
ಸ್ಕಿನ್‌ಕೇರ್ ಜಗತ್ತಿನಲ್ಲಿ ಪ್ರತಿದಿನ ಒಂದಲ್ಲ ಒಂದು ಹೊಸ ಬ್ರ್ಯಾಂಡ್, ಪ್ರೊಡಕ್ಟ್‌ಗಳು ಸದ್ದು ಮಾಡುತ್ತಲೇ ಇರುತ್ತವೆ. ಸದ್ಯ ಅಂತಹದ್ದೇ ಒಂದು ಹೊಸ ಟ್ರೆಂಡ್ ಸೃಷ್ಟಿಸಿದೆ 'ಗ್ಯಾಲಿಕ್ ಆಸಿಡ್'(Gallic Acid). ಮುಖದ ಸ್ಕಿನ್ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಿ, ತ್ವಚೆಗೆ ಹೊಸ ಹೊಳಪು ನೀಡುವ ಗುಣದಿಂದಾಗಿ ಇದು ಸೌಂದರ್ಯ ಪ್ರಿಯರ ಗಮನ ಸೆಳೆಯುತ್ತಿದೆ.
ಗ್ಯಾಲಿಕ್ ಆಸಿಡ್ ಒಂದು ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಸೂರ್ಯನ ಯುವಿ ಕಿರಣಗಳು ಮತ್ತು ಪರಿಸರ ಮಾಲಿನ್ಯದಿಂದ ಚರ್ಮಕ್ಕಾಗುವ ಹಾನಿಯಾಗುವುದನ್ನ ತಡೆಯುತ್ತದೆ. ಇದು ಕೇವಲ ಕಲೆಗಳನ್ನು ತೆಗೆಯುವುದಷ್ಟೇ ಅಲ್ಲ, ಚರ್ಮದ ಆರೋಗ್ಯವನ್ನು ಒಟ್ಟಾರೆ ಸುಧಾರಿಸುವ ಕೆಲಸ ಮಾಡುವುದೇ ಇದರ ವಿಶೇಷತೆ.
ಗ್ಯಾಲಿಕ್ ಆಸಿಡ್ ಎನ್ನುವುದು ಒಂದು ಫೀನಾಲಿಕ್ ಆಮ್ಲ. ಇದು ಓಕ್ ಮರದ ತೊಗಟೆ, ಚಹಾ ಎಲೆಗಳು, ಸುಮಾಕ್ ಮತ್ತು ವಿಚ್ ಹೇಝಲ್‌ನಂತಹ ಹಲವು ಸಸ್ಯಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ಇದರ ವಿಶೇಷ ಗುಣಗಳಿಂದಾಗಿ ಇದನ್ನು ಸ್ಕಿನ್‌ಕೇರ್ ಉತ್ಪನ್ನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ.
ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಹಿರಿಯ ಚರ್ಮರೋಗ ತಜ್ಞ ಡಾ. ಡಿ.ಎಂ. ಮಹಾಜನ್ ಅವರ ಪ್ರಕಾರ, ಗ್ಯಾಲಿಕ್ ಆಸಿಡ್ ಆ್ಯಂಟಿಆಕ್ಸಿಡೆಂಟ್, ಆ್ಯಂಟಿ-ಇನ್‌ಫ್ಲಮೇಟರಿ (ಉರಿಯೂತ ಶಮನಕಾರಿ) ಮತ್ತು ಆ್ಯಂಟಿಮೈಕ್ರೋಬಿಯಲ್ (ಸೂಕ್ಷ್ಮಜೀವಿ ವಿರೋಧಿ) ಗುಣಗಳನ್ನು ಹೊಂದಿದೆ. ಈ ಗುಣಗಳೇ ಇದನ್ನು ಒಂದು ಪರಿಣಾಮಕಾರಿ ಸ್ಕಿನ್‌ಕೇರ್ ಆಗಿದೆ.
