* ಪುರ್ಲಹಳ್ಳಿಯಲ್ಲಿ ಗೊಲ್ಲ ಸಮುದಾಯದ ಬುಡಕಟ್ಟು ಸಂಪ್ರದಾಯದ ಅದ್ದೂರಿ ಮುಳ್ಳಿನ ಜಾತ್ರೆ.
* 25 ಅಡಿ ಎತ್ತರದ ಮುಳ್ಳಿನ ಗೋಪುರ ನಿರ್ಮಾಣ
* ಅರೆ ಬೆತ್ತಲೆಯಲ್ಲಿ ಮುಳ್ಳಿನ ಕೊಂಪೆ ಏರಿ ಕಳಸ ತರುವ ಯುವಕರೇ ಈ ಜಾತ್ರೆ ವಿಶೇಷ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.09): ಅದು ಮುಳ್ಳಿನಿಂದಲೇ ಕಟ್ಟಿದ ತಾತ್ಕಾಲಿಕ ದೇವಸ್ಥಾನ. ಜಾತ್ರೆಯ ಆರಂಭದಲ್ಲಿ ಕಟ್ಟುವ ಆ ಮುಳ್ಳಿನ ದೇವಸ್ಥಾನದ ಮೇಲೆ ಯುವಕರು ಅರೆಬೆತ್ತಲೆಯಾಗಿ ಬರಿಗಾಲಿನಿಂದ ಹತ್ತಿ ಕಳಶವನ್ನು ಕೀಳೋ ಮೂಲಕ ಆ ಊರಿನ ಮುಳ್ಳಿನ ಜಾತ್ರೆಗೆ ತೆರೆ ಬೀಳುತ್ತೆ. ಇಂತಹ ಒಂದು ವಿಚಿತ್ರ ಬುಡಕಟ್ಟು ಆಚರಣೆ ಇಂದಿಗೂ ಜೀವಂತವಾಗಿದೆ. ಅಷ್ಟಕ್ಕೂ ಇಂತಹ ಒಂದು ಜಾತ್ರೆ ನಡೆಯೋದು ಎಲ್ಲಿ? ಏನಿದರ ವಿಶೇಷತೆ ಅಂತೀರಾ? ಈ ವರದಿ ನೋಡಿ...
ಆಧುನಿಕತೆ ಬೆಳದಂತೆ ನಮ್ಮ ಸಂಪ್ರದಾಯಗಳು ಹಾಗೂ ಆಚರಣೆಗಳು ಬದಲಾಗುತ್ತಾ ಹೋಗುತ್ತವೆ. ಆದರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿಯಲ್ಲಿ ಇಂದಿಗೂ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಕಾಡುಗೊಲ್ಲ ಬುಡಕಟ್ಟು ಸಮುದಾಯದ ಆರಾದ್ಯ ದೈವ ಕ್ಯಾತೆ ದೇವರು. ಮುಳ್ಳಿನ ಗುಡಿಯಲ್ಲಿ 13 ಗುಡಿ ಕಟ್ಟಿನ ದೇವರುಗಳು ಈ ಮುಳ್ಳಿನ ಗುಡಿಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಕ್ಯಾತಪ್ಪ ದೇವರ ಜಾತ್ರೆಯ ಕೊನೆ ದಿನದಂದು ಬಾರೇ ಮುಳ್ಳಿನಿಂದ ನಿರ್ಮಿಸಿದ 25 ಅಡಿ ಎತ್ತರದ ಮುಳ್ಳಿನ ಗುಡಿ ಏರಿ ಕಳಸವನ್ನು ಐವರು ವೀರಗಾರರು ನಾ ಮುಂದು, ತಾ ಮುಂದು ಎಂದು ಕ್ಷಣಾರ್ಧದಲ್ಲಿ ಕಿತ್ತು ಮುಳ್ಳಿನ ಮೇಲೆ ಕುಣಿದು ಕುಪ್ಪಳಿಸುವ ಮೂಲಕ ಭಕ್ತಿಯ ಪರಕಾಷ್ಟೇ ಮೆರೆಯುತ್ತಾರೆ.
