ವಿಜೃಂಭಣೆಯಿಂದ ಜರುಗಿದ ಚಾಮರಾಜೇಶ್ವರ ರಥೋತ್ಸವ, ಎಲ್ಲಿ ನೋಡಿದರಲ್ಲಿ ನವದಂಪತಿಗಳ ಕಲರವ

By Suvarna News  |  First Published Jul 13, 2022, 7:37 PM IST


ಚಾಮರಾಜನಗರದಲ್ಲಿ ಐದು ವರ್ಷಗಳ ಬಳಿಕ ಶ್ರೀ ಚಾಮರಾಜೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿದ್ದು, ಜಾತ್ರೆ ತುಂಬೆಲ್ಲ ಎಲ್ಲಿ ನೋಡಿದರಲ್ಲಿ ನವದಂಪತಿಗಳ ಕಲರವ.


ವರದಿ - ಪುಟ್ಟರಾಜು.ಆರ್.ಸಿ.  ಏಷ್ಯಾನೆಟ್ ಸುವರ್ಣ  ನ್ಯೂಸ್ ,  ಚಾಮರಾಜನಗರ

ಚಾಮರಾಜನಗರ, (ಜುಲೈ.13):
ಆಷಾಡ ಮಾಸ, ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅದರೆ ಆ ನಗರದಲ್ಲಿ ಪ್ರತಿವರ್ಷ ಆಷಾಡ ಮಾಸದಲ್ಲೇ  ಒಂದು ವಿಶಿಷ್ಟ ರಥೋತ್ಸವ ನಡೆಯುತ್ತೆ. ಅದು ಕೇವಲ ರಥೋತ್ಸವಲ್ಲ, ಅಲ್ಲೊಂದು ವೈಶಿಷ್ಟ್ಯ ಇದೆ. ಇಲ್ಲಿನ ವೈಶಿಷ್ಟವಾದರು ಏನು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಐದು ವರ್ಷಗಳ ಬಳಿಕ ಶ್ರೀ ಚಾಮರಾಜೇಶ್ವರ ರಥೋತ್ಸವ ನಡೆಯಿತು. 2017ರಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಗೆ ಚಾಮರಾಜೇಶ್ವರನ ರಥ ಸುಟ್ಟು ಭಸ್ಮವಾಗಿತ್ತು. ಇದೀಗ 1.20 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರಥ ನಿರ್ಮಿಸಲಾಗಿದ್ದು ಇಂದು(ಬುಧವಾರ) ಚಾಮರಾಜೇಶ್ವರನ ರಥೋತ್ಸವ ಜರುಗಿತು. ಆಷಾಡ ಮಾಸದ ಪೂರ್ಣಿಮೆಯ ದಿನವಾದ ಇಂದು  ಪೂರ್ವಷಾಡ ನಕ್ಷತ್ರದಲ್ಲಿ ಪೂರ್ವಾಹ್ನ 11 ರಿಂದ 11.30 ರ ಶುಭ ಕನ್ಯಾ ಲಗ್ನದಲ್ಲಿ ಚಾಮರಾಜೇಶ್ವರ ರಥೋತ್ಸವಕ್ಕೆ ಚಾಲನೆ ದೊರೆಯಿತು.

Tap to resize

Latest Videos

undefined

ಆಷಾಢ ಮಾಸದಲ್ಲಿ ಮರೆತೂ ಈ ಕೆಲಸಗಳನ್ನು ಮಾಡಬೇಡಿ!

. ಚಾಮರಾಜೇಶ್ವರನ ರಥಕ್ಕು ಮೊದಲು  ಗಣಪತಿ, ಸುಬ್ರಹ್ಮಣ್ಯ ರಥಗಳು ಹಾಗು  ಮೈಸೂರು ಮಹಾರಾಜರಾಗಿದ್ದ ಖಾಸಾ ಚಾಮರಾಜ ಒಡೆಯರ್ ಅವರ ಉತ್ಸವ ಮೂರ್ತಿ ಮುಂದೆ  ಚಲಿಸಿದವು. ಬಳಿಕ ಚಾಮರಾಜೇಶ್ವರ ದೊಡ್ಡ ರಥ ಅದರ ನಂತರ    ಕೆಂಪನಂಜಾಂಭ ರಥಗಳು ರಥದ ಬೀದಿಯಲ್ಲಿ  ಸುಮಾರು ಮೂರು ಗಂಟೆಗಳ ಕಾಲ ಸಾಗಿ ಸ್ವಸ್ಥಾನ ಸೇರಿದವು. ರಥೋತ್ಸವಕ್ಕೆ ಮೈಸೂರು ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದ್ರು. ರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ಚಾಮರಾಜೇಶ್ವರ ದೇವರಿಗೆ ರಾಜವಂಶದ ಕಡೆಯಿಂದ ವಿಶೇಷ ಪೂಜೆ ಸಲ್ಲಿಸಿದ್ರು.. 

