
ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ (Yashwant Sardeshpande) ಅಲ್ಪಕಾಲದ ಅನಾರೋಗ್ಯದಿಂದ ಇಂದು (29 ಸೆಪ್ಟೆಂಬರ್ 2025) ನಿಧನರಾಗಿದ್ದಾರೆ. ಹಾಸ್ಯನಟ, ನಿರ್ದೇಶಕ, ಹಾಗೂ ನಾಟಕಕಾರರಾಗಿ ಯಶವಂತ ಸರದೇಶಪಾಂಡೆ ಅವರು ಗುರುತಿಸಿಕೊಂಡಿದ್ದರು. ಇದೀಗ ಅವರ ಹಳೆಯ ವಿಡಿಯೋವೊಂದು ಭಾರೀ ವೈರಲ್ ಆಗತೊಡಗಿದೆ. ಅದೇನೆಂದು ತಿಳಿಯಲು ಮುಂದೆ ನೋಡಿ..
ಯಶವಂತ ಸರದೇಶಪಾಂಡೆ ಅವರು ಹೆಂಡತಿ ಮಾಲತಿಗೆ "ನಿನಗೆ ಗೊತ್ತಿಲ್ಲದೇ ನನಗೊಂದು ಲವ್ ಅಫೇರ್ ಇತ್ತು. ಅದನ್ನು ನಾನು ನಿನಗೆ ಇಲ್ಲಿಯವರೆಗೂ ಹೇಳಿರಲೇ ಇಲ್ಲ, ಕಾರಣ ಮತ್ತೇನಿಲ್ಲ, ನಿನಗೆ ಅದ್ರಿಂದ ತುಂಬಾ ನೋವಾಗುತ್ತೆ ಅಂತ!.. ನಾನು ಮತ್ತು ಆಕೆ ಒಂದಿನ ಮೀಟ್ ಆದ್ವಿ, ಕದ್ದು ಮುಚ್ಚಿ ವಾಕಿಂಗ್ ಕೂಡ ಹೋಗ್ತಾ ಇದ್ವಿ. ನಮ್ಮದೇ ಆದ ರೀತಿಯಲ್ಲಿ ನಮ್ಮಿಬ್ಬರ ಮಧ್ಯೆ ಮಾತುಕತೆ ನಡೆಯುತ್ತಿತ್ತು. ನಿನಗೆ ಗೊತ್ತಿಲ್ಲದೇ ಸಾವಿರಾರು ಬಾರಿ ನಾನು ಅವಳನ್ನು ಭೇಟಿಯಾಗಿ ತುಂಟಾಟ ಆಡಿದೀನಿ..
ನಾವಿಬ್ರು ಬರೋಬ್ಬರಿ 12 ವರ್ಷಗಳ ಕಾಲ ನಿನಗೆ ಗೊತ್ತಿಲ್ದೇ ಅದೆಷ್ಟೋ ಆಟ ಆಡಿದ್ವಿ. ಆದರೆ, ಫೆಬ್ರುವರಿ 2023ರಲ್ಲಿ ಆಕೆ ನನ್ನಿಂದ ದೂರ ಹೋರಟುಹೋದ್ಳು..' ನಿನಗೆ ಗೊತ್ತಿಲ್ದೇ ನಾವಿಬ್ರು ಬರೋಬ್ಬರಿ 12 ವರ್ಷಗಳ ಕಾಲ ಅದೆಷ್ಟೋ ಆಟ ಆಡಿದ್ವಿ. ಆದರೆ, ಫೆಬ್ರುವರಿ 2023ರಲ್ಲಿ ಆಕೆ ನನ್ನಿಂದ ದೂರ ಹೋರಟುಹೋದ್ಳು". ಹೀಗೆ ತೀವ್ರ ನೋವು ಬೆರೆಸಿ ಯಶವಂತ ಸರದೇಶಪಾಂಡೆ ಹೇಳುತ್ತಿದ್ದರೆ ಸ್ವತಃ ಮಾಲತಿ ಸೇರಿದಂತೆ ಕೆಲವರ ಕಣ್ಣಲ್ಲಿ ನೀರು ಬರೋದೊಂದೇ ಬಾಕಿ ಎಂಬಂತಾಗಿತ್ತು.