
ನಮಿತ್ ಮಲ್ಹೋತ್ರಾ ನಿರ್ಮಾಣದ ಹಾಗೂ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಮಹಾಕಾವ್ಯ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಮೊದಲ ಭಾಗವು ನವೆಂಬರ್ 5ರಂದು ತೆರೆಗೆ ಬಂದಿದ್ದು, ಬಿಡುಗಡೆಯಾದ 8 ದಿನಕ್ಕೆ ದೇಶದಾದ್ಯಂತ 620.74 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಈ ಮೂಲಕ ವಿಶ್ವದಾದ್ಯಂತ ₹934.55 ಕಲೆಕ್ಷನ್ ಮಾಡಿದೆ. ಚಿತ್ರದ ಅದ್ಧೂರಿ ವಿಎಫ್ಎಕ್ಸ್ (VFX) ಮತ್ತು ತಂತ್ರಜ್ಞಾನದ ರಿಚ್ನೆಸ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ, ಈ ಚಿತ್ರದ ನಿಜವಾದ ಜೀವಾಳ ಅಡಗಿರುವುದು ಕೇವಲ ದೃಶ್ಯ ವೈಭವ ಮಾತ್ರವಲ್ಲ ಪಾತ್ರಗಳ ಸೂಕ್ಷ್ಮ ವಿನ್ಯಾಸ ಮತ್ತು ಅವುಗಳಿಗೆ ಬಳಸಲಾದ ಸಾಂಪ್ರದಾಯಿಕ ಆಭರಣಗಳಲ್ಲಿ!
ಹೌದು, ಚಿತ್ರದಲ್ಲಿ ಸೀತಾಮಾತೆಯ ಪಾತ್ರಕ್ಕೆ ಜೀವ ತುಂಬಿರುವ ನಟಿ ಸಾಯಿ ಪಲ್ಲವಿ ಅವರು ಧರಿಸಿರುವ ಆಭರಣಗಳ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಈ ಆಭರಣಗಳು ಕೇವಲ ಅಲಂಕಾರಿಕ ವಸ್ತುಗಳಾಗಿರದೆ, ಇಡೀ ಕಥೆಯನ್ನು ಹೇಳುವ ಪ್ರಬಲ ಮಾಧ್ಯಮವಾಗಿ ಬಳಕೆಯಾಗಿವೆ. ಈ ಕುರಿತು ಚಿತ್ರದ ಅಧಿಕೃತ ಆಭರಣ ಪಾಲುದಾರ ಸಂಸ್ಥೆಯಾದ 'ಹೌಸ್ ಆಫ್ ಅಮ್ರಪಾಲಿ'ಯ ಕ್ರಿಯೇಟಿವ್ ಹೆಡ್ ಹಾಗೂ ಸಿಇಒ ತರಂಗ್ ಅರೋರಾ ಅವರು ಸಂದರ್ಶನವೊಂದರಲ್ಲಿ ಹಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ತರಂಗ್ ಅರೋರಾ ಅವರ ಪ್ರಕಾರ, ಸೀತೆಯ ಪಾತ್ರವು ಮಿಥಿಲಾದ ರಾಜಕುಮಾರಿಯಾಗಿ, ಶ್ರೀರಾಮನ ವಧುವಾಗಿ, ಕಠಿಣ ವನವಾಸಿಯಾಗಿ ಮತ್ತು ಅಂತಿಮವಾಗಿ ಅಯೋಧ್ಯೆಗೆ ಮರಳುವ ಮಹಾರಾಣಿಯಾಗಿ ಹಲವು ಭಾವನಾತ್ಮಕ ಮಜಲುಗಳನ್ನು ಒಳಗೊಂಡಿದೆ. ಸೀತೆಯ ಜೀವನದ ಈ ಪ್ರತಿಯೊಂದು ಹಂತಕ್ಕೂ ಅನುಗುಣವಾಗಿ ಆಭರಣಗಳನ್ನು ಅತ್ಯಂತ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ.
