ಡಾರ್ಕ್, ಬೋಲ್ಡ್ ಐಬ್ರೋಸ್ ಈಗಿನ ಟ್ರೆಂಡ್. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಇಂಥ ಐಬ್ರೋಸ್ ಮೂಲಕವೇ ಗಮನಸೆಳೆಯುತ್ತಿದ್ದಾರೆ. ಇಂಥ ಹುಬ್ಬು ನನಗೂ ಬೇಕು, ಆದರೆ ನನ್ನ ಐಬ್ರೋಸ್ ತೆಳ್ಳಗಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಮೈಕ್ರೋಬ್ಲೇಡಿಂಗ್ ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು.
ಒಂದು ಕಾಲದಲ್ಲಿ ತೆಳುವಾದ ಹುಬ್ಬು ಹೆಂಗಳೆಯರ ಸ್ಟೈಲಿಷ್ ಲುಕ್‍ನ ಪ್ರತೀಕವಾಗಿತ್ತು. ಆದರೆ, ಇಂದು ಗಾಢವಾದ ದಪ್ಪ ಐ ಬ್ರೋಸ್ ಫ್ಯಾಷನ್ ಲೋಕವನ್ನು ಆಳುತ್ತಿದೆ. ದೀಪಿಕಾ ಪಡುಕೋಣೆ ಸೇರಿದಂತೆ ಬಾಲಿವುಡ್ ಬೆಡಗಿಯರು ಗಾಢ ಐ ಬ್ರೋ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇದರಿಂದ ತಿಂಗಳಿಗೊಮ್ಮೆ ಪಾರ್ಲರ್‍ಗೆ ಹೋಗಿ ದಪ್ಪವಾಗಿ ಬೆಳೆದ ಹುಬ್ಬನ್ನು ತೆಳ್ಳಗೆ ಮಾಡಿಸಿಕೊಂಡು ಬರುವ ನೋವಿನ ಕೆಲಸ ತಪ್ಪಿದೆ. ಆದರೆ, ಕೆಲವರ ಐ ಬ್ರೋಗೆ ನೈಸರ್ಗಿಕವಾದ ಶೇಪ್ ಇರುವುದಿಲ್ಲ. ಅಲ್ಲದೆ, ಕೆಲವರ ಐ ಬ್ರೋ ತೆಳ್ಳಗಿದ್ದು ಅದಕ್ಕೆ ಗಾಢವಾದ ಲುಕ್ ನೀಡಲು ಪೆನ್ಸಿಲ್ ಹಿಡಿದು ಕನ್ನಡಿ ಮುಂದೆ ಗಂಟೆಗಟ್ಟಲೆ ಸಮಯ ವ್ಯಯಿಸಬೇಕಾದ ಅನಿವಾರ್ಯತೆ ಇರುತ್ತದೆ. ಪ್ರತಿದಿನ ಈ ರೀತಿ ಟೈಮ್ ವೇಸ್ಟ್ ಮಾಡುವ ಬದಲು ವರ್ಷಕ್ಕೊಮ್ಮೆ ಹುಬ್ಬಿಗೆ ಶೇಪ್ ನೀಡುವ ಟೆಕ್ನಾಲಜಿಯೊಂದು ಇದ್ದಿದ್ದರೆ, ಎಷ್ಟು ಚೆನ್ನಾಗಿತ್ತಲ್ವ? ಯೋಚಿಸಬೇಡಿ, ಅಂಥದೊಂದು ವಿಧಾನ ಈಗ ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತಿದೆ. ಅದೇ ಮೈಕ್ರೋಬ್ಲೇಡಿಂಗ್ ಅಥವಾ 3ಡಿ ಐಬ್ರೋ ಎಂಬ್ರಾಯಿಡರಿ.
