ಬುಧಗ್ರಹದ ಈ ಗ್ರಹಚಾರದಿಂದ ಪಾರಾಗಲು ಇಲ್ಲಿವೆ ಪರಿಹಾರಗಳು

By Suvarna News  |  First Published Feb 6, 2021, 5:11 PM IST

ಜಾತಕದಲ್ಲಿ ಬುಧಗ್ರಹವು ನೀಚ ಸ್ಥಾನದಲ್ಲಿದ್ದರೆ, ಅಂಥವರು ಸಂಕೋಚ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲರೆದುರಿಗೆ ತಮ್ಮ ಅನಿಸಿಕೆಯನ್ನು ಹೇಳಿಕೊಳ್ಳಲು ಹಿಂಜರಿಯುವ ಸ್ವಭಾವ ಇವರದ್ದಾಗಿರುತ್ತದೆ. ಬುಧ ಗ್ರಹದ ಸ್ಥಿತಿ ಸರಿಯಿಲ್ಲವಾದರೆ ಮಾತಿನ ಮೇಲೆ ಹಿಡಿತವಿಲ್ಲದೇ, ಕಟುವಾಗಿ ಮಾತನಾಡಿ ಆಗುವ ಕೆಲಸವು ಪೂರ್ಣವಾಗುವುದಿಲ್ಲ. ಹಾಗಾಗಿ ಬುಧಗ್ರಹದ ಅಶುಭ ಪ್ರಭಾವದಿಂದ ಉಂಟಾಗುವ ತೊಂದರೆಗಳಿಗೆ ಜ್ಯೋತಿಷ್ಯದಲ್ಲಿ ಹೇಳಿರುವ ಪರಿಹಾರವನ್ನು ತಿಳಿದುಕೊಳ್ಳೋಣ...
 


ಬುಧಗ್ರಹವನ್ನು ನವಗ್ರಹ ಮಂಡಲದ ರಾಜಕುಮಾರನೆಂದು ಕರೆಯಲಾಗುತ್ತದೆ. ಬುದ್ಧಿ ಮತ್ತು ವಾಣಿಯ ಕಾರಕ ಗ್ರಹ ಅಂದರೆ ವಾಕ್ಚಾತುರ್ಯಕ್ಕೆ ಹೆಸರಾದ ಗ್ರಹವಾಗಿದೆ.  ಬುಧಗ್ರಹದ ಚಲನೆ ಬೇರೆಲ್ಲ ಗ್ರಹಗಳಿಂತ ವೇಗವಾಗಿ ಚಲಿಸುವ ಗ್ರಹವಾಗಿದೆ.

ಜಾತಕದಲ್ಲಿ ಬುಧಗ್ರಹವು ನೀಚ ಸ್ಥಾನದಲ್ಲಿದ್ದರೆ, ಅಂಥವರು ಸಂಕೋಚ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲರೆದುರಿಗೆ ತಮ್ಮ ಅನಿಸಿಕೆಯನ್ನು ಹೇಳಿಕೊಳ್ಳಲು ಹಿಂಜರಿಯುವ ಸ್ವಭಾವ ಇವರದ್ದಾಗಿರುತ್ತದೆ. ಬುಧಗ್ರಹದ ಸ್ಥಿತಿ ಸರಿಯಿಲ್ಲವಾದರೆ ಮಾತಿನ ಮೇಲೆ ಹಿಡಿತವಿಲ್ಲದೆ, ಕಟುವಾಗಿ ಮಾತನಾಡಿ ಆಗುವ ಕೆಲಸವನ್ನು ಹಾಳು ಮಾಡಿಕೊಳ್ಳುವಂತಾಗುತ್ತದೆ. ಜಾತಕದಲ್ಲಿ ಲಗ್ನಭಾವದಲ್ಲಿ  ಬುಧಗ್ರಹವಿದ್ದಾಗ ವ್ಯಕ್ತಿಯು ನೋಡಲು ಆಕರ್ಷಕವಾಗಿರುವುದಲ್ಲದೆ, ಸ್ವಭಾವದಲ್ಲಿ ತರ್ಕಬದ್ಧ ಮತ್ತು ವಿನಯವಾಗಿ ಮಾತನಾಡುವ ಕಲೆಯುಳ್ಳವನಾಗಿರುತ್ತಾನೆ.


ಇದನ್ನು ಓದಿ: ಸಕಾರಾತ್ಮಕ ಶಕ್ತಿ ಹೆಚ್ಚಲು ಮನೆಯ ಶೃಂಗಾರ ಹೀಗಿರಲಿ..! 

ಬುಧಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ ಗ್ರಹವಾಗಿದೆ. ಬುಧಗ್ರಹವು ಮೀನರಾಶಿಯಲ್ಲಿ ನೀಚ ಸ್ಥಿತಿಯಲ್ಲಿರುತ್ತದೆ. ಅದೇ ಕನ್ಯಾ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿರುವ ಗ್ರಹವಾಗಿದೆ. ಸೂರ್ಯದೇವನ ಜೊತೆ ಬುಧಗ್ರಹದ ಯುತಿಯಾದರೆ ಅದನ್ನು ಬುಧಾದಿತ್ಯ ಯೋಗವೆಂದು ಕರೆಯಲಾಗುತ್ತದೆ.

ಗ್ರಹಗಳು ಸರಿಯಾದ (ನೇರ) ದಿಕ್ಕಿನಲ್ಲಿ ಸಂಚರಿಸಿದರೆ ಅದನ್ನು ಮಾರ್ಗಿ ಎಂದು ಕರೆಯಲಾಗುತ್ತದೆ. ಅದೇ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದರೆ ಅದನ್ನು ವಕ್ರಿ ಎನ್ನಲಾಗುತ್ತದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಚಂದ್ರ ಯಾವಾಗಲೂ ಮಾರ್ಗಿಯಾಗಿ ಸಂಚರಿಸಿದರೆ, ರಾಹು ಮತ್ತು ಕೇತು ಗ್ರಹಗಳು ವಕ್ರಿಯಾಗಿ ಸಂಚರಿಸುತ್ತವೆ. 

Tap to resize

Latest Videos

undefined



ಉಳಿದೆಲ್ಲ ಗ್ರಹಗಳು ತಮ್ಮ ವೇಗಕ್ಕೆ ಅನುಸರಿಸಿ ಕೆಲವೊಮ್ಮೆ ಮಾರ್ಗಿ ಮತ್ತು ವಕ್ರಿಯಾಗಿ ಚಲಿಸುತ್ತವೆ. ಹಾಗೆಯೆ ಬುಧಗ್ರಹವು ವಕ್ರಿಯಾಗಿ ಸಂಚರಿಸಿದಾಗ ಕೆಲವರಿಗೆ ಶುಭ ಪ್ರಭಾವವನ್ನು ಮತ್ತೆ ಕೆಲವರಿಗೆ ಅಶುಭ ಪ್ರಭಾವವನ್ನು ಬೀರುತ್ತದೆ. ಬುಧಗ್ರಹದ ಅಶುಭ ಪ್ರಭಾವದಿಂದ ಉಂಟಾಗುವ ತೊಂದರೆಗಳಿಗೆ ಜ್ಯೋತಿಷ್ಯದಲ್ಲಿ ಹೇಳಿರುವ ಪರಿಹಾರವನ್ನು ತಿಳಿದುಕೊಳ್ಳೋಣ...

ಇದನ್ನು ಓದಿ: ವಿವಿಧ ಪ್ರಕಾರದ ಜಪಮಾಲೆಯಿಂದ ಧನ-ಧಾನ್ಯ ವೃದ್ಧಿ...‍! 

ಸರಳ ಪರಿಹಾರಗಳು
ಬುಧ ಗ್ರಹವು ವಕ್ರಿಯಾಗಿ ಸಂಚರಿಸುವಾಗ ತೊಂದರೆಗಳನ್ನು ಎದುರಿಸುವ ವ್ಯಕ್ತಿಗಳು, ಮರ-ಗಿಡಗಳಿಗೆ ನೀರು ಹಾಕಿ ಅದರ ಪೋಷಣೆಯನ್ನು ನೋಡಿಕೊಂಡಲ್ಲಿ ಉತ್ತಮ ಪರಿಣಾಮಗಳನ್ನು ಕಾಣಬಹುದಾಗಿದೆ.

ಶ್ರದ್ಧೆ ಮತ್ತು ಭಕ್ತಿಯಿಂದ ದೇವರನ್ನು ಆರಾಧಿಸುವುದರಿಂದ ತೊಂದರೆಗಳ ಪ್ರಮಾಣ ತಗ್ಗುತ್ತದೆ. ಬುಧಗ್ರಹವು ವಕ್ರಿಯಾಗಿ ಸಂಚರಿಸುವ ಸಂದರ್ಭದಲ್ಲಿ ದಿನಕ್ಕೆ 108 ಬಾರಿ ಬುಧಗ್ರಹದ ಬೀಜಮಂತ್ರವನ್ನು ಪಠಿಸಬೇಕು. ಇದರಿಂದ ಸಕಾರಾತ್ಮಕ ಪ್ರಭಾವಗಳು ಉಂಟಾಗುತ್ತವೆ. ವಾಕ್ಚಾತುರ್ಯದಿಂದ ಕೆಲಸವನ್ನು ಸಾಧಿಸುವ ಸಾಮರ್ಥ್ಯ ಬರುತ್ತದೆ.