ಸೀತೆಯ ಆಭರಣಗಳ ವಿನ್ಯಾಸವು ಅತಿಯಾದ ಆಡಂಬರಕ್ಕಿಂತ ಹೆಚ್ಚಾಗಿ ಸೊಬಗು, ಸಂಯಮ ಮತ್ತು ಶಾಂತ ಸ್ವಭಾವದ ಘನತೆ ಪ್ರತೀಕವಾಗಿದೆ. ಅದರ ಒಂದೊಂದು ಪದರದ ಹಾರಗಳು, ಚೋಕರ್, ಸಾಂಪ್ರದಾಯಿಕ ಜುಮ್ಕಾಗಳು, ನವಿರಾದ ಸರಪಳಿಯೊಂದಿಗೆ ಜೋಡಿಸಲಾದ ಮೂಗುತಿ, ಮಾಂಗ್ ಟಿಕ್ಕಾ, ವಿವಿಧ ಬಗೆಯ ಬಳೆಗಳು, ಉಂಗುರಗಳು ಮತ್ತು ಕೇಶಾಲಂಕಾರದ ಆಭರಣಗಳನ್ನು ಸಾಯಿ ಪಲ್ಲವಿ ಅವರ ಪಾತ್ರಕ್ಕಾಗಿ ವಿಶೇಷವಾಗಿ ಮಾಡಲಾಗಿತ್ತು. ಪಾತ್ರವೊಂದು ಸಂಭಾಷಣೆ ಆರಂಭಿಸುವ ಮೊದಲೇ ಆಕೆಯ ವ್ಯಕ್ತಿತ್ವ ಮತ್ತು ಮನಸ್ಥಿತಿಯನ್ನು ಪ್ರೇಕ್ಷಕರಿಗೆ ದಾಟಿಸುವ ಶಕ್ತಿ ಈ ವಿನ್ಯಾಸಗಳಿಗಿದೆ.
ಈ ಮಹಾಕಾವ್ಯಕ್ಕೆ ನೈಜತೆಯ ಸ್ಪರ್ಶ ನೀಡಲು ಚಿತ್ರತಂಡವು ವ್ಯಾಪಕ ಸಂಶೋಧನೆ ನಡೆಸಿದೆ. ವೇಷಭೂಷಣ ವಿನ್ಯಾಸಕರಾದ ರಿಂಪಲ್ ಮತ್ತು ಹರ್ಪ್ರೀತ್ ನರುಲಾ ಅವರೊಂದಿಗೆ ಕೈಜೋಡಿಸಿರುವ 'ಟ್ರೈಬ್ ಅಮ್ರಪಾಲಿ' ಸಂಸ್ಥೆಯು, ಸತತ 18 ತಿಂಗಳುಗಳ ಕಾಲ ಶ್ರಮಿಸಿ ಬರೋಬ್ಬರಿ 4,500ಕ್ಕೂ ಹೆಚ್ಚು ಕರಕುಶಲ ಆಭರಣಗಳನ್ನು ಸಿದ್ಧಪಡಿಸಿದೆ.
ಇದಕ್ಕಾಗಿ ಪ್ರಾಚೀನ ಭಾರತದ ಇತಿಹಾಸ, ಭೌಗೋಳಿಕ ಹಿನ್ನೆಲೆ, ಲೋಹಶಾಸ್ತ್ರದ ಸಂಪ್ರದಾಯಗಳು ಮತ್ತು ಆಯಾ ಪ್ರದೇಶಗಳ ಸಾಂಸ್ಕೃತಿಕ ಪರಂಪರೆಯನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ. ನಾವು ಆಭರಣಗಳನ್ನು ಕೇವಲ ವೇಷಭೂಷಣದ ಒಂದು ಭಾಗವಾಗಿ ನೋಡದೆ, ರಾಮಾಯಣದ ದೃಶ್ಯ ವ್ಯಾಕರಣವನ್ನು ಕಟ್ಟಿಕೊಡುವ ಸಾಧನವಾಗಿ ಬಳಸಿದ್ದೇವೆ ಎಂದು ತರಂಗ್ ಅರೋರಾ ಬಣ್ಣಸಿದ್ದಾರೆ.
