ಓಂಕಾರ ತಲೆತಲಾಂತರದಿಂದ ಬೆಳೆದು ಬಂದಿದೆ. ಓನಾಮವಿಲ್ಲದೆ ನಮ್ಮ ಯಾವೊಂದು ಮಂತ್ರಗಳೂ ಆರಂಭವಾಗೋಲ್ಲ. ಓಂ ಎಂದು ಜಪಿಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ.
ಓಂ(Om) ಎಂಬ ಅಕ್ಷರಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವ ಇದೆ. ಬರೀ ಓಂ ಎಂದು ಹೇಳಿದರೆ ಸಾಕು, ಅದೆಂತಾ ನೆಮ್ಮದಿ(peace) ಸಿಗುತ್ತದೆ ಎಂದು ಹೇಳುವವರಿಗೆ ಗೊತ್ತು. ಅಷ್ಟೇ ಅಲ್ಲ ಓಂ ಪಠಣದಿಂದ ನಮ್ಮೊಳಗೆ ಹಾಗೂ ಸುತ್ತಮುತ್ತಲು ಧನಾತ್ಮಕ ಶಕ್ತಿ(positive energy) ಪ್ರವಹಿಸುತ್ತದೆ.
ಓಂ ಪದ ಚಿಕ್ಕದಾದರೂ ಅದು ಆಧ್ಯಾತ್ಮಿಕವಾಗಿ(spiritual), ದೈಹಿಕವಾಗಿ, ಮಾನಸಿಕವಾಗಿ ತಂದು ಕೊಡುವ ಲಾಭಗಳು ಹತ್ತು ಹಲವು. ಪ್ರತಿ ಬಾರಿ ಧ್ಯಾನ ಆರಂಭಿಸುವಾಗ ಹಾಗೂ ಮುಗಿಸುವಾಗ ಓಂ ಪಠಣ ಮಾಡಲಾಗುತ್ತದೆ. ಈ ಮಂತ್ರದಿಂದಾಗಿ ಮನಸ್ಸು ಏಕಾಗ್ರತೆ ಸಾಧಿಸುವ ಜೊತೆಗೆ ಚಂಚಲ ಸ್ಥಿತಿಯಿಂದ ಹೊರ ಬಂದು ಬಹಳ ಶಾಂತವಾಗುತ್ತದೆ.
ಇಷ್ಟೇ ಅಲ್ಲ, ಓಂ ಎಂಬುದು ಜಗತ್ತಿನ ಮೊದಲ ಶಬ್ದ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಜಗತ್ತು ಹುಟ್ಟುವಾಗ ಉಂಟಾದ ಕಾಸ್ಮಿಕ್ ಎನರ್ಜಿಯಿಂದ ಓಂ ಎಂಬ ಶಬ್ದ ಹೊರ ಬಂದಿತ್ತು. ಓಂ ಶಬ್ದವು ನಮ್ಮ ಇಡೀ ದೇಹದ ತುಂಬಾ ವೈಬ್ರೇಶನ್ ಹುಟ್ಟು ಹಾಕುತ್ತದೆ. ಇದನ್ನು ಹೇಳುವುದರಿಂದ ದೇಹ ಹಾಗೂ ಮನಸ್ಸು ಒಟ್ಟೊಟ್ಟಿಗೇ ಆ್ಯಕ್ಟಿವೇಟ್ ಆಗುತ್ತವೆ. ಸರಿಯಾದ ಕ್ರಮದಲ್ಲಿ ಹೇಳಿದಾಗ ಈ ಮಂತ್ರವು ನಮ್ಮಲ್ಲಿ ಪಾಸಿಟಿವಿಟಿ, ಎನರ್ಜಿ ತುಂಬುತ್ತದೆ. ಹಾಗಿದ್ದರೆ ಓಂ ಪಠಣದಿಂದ ಸಿಗುವ ಲಾಭಗಳೇನೇನು ನೋಡೋಣ.
Energy Centers: ನಾವೇಕೆ ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡಬೇಕು?
ಇಷ್ಟೆಲ್ಲ ಲಾಭ ತಂದುಕೊಡುವ ಓಂ ಹೇಗೆ ಪಠಣ ಮಾಡಬೇಕು?
ಬೆಳಗ್ಗೆ ಬೇಗ ಅಂದರೆ 6 ಗಂಟೆಗೆ, ಮಧ್ಯಾಹ್ನ 12 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಓಂ ಪಠಣ ಮಾಡುವುದು ಒಳ್ಳೆಯದು. ಒಮ್ಮೆ ಕುಳಿತರೆ, 108 ಬಾರಿ ಓಂ ಮಂತ್ರ ಹೇಳಬೇಕು. ನಿಧಾನವಾಗಿ ಈ ಸಂಖ್ಯೆಯನ್ನು 200-300ಕ್ಕೆ ಏರಿಸಿ. ತಿಂಗಳಿಗೊಮ್ಮೆ 1008 ಬಾರಿ ಓಂ ಹೇಳುವ ಅಭ್ಯಾಸ ಮಾಡಿ. ಪ್ರಶಾಂತ ವಾತಾವರಣದಲ್ಲಿ ಕುಳಿತು, ಧೀರ್ಘ ಉಸಿರೆಳೆದುಕೊಂಡು ಓಂ ಹೇಳುತ್ತಾ ಉಸಿರನ್ನು ಆದಷ್ಟು ನಿಧಾನವಾಗಿ ಹೊರ ಬಿಡಬೇಕು. ಪ್ರತಿ ಬಾರಿಯೂ ಉಸಿರಿಗೆ ಹೀಗೆಯೇ ವ್ಯಾಯಾಮ ಮಾಡಿಸಬೇಕು. ಇದರಿಂದ ಪ್ರಾಣಾಯಾಮವೂ ಆಗುವುದು, ಮೆದುಳಿಗೆ ಓಂ ಪಠಣದ ವೈಬ್ರೇಶನ್ ಕೂಡಾ ಸಿಕ್ಕುವುದು.. ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದು.