ಇದು ಸೀರೆ ಅಲ್ವಾ? ₹26 ಸಾವಿರಕ್ಕೆ ‘ಮ್ಯಾಕ್ಸಿ ಡ್ರೆಸ್’ ಎಂದು ಮಾರಾಟ; ಭುಗಿಲೆದ್ದ ಆಕ್ರೋಶ!

Published : Aug 23, 2026, 04:47 PM IST
Draped Maxi Dress

ಸಾರಾಂಶ

ಲಾಸ್ ಏಂಜಲೀಸ್ ಮೂಲದ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್ JW PEI, ತನ್ನ ವೆಬ್‌ಸೈಟ್‌ನಲ್ಲಿ ₹26,000 ಬೆಲೆಯ ಭಾರತೀಯ ಸೀರೆಯನ್ನು "ಡ್ರಾಪ್ಡ್ ಮ್ಯಾಕ್ಸಿ ಡ್ರೆಸ್" ಎಂದು ಹೆಸರು ಕೊಟ್ಟು ಮಾರಾಟ ಮಾಡಿದೆ.ಸೀರೆಯನ್ನು ಪಾಶ್ಚಾತ್ಯ ಉಡುಗೆ ಎಂದು ಲೇಬಲ್ ಮಾಡಲಾಗಿದ್ದಕ್ಕೆ ಆನ್‌ಲೈನ್‌ನಲ್ಲಿ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಸೀರೆಯನ್ನೇ ‘ಮ್ಯಾಕ್ಸಿ ಡ್ರೆಸ್’ ಎಂದರಾ?

ಭಾರತೀಯ ಸೀರೆ ಎಂದರೆ ಕೇವಲ ಒಂದು ಉಡುಪಲ್ಲ, ಅದು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಫ್ಯಾಷನ್ ಬ್ರ್ಯಾಂಡ್‌ವೊಂದು ಸೀರೆಯನ್ನು ‘Draped Maxi Dress’ ಎಂದು ಮಾರಾಟ ಮಾಡಿದ್ದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಭಾರತೀಯರು ದಿನಸಿ ಸಾಮಾನುಗಳನ್ನು ತರಲು ಬಳಸುವ ಖಾದಿ ಜೋಳಿಗೆ ಕೂಡ ವಿದೇಶಿ ಫ್ಯಾಷನ್ ಬ್ರ್ಯಾಂಡ್‌ಗಳ ಗಮನ ಸೆಳೆದು, ಅಮೆರಿಕದಲ್ಲಿ ದುಬಾರಿ ಬೆಲೆಗೆ ಮಾರಾಟವಾಗಿದ್ದ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಭಾರತೀಯ ಸೀರೆಯ ಸರದಿ ಎನ್ನುವಂತೆ ಈ ಘಟನೆ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದಿದೆ.

ಸೀರೆಯನ್ನು ‘Draped Maxi Dress’ ಎಂದಿದ್ದೇಕೆ?

ಕ್ಯಾಲಿಫೋರ್ನಿಯಾ ಮೂಲದ JW PEI ಎಂಬ ಫ್ಯಾಷನ್ ಬ್ರ್ಯಾಂಡ್ ತನ್ನ ವೆಬ್‌ಸೈಟ್‌ನಲ್ಲಿ ಭಾರತೀಯ ಸೀರೆಯಂತೆಯೇ ಕಾಣುವ ಉಡುಪನ್ನು ‘Draped Maxi Dress’ ಎಂದು ಪಟ್ಟಿ ಮಾಡಿತ್ತು. ಈ ಉಡುಪಿನ ಬೆಲೆ ಬರೋಬ್ಬರಿ ₹26,000 ಎಂದು ವರದಿಯಾಗಿದೆ. ಇದನ್ನು ಗಮನಿಸಿದ Threads ಬಳಕೆದಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಭಾರತೀಯ ಸೀರೆಯ ಸಾಂಸ್ಕೃತಿಕ ಹಿನ್ನೆಲೆಯನ್ನು ಕಡೆಗಣಿಸಿ ಅದಕ್ಕೆ ಪಾಶ್ಚಿಮಾತ್ಯ ಶೈಲಿಯ ಹೊಸ ಹೆಸರನ್ನು ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್ ಆಕ್ರೋಶದ ಬಳಿಕ ಹೆಸರು ಬದಲಾವಣೆ

ಆರಂಭದಲ್ಲಿ ಈ ಉಡುಪನ್ನು ‘Draped Maxi Dress’ ಎಂದು ಕರೆಯಲಾಗಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಹೆಚ್ಚಾದ ಬಳಿಕ, ಬ್ರ್ಯಾಂಡ್ ಅದರ ಹೆಸರನ್ನು ‘Embellished Saree-Inspired Gown’ ಎಂದು ಬದಲಾಯಿಸಿದೆ ಎನ್ನಲಾಗಿದೆ. ಬ್ರ್ಯಾಂಡ್‌ನ ವಿವರಣೆಯಲ್ಲೂ ಈ ಉಡುಗೆ ಸಾಂಪ್ರದಾಯಿಕ ದಕ್ಷಿಣ ಏಷ್ಯಾದ ಸೀರೆಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ. ಸೊಂಟದ ಬಳಿ ಮೃದುವಾಗಿ ಜೋಡಿಸಲಾದ ಪ್ಲೀಟ್ಸ್, ಭುಜದ ಮೇಲಿನಿಂದ ಕೆಳಗೆ ಬೀಳುವ ಪಲ್ಲುವಿನ ರೀತಿಯ ವಿನ್ಯಾಸ ಮತ್ತು ಚಿನ್ನದ ಬಣ್ಣದ ಹೂವಿನ ಕಸೂತಿ ಈ ಉಡುಪಿನ ಪ್ರಮುಖ ಆಕರ್ಷಣೆಗಳಾಗಿವೆ ಎಂದು ತಿಳಿಸಿದೆ.

₹26 ಸಾವಿರದ ಬೆಲೆಯೂ ನೆಟ್ಟಿಗರ ಕೋಪಕ್ಕೆ ಕಾರಣ!

ಡ್ರೆಸ್ ವಿನ್ಯಾಸ ಮಾತ್ರವಲ್ಲ, ಅದರ ಬೆಲೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಸುಮಾರು ₹26,000 ಬೆಲೆಗೆ ಸೀರೆಯಂತಿರುವ ಉಡುಪನ್ನು ‘ಮ್ಯಾಕ್ಸಿ ಡ್ರೆಸ್’ ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದಕ್ಕೆ ಹಲವರು ಪ್ರಶ್ನೆ ಎತ್ತಿದ್ದಾರೆ. ಒಬ್ಬರು “ಫ್ಯಾಷನ್ ಉದ್ಯಮವು ಏಕಾಏಕಿ ನಮ್ಮ ಸಂಸ್ಕೃತಿಯನ್ನು ಏಕೆ ಬಳಸಿಕೊಳ್ಳಲು ಆರಂಭಿಸಿದೆ?” ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರದ ಕುರಿತು ಚರ್ಚೆ ನಡೆಸಿದ ಕೆಲವರು, ಒಂದು ಸಂಸ್ಕೃತಿಯ ಉಡುಪನ್ನು ಮತ್ತೊಂದು ಹೆಸರಿನಲ್ಲಿ ಮಾರಾಟ ಮಾಡುವ ಬದಲು ಅದರ ಮೂಲ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಸೂಕ್ತ ಗೌರವ ಹಾಗೂ ಕ್ರೆಡಿಟ್ ನೀಡಬೇಕು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ದುಪಟ್ಟಾಗಳನ್ನು ‘Scandinavian scarves’ ಎಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಒಬ್ಬ ಬಳಕೆದಾರರು ಪ್ರಸ್ತಾಪಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Korean Rings: ನಿಮ್ಮ ಗರ್ಲ್‌ಫ್ರೆಂಡ್‌ಗೆ ಕೊಡಿ ಈ ಕೊರಿಯನ್ ಉಂಗುರ: ನೋಡಿದ ತಕ್ಷಣ ಫಿದಾ ಆಗ್ತಾರೆ!
'ಜೆನ್‌ ಝೀ'ಗಳ ಟಾಪ್ 5 ಫ್ಯಾಷನ್ ಟ್ರೆಂಡ್‌ಗಳು; ಯುವಜನರ ಡೈಲಿ ಸ್ಟೈಲ್ ಗೈಡ್