ಏನಿದು ಮೈಕ್ರೋಬ್ಲೇಡಿಂಗ್?:
ಇದು ಐ ಬ್ರೋ ಆರ್ಕಿಟೆಕ್ಚರ್‍ನ ಒಂದು ವಿಧಾನ. ಈ ಪ್ರಕ್ರಿಯೆಯಲ್ಲಿ ನಿಮ್ಮ ಹುಬ್ಬುಗಳಿಗೆ ಸೆಮಿ ಪರ್ಮನೆಂಟ್ ಟ್ಯಾಟೂ ಇಂಕ್ ತುಂಬಿಸಲಾಗುತ್ತದೆ. ಇದು ನಿಮ್ಮ ಹುಬ್ಬು ನೈಸರ್ಗಿಕವಾಗಿ ಗಾಢವಾಗಿ ಕಾಣಿಸುವಂತೆ ಮಾಡುತ್ತದೆ. ಇದು ಟ್ಯಾಟೂ ಹಾಕುವಾಗ ಅನುಸರಿಸುವ ಪ್ರಕ್ರಿಯೆಯನ್ನೇ ಹೋಲುತ್ತದೆ. ಮೈಕ್ರೋಬ್ಲೇಡಿಂಗ್‍ನಲ್ಲಿ ಪೆನ್ ಮಾದರಿಯ ಒಂದು ಟೂಲ್ ಇರುತ್ತೆ. ಈ ಟೂಲ್‍ನ ಕೆಳ ತುದಿಯಲ್ಲಿ 10-12 ಸೂಜಿಗಳಿರುವ ಪುಟ್ಟ ಬ್ಲೇಡ್‍ವೊಂದಿದ್ದು, ಚರ್ಮದ ಅಡಿಯಲ್ಲಿ ಪಿಗ್ಮೆಂಟ್ ಸೇರಿಸಲು ನೆರವು ನೀಡುತ್ತದೆ. ಈ ಪಿಗ್ಮೆಂಟ್ ನಿಮ್ಮ ಹುಬ್ಬುಗಳಿಗೆ ನೈಸರ್ಗಿಕವಾದ ಗಾಢ ಲುಕ್ ನೀಡುತ್ತದೆ. ಹಾಗಂತ ಈ ಸೂಜಿಗಳು ನೋವುಂಟು ಮಾಡುವುದಿಲ್ಲ. ಬದಲಿಗೆ ಚರ್ಮದ ಮೇಲೆ ಮೃದುವಾಗಿ ಕೆರೆದ ಅನುಭವ ನೀಡಬಲ್ಲವು ಅಷ್ಟೆ.
ಮದ್ವೆಯಾಗ್ತಿದೀರಾ? ಹಾಗಿದ್ರೆ ಮೊದ್ಲು ಗೈನಕಾಲಜಿಸ್ಟ್ ಅನ್ನು ಭೇಟಿಯಾಗಿ!
ವ್ಯಾಲಿಡಿಟಿ ಎಷ್ಟು?:
ನೀವು ಯಾವ ವಿಧದ ಚರ್ಮ ಹೊಂದಿದ್ದೀರಿ ಹಾಗೂ ಜೀವನಶೈಲಿ ಅನುಸರಿಸುತ್ತೀರಿ ಎಂಬ ಆಧಾರದಲ್ಲಿ ಮೈಕ್ರೋಬ್ಲೇಡಿಂಗ್ ವ್ಯಾಲಿಡಿಟಿ ಒಂದರಿಂದ ಮೂರು ವರ್ಷಗಳ ತನಕವಿರುತ್ತದೆ. ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ 12 ತಿಂಗಳು ಮಾತ್ರ ಇರುತ್ತದೆ. ಸಾಮಾನ್ಯ ತ್ವಚೆ ಹೊಂದಿರುವವರಿಗೆ 18 ತಿಂಗಳು ಬರಬಹುದು. ಇದರ ಲೈಫ್‍ಟೈಮ್ ಇನ್ನೂ ಹೆಚ್ಚಬೇಕೆಂದರೆ ಸೂರ್ಯನ ಕಿರಣಗಳಿಗೆ ನೇರವಾಗಿ ಮುಖವೊಡ್ಡಬಾರದು. ಏಕೆಂದರೆ ಇದರಿಂದ ಪಿಗ್ಮೆಂಟ್ ಬಣ್ಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಪ್ರತಿ 18 ತಿಂಗಳಿಗೊಮ್ಮೆ ಟಾಪ್-ಅಪ್ಸ್ ಮಾಡಿಲ್ಲವೆಂದರೆ ಐ ಬ್ರೋ ನಿಧಾನವಾಗಿ ಬಣ್ಣ ಕಳೆದುಕೊಳ್ಳಲಾರಂಭಿಸುತ್ತದೆ.
