Womens Day: ಅರ್ಧ ನಾರೀಶ್ವರನಲ್ಲೇ ಇದೆ ಸಮಾನತೆಯ ಸಂದೇಶ

By Reshma RaoFirst Published Mar 8, 2023, 11:32 AM IST
Highlights

ಶಿವನ ಹಲವಾರು ರೂಪಗಳಲ್ಲಿ, ಅರ್ಧನಾರೀಶ್ವರ ಬಹುಶಃ ಅತ್ಯಂತ ವಿಶಿಷ್ಟವಾಗಿದೆ. ಅರ್ಧನಾರೀಶ್ವರದ ಸಾಂಕೇತಿಕತೆಯನ್ನು ಬಿಡಿಸಿದರೆ ಸ್ತ್ರೀ- ಪುರುಷ ಸಮಾನತೆಗೊಂದು ಅರ್ಥ ಬರಲಿದೆ..

ಯಾರೋ ಗಂಡಸು ಮತ್ತೊಬ್ಬರ ಕಷ್ಟಕ್ಕೆ ಮರುಗಿದರೆ ಹೆಂಗರುಳು ಎನ್ನುತ್ತೇವೆ, ಹೆಣ್ಣೊಬ್ಬಳು ಹೊರಗಿನ ಕೆಲಸಗಳನ್ನು ಧೈರ್ಯದಿಂದ ಪೂರೈಸಿಕೊಂಡು ಬಂದರೆ ಗಂಡಸಿನಂತೆ ಸಾಮರ್ಥ್ಯ ಹೊಂದಿದ್ದಾಳೆ ಎನ್ನುತ್ತೇವೆ. ಆದರೆ, ಗಂಡಸು ಕೂಡಾ ಇನ್ನೊಬ್ಬರ ಕಷ್ಟಕ್ಕೆ ಕರಗುವುದು ಸಹಜವೆೇ ಆಗಿದೆ, ಸಹಜವೇ ಆಗಿರಬೇಕು. ಹಾಗೆಯೇ ಹೆಂಗಸು ಹೊರ ಕೆಲಸಗಳನ್ನು ಮಾಡುವುದನ್ನು ಕೂಡಾ ಸಹಜವಾಗಿಯೇ ಕಾಣಬೇಕು. ಆಗಲೇ ಅಲ್ಲವೇ ಸಮಾನತೆ ಎಂಬ ಮಾತಿಗೆ ಸರಿಯಾದ ಅರ್ಥ ಬರುವುದು?

ಇಷ್ಟಕ್ಕೂ ಪ್ರಕೃತಿಯ ರಚನೆಯೇ ಹಾಗಿದೆ. ಅಲ್ಲಿ ನದಿಯು ಗಂಡಿನಂತೆ ರಭಸವಾಗಿ ಭೋರ್ಗರೆಯುತ್ತದೆ. ಅದೇ ನದಿಯು ಮತ್ತೊಂದು ಕಡೆ ಥಳುಕು ಬಳುಕಿನಲ್ಲಿ ಹರಿಯುತ್ತಾ ಹೆಣ್ಣಿನಂತೆ ಚಲಿಸುತ್ತದೆ. ದೊಡ್ಡ ಆಲದ ಮರವೊಂದು ನೂರಾರು ಜೀವಗಳಿಗೆ ಮಡಿಲು ಕೊಟ್ಟು ಹೆಣ್ಮನ ತೋರುವಂತೆ, ತನ್ನ ಬೃಹತ್ ಹಸ್ತಗಳನ್ನು ಚಾಚಿ ಎಲ್ಲರಿಗೂ ರಕ್ಷಣೆ ನೀಡುತ್ತಿರುವ ಕುಟುಂಬದ ಯಜಮಾನನಂತೆ ಪುರುಷ ಗುಣವನ್ನೂ ತೋರುತ್ತದೆ. ಗಾಳಿಯೂ ಹಾಯೆಂದು ಬೀಸಿದಾಗ ಅಮ್ಮನ ಸೆರಗಿನ ಬೀಸಿನಂತೆನಿಸಿದರೆ, ಅದೇ ಗಾಳಿ ಕೋಪಗೊಂಡಾಗ ಅಪ್ಪನ ಗದರು ಮೀಸೆ ನೆನಪಾಗುತ್ತದೆ. ಬೆಂಕಿಯು ದೀಪವಾಗಿ ಉರಿವಾಗ ಹೆಣ್ಣಿನ ಚೈತನ್ಯದಂತೆಯೂ, ಸುಡುವಾಗ ಪುರುಷನ ಗಡಸಿನಂತೆಯೂ ಕಾಣಬಹುದು. ಪ್ರಕೃತಿಯೇ ಹೀಗಿರುವಾಗ ಮನುಷ್ಯ ಮಾತ್ರರದೆಂಥ ವಿಭಿನ್ನತೆ? ಪ್ರತಿ ಮನುಷ್ಯರಲ್ಲಿ ಕೂಡಾ ಗಂಡು ಹೆಣ್ಣು ಇಬ್ಬರ ಗುಣಗಳೂ ಬೆರೆತಿರುತ್ತವೆ. ಇದರಿಂದಲೇ ಅರ್ಧ ನಾರೀಶ್ವರ ಕಲ್ಪನೆ ಮೊಳಕೆಯೊಡೆದುದಲ್ಲವೇ?