ರಾಮನ ಕಿರೀಟ ಮತ್ತು ಸೀತೆಯ ಕಿವಿಯೋಲೆಗಳಿಂದ ಹಿಡಿದು ರಾವಣನ ಆಭರಣಗಳವರೆಗೆ, ಈ ರಾಜಮನೆತನದ ಆಭರಣಗಳನ್ನು ಜೈಪುರದಲ್ಲಿ ತಯಾರಿಸಲಾಯಿತು.18 ತಿಂಗಳುಗಳಲ್ಲಿ, 25 ಆಭರಣ ವಿನ್ಯಾಸಕರು ಆ ಯುಗದ ದೇವಾಲಯಗಳು ಮತ್ತು ಕಲೆಯನ್ನು, ರಾಜಮನೆತನದ ವೈಭವವನ್ನು ಸಂಶೋಧಿಸಿದರು, ವಿನ್ಯಾಸಗಳನ್ನು ಪದೇ ಪದೇ ಬದಲಾವಣೆ ಮಾಡಲಾಯ್ತು. ಅಂತಿಮವಾಗಿ, 150 ಕ್ಕೂ ಹೆಚ್ಚು ಕುಶಲಕರ್ಮಿಗಳು 4,500 ಆಭರಣಗಳನ್ನು ತಯಾರು ಮಾಡಿದರು.
ಇಷ್ಟು ಮಾತ್ರವಲ್ಲ ಚಿನ್ನ ಮತ್ತು ಬೆಳ್ಳಿ ಆಭರಣಗಳ ಬದಲಿಗೆ ರಾಮ ಮತ್ತು ಸೀತೆಯ ವನವಾಸಕ್ಕಾಗಿ ಮರದ ಆಭರಣಗಳನ್ನು ತಯಾರಿಸಲಾಯಿತು. ಜೈಪುರದ ಆಭರಣ ಪರಂಪರೆ, ಸೌಂದರ್ಯ, ರಾಜಮನೆತನದ ಸಂಪ್ರದಾಯಗಳು ಮತ್ತು ಅಸಾಧಾರಣ ಕರಕುಶಲತೆಯನ್ನು ಪ್ರಪಂಚದಾದ್ಯಂತ ಪರಿಚಯಿಸಿಕೊಂಡಿದೆ. ಈ ಕಾರಣಕ್ಕಾಗಿಯೇ ಚಿತ್ರ ತಂಡದವರು ಸುಮಾರು ಮೂರು ವರ್ಷಗಳ ಹಿಂದೆ ಜೈಪುರಕ್ಕೆ ಭೇಟಿ ನೀಡಿ ನಗರದ ಆಭರಣ ಬ್ರಾಂಡ್ ಅಮ್ರಪಾಲಿ ಸಂಸ್ಥೆಯನ್ನು ಭೇಟಿ ಮಾಡಿದರು.
ಉತ್ತರ ಮತ್ತು ದಕ್ಷಿಣ ಭಾರತದ ಶೈಲಿಗಳನ್ನು ಒಳಗೊಂಡ ರಾಜಮನೆತನದ ಆಭರಣಗಳ ವಿನ್ಯಾಸವನ್ನು ಅಲ್ಲಿ ಸಿನೆಮಾ ತಂಡಕ್ಕೆ ತೋರಿಸಲಾಯ್ತು. ರಾಮ ಮತ್ತು ಸೀತೆಯಿಂದ ಹಿಡಿದು ರಾವಣ ಮತ್ತು ಇತರರವರೆಗಿನ ಪಾತ್ರಗಳಿಗೆ ಸುಮಾರು 4,500 ಆಭರಣಗಳು ಬೇಕಾಗಿದ್ದವು. ಎಲ್ಲವೂ ಸಿನೆಮಾ ತಂಡಕ್ಕೆ ಹಿಡಿಸಿತು. ಸಂಪೂರ್ಣ ಆಭರಣ ತಯಾರಿಸುವ ಜವಾಬ್ದಾರಿಯನ್ನು ಅಮ್ರಪಾಲಿಗೆ ನೀಡಲಾಯ್ತು. ಇದನ್ನು ಪೂರ್ಣಗೊಳಿಸಲು ಒಂದೂವರೆ ವರ್ಷ ಹಿಡಿಯಿತು.
