ ಅರ್ಪಿಸಲು ಶುರುಮಾಡಿದರು ಎನ್ನುವ ಪ್ರತೀತಿ ಇದೆ. ಹಿನ್ನಲೆ ಅಂದಿನಿಂದ ಇಲ್ಲಿಗೆ ಸುತ್ತಲಿನ ಗ್ರಾಮಗಳ ರೈತರು ಪ್ರತಿ ವರ್ಷ  ಬಂದು ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಬಸವಣ್ಣನಿಗೆ ಅರ್ಪಿಸುತ್ತಾರೆ. ಆ ಸಂಪ್ರದಾಯ ಇಂದಿಗೂ ಮುಂದುವರೆಯುತ್ತಿದೆ.

click me!