ಲಲಿತಾ ಸಹಸ್ರನಾಮವನ್ನು ಭಕ್ತಿಯಿಂದ ಪಠಿಸುವುದರಿಂದ ಕಾಳಿದೇವಿ, ದುರ್ಗಾ ಮಾತೆ, ಪರಾಶಕ್ತಿ, ಭಗವತಿಯ ಸಂಪೂರ್ಣ ಕೃಪೆ ಪ್ರಾಪ್ತವಾಗಲಿದೆ. ಶ್ರದ್ಧೆಯಿಂದ ಕೇಳುವುದರಿಂದ ಅಥವಾ ಪಠಿಸುವುದರಿಂದ ಲಲಿತಾ ದೇವಿಯ ವಿಶೇಷ ಕೃಪೆಗೆ ಪಾತ್ರರಾಗುವುದಲ್ಲದೇ, ಶ್ರೀರಕ್ಷೆ, ನೆಮ್ಮದಿ ಮತ್ತು ಸುಖ-ಸಂತೋಷವನ್ನು ದಯಪಾಲಿಸುತ್ತಾಳೆ. ನಿತ್ಯವೂ ಪಠಿಸುವುದರಿಂದ ಪಾರ್ವತಿ-ಪರಮೇಶ್ವರರ ಕೃಪೆಯಾಗುತ್ತದೆ ಎಂಬ ಉಲ್ಲೇಖವೂ ಇದೆ.
ಲಲಿತಾ ದೇವಿಯ ಸಾವಿರ ಹೆಸರುಗಳನ್ನು ಪಠಿಸಿ ಆರಾಧಿಸುವುದೇ ಲಲಿತಾ ಸಹಸ್ರನಾಮ. ಪುರಾಣಗಳಲ್ಲಿ ಹೇಳಿರುವಂತೆ ದೇವಿಯನ್ನು ಆರಾಧಿಸಿದರೆ ಸಕಲವೂ ಪ್ರಾಪ್ತವಾಗುತ್ತದೆ. ದೇವಾನು ದೇವತೆಗಳೇ ಕಷ್ಟಗಳು ಎದುರಾದಾಗ ಅದನ್ನು ಪರಿಹರಿಸಿಕೊಳ್ಳಲಾಗದೇ “ಕೃಪೆ ತೋರಿ ಸಂಕಷ್ಟವನ್ನು ಪರಿಹರಿಸು ತಾಯಿ” ಎಂದು ದೇವಿಯ ಮೊರೆ ಹೋದ ಅನೇಕ ನಿದರ್ಶನಗಳಿವೆ. ಕಲಿಯುಗದಲ್ಲಿ ಮಾನವರು ಕಷ್ಟಗಳನ್ನು ಪರಿಹರಿಸಲು ದೇವಿಯನ್ನು ಭಜಿಸಿದರೆ ಕಷ್ಟಕಳೆದು ಸುಖವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ.
ಲಲಿತಾ ಸಹಸ್ರನಾಮವು ತಾಯಿಯ ದೈವಿಕ ಸದ್ಗುಣಗಳನ್ನು, ಶ್ರೇಷ್ಠತೆಯನ್ನು, ಶಕ್ತಿಯನ್ನು, ಕೇಳಿದ್ದನ್ನೆಲ್ಲಾ ಪಾಲಿಸುವ ಮಾತೃ ಹೃದಯವನ್ನು ವರ್ಣಿಸುತ್ತದೆ. ಸಂಸ್ಕೃತದಲ್ಲಿರುವ ಈ ನಾಮಗಳನ್ನು ಶ್ರದ್ಧೆಯಿಂದ ಜಪಿಸಿದರೆ ಮನೋವಾಂಛಿತ ಕಾರ್ಯ ಸಿದ್ಧಿಯನ್ನು ದಯಪಾಲಿಸುವ ಕರುಣಾಮಯಿ ಆಗಿದ್ದಾಳೆ. ಲಲಿತಾ ಸಹಸ್ರನಾಮವನ್ನು ನಿತ್ಯ ಪಠಿಸುವುದರಿಂದ ಆಗುವ ಲಾಭಗಳು ಇಂತಿವೆ...