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಜೋಡಿ ನಂ.1’ ರಿಯಾಲಿಟಿ ಶೋದಲ್ಲಿ ಪ್ರಸಾರವಾಗಿದ್ದ ಸಂಚಿಕೆ ಭಾರೀ ವೈರಲ್ ಆಗಿತ್ತು. ಕಲಾವಿದರಾದ ಯಶವಂತ್ ಸರದೇಶಪಾಂಡೆ ಮತ್ತು ಮಾಲತಿ ಸರದೇಶಪಾಂಡೆ ಜೋಡಿಯ ಸಂಚಿಕೆಯಲ್ಲಿ ಯಶವಂತ್ ಅವರು ಹೇಳಿದ ಲವ್ ಅಫೇರ್ ಒಂದು ಅಲ್ಲಿದ್ದವರ ಮನಸ್ಸನ್ನು ಮಾತ್ರವಲ್ಲ, ಟಿವಿ ವೀಕ್ಷಕರ ಹೃದಯನ್ನೂ ಕಲಕಿಬಿಟ್ಟಿತ್ತು. ಅದೂ ಕೂಡ ತನ್ನ ಹೆಂಡತಿ ಮುಂದೆಯೇ ಯಶವಂತ್ ಅವರು ತಮ್ಮ ಲವ್ ಅಫೇರ್ ಸ್ಟೋರಿಯನ್ನು ಹೇಳುತ್ತಿದ್ದರೆ, ಜಡ್ಜಸ್ ಮತ್ತು ವೀಕ್ಷಕರು ಎಲ್ಲರೂ ಕಕ್ಕಾಬಿಕ್ಕಿಯಾಗಿ ಒಮ್ಮೆ ಯಶ್ವಂತ್ ಹಾಗೂ ಇನ್ನೊಮ್ಮೆ ಮಾಲತಿ ಅವರನ್ನು ನೋಡತೊಡಗಿದ್ದರು.
ಆದರೆ, ಸ್ವತಃ ತನ್ನ ಗಂಡನೇ ಅಷ್ಟು ದೊಡ್ಡ ವೇದಿಕೆಯಲ್ಲಿ "ನಿನಗೆ ಹೇಳದೇ ಮಾಡಿದ್ದು, ನಮ್ಮದು ಅನೈತಿಕ ಸಂಬಂಧ" ಎಂಬಂತೆ ಲವ್ ಅಫೇರ್ ಸ್ಟೋರಿಯೊಂದನ್ನು ಹೇಳುತ್ತಿದ್ದರೆ, ಅಲ್ಲಿದ್ದ ಜಡ್ಜ್ ಗಳು ಹಾಗೂ ಉಳಿದ ವೀಕ್ಷಕರ ಮುಖದಲ್ಲಿ ಹೇಳಲಾರದ ಗಾಬರಿ ಮತ್ತು ನೋವು ಏಕಕಾಲದಲ್ಲಿ ಮೂಡಿದ್ದರೂ, ಮಾಲತಿ ಮುಖದಲ್ಲಿ ಯಾವುದೇ ಶಾಕ್ ಫೀಲ್ ಇರಲಿಲ್ಲ. ಜತೆಗೆ, ಅವರ ಮಗಳು ದೊಸ್ತಿಯ ಮುಖದಲ್ಲಿ ಕೂಡ ಯಾವುದೇ ಅಚ್ಚರಿ ಅಥವಾ ಶಾಕ್ ಆಗಲಿ ಕಾಣುತ್ತಿರಲಿಲ್ಲ. ಆದರೆ, ಯಶವಂತ್ ಸರದೇಶಪಾಂಡೆ ಮಾತಿನ ಕೊನೆಯಲ್ಲಿ ಅದೇನೆಂದು ರಿವೀಲ್ ಆದಾಗ, ಅಲ್ಲಿದ್ದ ಎಲ್ಲರೂ ನಿಟ್ಟುಸಿರು ಬಿಟ್ಟರು, ನಗೆಯ ಅಲೆಯಲ್ಲಿ ತೇಲಿಹಫದರು..!
