
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋವನ್ನು ಹೆಲಿಕಾಪ್ಟರ್‌ನಲ್ಲಿ ಕೂತು ಮೇಲ್ಭಾಗದಿಂದ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ಡಜನ್‌ಗಟ್ಟಲೇ ದೈತ್ಯ ಅನಕೊಂಡಗಳು ನದಿಯಲ್ಲಿ ಈಜುತ್ತಿರುವುದನ್ನು ಕಾಣಬಹುದು. ಒಂದಲ್ಲ, ಹಲವಾರು ಬೃಹತ್ ಕಪ್ಪು ಅನಕೊಂಡಗಳು ಅಮೆಜಾನ್ ಕಾಡಿನ ಮಧ್ಯದಲ್ಲಿ ನಿರ್ಮಿಸಲಾದ ಕಾಲುವೆಯಲ್ಲಿ ಸುತ್ತುತ್ತಿವೆ. ಈ ಅನಕೊಂಡಗಳನ್ನು ಹೆಲಿಕಾಪ್ಟರ್‌ನಲ್ಲಿ ಕೂತು ಎತ್ತರದಿಂದ ನೋಡಿದಾಗ ನೀರಿನಲ್ಲಿ ಈಜುತ್ತಿರುವುದು ಗೋಚರಿಸುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅನಕೊಂಡ, ಹಾವಿನ ಜಾತಿಯಲ್ಲೇ ಅತಿ ದೊಡ್ಡ ಹಾವು. ಇದನ್ನು ನೋಡಿದರೆ ಯಾರಿಗಾದರೂ ಉಸಿರುಗಟ್ಟುವುದು ಖಚಿತ.
ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯವು ತುಂಬಾ ಭಯಾನಕವಾಗಿ ಕಾಣುವುದಲ್ಲದೆ, ಮೈಯೆಲ್ಲಾ ಪುಳಕವಾಗುವಂತೆ ಮಾಡುತ್ತದೆ. ಸದ್ಯ ವಿಡಿಯೋ ನೋಡಿದ ಜನರು ಅದನ್ನು 'ಅನಕೊಂಡ ನದಿ' ಎಂದೇ ಕರೆಯುತ್ತಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಈ ಫೋಟೋ ರಿಯಲ್ ಅಲ್ಲ, ಹೌದು, ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ.
ಹೆಲಿಕಾಪ್ಟರ್ ನಿಂದ ಕಂಡ ಭಯಾನಕ ದೃಶ್ಯ
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಿಂದೆ ಟ್ವಿಟರ್) ನಲ್ಲಿ @PlacesMagi15559 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಕೇವಲ 10 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೆ 13 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಶಾಕಿಂಗ್ ವೈರಲ್ ವಿಡಿಯೋದಲ್ಲಿ ಹೆಲಿಕಾಪ್ಟರ್ ಒಳಗಿನಿಂದ, ನದಿಯನ್ನು ಕೆಳಗೆ ನೋಡಲಾಗುತ್ತಿದ್ದು, ಅಲ್ಲಿ ಅನೇಕ ದೈತ್ಯ ಅನಕೊಂಡಗಳು (ಹಾವುಗಳು) ನೀರಿನ ಮೇಲ್ಮೈಯಲ್ಲಿ ಈಜುತ್ತಿರುವುದನ್ನು ಕಾಣಬಹುದು. ಈ ದೃಶ್ಯ ಸದ್ಯ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.