 ನವದಂಪತಿಗಳ ಜಾತ್ರೆಯು ಹೌದು

ಚಾಮರಾಜೇಶ್ವರ ರಥೋತ್ಸವ ನವದಂಪತಿಗಳ ಜಾತ್ರೆಯು ಹೌದು. ಆಷಾಡ ಮಾಸದಲ್ಲಿ ನಡೆಯುವ ಈ ರಥೋತ್ಸವ ಸಹಜವಾಗಿಯೇ  ವಿಶೇಷತೆಯಿಂದ ಕೂಡಿದೆ. ಜೇಷ್ಠ ಮಾಸದ ತನಕ ವಿವಾಹ ಮಹೋತ್ಸವಗಳ ಸಡಗರ ಮುಗಿದು ಆಷಾಡ ಮಾಸದ ನೆಪದಲ್ಲಿ ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ಅಗಲಿರಬೇಕಾದ ನವವಿವಾಹಿತರ ಈ ರಥೋತ್ಸವದ ದಿನ ಒಂದಡೆ ಸೇರಿ ಚಾಮರಾಜೇಶ್ವರನಿಗೆ ಹಣ್ಣುಧವನ ಎಸೆದು ನಮಿಸುತ್ತಾರೆ. ತಮ್ಮ ದಾಂಪತ್ಯ ಜೀವನ ಸುಖವಾಗಿರಲೆಂದು ಪ್ರಾರ್ಥಿಸುತ್ತಾರೆ. ನವದಂಪತಿಗಳು ಸಂಪ್ರದಾಯದ ಪ್ರಕಾರ ಒಂದು ತಿಂಗಳ ಕಾಲ ಅಗಲಿರಬೇಕು. ಇಬ್ಬರು ಒಟ್ಟಾಗಿ ಬೆರೆಯುವಂತಿಲ್ಲ. ಈ ಅವಧಿಯಲ್ಲಿ ಅವರ ವಿರಹ ವೇದನೆ ಅನುಭವಿಸಿದವರಿಗೆ ಗೊತ್ತು. ಆದರೆ ಆಷಾಡ ಮಾಸದಲ್ಲು ನವಜೋಡಿಗಳು ಒಂದಡೆ ಸೇರಲು ಚಾಮರಾಜೇಶ್ವರ ರಥೋತ್ಸವ ಒಂದು ಸುವರ್ಣಾವಕಾಶ ಕಲ್ಪಿಸುತ್ತದೆ. ಚಾಮರಾಜೇಶ್ವರ ರಥೋತ್ಸವದಲ್ಲಿ  ಭಾಗವಹಿಸಿ ದೇವರ ದರ್ಶನ ಪಡೆದು  ತೇರಿಗೆ ಹಣ್ಣು ಧವನ ಎಸೆದು ಹರಕೆ ಹೊತ್ತು ಒಂದು ದಿನ ಪೂರ್ತಿ ದೇವಸ್ಥಾನ, ಪಾರ್ಕು, ಹೋಟೆಲ್, ಐಸ್ ಕ್ರೀಂ ಪಾರ್ಲರ್ ಹೀಗೆ ಎಲ್ಲಾ ಕಡೆ ಸುತ್ತಾಡಿ ಸಂತೋಷದಿಂದ ತೆರಳುತ್ತಾರೆ ಜಾತ್ರೆಗೆ ಬರುವ ನವದಂಪತಿಗಳಿಗೆ  ಸಂತಾನ ಭಾಗ್ಯ , ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ..

ನವದಂಪತಿಗಳ ಜಾತ್ರೆ ಎಂದೆ ಖ್ಯಾತಿಯಾಗಿರುವ ಚಾಮರಾಜೇಶ್ವರ ರಥೋತ್ಸವದಲ್ಲಿ ಸಾವಿರಾರು ನವವಿವಾಹಿತರು ಬಂದು ಸೇರಿದ್ದರು. ಎಲ್ಲಿ ನೋಡಿದರು ನವದಂಪತಿಗಳದ್ದೇ ಕಲರವ. ದೇವರಿಗೆ ಒಟ್ಟಾಗಿ ಸೇರಿ ಹಣ್ಣು ಧವನ ಎಸೆದು ನಮಿಸುವುದು. ಎಲ್ಲೆಂದರಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಾ ಕೈಕೈ ಹಿಡಿದು ಸುತ್ತಾಡುವ ದೃಶ್ಯ ಸಾಮಾನ್ಯವಾಗಿತ್ತು. ನವ ದಂಪತಿಗಳು.ಖುಷಿಖುಷಿಯಾಗಿ ಅಡ್ಡಾಡುತ್ತಾ ಜಾತ್ರೆಯಲ್ಲಿ ಇಷ್ಟ ಬಂದ ಸಾಮಾಗ್ರಿ ಖರೀದಿಸುತ್ತಾ ಸಿಹಿತಿಂಡಿ ಮೆಲ್ಲುತ್ತಾ ಅಗಲಿಕೆಯ ಬೇಸರ ಮರೆಯುತ್ತಾರೆ. ಮನದ ಭಾವನೆಗಳನ್ನು ಪರಸ್ಪರ ಹಂಚಿಕೊಂಡು ಕಾಲ ಕಳೆಯುತ್ತಾರೆ. ಈ ಜಾತ್ರೆಯಲ್ಲಿ ಕೇವಲ ಚಾಮರಾಜನಗರ  ಜಿಲ್ಲೆಯವರಷ್ಟೆ ಅಲ್ಲ ಸುತ್ತಮುತ್ತಲಿನ ಜಿಲ್ಲೆ ಹಾಗು ಹೊರ ರಾಜ್ಯಗಳಿಂದಲು  ನವವಿವಾಹಿತರು ಭಾಗವಹಿಸುತ್ತಾರೆ. ಒಟ್ಟಾರೆ ಆಷಾಡದ ನಡುವೆಯು ನವದಂಪತಿಗಳ ಭೇಟಿಗೆ ಚಾಮರಾಜೇಶ್ವರ ಕೃಪೆ ತೋರುವುದು ಇಲ್ಲಿನ ವಿಶೇಷವಾಗಿದೆ...

click me!