ಶಕ್ತಿಯುತ ಮಂತ್ರ
ದೇವಿ ಲಲಿತಾಂಬಿಕೆಯ ಪ್ರಸಿದ್ಧ ಮಂತ್ರಗಳಲ್ಲೊಂದಾದ ಲಲಿತಾ ಸಹಸ್ರನಾಮವು ಶಕ್ತಿಯುತ ಮಂತ್ರವಾಗಿದ್ದು, ಬೇರೆ ಯಾವ ತಂತ್ರ-ಮಂತ್ರಗಳಿಂದ ಆಗದ ಕಾರ್ಯಗಳು ಈ ನಾಮಾವಳಿಗಳನ್ನು ಪಠಿಸುವುದರಿಂದ ಆಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!
ದಾನ-ಧರ್ಮ ಮಾಡಿದ ಪುಣ್ಯ
ಲಲಿತಾ ದೇವಿಯ ಸಹಸ್ರನಾಮಗಳನ್ನು ನಿತ್ಯವೂ ಶ್ರದ್ಧೆಯಿಂದ ಪಠಿಸಿದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ದರ್ಶನ ಮಾಡಿದರೆ, ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ, ದಾನ-ಧರ್ಮಗಳನ್ನು ಮಾಡಿದ್ದರಿಂದಾಗಿ ಬರುವ ಪುಣ್ಯ ಪ್ರಾಪ್ತಿಯಾಗುತ್ತದೆ. ಇವುಗಳನ್ನು ಮಾಡಲು ಶಕ್ತಿ ಇಲ್ಲದವರು ಈ ಸಹಸ್ರನಾಮವನ್ನು ಭಕ್ತಿಯಿಂದ ಪಠಿಸಿದರೆ ಪುಣ್ಯಫಲ ಸಿಗುತ್ತದೆ.
ಘೋರ ತಪಸ್ಸಿಗೆ ಸಮ
ಈ ನಾಮಗಳ ಪಠಣದಿಂದ ಅಪೂರ್ಣವಾಗಿದ್ದ ಪೂಜೆ ಅಥವಾ ಯಾವುದಾದರೂ ಕಾರ್ಯಗಳಿಂದ ಬರುವ ತೊಂದರೆಯನ್ನು ನಿವಾರಿಸುತ್ತದೆ. ಇದರ ನಿತ್ಯ ಪಠಣ ಘೋರ ತಪಸ್ಸಿಗೆ ಸಮವೆಂದು ಹೇಳುತ್ತಾರೆ.
ಜ್ವರ ಶಮನ
ಅಪಮೃತ್ಯುವನ್ನು ನಿವಾರಿಸುವುದಲ್ಲದೇ ಧೀರ್ಘಾಯಸ್ಸನ್ನು ಮತ್ತು ಆರೋಗ್ಯಕರ ಜೀವನವನ್ನು ದಯಪಾಲಿಸುವ ಶಕ್ತಿ ಈ ಮಂತ್ರಕ್ಕಿದೆ. ಜ್ವರದಿಂದ ಬಳಲುತ್ತಿರುವವರ ಹಣೆಯ ಮೇಲೆ ಕೈಯಿಟ್ಟು, ಧಾರ್ಮಿಕ ವಿಧಿವಿಧಾನಗಳಿಂದ ಈ ಮಂತ್ರವನ್ನು ಪಠಿಸಿದರೆ ಜ್ವರ ಶಮನವಾಗುತ್ತದೆ ಎಂಬ ನಂಬಿಕೆ ಇದೆ.
ವಿಷ ಸಂಬಂಧಿ ರೋಗ ಗುಣ
ಸಮುದ್ರ ಮಧ್ಯದಲ್ಲಿ ಅಮೃತದ ಪಾತ್ರೆಯನ್ನು ಕೈಯಲ್ಲಿ ಹಿಡಿದಿರುವ ಲಲಿತಾ ದೇವಿಯನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ಸಹಸ್ರನಾಮವನ್ನು ಪಠಿಸಿದರೆ ವಿಷಕ್ಕೆ ಸಂಬಂಧಿಸಿದ ಯಾವುದೇ ರೋಗವಿದ್ದರೂ ಗುಣವಾಗುತ್ತದೆ ಎಂಬ ಪ್ರತೀತಿ ಇದೆ.