ಅತ್ಯಂತ ಅಪಾಯಕಾರಿ ವಿಡಿಯೋ
ಇದಕ್ಕೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅನೇಕ ಬಳಕೆದಾರರು ಇದನ್ನು ಭಯಾನಕ ಚಲನಚಿತ್ರದ ದೃಶ್ಯ ಎಂದೇ ಭಾವಿಸಿದ್ದರಂತೆ. ಮತ್ತೆ ಕೆಲವರು ಇದನ್ನು 'ವಿಶ್ವದ ಅತ್ಯಂತ ಅಪಾಯಕಾರಿ ನದಿ' ಎಂದು ಕರೆದಿದ್ದಾರೆ. ಆದರೆ ಕೆಲವರು ಇಂತಹ ದೃಶ್ಯವು ವಾಸ್ತವದಲ್ಲಿ ಸಾಧ್ಯವೇ ಎಂಬ ಪ್ರಶ್ನೆಯನ್ನು ಸಹ ಎತ್ತಿದ್ದಾರೆ. ತಜ್ಞರ ಪ್ರಕಾರ ಇಂತಹ ವಿಡಿಯೋಗಳು ಮತ್ತು ಫೋಟೋಗಳನ್ನು AI ಪರಿಕರಗಳ ಸಹಾಯದಿಂದ ರಚಿಸಲಾಗುತ್ತದೆ, ಇದು ಕಲ್ಪನೆಗಳಿಗೆ ಅತ್ಯಂತ ವಾಸ್ತವಿಕ ರೂಪವನ್ನು ನೀಡುತ್ತದೆ. ಆದರೆ ಈ ವಿಡಿಯೋ ನಿಜವಾದದ್ದಲ್ಲ. ಅದರ ಸೃಜನಶೀಲತೆ ಮತ್ತು ವಿವರಗಳು ತುಂಬಾ ಪ್ರಭಾವಶಾಲಿಯಾಗಿದ್ದು, ಮೊದಲ ನೋಟದಲ್ಲೇ ಯಾರಾದರೂ ಮೂರ್ಖರಾಗಬಹುದು. ಈ ವೈರಲ್ ವಿಡಿಯೋದ ಮೂಲಕ, AI ತಂತ್ರಜ್ಞಾನವು ಮನರಂಜನೆಯ ಮಾಧ್ಯಮವಾಗುತ್ತಿರುವುದು ಮಾತ್ರವಲ್ಲದೆ, ಕಲ್ಪನೆಗಳನ್ನು ವಾಸ್ತವಕ್ಕೆ ತಿರುಗಿಸುವ ಶಕ್ತಿಯೂ ಇದೆ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಲಾಗಿದೆ.
ಈ ಹಿಂದೆಯೂ ಬಂದಿತ್ತು ಎಐ ರಚಿತ ವಿಡಿಯೋ
ಈ ವಿಡಿಯೋಗೂ ಮುನ್ನ ಅಮೆಜಾನ್ ನದಿಯಲ್ಲಿ ಒಂದು ದೊಡ್ಡ ಅನಕೊಂಡ ಕಂಡುಬಂದಿದೆ ಎಂದು ಮೇ 9, 2025 ರಂದು ಪ್ರಕಟವಾದ ಫೇಸ್‌ಬುಕ್ ರೀಲ್‌ನಲ್ಲಿ ಥಾಯ್ ಭಾಷೆಯ ಶೀರ್ಷಿಕೆಯಲ್ಲಿ ಕೊಡಲಾಗಿತ್ತು. ಅಂದಿನಿಂದ ಅದು ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. ಈ ವಿಡಿಯೋದಲ್ಲಿ ನದಿಯ ಮೇಲ್ಮೈಯಲ್ಲಿ ಬೃಹತ್ ಅನಕೊಂಡವೊಂದು ಹರಿದಾಡುತ್ತಿರುವಂತೆ ಕೊಡಲಾಗಿತ್ತು. ಇದೇ ಸೇಮ್ ಕ್ಲಿಪ್ ಸ್ಪ್ಯಾನಿಷ್ , ಇಂಗ್ಲಿಷ್ , ಬರ್ಮೀಸ್ , ಇಂಡೋನೇಷಿಯನ್ , ಕೊರಿಯನ್ , ಹಿಂದಿ , ಬಂಗಾಳಿ , ಟರ್ಕಿಶ್ , ಪೋರ್ಚುಗೀಸ್ ಮತ್ತು ರಷ್ಯನ್ ಭಾಷೆಗಳ ಪೋಸ್ಟ್‌ಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತ್ತು. ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಮೇ 8 ರಂದು ಇನ್‌ಸ್ಟಾಗ್ರಾಮ್‌ನಲ್ಲಿ "AI" ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿರುವ ಅದೇ ವಿಡಿಯೋ ಕಂಡುಬಂದಿದೆ. ಕೊನೆಗೆ ಕೊಲಂಬಿಯಾದ ಅಮೆಜಾನ್ ವಿಶ್ವವಿದ್ಯಾಲಯದ ಪರಿಸರಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕರಾದ ಫರ್ನಾಂಡೊ ಇಗ್ನಾಸಿಯೊ ಒರ್ಟಿಜ್ , ಅನಕೊಂಡಗಳು ಅವುಗಳ ತೂಕದಿಂದಾಗಿ ನೀರಿನ ಮೇಲ್ಮೈಯಲ್ಲಿ ಈಜಲು ಸಾಧ್ಯವಿಲ್ಲ ಎಂದು ಹೇಳಿದರು.