ಹೈಪರ್‌ಪಿಗ್ಮೆಂಟೇಶನ್ ಅಥವಾ ಕಪ್ಪು ಕಲೆಗಳಿಗೆ ಮುಖ್ಯ ಕಾರಣ ಮೆಲನಿನ್ ಎಂಬ ವರ್ಣದ್ರವ್ಯದ ಅತಿಯಾದ ಉತ್ಪಾದನೆ. ಗ್ಯಾಲಿಕ್ ಆಸಿಡ್ ಮೆಲನಿನ್ ಉತ್ಪಾದನೆಗೆ ಕಾರಣವಾಗುವ 'ಟೈರೋಸಿನೇಸ್' ಎಂಬ ಎಂಜೈಮ್ ಅನ್ನು ತಡೆಯುತ್ತದೆ. ಹೀಗಾಗಿ, ಇದು ಕಪ್ಪು ಕಲೆಗಳನ್ನು ಮತ್ತು ಚರ್ಮದ ಬಣ್ಣದಲ್ಲಿನ ಏರುಪೇರನ್ನು ಸರಿಪಡಿಸಲು ನೆರವಾಗುತ್ತದೆ.
ವಿಶೇಷವೆಂದರೆ, ಹೈಡ್ರೋಕ್ವಿನೋನ್‌ನಂತಹ ಇತರ ಬ್ರೈಟನಿಂಗ್ ಏಜೆಂಟ್‌ಗಳಿಗೆ ಹೋಲಿಸಿದರೆ ಇದು ಹೆಚ್ಚು ಮೃದು,. ಅಷ್ಟೇ ಅಲ್ಲ, ವಿಟಮಿನ್ ಸಿ ಮತ್ತು ಇ ಗಿಂತಲೂ ಹೆಚ್ಚು ಪ್ರಬಲವಾದ ಆ್ಯಂಟಿಆಕ್ಸಿಡೆಂಟ್ ಇದಾಗಿದೆ ಎಂದು ತಜ್ಞರು ವಿವರಿಸುತ್ತಾರೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ, ಸೂಕ್ಷ್ಮ ಚರ್ಮದವರಿಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಹೊಂದಿಕೊಳ್ಳುತ್ತದೆ.
ಗ್ಯಾಲಿಕ್ ಆಸಿಡ್ ಬಳಸುವುದು ಹೇಗೆ?
ಗ್ಯಾಲಿಕ್ ಆಸಿಡ್ ಅನ್ನು ನಿಮ್ಮ ದೈನಂದಿನ ಸ್ಕಿನ್‌ಕೇರ್‌ನಲ್ಲಿ ಸೇರಿಸಿಕೊಳ್ಳುವುದು ತುಂಬಾ ಸುಲಭ. ಇದು ಸಾಮಾನ್ಯವಾಗಿ ಸೀರಮ್, ಕ್ರೀಮ್ ಮತ್ತು ಕ್ಲೆನ್ಸರ್‌ಗಳ ರೂಪದಲ್ಲಿ ಲಭ್ಯವಿರುತ್ತದೆ. ಇದನ್ನು ನೀವು ಬೆಳಗ್ಗೆ ಮತ್ತು ರಾತ್ರಿ, ಎರಡೂ ಹೊತ್ತು ಬಳಸಬಹುದು.
ಇಲ್ಲೊಂದು ಮುಖ್ಯವಾದ ವಿಷಯವನ್ನು ನೆನಪಿಡಬೇಕು. ಒಂದು ವೇಳೆ ನೀವು ಗ್ಯಾಲಿಕ್ ಆಸಿಡ್ ಇರುವ ಪ್ರಾಡಕ್ಟ್ ಬೆಳಗ್ಗೆ ಬಳಸುವುದಾದರೆ, ಅದರ ನಂತರ ಕಡ್ಡಾಯವಾಗಿ ಸನ್‌ಸ್ಕ್ರೀನ್ ಹಚ್ಚಲೇಬೇಕು. ಇದು ಎಲ್ಲಾ ಬಗೆಯ ಚರ್ಮದವರಿಗೂ ಸೂಕ್ತವಾಗಿದ್ದು ಸೂಕ್ಷ್ಮ ಚರ್ಮದವರು ಕೂಡಾ ಯಾವುದೇ ಹಿಂಜರಿಕೆಯಿಲ್ಲದೆ ಬಳಸಬಹುದು ಎನ್ನುತ್ತಾರೆ ಡಾ. ಮಹಾಜನ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.