
ಶಾಲೆಗೆ ಹೋಗೋ ಟೈಂನಲ್ಲಿ ಪೆನ್ನಿನ ಇಂಕಿನ (Pen ink) ಕಲೆ ಯುನಿಫಾರ್ಮ್ ಗೆ ಮಾಮೂಲಿಯಾಗಿತ್ತು. ಜೇಬಿನಲ್ಲಿ ಪೆನ್ನು ಇಟ್ಕೊಂಡು ಹೋದ್ರೆ ಶಾಯಿ ಸೋರಿ ಇಡೀ ಜೇಬು ಕಲೆ ಆಗ್ತಾಯಿತ್ತು. ಶಾಯಿ ಕಲೆಯಾದ ಡ್ರೆಸ್, ಶರ್ಟ್ ಹಾಕಿಕೊಂಡು ಮನೆಗೆ ಹೋದ್ರೆ ಅಮ್ಮನ ಒದೆ ಗ್ಯಾರಂಟಿ. ಬರೀ ಸ್ಕೂಲ್ ಗೆ ಹೋಗೋ ಮಕ್ಕಳು ಮಾತ್ರವಲ್ಲ ಆಫೀಸ್ ಗೆ ಹೋಗೋರು ಕೂಡ ಜೇಬಿಗೆ ಕಲೆ ಮಾಡ್ಕೊಳ್ತಾರೆ. ಶಾಯಿ ಕಲೆ ತೆಗೆಯೋದು ಕಷ್ಟ. ಹಾಗಾಗಿ ಆ ಶರ್ಟ್ (shirt) ಬದಲಿಸದೆ ಬೇರೆ ಉಪಾಯ ಇರೋದಿಲ್ಲ. ಆದ್ರೀಗ ನಿಮ್ಮ ಜೇಬಿಗೆ ಶಾಯಿ ಕಲೆ ಆದ್ರೆ ಟೆನ್ಷನ್ ಮಾಡ್ಕೊಳ್ಬೇಕಾಗಿಲ್ಲ. ಅದೇ ಶರ್ಟ್ ಧರಿಸಿ ಆರಾಮವಾಗಿ ಹೋಗ್ಬಹುದು. ನಿಮ್ ಶರ್ಟ್ ಜೇಬಿಗೆ ಕಲೆ ಆಗಿದೆ ಮಾರಾಯ್ರೆ ಅಂತ ಯಾರಾದ್ರೂ ಹೇಳಿದ್ರೆ, ಅದು ಕಲೆಯಲ್ಲ, ಫ್ಯಾಷನ್ ಅಂತ ಹೇಳ್ಬಹುದು.
ಕಲೆನೂ ಫ್ಯಾಷನ್ ಆಯ್ತಾ ಎನ್ನುವ ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ ಯಸ್. ಶಾಯಿ ಕಲೆ ಇರುವ ಡ್ರೆಸ್ ಡಿಸೈನರ್ ಟ್ಯಾಗ್ನೊಂದಿಗೆ 80,000 ರೂಪಾಯಿಗೆ ಮಾರಾಟ ಆಗ್ತಿದೆ. ಅಚ್ಚರಿಯಾದ್ರೂ ಇದು ಸತ್ಯ. ಶಾಯಿ ಕಲೆ ಜೇಬಿರುವ ಶರ್ಟ್ಗಳನ್ನು ಆನ್ಲೈನ್ ಫ್ಯಾಷನ್ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮೇಡ್ ಇನ್ ಇಟಲಿ ಟ್ಯಾಗ್ ಅಡಿ ಈ ಶರ್ಟ್ ಮಾರಾಟವಾಗುತ್ತಿದೆ. ಇಂಟರ್ನೆಟ್ ನಲ್ಲಿ ಶರ್ಟ್ ಫೋಟೋ ವೈರಲ್ ಆಗಿದೆ. ಜನರು ನಾನಾ ಕಮೆಂಟ್ ಮಾಡ್ತಿದ್ದಾರೆ.
