ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳವಾರ ತಡರಾತ್ರಿ ಸಂಪಂಗಿರಾಮ ನಗರದ ಕಲ್ಯಾಣಿನಿಂದ ಶ್ರೀ ಧರ್ಮರಾಯ ಸ್ವಾಮೀ ದೇವಸ್ಥಾನದವರೆಗೆ ಹಸಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.
ಬೆಂಗಳೂರು (ಏ.05): ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳವಾರ ತಡರಾತ್ರಿ ಸಂಪಂಗಿರಾಮ ನಗರದ ಕಲ್ಯಾಣಿನಿಂದ ಶ್ರೀ ಧರ್ಮರಾಯ ಸ್ವಾಮೀ ದೇವಸ್ಥಾನದವರೆಗೆ ಹಸಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು. ಕಳೆದ ಒಂದು ವಾರದಿಂದ ಕರಗ ಮಹೋತ್ಸವದ ಅಂಗವಾಗಿ ಧರ್ಮರಾಯ ಸ್ವಾಮೀ ದೇವಸ್ಥಾನ ಸೇರಿದಂತೆ ವಿವಿಧ ಕಡೆ ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳು ಶುರುವಾಗಿವೆ. ಮಂಗಳವಾರ ಕಬ್ಬನ್‌ಪಾರ್ಕ್ ನಲ್ಲಿ ಕರಗದ ಕುಂಟೆ ಪೂಜೆ ನಡೆಸಲಾಯಿತು. ಬಳಿಕ ಮಂಗಳವಾರ ತಡ ರಾತ್ರಿ ನಡೆಯುವ ಹಸಿ ಕರಗ ಉತ್ಸವಕ್ಕೆ ಸಂಬಂಧಿಸಿದಂತೆ ಸಿದ್ಧತೆಯನ್ನು ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಮಾಡಿಕೊಳ್ಳಲಾಯಿತು.
ವಿಜೃಂಭಣೆಯ ಹಸಿ ಕರಗ: ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ರಥಕ್ಕೆ ಕಳಸ ಇಡುವ ಮೂಲಕ ವಿಧಿ ವಿಧಾನಗಳು ಆರಂಭವಾಗುತ್ತವೆ. ದೇವಾಲಯದ ಒಂದು ಮೂಲೆಯಲ್ಲಿ ದವನವನ್ನು ಇರಿಸಿ ಕೆಡುಕುಗಳು ಸಂಭವಿಸದಂತೆ ಪ್ರಾರ್ಥನೆ ಮಾಡಲಾಗುತ್ತದೆ. ಇದಾದ ನಂತರ ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಬ್ಬನ್‌ಪಾರ್ಕ್ನಲ್ಲಿರುವ ಕಲ್ಯಾಣಿಗೆ ಹಸಿ ಕರಗ ಬರಲಿದೆ. ಇಲ್ಲಿ ಪೂಜೆಗಳನ್ನು ನಡೆಸಿ ನಂತರ ಶಕ್ತಿ ದೇವತೆ ಎಂದೇ ಕರೆಯಲಾಗುವ ದ್ರೌಪದಿ ದೇವಿಯನ್ನು ಕರಗ ಹೊರಲಿರುವ ಜ್ಞಾನೇಂದ್ರ ಅವರು ಮಡಿಲಲ್ಲಿ ಇರಿಸಿಕೊಂಡು ಅಲ್ಲಿಂದ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಆದಿ ಶಕ್ತಿ ದೇವಾಲಯಕ್ಕೆ ಬಂದು ಅಲ್ಲಿ ಪೂಜೆ ಸಲ್ಲಿಸಲಾಯಿತು.
ಕರಗ ಉತ್ಸವಕ್ಕೆ 40 ಲಕ್ಷ ಮುಂಗಡ ಅನುದಾನ: ತುಷಾರ್ ಗಿರಿನಾಥ್
ನಂತರ ಅಲ್ಲಿಂದ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಆಗಮಿಸಿ ಅಲ್ಲಿ ಜ್ಞಾನೇಂದ್ರ ಅವರು ಎರಡು ಗಂಟೆ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಇದಾದ ನಂತರ ಮತ್ತೆ ಪೂಜೆ ವಿಧಾನಗಳು ಆರಂಭವಾಗುತ್ತವೆ. ಬುಧವಾರ ರಾತ್ರಿ ಪೊಂಗಲ್ ಸೇವೆ ಮಾಡಲಾಗುತ್ತದೆ. ಇದಾದ ನಂತರ ಗಂಟೆ ಪೂಜಾರಿಗಳು ದೇವಿಯನ್ನು ಸಂತೃಪ್ತಿಗೊಳಿಸಲು ಭಜನೆ ಮಾಡಲಿದ್ದಾರೆ. ಇದು ಕೂಡಾ ವಹ್ನಿಕುಲಸ್ಥರ ಭಾಷೆಯಲ್ಲಿಯೇ ನಡೆಯಲಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಕರಗ ಮಹೋತ್ಸವವನ್ನು ಅದ್ದೂರಿಯಿಂದಲೇ ಆಚರಣೆ ಮಾಡಲು ಉತ್ಸವ ಸಮಿತಿ ನಿರ್ಧಾರ ತೆಗೆದುಕೊಂಡಿದೆ. ಎರಡು ವರ್ಷಗಳ ಕಾಲ ಕಾಡಿದ ಕೊರೊನಾ ವೈರಸ್ ಕಾಟ ಕಡಿಮೆಯಾಗಿದೆ. ಇದರಿಂದ ಎಲ್ಲವೂ ಸುಸೂತ್ರವಾಗಿ ಆಚರಣೆಗೆ ಸಜ್ಜಾಗಿದೆ. ಎಲ್ಲಿಯೂ ಸಮಸ್ಯೆಗಳು ಎದುರಾಗದಂತೆ ಅಚ್ಚುಕಟ್ಟಾಗಿ ಕರಗ ಮಹೋತ್ಸವವನ್ನು ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕರಗ ಮಹೋತ್ಸವ ಸಮಿತಿ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ.
ಕಾಂಗ್ರೆಸ್ಸಿಗೆ 60 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು: ಆಕಾಂಕ್ಷಿ ಸಂಖ್ಯೆ 2ಕ್ಕೆ ಇಳಿಸಲು ರಾಹುಲ್ ತಾಕೀತು
ನಾಳೆ ಕರಗ ಉತ್ಸವ: ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಏಪ್ರಿಲ್ 6ರ ಚೈತ್ರ ಪೂರ್ಣಿಮೆಯಂದು ಕರಗ ಮಹೋತ್ಸವ ಮಧ್ಯರಾತ್ರಿ 12ಕ್ಕೆ ಆರಂಭವಾಗಿ ಮಸ್ತಾನ್ ದರ್ಗಾ ಸೇರಿದಂತೆ ನಗರದ ಅನೇಕ ದೇವಾಲಯಗಳಿಗೆ ತೆರಳಿ ಪೂಜೆ ಸ್ವೀಕರಿಸಿ ಮರು ದಿನ ಬೆಳಗಿನ ಜಾವ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮರಳಲಿದ್ದು, ನಂತರ ಕೆಲವು ವಿಧಿ ವಿಧಾನಗಳ ಮೂಲಕ ಏಪ್ರಿಲ್ 8ರ ಮಧ್ಯರಾತ್ರಿ ಕರಗ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.