ಅರ್ಧ ನಾರೀಶ್ವರ
ಈ ಅರ್ಧ ನಾರೀಶ್ವರ ಕಲ್ಪನೆಯೇ ವಿಶೇಷವಾಗಿದೆ. ಶಿವ ಎಂದರೆ ಪುರುಷತ್ವದ ಪ್ರತಿನಿಧಿ ಎಂದು ನೋಡುತ್ತೇವೆ. ಆತನಿಗೆ ಸ್ತ್ರೀಗೆ ಇಡುವ ಅರಿಶಿನ ಕುಂಕುಮವನ್ನು ಪೂಜೆಯಲ್ಲೂ ಬಳಸುವುದಿಲ್ಲ. ಸ್ಮಶಾನದ ಭಸ್ಮ, ತಾಂಡವ ನೃತ್ಯ, ಹಾವನ್ನೇ ಕೊರಳಲ್ಲೇರಿಸಿಕೊಂಡಿರುವುದು, ಕಾಡಿನ ಹೂಗಳ ಮೇಲಿನ ಪ್ರೀತಿ- ಹೀಗೆ ಶಿವನ ಎಲ್ಲ ಇಷ್ಟಕಷ್ಟಗಳೂ ಅವನನ್ನು ಪುರುಷತ್ವದ ಅಂತಿಮ ಪ್ರತಿನಿಧಿ ಎಂಬಂತೆ ಸೂಚಿಸುತ್ತವೆ. ಅಂಥಾ ಆ ಶಿವನೇ ಅರ್ಧ ನಾರೀಶ್ವರ ರೂಪ ತಳೆದ ಎಂದರೆ ಅಚ್ಚರಿಯಾಗುತ್ತದೆ. 

International womens day 2023: ಸ್ಪೆಷಲ್​​ ಆಗಿ ವಿಶ್​ ಮಾಡಿದ ಗೂಗಲ್ ಡೂಡಲ್

ಅರ್ಧ ನಾರೀಶ್ವರ ರೂಪದ ಶಿವನಲ್ಲಿ ಅರ್ಧ ಶಿವನಾದರೆ, ಅರ್ಧ ಪಾರ್ವತಿ. ಪಾರ್ವತಿಯನ್ನು ಕಾಲ ಮೇಲೆ ಕೂರಿಸಿಕೊಂಡ ಶಿವ ಅವಳನ್ನು ತನ್ನೊಳಗೆ ಅರ್ಧವಾಗಿಸಿಕೊಳ್ಳುತ್ತಾನೆ. ಆ ಮೂಲಕ ತನ್ನ ಇನ್ನರ್ಧವನ್ನು ತೆಗೆದು ಹಾಕುತ್ತಾನೆ. ಪ್ರತಿ ಪುರುಷರೂ ಹೀಗೆ ಪತ್ನಿಗಾಗಿ ತಮ್ಮ ಕೆಲ ಗುಣಗಳನ್ನು ಬದಲಿಸಿಕೊಳ್ಳುವುದನ್ನು ಕಾಣಬಹುದು. ಪತ್ನಿಗೆ ಸಮಾನ ಸ್ಥಾನ ಕೊಟ್ಟ ಎಂಬುದನ್ನು ಈ ರೂಪದಿಂದ ಅರ್ಥ ಮಾಡಿಕೊಳ್ಳಬಹುದು. ಅಂತೆಯೇ, ಶಿವನಲ್ಲಿ ಕೂಡಾ ಅರ್ಧ ಪುರುಷ ಗುಣಗಳಿದ್ದರೆ, ಮತ್ತರ್ಧ ಮಹಿಳೆಯ ಗುಣಗಳಿತ್ತು ಎಂದೂ ಪರಿಗಣಿಸಬಹುದು. ಅಥವಾ ಇಂದಿನ ಲಿಂಗ ಸಮಾನತೆಯ ಕೂಗಾಟದ ಹಿಂದಿನ ಅಸಲಿ ಬೇಡಿಕೆ ಇದೇ ಆಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. 

Womens Day 2023 Wishes: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

ಪ್ರಕೃತಿ ಸಹಜ ಸಮಾನತೆ
ಪ್ರತಿ ಹೆಣ್ಣು ಹಾಗೂ ಗಂಡಿನಲ್ಲಿ ಪ್ರಧಾನ ಗುಣಗಳು ಅವರ ಲಿಂಗದ್ದೇ ಆದರೂ, ಹೆಣ್ಣಿನಲ್ಲಿ ಗಂಡಿನ ಗುಣಗಳೂ, ಗಂಡಿನಲ್ಲಿ ಹೆಣ್ಣಿನ ಗುಣಗಳೂ ಇದ್ದೇ ಇರುತ್ತವೆ. ಹಾಗಾಗಿಯೇ ಒಬ್ಬ ತಾಯಿ ಅನಿವಾರ್ಯತೆ ಎದುರಾದಾಗ ತಾನೇ ತಂದೆಯಾಗಿಯೂ, ತಾಯಿಯಾಗಿಯೂ ಮಗುವನ್ನು ಬೆಳೆಸಬಲ್ಲಳು. ತಂದೆ ಕೂಡಾ ಮಾತೃತ್ವವನ್ನು ತೋರಬಲ್ಲ. ಈ ಪ್ರಕೃತಿಯಲ್ಲಿರುವ ಸಹಜ ಸಮಾನತೆಯನ್ನು ಅರಿತು ಅಂತೆಯೇ ಮನಸ್ಥಿತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಹಿಳಾ ದಿನಾಚರಣೆಗೆ ಅಥವಾ ಮತ್ಯಾವುದೋ ಸನ್ನಿವೇಶಕ್ಕೆ ಸಮಾನತೆಯ ಕೂಗು ಕೇಳಿ ಬರುವ ಪ್ರಮೇಯವೇ ಇರುವುದಿಲ್ಲ..

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!