ನೋವಿನ ಮಾತೇ ಇಲ್ಲ:
ಮೈಕ್ರೋಬ್ಲೇಡಿಂಗ್ ಪ್ರಕ್ರಿಯೆಯಲ್ಲಿ ನೋವಿನ ಅನುಭವವಾಗುವುದಿಲ್ಲ. ಮರಗಟ್ಟಿಸುವ ಕ್ರೀಂ ಅನ್ನು ಲೇಪಿಸಿ ಆ ಬಳಿಕ ಈ ಪ್ರಕ್ರಿಯೆ ಪ್ರಾರಂಭಿಸುವ ಕಾರಣ ನೋವಾಗುವುದಿಲ್ಲ. ಕೆಲವೊಮ್ಮೆ ಬ್ಲೇಡ್‍ನ ಶಬ್ಧ ಕೆಲವರಲ್ಲಿ ಸ್ವಲ್ಪ ಭಯ ಹುಟ್ಟಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಮರಗಟ್ಟಿಸುವ ಕಾರ್ಯಕ್ಕೇ ಹೆಚ್ಚಿನ ಸಮಯ ತಗಲುತ್ತದೆ. ನ್ಯಾಚುರಲ್ ಹಾಗೂ ರಿಯಾಲಿಸ್ಟಿಕ್ ಐ ಬ್ರೋಸ್ ಪಡೆಯಲು ನೀವು ಅನೇಕ ಸಿಟ್ಟಿಂಗ್‍ಗಳಿಗೆ ಹೋಗುವುದು ಅನಿವಾರ್ಯ. ಹಾಗಾಗಿ ಇದಕ್ಕೆ ಸಮಯ ಹಾಗೂ ತಾಳ್ಮೆ ಅಗತ್ಯ.
ಪ್ರಯೋಜನಗಳೇನು?:
-ಇದು ಸುದೀರ್ಘ ಫಲಿತಾಂಶವನ್ನು ನೀಡಬಲ್ಲದು.
-ಅನಾರೋಗ್ಯ ಅಥವಾ ಅಗತ್ಯಕ್ಕಿಂತ ಹೆಚ್ಚು ಪ್ಲಕಿಂಗ್ ಮಾಡಿಸಿರುವುದು ಅಥವಾ ಕಿಮೋಥೆರಪಿ ಕಾರಣಕ್ಕೆ ಹುಬ್ಬಿನ ಕೂದಲು ಕಳೆದುಕೊಂಡವರಿಗೆ ಮೈಕ್ರೋಬ್ಲೇಡಿಂಗ್ ಸರಳ ಪರಿಹಾರವಾಗಿದೆ.
-ಇದು ಅತ್ಯಂತ ವೇಗವಾಗಿ ಪೂರ್ಣಗೊಳಿಸಬಲ್ಲ ಪ್ರಕ್ರಿಯೆಯಾಗಿದೆ.
-ಹುಬ್ಬಿಗೆ ನ್ಯಾಚುರಲ್ ಲುಕ್ ನೀಡುವ ಮೂಲಕ ಮುಖದ ಅಂದವನ್ನು ಹೆಚ್ಚಿಸುತ್ತದೆ.
-ನೋವುರಹಿತ ಪ್ರಕ್ರಿಯೆಯಾದ ಕಾರಣ ಭಯಪಡುವ ಅಗತ್ಯವಿಲ್ಲ.
-ಪ್ರತಿದಿನ ಬೆಳಗ್ಗೆ ಆಫೀಸ್‍ಗೆ ತೆರಳುವ ಮುನ್ನ ಕನ್ನಡಿ ಮುಂದೆ ನಿಂತು ಹುಬ್ಬಿಗೆ ಆಕಾರ ನೀಡುವ ಅನಿವಾರ್ಯತೆ ತಪ್ಪುತ್ತದೆ.
ಉತ್ತಮ ಫಲಿತಾಂಶಕ್ಕೆ ಹೀಗೆ ಮಾಡಿ:
-ಮೈಕ್ರೋಬ್ಲೇಡಿಂಗ್ ಮಾಡಿಸಿದ ಬಳಿಕ 10 ದಿನಗಳ ಕಾಲ ಹುಬ್ಬು ತೊಳೆಯಬೇಡಿ ಅಥವಾ ಅದಕ್ಕೆ ನೀರು ಸೋಕಿಸಬೇಡಿ.
-ಈ ಚಿಕಿತ್ಸೆಯಾದ ಬಳಿಕ ಕೆಲವು ದಿನಗಳ ಕಾಲ ಬಿಸಿಲಿಗೆ ಮುಖವೊಡ್ಡಬೇಡಿ.
-ಜಿಮ್ ಸೇರಿದಂತೆ ನಿಮ್ಮ ಮುಖದಲ್ಲಿ ಬೆವರಿಳಿಸುವ ಚಟುವಟಿಕೆಯಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್ ತೆಗೆದುಕೊಳ್ಳಿ.