Udupi: ನಾಳೆಯಿಂದ ಪಡುಬಿದ್ರಿಯಲ್ಲಿ ಢಕ್ಕೆಬಲಿ ನಡಾವಳಿ

By Suvarna News  |  First Published Jan 18, 2023, 2:47 PM IST

ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿನ ದ್ವೈವಾರ್ಷಿಕ ನಡಾವಳಿ
ಪಡುಬಿದ್ರಿಯ ಬಯಲು ಆಲಯದಲ್ಲಿ 2 ವರ್ಷಕ್ಕೊಮ್ಮೆ ನಡೆಯುವ ಢಕ್ಕೆಬಲಿ
ರಾತ್ರಿ ವೇಳೆ ನಡೆವ ಸೇವೆಗಳು


ಆಸ್ತಿಕರ ಶ್ರದ್ಧಾಕೇಂದ್ರವಾಗಿರುವ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿನ ದ್ವೈವಾರ್ಷಿಕ ನಡಾವಳಿ 'ಢಕ್ಕೆಬಲಿ'ಗೆ ಈಗಾಗಲೇ ಕ್ಷಣಗಣನೆ ಆರಂಭಗೊಂಡಿದೆ. ಜ. 19ರಂದು ಮಂಡಲ ಹಾಕುವ ಢಕ್ಕೆಬಲಿ ಯೊಂದಿಗೆ ಆರಂಭಗೊಳ್ಳುವ ಈ ಸೇವೆಗಳು ಮಾರ್ಚ್ 11ರ ಮಂಡಲ ವಿಸರ್ಜನೆಯ ಢಕ್ಕೆಬಲಿಯೊಂದಿಗೆ ಸಂಪನ್ನಗೊಳ್ಳಲಿದೆ. 

ಈ ಬಾರಿ ಒಟ್ಟು 37 ಸೇವೆಗಳು ನಡೆಯುತ್ತವೆ. ದಟ್ಟ ಕಾನನದ ನಡುವೆ ಉದ್ಭವ ಲಿಂಗರೂಪಿಯಾಗಿ ನೆಲೆಸಿರುವ ಖಡ್ಗೇಶ್ವರೀ ದೇವಿಯ ಶಕ್ತಿ ಪೀಠವು ಭಕ್ತರಿಗೆ ಮುಗಿಯದ ಕುತೂಹಲವಾಗಿದೆ. ವಿಶೇಷ ಆರಾಧನಾ ತಾಣವಾಗಿರುವ ಈ ಬ್ರಹ್ಮಸ್ಥಾನವು ಶಾಂತವಾಗಿ ಪಕ್ಷಿಗಳ ಚಿಲಿಪಿಲಿ ನಾದದಿಂದ ಮೈದುಂಬಿಕೊಳ್ಳುತ್ತದೆ. ಇಲ್ಲಿನ ದೈವಿಕ, ಕಾಂತೀಯ ಶಕ್ತಿಯು ಭಕ್ತರಿಗೆ ವಿಶೇಷ ಅನುಭವ ನೀಡುತ್ತದೆ. ಇಲ್ಲಿ ಮರಳಿನಲ್ಲೇ ಕುಳಿತುಕೊಳ್ಳುವ ಭಕ್ತರು ಪೂರ್ಣ ಶಾಂತತೆಯ ಮಧ್ಯೆ ಮನಸಾರೆ ಶಕ್ತಿರೂಪಿಣಿಯ ಧ್ಯಾನಗೈಯ್ಯುತ್ತಾರೆ. ಮನಃ ಸಂಕಲ್ಪ ಸಿದ್ಧಿಯೂ ಆಗುತ್ತದೆ.

Tap to resize

Latest Videos

undefined

ಪಡುಬಿದ್ರಿ ಖಡೇಶ್ವರಿ ಬ್ರಹ್ಮಸ್ಥಾನಕ್ಕೆ ದೇಶ, ವಿದೇಶಗಳಲ್ಲೂ ಭಕ್ತರಿದ್ದಾರೆ. ಉಡುಪಿಯ ಪರ್ಯಾಯೋತ್ಸವವು ಒಂದು ವರ್ಷವಾದರೆ ಅದರ ಮುಂದಿನ ವರ್ಷ, ಪ್ರತಿ ಎರಡು ವರ್ಷಗಳಿಗೊಮ್ಮೆ ಪಡುಬಿದ್ರಿ ಬ್ರಹ್ಮಸ್ಥಾನದಲ್ಲೂ ಢಕ್ಕೆಬಲಿ ಸೇವೆಗಳು ನಡೆಯುತ್ತಿರುತ್ತದೆ. ನಿರ್ದಿಷ್ಟ ದಿನಗಳಲ್ಲಿ ಒಂದೂವರೆ ತಿಂಗಳುಗಳ ಕಾಲ, ಪಡುಬಿದ್ರಿ ಊರ ದೇವರಾದ ಶ್ರೀ ಮಹಾಲಿಂಗೇಶ್ವರನ ವರ್ಷಾವಧಿ ಜಾತ್ರೆಗೆ ಮೊದಲು ಸಂಪ್ರದಾಯದಂತೆ ಈ ಸೇವೆಗಳು ಮುಕ್ತಾಯಗೊಳ್ಳುತ್ತವೆ.

ಈ ವಸ್ತುಗಳನ್ನು ಹಂಚಿಕೊಂಡ್ರೆ 2023ಕ್ಕೆ ದೌರ್ಭಾಗ್ಯ ಆಹ್ವಾನಿಸಿದಂತೇ ಸರಿ!