ನಪುಂಸಕತ್ವ ದೋಷ ನಿವಾರಣೆ
ಶುದ್ಧ ತುಪ್ಪವನ್ನು ದೇವರ ಮುಂದಿಟ್ಟು, ಲಲಿತಾ ಸಹಸ್ರನಾಮವನ್ನು ಪಠಿಸಿ, ನಂತರ ಆ ತುಪ್ಪವನ್ನು ಸೇವಿಸಿದರೆ ನಪುಂಸಕತ್ವ ದೋಷವು ನಿವಾರಣೆಯಾಗಿ ಮಕ್ಕಳಾಗುತ್ತದೆ. ಮಾಟ-ಮಂತ್ರಗಳ ಪ್ರಭಾವದಿಂದ ತೊಂದರೆಗೆ ಒಳಪಟ್ಟಿದ್ದರೆ ಅಂಥವರು ಈ ಸಹಸ್ರನಾಮವನ್ನು ಪಠಿಸಿದರೆ ಯಾವುದೇ ದುಷ್ಟ ಶಕ್ತಿಯಿಂದಾಗುವ ತೊಂದರೆ ನಿವಾರಣೆ ಯಾಗುತ್ತದೆ. ಕೆಟ್ಟಶಕ್ತಿಯ ಪರಿಣಾಮಗಳನ್ನು ನಿರ್ಣಾಮ ಮಾಡುವ ಶಕ್ತಿಯುತ ಮಂತ್ರ ಇದಾಗಿದೆ.
ಇದನ್ನೂ ಓದಿ: ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು
ಅಪಘಾತ ತೊಂದರೆ ನಿವಾರಿಸುವ ಶಕ್ತಿ
ನಿತ್ಯವೂ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಮನೆಯ ವಾತಾವರಣ ಶುದ್ಧಿಯಾಗುತ್ತದೆ. ದೇಹದ ನರನಾಡಿಗಳ ಕಾರ್ಯ ಚುರುಕಾಗುತ್ತದೆ. ಶರೀರದ ಸುಪ್ತ ಚೈತನ್ಯವನ್ನು ಜಾಗೃತಗೊಳಿಸುತ್ತದೆ. ಅಪಘಾತವನ್ನು, ಶತ್ರುಗಳಿಂದ ಉಂಟಾಗುವ ತೊಂದರೆಯನ್ನು ನಿವಾರಿಸುವ ಶಕ್ತಿ ಈ ಸಹಸ್ರನಾಮಕ್ಕಿದೆ. ಇದನ್ನು ನಿತ್ಯ ಪಠಿಸುವವರಿಗೆ ಉತ್ತಮ ಕಾರ್ಯಗಳಲ್ಲಿ ಎಂದಿಗೂ ಜಯ ಲಭಿಸುವಂತೆ ವರವನ್ನು ನೀಡುತ್ತಾಳೆ.
ಒಮ್ಮೆ ಬಂದ ಹೆಸರು ಮತ್ತೊಮ್ಮೆ ಬರದು
ನಿತ್ಯ ಪಠಿಸುವುವರಿಗೆ ದೇವಿಯ ಕೃಪೆ ಸದಾ ಇರುತ್ತದೆ. ಅದರಲ್ಲೂ ಶುಕ್ರವಾರ ಸಹಸ್ರನಾಮ ಪಠಿಸುವುದರಿಂದ ವಿಶೇಷ ಕೃಪೆಯನ್ನು ಪಡೆಯುತ್ತಾರೆ. ಈ ಸಹಸ್ರನಾಮವು ಬೇರೆಲ್ಲ ಸಹಸ್ರನಾಮಗಳಿಗಿಂತ ವಿಶೇಷವಾಗಿದೆ. ದೇವಿಯ ಸಾವಿರ ಹೆಸರುಗಳನ್ನು ಪಠಿಸುವಾಗ ಒಮ್ಮೆ ಬಂದ ದೇವಿಯ ಹೆಸರು ಮತ್ತೊಮ್ಮೆ ಬರುವುದಿಲ್ಲ. ಲಲಿತಾ ಸಹಸ್ರನಾಮವು ಒಂದು ಪ್ರಾರ್ಥನೆ, ಇದನ್ನು ಯಾರಾದರೂ, ಯಾವ ಸಮಯದಲ್ಲಾದರೂ ಅಥವಾ ಎಲ್ಲ ಸಮಯದಲ್ಲೂ ಪಠಿಸಬಹುದಾಗಿದೆ. ಇದರಲ್ಲಿ ಬರುವ ಪ್ರತಿ ನಾಮಾವಳಿಗೂ ವಿಶೇಷ ಶಕ್ತಿಯಿದ್ದು, ಎಲ್ಲ ರೀತಿಯಲ್ಲಿ ಲಾಭವನ್ನುಂಟು ಮಾಡುವ ಮಂತ್ರ ಇದಾಗಿದೆ.
