ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಸೀತಾಳಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಅರ್ಚಕರ ಬಳಗ ಬೆಳಗ್ಗೆ ದೇವರಿಗೆ ತರಹೇವಾರಿ ಹೂಗಳಿಂದ ಪುಷ್ಪಾಲಂಕಾರ ಮಾಡಿ ವಿವಿಧ ಧಾರ್ಮಿಕ ವಿಧಿವಿದಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.08): ಚಿಕ್ಕಮಗಳೂರು ತಾಲ್ಲೂಕಿನ ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಸಾಲಿನ ಸೀತಾಳಯ್ಯನಗಿರಿಯಲ್ಲಿ ಉಭಯ ನಾಡಿನ ಹತ್ತಾರು ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡು ಬಾಳೆಹಣ್ಣು, ಪುರಿ ಉಗ್ಗುವ ಮೂಲಕ ಉಘೇ ಉಘೇ ಉದ್ಘಾರದೊಂದಿಗೆ ಇಂದು ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಸೀತಾಳಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಅರ್ಚಕರ ಬಳಗ ಬೆಳಗ್ಗೆ ದೇವರಿಗೆ ತರಹೇವಾರಿ ಹೂಗಳಿಂದ ಪುಷ್ಪಾಲಂಕಾರ ಮಾಡಿ ವಿವಿಧ ಧಾರ್ಮಿಕ ವಿಧಿವಿದಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಜಾತಿ, ಮತ ಬೇಧವಿಲ್ಲದೇ ಆಚರಣೆ ಮಾಡುವ ರಥೋತ್ಸವ: ಮೂರೂರು ನಾಡಿನ ಹಿರೇಕೊಳಲೆ, ನರಗನಹಳ್ಳಿ, ಕಬ್ಬಿನಹಳ್ಳಿ, ಐದೂರು ನಾಡಿನ ಹಿರೇಕೊಳಲೆ, ತಳಿಹಳ್ಳ, ಜಕ್ಕನಹಳ್ಳಿ, ಮಲ್ಲಂದೂರು ಮೂರಳ್ಳಿ ಎರಡೂರು ನಾಡಿನ ಚನ್ನಗೊಂಡನಹಳ್ಳಿ, ಹೊಸಪುರ, ನಾರಕಂತೆ ಮಠ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಭಕ್ತರು ಜಾತಿ,ಮತ ಬೇಧವಿಲ್ಲದೆ ಒಕ್ಕೋರಲಿನಿಂದ ಆಗಮಿಸಿ ಸಾಂಪ್ರದಾಯಿಕ ಉಡುಗೆ ತೊಟ್ಟು ಶ್ರದ್ದಾಭಕ್ತಿಯಿಂದ ಪಾಲ್ಗೊಂಡು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಈ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯದಂತೆ ಮೂರಳ್ಳಿ ನಾಡಿನವರು ಮುಳ್ಳಪ್ಪಸ್ವಾಮಿಯನ್ನು ದೇವಾಲಯಕ್ಕೆ ಕರೆ ತಂದು ಪೂಜೆ ಸಲ್ಲಿಸಿದರೆ ಮೂರೂರು ನಾಡಿನವರು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ತೇರಿಗೆ ಮುಟ್ಟಿಸುತ್ತಾರೆ. ನಂತರ ಮೂರೂರು, ಐದೂರು ನಾಡಿನವರು ಒಗ್ಗೂಡಿ ಉತ್ಸವ ನಡೆಸಿದ ನಂತರ ರಥೋತ್ಸವ ನೆರವೇರಿಸಲಾಯಿತು.
ಯಾವತ್ತಾದ್ರೂ 2 ಗಂಟೆ ಬಂದ್ ಬಗ್ಗೆ ಕೇಳಿದ್ದೀರಾ?: ಸಿಎಂ ಬೊಮ್ಮಾಯಿ
ಉಘೇ ಉಘೇ ಎಂದು ರಥ ಎಳೆದ ಭಕ್ತರು: ರಥ ಎಳೆಯುವ ಸಂದರ್ಭ ಭಕ್ತರು ಉಘೇ ಉಘೇ ಎಂದು ಉದ್ಘರಿಸುತ್ತಾ ಸಾಗಿ ಸಂಭ್ರಮಿಸಿದ ದೃಶ್ಯ ಕಂಡು ಬಂತು. ಶನಿವಾರದಂದು ದೇವರಿಗೆ ಕಂಕಣ ಕಟ್ಟುವ ಮೂಲಕ ಆರಂಭವಾದ ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ನಂತರ ಗಂಗೆ ತಂದು ರಥೋತ್ಸವಕ್ಕೆ ಸಿದ್ದತೆ ಮಾಡಿ ಧಾರ್ಮಿಕ ಕೈಂಕರ್ಯಗಳು ನಡೆಸಲಾಯಿತು. ಶಿವ ಪಾರ್ವತಿಯ ವಿವಾಹ ಮಹೋತ್ಸವದ ನಂತರ ಮುಳ್ಳಪ್ಪಸ್ವಾಮಿ ಆಗಮಿಸಿ ಶಿವಪಾರ್ವತಿಗೆ ಆಶೀರ್ವದಿಸುವುದು ಪುರಾತನ ಕಾಲದಿಂದಲೂ ನಡೆದು ಬಂದ ಪದ್ದತಿ. ಗಂಗಾಪೂಜೆ ನಂತರ ಮೂರೂರು ನಾಡಿನ ಭಕ್ತರು ಸುತ್ತುವರೆದು ಅರೆಭೂತನನ್ನು ಕರೆತಂದು ಉಪವಾಸ ವ್ರತದೊಂದಿಗೆ ಪಾಳ್ಗೊಂಡಿದ್ದರು.