ತನ್ನ ವಿಶಿಷ್ಟ ಫ್ಯಾಷನ್ಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ, ಇಟಲಿಯ ಪ್ರಸಿದ್ಧ ಐಷಾರಾಮಿ ಬ್ರ್ಯಾಂಡ್ ಮಾಸ್ಚಿನೊ, ಈ ಶರ್ಟ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದನ್ನು ಮ್ಯಾನ್ ಲೈಟ್ ಬ್ಲೂ ಪೆನ್ ಇಂಕ್ ಲೀಕ್ ಪಾಕೆಟ್ ಶರ್ಟ್ ಎಂದು ಹೆಸರಿಸಲಾಗಿದೆ. ಅನೇಕ ಆನ್ಲೈನ್ ಫ್ಯಾಷನ್ ವೆಬ್ಸೈಟ್ಗಳಲ್ಲಿ, ಈ ಶರ್ಟ್ ಅನ್ನು ಮೇಡ್ ಇನ್ ಇಟಲಿ ಎಂಬ ಟ್ಯಾಗ್ ಹೊಂದಿರುವ ಡಿಸೈನರ್ ಶರ್ಟ್ ಹೆಸರಿನಲ್ಲಿ 80,000 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಶರ್ಟ್ ಮೇಲೆ ಶಾಯಿ ಕಲೆ ಹಾಕಿ ಇಟಾಲಿಯನ್ ಫ್ಯಾಷನ್ ಹೆಸರಿನಲ್ಲಿ ಮಾರಾಟ ಮಾಡ್ತಿರೋದನ್ನು ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಇಂಥ ಕಮೆಂಟ್ : ಸಾಮಾಜಿಕ ಜಾಲತಾಣದಲ್ಲಿ ಈ ಶರ್ಟ್ ಬಗ್ಗೆ ತುಂಬಾ ತಮಾಷೆಯ ಕಾಮೆಂಟ್ಗಳು ಹೊರಬರುತ್ತಿವೆ. ನನ್ನ ರೆನಾಲ್ಡ್ಸ್ ಪೆನ್ 7 ನೇ ತರಗತಿಯಲ್ಲಿ ಉಚಿತವಾಗಿ ಮಾಡುತ್ತಿದ್ದ ಕೆಲಸಕ್ಕೆ ಮಾಸ್ಚಿನೊ 80 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಿದ್ದೆ ಎಂದು ಕಮೆಂಟ್ ಮಾಡಿದ್ದಾರೆ. ನಾವು ಇನ್ನೇನು ನೋಡ್ಬೇಕೋ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಹಿಂದೆ ಮಾಸ್ಚಿನೊ ಈ ಶರ್ಟ್ ಅನ್ನು 1.20 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿತ್ತು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ರೆ.
ಮಾಸ್ಚಿನೊ ಕೌಚರ್ : ಮಾಸ್ಚಿನೊ ಕೌಚರ್ ಇಟಾಲಿಯನ್ ಫ್ಯಾಷನ್ ಬ್ರ್ಯಾಂಡ್. ಇದು ತನ್ನ ಉತ್ಪನ್ನಗಳನ್ನು ಮೇಡ್ ಇನ್ ಇಟಲಿ ಟ್ಯಾಗ್ನೊಂದಿಗೆ ಮಾರಾಟ ಮಾಡುತ್ತದೆ. ಈ ಕಂಪನಿಯನ್ನು 1983 ರಲ್ಲಿ ಇಟಲಿಯ ಮಿಲನ್ನಲ್ಲಿ ಫ್ರಾಂಕೊ ಮೊಸ್ಚಿನೊ ಸ್ಥಾಪಿಸಿದರು. ಈಗ ಈ ಐಷಾರಾಮಿ ಫ್ಯಾಷನ್ ಕಂಪನಿ, ಶಾಯಿ ಬಣ್ಣದ ಶರ್ಟ್ ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಮಾಸ್ಚಿನೊ ಶಾಯಿ ಕಲೆ ಇಲ್ಲದ ಶರ್ಟ್ ಅನ್ನು 61.5 ಸಾವಿರಕ್ಕೆ ಮಾರಾಟ ಮಾಡ್ತಿದೆ. ಇದ್ರ ಕೆಲ ಶರ್ಟ್ ಬೆಲೆ 1 ಲಕ್ಷಕ್ಕಿಂತ ಹೆಚ್ಚಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.