ವಕ್ರೀ ಬುಧಗ್ರಹದ ಪ್ರಭಾವವು ಸಂಚಾರದ ಮೇಲಾಗುತ್ತದೆ. ಅಷ್ಟೇ ಅಲ್ಲದೆ  ಬುಧಗ್ರಹವು ವಕ್ರಿಯಾಗಿ ಸಂಚರಿಸುತ್ತಿರುವ ಸಂದರ್ಭದಲ್ಲಿ ವಾದ-ವಿವಾದಗಳಿಂದ ದೂರವಿರುವುದು ಉತ್ತಮ. ಮಾತಿನಿಂದ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗಿನ ಬಾಂಧವ್ಯವು ಹಾಳಾಗುವ ಸಂಭವ ಉಂಟಾಗುತ್ತದೆ. ಅನಾವಶ್ಯಕವಾಗಿ ಮಾತುಗಳನ್ನಾಡದಿರುವುದು ಉತ್ತಮ.

ವಿಷ್ಣುವನ್ನು ಶ್ರದ್ಧಾ-ಭಕ್ತಿಯಿಂದ ಆರಾಧಿಸಿದವರಿಗೆ ಬುಧಗ್ರಹದ ಪ್ರಭಾಗಳು ಅನುಕೂಲಕರವಾಗಿರುತ್ತವೆ. ಹಾಗಾಗಿ ಪ್ರತಿದಿನ  ವಿಷ್ಣು ಸಹಸ್ರನಾಮ ಪಠಿಸುವುದರಿಂದ ಶುಭಫಲಗಳು ದೊರೆಯುತ್ತವೆ.

ಶ್ರದ್ಧೆಯಿಂದ ಇಷ್ಟದೇವರನ್ನು ಆರಾಧಿಸುವುದರಿಂದ ತಾಪತ್ರಯಗಳು ತಗ್ಗುವುದಲ್ಲದೆ ಕಷ್ಟಗಳಿಂದ ರಕ್ಷಣೆ ಸಿಗುತ್ತವೆ. ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ ಒಳಿತಾಗುತ್ತದೆ.

ಮನಸ್ಸಿನ ಶಾಂತಿ ಮತ್ತು ಆಂತರಿಕ ನೆಮ್ಮದಿಯನ್ನು ಗಳಿಸಿಕೊಳ್ಳಲು ಧ್ಯಾನ ಮಾಡುವುದು ಉತ್ತಮ. ನಕಾರಾತ್ಮಕ ಪ್ರಭಾವಗಳಿಂದ ಪಾರಾಗಲು ದೇವರ ಧ್ಯಾನ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಒಳ್ಳೆಯದಾಗುತ್ತದೆ.

ಇದನ್ನು ಓದಿ: ಬುಧ ಗ್ರಹದ ರಾಶಿ ಪರಿವರ್ತನೆಯಿಂದ ಈ 6 ರಾಶಿಯವರಿಗೆ ದೊಡ್ಡ ಬದಲಾವಣೆ..! 

ವ್ಯಕ್ತಿತ್ವದಿಂದಷ್ಟೇ ಅಲ್ಲದೆ ವ್ಯಕ್ತಿಯ ಉಡುಗೆ-ತೊಡುಗೆಗಳು ಗ್ರಹಗಳ ಶುಭಾಶುಭ ಪ್ರಭಾವಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಜಾತಕದಲ್ಲಿ ಬುಧಗ್ರಹ ವಕ್ರಿ ಚಲನೆ ಇದ್ದಾಗ ಆದಷ್ಟು ಹಸಿರು ಬಣ್ಣದ ವಸ್ತ್ರಗಳನ್ನು ಧರಿಸಿದಲ್ಲಿ ಶುಭಫಲವುಂಟಾಗುತ್ತದೆ ಎಂದು ಹೇಳಲಾಗುತ್ತದೆ.

ದಾನವನ್ನು, ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ಯಾವುದೇ ರೀತಿಯ ನಕಾರಾತ್ಮಕ ಪ್ರಭಾವಗಳು ನಾಶವಾಗಲು ಸಹಾಯಕವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ವಕ್ರಿ ಬುಧನಿದ್ದಾಗ ಅದರ ದುಷ್ಪ್ರಭಾವದಿಂದ ಪಾರಾಗಲು ಹಸಿರು ಬಣ್ಣದ ಬೇಳೆ, ತರಕಾರಿ, ಸೊಪ್ಪು, ಬಳೆ ಅಥವಾ ಬಟ್ಟೆಯನ್ನು ದಾನ ಮಾಡುವುದರಿಂದ ಸಕಾರಾತ್ಮಕ ಪರಿಣಾಮವನ್ನು ಕಾಣಬಹುದಾಗಿದೆ.

click me!