Chamarajanagara: ಕೊಳ್ಳೇಗಾಲದ ಸಿದ್ದಪ್ಪಾಜಿಗೆ ಕದ್ದುಮುಚ್ಚಿ ಮದ್ಯ, ಮಾಂಸ ನೈವೇದ್ಯ: ಪಂಕ್ತಿ ಸೇವೆ
ಹುರುಳಿ ಮತ್ತು ನವಣೆ ವ್ರತ: ಈ ಆಚರಣೆಯನ್ನ ನೋಡಲು ಕರ್ನಾಟಕ ಆಂಧ್ರ ಸೇರಿದಂತೆ ಹಲವಾರು ರಾಜ್ಯಗಳ ಬುಡಕಟ್ಟು ಸಮುದಾಯದ ಭಕ್ತರ ದಂಡು ಪವಾಡದಂತೆ ನಡೆಯುವ ಮುಳ್ಳಿನ ಜಾತ್ರೆ ಕಂಡು ಬೆರಗಾಗುತ್ತಾರೆ. ಒಟ್ಟು 15 ದಿನಗಳ ಕಾಲ ನಡೆಯುವ ಈ ವಿಚಿತ್ರ ಜಾತ್ರೆಯಲ್ಲಿ ಹುರುಳಿ ಮತ್ತು ನವಣೆ ವ್ರತವನ್ನು ಆಚರಿಸುತ್ತಾರೆ. ಯಾಕೆಂದರೆ ಈ ಕ್ಯಾತೆ ದೇವರು ಗೊಲ್ಲರಿಗೆ ಒಲಿಯುವ ಮುನ್ನ ಹೇಮಾರೆಡ್ಡಿಗೌಡ ಎಂಬುವವನಿಗೆ ಒಲಿದಿತ್ತಂತೆ. ಆದರೆ, ಹೇಮಾರೆಡ್ಡಿಗೌಡ ನಿರ್ಲಕ್ಷ್ಯದಿಂದ ದೇವರನ್ನು ಹುರುಳಿ ಮತ್ತು ನವಣೆ ಕಣಜದಲ್ಲಿ ಮುಚ್ಚಿ ಹಾಕಿದ್ದನಂತೆ. ಹೀಗಾಗಿ ರೆಡ್ಡಿಯ ದುರಾಹಂಕಾರದಿಂದ ಬೇಸತ್ತ ದೇವರು ಗೊಲ್ಲರ ಬೊಮ್ಮಲಿಂಗ ಎಂಬುವನಿಗೆ ಒಲಿದಿತ್ತೆಂಬುದು ಪ್ರತೀತಿ.
ಸಮುದಾಯದ ಶೌರ್ಯ ಪ್ರದರ್ಶನ: ಇದರಿಂದಾಗಿ ಗೊಲ್ಲರು ಇಂದಿಗೂ ಕೂಡ ದೇವರಿಗೆ ಹಿಡಿಸದ ನವಣೆ ಮತ್ತು ಹುರುಳಿಯನ್ನು ಈ ಜಾತ್ರೆ ಮುಗಿಯುವ ತನಕ ಸೇವಿಸೋದಿಲ್ಲ ಮುಟ್ಟುವುದಿಲ್ಲ. ಈ ಜಾತ್ರೆಯಲ್ಲಿ ಮುಳ್ಳಿನ ಕಳಶದ ಆಚರಣೆ ತುಂಬಾ ವಿಶೇಷವಾಗಿದ್ದು ಸಮುದಾಯದ ಶೌರ್ಯವನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ಈ ಆಚರಣೆಯಿಂದ ಸಮುದಾಯಕ್ಕೆ ಮತ್ತು ನಾಡಿಗೆ ಒಳಿತಾಗಲಿದೆ ಎಂಬುದು ಇವರ ನಂಬಿಕೆಯಾಗಿದೆ.
Koppal: ಅಜ್ಜನ ಜಾತ್ರೆಯಲ್ಲಿ 15 ಲಕ್ಷ ಜೋಳದ ರೊಟ್ಟಿ, 30 ಟನ್ ಹೋಳಿಗೆ!
ಒಟ್ಟಾರೆ ಕಾಲಿಗೆ ಒಂದು ಮುಳ್ಳು ಚುಚ್ಚಿದರೆ ನರಕಯಾತನೆ ಅನುಭವಿಸುವ ಜನರು ಮುಳ್ಳಿನ ಗುಡಿಯಮೇಲೆ ಬರಿಗಾಲಿನಿಂದ ಕುಣಿದು ಕುಪ್ಪಳಿಸುವ ಈರಗಾರರನ್ನು ಕಂಡು ಬೆರಗಾಗುತ್ತಾರೆ. ಆಧುನಿಕತೆಯ ಕಾಲದಲ್ಲೂ ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರು ತಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಇಂದಿಗೂ ಜೀವಂತವಿಟ್ಟಿದ್ದು, ಸಾಂಸ್ಕೃತಿಕ ಪರಂಪರೆಯ ಶ್ರೀಮಂತರಾಗಿದ್ದಾರೆ..