ಶ್ರೀರಾಮ ಅಯೋಧ್ಯೆಗೆ ಸೇರಿದವನು, ಸೀತಾ ಮಾತೆ ಮಿಥಿಲೆಗೆ ಸೇರಿದವಳು ಮತ್ತು ರಾವಣ ಲಂಕೆಗೆ ಸೇರಿದವನು. ಆದ್ದರಿಂದ, ಆಭರಣಗಳನ್ನು ತಯಾರಿಸುವಾಗ ಕೂಡ ಮೂರೂ ಸ್ಥಳಗಳ ಸಂಸ್ಕೃತಿಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಲಾಗಿತ್ತು. ಹನುಮಂತ, ಬಲಿ, ಸುಗ್ರೀವ, ಲಕ್ಷ್ಮಣ, ಭರತ, ಶತ್ರುಘ್ನ, ರಾಜ ದಶರಥ, ಮಾತಾ ಕೌಶಲ್ಯ, ಕೈಕೇಯಿ, ಸುಮಿತ್ರ, ರಾಜ ಜನಕ, ಮಾತಾ ಸುನೈನ, ಊರ್ಮಿಳಾ, ಮಾಂಡವಿ, ಶ್ರುತಕೀರ್ತಿ, ರಾವಣನ ಹೆಂಡತಿ ಮಂಡೋದರಿ ಮತ್ತು ಅವನ ಸಹೋದರಿ ಶೂರ್ಪನಖಾ ಸೇರಿ ಇತರ ಪಾತ್ರಗಳಿಗೂ ಇವರೇ ಆಭರಣ ಮಾಡಿದ್ದಾರೆ. ಈ ಹಿಂದೆ ಬಾಹುಬಲಿ 1 ಮತ್ತು 2, ಮಣಿಕರ್ಣಿಕಾ, ರಾಮ್-ಲೀಲಾ ಮತ್ತು ಸಾವರಿಯಾ ಮುಂತಾದ ಚಿತ್ರಗಳಿಗೆ ಈ ಹಿಂದೆ ಇಲ್ಲಿ ಆಭರಣಗಳನ್ನು ತಯಾರಿಸಲಾಗಿತ್ತು.
ಪೌರಾಣಿಕ ಸಿನಿಮಾಗಳನ್ನು ಕೇವಲ ಕಾಲ್ಪನಿಕ ಫ್ಯಾಂಟಸಿಯಂತೆ ತೋರಿಸದೆ, ಭಾರತೀಯ ಕರಕುಶಲ ಕಲೆ ಮತ್ತು ಪರಂಪರೆಯ ಬೇರುಗಳೊಂದಿಗೆ ಬೆಸೆಯುವ ಪ್ರಯತ್ನ 'ರಾಮಾಯಣ'ದಲ್ಲಿ ಯಶಸ್ವಿಯಾಗಿದೆ. ಸಾಯಿ ಪಲ್ಲವಿ ಅವರ ಸೀತೆಯ ಮೊದಲ ನೋಟದಿಂದ ಹಿಡಿದು, ಚಿತ್ರದ ಪ್ರತಿ ಚೌಕಟ್ಟಿನಲ್ಲೂ ಕಾಣಿಸುವ ಈ ಆಭರಣಗಳು ಭಕ್ತಿ ಮತ್ತು ಸಿನಿಮೀಯ ಭವ್ಯತೆಯ ನಡುವೆ ಅತ್ಯುತ್ತಮ ಸಮತೋಲನ ಸಾಧಿಸಿವೆ. ಒಟ್ಟಾರೆಯಾಗಿ, ಭಾರತೀಯ ಪರಂಪರೆಯ ಆಭರಣ ಕಲೆಯನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಈ ಚಿತ್ರ ಒಂದು ಮೈಲಿಗಲ್ಲಾಗಿ ನಿಂತಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.