ರಾತ್ರಿ ವೇಳೆಯಲ್ಲೇ ಈ ಢಕ್ಕೆಬಲಿ ಸೇವೆಗಳು ಬ್ರಹಸ್ಥಾನದಲ್ಲಿ ನಡೆಯುತ್ತವೆ. ಸಂಜೆಯ ವೈಭವದ ಹೊರೆಕಾಣಿಕೆ ಮೆರವಣಿಗೆಯಿಂದ ಆರಂಭಿಸಿ, ರಾತ್ರಿಯ ತಂಬಿಲ, ಢಕ್ಕೆಬಲಿ ಸೇವೆಗಳು ಆನಂತರ ಮರುದಿನ ಮುಂಜಾನೆ ಪ್ರಸಾದ ವಿತರಣೆ ಯೊಂದಿಗೆ ಆಯಾಯ ದಿನದ ಸೇವೆಗಳು ಸಂಪನ್ನಗೊಳ್ಳುತ್ತವೆ. 

ಈ ತಾಣವನ್ನು ಬಗೆ ಬಗೆಯ ಫಲಪುಷ್ಪ ಅಲಂಕಾರಗಳಿಂದ ರೂಪಿಸಲಾಗುತ್ತದೆ. ದಿನಕ್ಕೊಂದು ಅಲಂಕಾರ ಮಾಡುವ ಮೂಲಕ  ಶ್ರೀ ಖಡ್ಗೇಶ್ವರೀ ತಾಯಿಯ ಪೂರ್ಣ ಸ್ವರೂಪವನ್ನು ತೆರೆದಿಡುತ್ತದೆ.

ಇಲ್ಲಿನ ತಂಬಿಲ, ಢಕ್ಕೆಬಲಿ ಸೇವೆಗಳು ವಿಶೇಷ. ರಾತ್ರಿಯ ವೇಳೆ ಢಕ್ಕೆಯ ನಿನಾದದ ನಡುವೆ  ಈ ಆಚರಣೆಯನ್ನು ನೋಡುವುದೇ ಒಂದು ವಿಶೇಷ ಅನುಭವ. ಇಲ್ಲಿನ ಸೇವಾಕಾಲದಲ್ಲಿ ಪಂಚವಾದ್ಯಗಳ ನಿನಾದ, ದಿಡುಂಬು, ಡೋಲುಗಂಟೆಗಳೂ ಮೊಳಗುತ್ತಿರುತ್ತವೆ. 

ಎರಡು ತಿಂಗಳ ಕಾಲ ಮದುವೆ, ಮುಂಜಿ ಇರದು!
ಢಕ್ಕೆಬಲಿಯ ದಿನಗಳಲ್ಲಿ ಊರಲ್ಲಿ ಯಾವುದೇ ಮದುವೆ, ಮುಂಜಿಗಳು ನಡೆಯದು. ಬ್ರಹ್ಮಸ್ಥಾನದಲ್ಲೂ ಇಲ್ಲಿನ ಭಕ್ತರು ಸಂಪ್ರದಾಯ, ಕಟ್ಟಳೆಗಳನ್ನು ಮುರಿಯುವುದಿಲ್ಲ. ರಾತ್ರಿಯಿಡೀ ನಡೆವ ಈ ಸೇವೆಗಳ ಅವಧಿಯಲ್ಲಿ ಸ್ವಚ್ಛಂದವಾಗಿ ಈ ಕಾನನದ ಮಧ್ಯೆ ಮಹಿಳೆಯರು, ಪುರುಷರ ಸಹಿತ ಸಾವಿರಾರು ಭಕ್ತರು ಸೇರಿರುತ್ತಾರೆ. 

ಈ 6 ರಾಶಿಗಳು ಮನಸ್ಸು ಮಾಡಿದರೆ ಶತಕೋಟ್ಯಧಿಪತಿಗಳಾಗುವುದು ಕನಸಿನ ಮಾತಲ್ಲ!

ಜನಪದದೊಂದಿಗೆ ವೈದಿಕವೂ ಮೇಳೆಸಿದ್ದರೂ ಒಂದು ರೀತಿಯಲ್ಲಿ ಪಡುಬಿದ್ರಿ ಬಹಸ್ಥಾನದಲ್ಲಿ ತೌಳವ ಸಂಪ್ರದಾಯಬದ್ದ ಆರಾಧನೆಯ ತುಣುಕುಗಳೇ ಅಡಕವಾಗಿವೆ.
ಸನ್ನಿಧಾನದ ಪೂಜೆಯ ಬಳಿಕ  ಅರ್ಚಕರು ನೀಡುವ ತಾಯಿಯ ಮೂಲ ಪ್ರಸಾದವಾಗಿ ಸರ್ವರಿಗೂ ಲಭಿಸುವ 'ಮರಳು' ಇಲ್ಲಿನ ವಿಶಿಷ್ಟ ಸಂಪ್ರದಾಯದ ವಿಶೇಷ ರೂಪಗಳಾಗಿವೆ. ವೀಡಿಯೋ ಶೂಟಿಂಗ್, ಫೋಟೋಗ್ರಫಿಗೆ ಇಲ್ಲಿ ನಿಷೇಧವಿದೆ. ಯಾವುದೇ ಕಾಣಿಕೆಯ ಹುಂಡಿಗಳಿಲ್ಲ, ಬ್ರಹ್ಮಸ್ಥಾನದ ಒಳಗೂ ಹೊರಗೂ ಯಾವುದೇ ವಿದ್ಯುದ್ದೀಪಾಲಂಕಾರಗಳಿರುವುದಿಲ್ಲ. ಕೇವಲ ದೊಂದಿ ಬೆಳಕು, ಎಣ್ಣೆ ಸುರಿದು ಹಚ್ಚುವ ದೀಪದ ಬೆಳಕೇ ಇಲ್ಲಿನ ಈ ಸುಂದರ ತಾಣವನ್ನು ಬೆಳಗುತ್ತವೆ.

click me!