ನಾಡಿನ ಅರ್ಚಕರುಗಳು ಮುಳ್ಳಪ್ಪಕಟ್ಟೆ, ಹಾಲುಮಲ್ಲಪ್ಪ, ಚೆಂಗರಮಲ್ಲಪ್ಪ ಕಟ್ಟೆ ಸೇರಿದಂತೆ ರಥದ ಸುತ್ತ ಬಿನ್ನಹಾಕಿ ನಾಡಿನ ಪ್ರಮುಖರನ್ನು ಆಹ್ವಾನಿಸಿದ ನಂತರ ರಥ ಎಳೆಯಲಾಯಿತು. ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿ, ಭೂತನ ಅಡ್ಡೆ, ಚೌಡಿ, ಕೆಂಚನಡ್ಡೆ, ರುದ್ರನ ಅಡ್ಡೆ, ಸೇರಿದಂತೆ ವಿವಿಧ ಗ್ರಾಮದ ಹತ್ತಾರು ದೇವರ ಅಡ್ಡೆಗಳನ್ನು ಹೊತ್ತ ಭಕ್ತರು ರಥೋತ್ಸವದ ಮುಂಭಾಗದಲ್ಲಿ ಸಾಗುತ್ತಾ ಬೆಟ್ಟಗಳಲ್ಲಿ ಕುಳಿತಿದ್ದ ಭಕ್ತರ ಬಳಿ ತೆರಳಿದಾಗ ಪುರಿಉಗ್ಗಿ ಪುನೀತಭಾವ ಮೆರೆದರು. ಕೆಲವರು ಶಿವಪಾರ್ವತಿ ವಿವಾಹ ಸಂಭ್ರಮಕ್ಕಾಗಿ ಬಾಳೆಹಣ್ಣು, ಪುರಿಉಗ್ಗಿ ಹರಕೆ ತೀರಿಸಿದರು.ಬೆಳಗಿನಿಂದಲೆ ಭಕ್ತರು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ನಾಡಿನ ಸಂಕೇತವಾಗಿ ಕಚ್ಚೆಪಂಚೆ, ಕೋಟು, ಪೇಟ ಧರಿಸಿ ವ್ರತಾಚರಣೆಯೊಂದಿಗೆ ಶಿಸ್ತಿನಿಂದ ಪಾಲ್ಗೊಂಡಿದ್ದ ಉಭಯ ನಾಡಿನ ಭಕ್ತ ಸಮೂಹ ತಮಟೆ ಸದ್ದಿಗೆ ಹೆಜ್ಜೆಹಾಕಿ ಸಂಭ್ರಮಿಸಿದ್ದು ಕಂಡು ಬಂತು.
ಉಚಿತ ವಿದ್ಯುತ್ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚೆಗೆ ಬರಲಿ: ಡಿ.ಕೆ.ಶಿವಕುಮಾರ್
ಮಧ್ಯಾಹ್ನ ಸುಡು ಬಿಸಿಲನ್ನು ಲೆಕ್ಕಿಸದೆ ಕೆಲವರು ಹಸುಗೂಸುಗಳನ್ನು ಎತ್ತಿಕೊಂಡು ಮರದ ನೆರಳಿನ ನಡುವೆಯೂ ಛತ್ರಿ ಆಶ್ರಯಿಸಿದರೆ ಮತ್ತೆ ಕೆಲವರು ಸೀರೆಯ ಸೆರಗು, ಟವೆಲ್, ಇನ್ನಿತರೆ ವಸ್ತ್ರಗಳನ್ನು ತಲೆಮೇಲೆ ಹೊದ್ದು ಬಿಸಿಲಿನ ತಾಪ ನೀಗಿಸಿಕೊಂಡರು. ಮಕ್ಕಳು, ಮಹಿಳೆಯರು ಕಲ್ಲಂಗಡಿಹಣ್ಣು, ತಂಪು ಪಾನಿಯಾ, ಐಸ್‌ಕ್ರೀಮ್ ಮೊರೆಹೋಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಗಿರಿಶ್ರೇಣಿಯ ಸುಮುತ್ತಲ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಭಕ್ತರು ಮನೆಗಳಿಗೆ ತಳಿರು ತೋರಣಕಟ್ಟಿ ಸ್ನೇಹಿತರು, ಸಂಬಂಧಿಕರನ್ನು ಆಹ್ವಾನಿಸಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಸಿಹಿ ಊಟ ಸವಿದು ಕುಟುಂಬದೊಂದಿಗೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.