ಇದನ್ನೂ ಓದಿ: ಪೂಜೆಯ ಫಲ ಸಿಗಬೇಕೆಂದರೆ ಈ ವಸ್ತುಗಳನ್ನು ನೆಲದಮೇಲೆ ಇಡಬೇಡಿ!
ವಿಷ್ಣುವನ್ನು ಸಹಸ್ರ ಬಾರಿ ಜಪಿಸಿದ ಪುಣ್ಯ
ಶಿವವನ್ನು ಒಮ್ಮೆ ಜಪಿಸಿದರೆ, ವಿಷ್ಣುವನ್ನು ಸಾವಿರ ಬಾರಿ ಜಪಿಸಿದಂತೆ ಎಂಬ ಉಕ್ತಿ ಇದೆ. ಆದರೆ ದೇವಿಯ ನಾಮವನ್ನು ಒಮ್ಮೆ ಜಪಿಸಿದರೆ, ಶಿವನನ್ನು ಒಮ್ಮೆ, ವಿಷ್ಣುವನ್ನು ಸಹಸ್ರ ಬಾರಿ ಜಪಿಸಿದ ಪುಣ್ಯ ಬರುತ್ತದೆ. ಸಮಯವಾದಾಗ ಮನೆಮಂದಿಯೆಲ್ಲಾ ಕೂತು ಒಟ್ಟಾಗಿ ಈ ಸಹಸ್ರನಾಮವನ್ನು ಪಠಿಸಿದರೆ ಒಗ್ಗಟ್ಟನ್ನು, ಶಾಂತಿಯನ್ನು,ಉತ್ತಮ ಮನೋಸ್ಥೈರ್ಯವನ್ನು, ಸಮೃದ್ಧಿಯನ್ನು ಕರುಣಿಸುತ್ತಾಳೆ. ಯಾವ ಮನೆಯಲ್ಲಿ ಲಲಿತಾ ಸಹಸ್ರನಾಮವನ್ನು ನಿತ್ಯ ಪಠಿಸುತ್ತಾರೆಯೋ ಅಂಥ ಮನೆಯಲ್ಲಿ ಮೂಲ ಅಗತ್ಯತೆಗಳಿಗೆ, ಸಹಜ ಜೀವನಕ್ಕೆ ಎಂದೂ ಕೊರತೆಯಾಗುವುದಿಲ್ಲ. ಜೀವನಕ್ಕೆ ಬೇಕಾಗುವ ಎಲ್ಲ ಸಿರಿ ಸಂಪತ್ತನ್ನು ದಯ ಪಾಲಿಸುವ ಶಕ್ತಿ ಈ ಸಹಸ್ರನಾಮಕ್ಕಿದೆ. ಆದ್ದರಿಂದ ಗುರುಗಳು ತಮ್ಮ ಶಿಷ್ಯರಿಗೆ ಬೇರೆಲ್ಲಾ ವಿದ್ಯೆಗಳನ್ನು, ಮಂತ್ರಗಳನ್ನು ಕಲಿಸಿದರೂ ಲಲಿತಾ ಸಹಸ್ರನಾಮವನ್ನು ಮಾತ್ರ ನಿತ್ಯ ಪಠಿಸುವಂತೆ ಹೇಳುತ್ತಿದ್ದರಂತೆ. ದೇವಿಯ ಶಕ್ತಿಯ ಮಹತ್ವವೆ ಅಂತಹದು. ಜೀವನದಲ್ಲಿ ನಿತ್ಯ ಬರುವ ಸಮಸ್ಯೆಗಳನ್ನು ಹೊಡೆದೊಡಿಸುವ ಪವಿತ್ರ ಶಸ್ತ್ರ ಇದಾಗಿದೆ.