Chitradurga: ಊರಿಗೂರೇ ಬರಿಗಾಲಲ್ಲಿದ್ದು ಮಾರಿಕಾಂಬಾ ಜಾತ್ರೆ ಆಚರಣೆ

By Suvarna NewsFirst Published Jan 18, 2023, 1:05 PM IST
Highlights

32 ವರ್ಷಗಳ ಬಳಿಕ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಮಾರಿಕಾಂಬದೇವಿ ಅದ್ದೂರಿ ಜಾತ್ರೆ
2 ದಿನಗಳ ಕಾಲ ಯಾರ ಕಾಲಲ್ಲೂ ಚಪ್ಪಲಿ ಇರಲ್ಲ
ಮಳೆ, ಬೆಳೆ, ಸಮೃದ್ಧಿಗಾಗಿ ಪಾದರಕ್ಷೆ ಇಲ್ಲದೆ ಊರನ್ನು ಶುದ್ಧವಾಗಿಡೋ ಜನ

ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಆ ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಗ್ರಾಮಸ್ಥರೆಲ್ಲ ಸೇರಿಕೊಂಡು ಗ್ರಾಮ ದೇವತೆಗಳಿಗೆ ಜಾತ್ರೆ ಮಾಡದೇ 32 ವರ್ಷಗಳೇ ಕಳೆದು ಹೋಗಿದ್ದವು. ಪ್ರತಿ 5 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಜಾತ್ರೆ ಅನಿವಾರ್ಯ ಕಾರಣಗಳಿಂದ ನಿಂತು ಹೋಗಿತ್ತು. ಆದರೆ 32 ವರ್ಷಗಳ ನಂತರ ಮತ್ತೆ  ಜಾತ್ರೆಯಲ್ಲಿ ಮಡಿ ಕಾಪಾಡಲು ಇಡೀ ಗ್ರಾಮದಲ್ಲಿ ಅವರು ಒಂದು ನಿಯಮ ಅನುಸರಿಸಿದ್ರು. ಏನದು ಅಂತೀರಾ ? ಈ ಸ್ಟೋರಿ ಓದಿ.

ಇಡೀ ಗ್ರಾಮದಲ್ಲಿ ಎಲ್ಲಿ ನೋಡಿದರೂ ಸಂಭ್ರಮದ‌ ವಾತಾವರಣ. ತಳಿರು ತೋರಣ ಕಟ್ಟಿ, ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ಗ್ರಾಮ ದೇವತೆಗಳ ದೇವಸ್ಥಾನ. ಇದೆಲ್ಲದರ ಜೊತೆಗೆ ಯಾರ ಕಾಲಲ್ಲೂ ಚಪ್ಪಲಿಗಳಿಲ್ಲ. ಊರಲ್ಲಿ ಚಪ್ಪಲಿ ಹಾಕಿಕೊಂಡು ಬಾರದಂತೆ ಜನರಿಗೆ ತಿಳಿ ಹೇಳಲು ಊರ ದ್ವಾರದಲ್ಲಿ ನಿಂತ ಜನರು. ಹೌದು ! ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಬಳಿ. ಗ್ರಾಮ ದೇವತೆಗಳಾದ  ಮಾರಿಕಾಂಬದೇವಿ, ದುರ್ಗಾಂಬಿಕಾದೇವಿ, ದುರ್ಗಾ ಪರಮೇಶ್ವರಿ ದೇವತೆಯರ ಜಾತ್ರಾ ಮಹೋತ್ಸವದಲ್ಲಿ. ಮೊದಲು ಈ ಗ್ರಾಮದಲ್ಲಿ ಐದು ವರ್ಷಗಳಿಗೊಮ್ಮೆ ಜಾತ್ರೆ ನಡೆಯುತ್ತಿತ್ತು. ಕಳೆದ 32 ವರ್ಷಗಳಿಂದ ಅನಿವಾರ್ಯ ಕಾರಣಗಳಿಂದಾಗಿ ಜಾತ್ರೆ ನಡೆದಿರಲಿಲ್ಲ. ಹಾಗಾಗಿ ಈಗ ಗ್ರಾಮದ ಹಿರಿಯರು, ಹಾಗೂ ಯುವಕರು ಸೇರಿ ಇಂದಿನಿಂದ 5 ದಿನಗಳ ಕಾಲ ಅದ್ಧೂರಿ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಆಚರಿಸುತ್ತಿದ್ದಾರೆ. ಗ್ರಾಮ ದೇವತೆಯರಿಗೆ ಗಂಗಾಪೂಜೆ ಮಾಡಿ, ಪೂಜಾ ಕೈಂಕರ್ಯ ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬಂದು ಗ್ರಾಮ ದೇವತೆಯರನ್ನು ಪ್ರತಿಷ್ಠಾಪನೆ ಮಾಡಲಾಯಿತು. ಹಾಗಾಗಿ ಜಾತ್ರೆ ನಡೆಯುವಾಗ ಎರಡು ದಿನ ಇಲ್ಲಿನ ಗ್ರಾಮಸ್ಥರು ಪಾದರಕ್ಷೆ ಧರಿಸದೆ ಜಾತ್ರೆಯಲ್ಲಿ ತೊಡಗಿದ್ದಾರೆ. ಹೀಗೆ ಮಾಡಿದ್ದರಿಂದ ಆಚರಣೆಗೂ ಒಂದು ಕಳೆ ಅಂತಾರೆ ಗ್ರಾಮದ ಮುಖಂಡರು.

ಈ ವಸ್ತುಗಳನ್ನು ಹಂಚಿಕೊಂಡ್ರೆ 2023ಕ್ಕೆ ದೌರ್ಭಾಗ್ಯ ಆಹ್ವಾನಿಸಿದಂತೇ ಸರಿ!

ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದಲ್ಲಿ  ಎರಡು ದಿನಗಳ ಕಾಲ ಚಪ್ಪಲಿ ಹಾಕದೆ ನಿಯಮ‌ ಪಾಲಿಸುತ್ತಾರೆ. ಗ್ರಾಮ ಜಾತ್ರಾ ಮಹೋತ್ಸವದ ವೇಳೆ ಶುದ್ಧವಾಗಿರಲಿ ಅಂತಾ ಗ್ರಾಮದಲ್ಲಿ  ಎರಡು ದಿನಗಳ ಕಾಲ ಯಾರೂ ಕೂಡ ಚಪ್ಪಲಿ ಧರಿಸುವುದಿಲ್ಲ. ಗ್ರಾಮದಲ್ಲಿ ಮಳೆ, ಬೆಳೆ, ಜನರ ಆಯಸ್ಸು ಆರೋಗ್ಯ ಸಮೃದ್ಧವಾಗಿರಲಿ ಅಂತಾ ಈ ನಿಯಮ‌ ಪಾಲಿಸಲಾಗುತ್ತೆ. ಜೊತೆಗೆ ಮಹಿಳೆಯರಿಗೆ ಉಡಿ ತುಂಬುವ ಕಾರಣವೂ ಇರುತ್ತದೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.

ಹಳ್ಳಿಗಳಲ್ಲಿ ಜಾನಪದ ಆಚರಣೆ ಹಿನ್ನೆಲೆಯ ಜಾತ್ರೆಗಳು ಹೆಚ್ಚು. ಆದ್ರೆ ಮಡಿ ನಿರ್ವಹಣೆಗಾಗಿ ಹೀಗೆ ಊರಿಗೆ ಊರೇ ಚಪ್ಪಲಿ ಧರಿಸದೇ ಜಾತ್ರೆಯಲ್ಲಿ ಭಾಗವಹಿಸುವುದು ಬೊಮ್ಮೇನಹಳ್ಳಿ ಜಾತ್ರೆಯ ವಿಶೇಷ.

click me!