ಮಾಲತಿಗೆ ಗೊತ್ತಿಲ್ಲದೇ ಯಶವಂತ್ ಸರದೇಶಪಾಂಡೆ ಮಾಡಿದ್ದ ಲವ್ ಸಂಬಂಧ ಏನು ಅಂತ ನಿಮಗೂ ಕುತೂಹಲ ಇರಬಹುದು! ಹೌದು, ಯಶವಂತ ಸರದೇಶಪಾಂಡೆ ಅವರಿಗೆ ‘ಲವ್ ಅಫೇರ್’ ಇತ್ತು. ಆದರೆ ಅದು 'ಗೋಲ್ಡಿ' ಎಂಬ ಬೆಕ್ಕಿನ ಜತೆಗಿತ್ತು. 12 ವರ್ಷ ಆ ಬೆಕ್ಕು ಆ ಕುಟುಂಬದ ಜತೆಗಿತ್ತು. ಮಾತಾಡುವಾಗ ಮುಚ್ಚಿಟ್ಟಿದ್ದ 'ಗೋಲ್ಡಿ' ಎಂಬ ಹೆಸರನ್ನು ಗಂಡ ಪೇಪರ್ ತೆಗೆದು ಓಪನ್ ಮಾಡಿ ತೋರಿಸಿದಾಗ ಸ್ವತಃ ಮಾಲತಿ ಅವರೂ ಕಣ್ಣೀರಾದರು. ಮಗಳು ದೋಸ್ತಿ ಕೂಡ ನೋವಿನಲ್ಲೂ ಮುಗುಳ್ನಗುತ್ತಿದ್ದರು.+
ಅಷ್ಟರಲ್ಲಿ ಅಲ್ಲಿದ್ದ ಬಿಗುವಿನ ವಾತಾವರಣ ತಿಳಿಯಾಗಿ ಮಡುಗಟ್ಟಿದ್ದ ನೋವಿಗೆ ಅಂತ್ಯವೊಂದು ಗೋಚರಿಸಿತು. ಆದರೆ 'ಜೋಡಿ ನಂ 1 ಸಂಚಿಕೆ' ಮುಗಿದು ಮೂರು ದಿನವಾದರೂ ಇನ್ನೂ ಆ ಸಂಚಿಕೆ 'ಹ್ಯಾಂಗೋವರ್'ನಿಂದ ಟಿವಿ ವೀಕ್ಷಕರು ಹೊರಬಂದಿರಲಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯ ಕಾಮೆಂಟ್‌ಗಳ ಮಹಾಪೂರದ ಸುರಿಮಳೆ ಆಗುತ್ತಿತ್ತು. ಇದೀಗ ಅವರ ನಿಧನದ ಬಳಿಕ ಅದೀಗ ಮತ್ತೆ ವೈರಲ್ ಆಗತಡೊಗಿದೆ.
ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಲೋಕದಲ್ಲಿ ವಿಶಿಷ್ಟ ಹೆಸರು ಪಡೆದ ಕಲಾವಿದರಾಗಿರುವ ಯಶವಂತ ಸರದೇಶಪಾಂಡೆ ಇನ್ನು ಕೇವಲ ನೆನಪಷ್ಟೇ! ಹಾಸ್ಯನಟ, ನಿರ್ದೇಶಕ, ನಾಟಕ ರಚನೆಕಾರ, ಸಂಭಾಷಣಾಕಾರರಾಗಿ ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದ ಯಶವಂತ ಸರದೇಶಪಾಂಡೆ, ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಿರುತೆರೆ ಸೇರಿದಂತೆ ಕನ್ನಡ ಚಿತ್ರರಂಗ ಹಾಗೂ ಮನರಂಜನಾ ವೀಕ್ಷಕವರ್ಗ ಇವರ ನಿಧನಕ್ಕೆ ಕಂಬನಿ ಮಿಡಿದಿದೆ.
ಯಶವಂತ ಸರದೇಶಪಾಂಡೆ ಪತ್ನಿ ಮಾಲತಿ ಕೂಡ ಖ್ಯಾತ ಕಿರುತೆರೆ ನಟಿಯಾಗಿದ್ದಾರೆ. ಅವರಿಗೆ 'ದೋಸ್ತಿ' ಹೆಸರಿನ ಮಗಳಿದ್ದಾರೆ. ಕನ್ನಡದ ರಿಯಾಲಿಟಿ ಶೋ ಜೋಡಿ ನಂ.1ನಲ್ಲಿ ಯಶವಂತ ಸರದೇಶಪಾಂಡೆ ಹಾಗೂ ಪತ್ನಿ ಮಾಲತಿ ಸರದೇಶಪಾಂಡೆ (Malati Sardeshpande) ಭಾಗವಹಿಸಿದ್ದರು. ಅವರಿಬ್ಬರೂ ಆ ಮೂಲಕ ಇಡೀ ಕರ್ನಾಟಕದ ಜನತೆಯ ಮೊಗದಲ್ಲಿ ನಗೆ ಮೂಡಸಿದ್ದರು. ಅಷ್ಟೇ ಅಲ್ಲ, ಒಂದು ಹಂತದಲ್ಲಿ ಪತಿ ಯಶವಂತ ಸರದೇಶಪಾಂಡೆ ಅವರು ಪತ್ನಿ ಮಾಲತಿಯವರೂ ಸೇರಿದಂತೆ ಇಡೀ ವೀಕ್ಷಕವರ್ಗಕ್ಕೆ ಭಾರೀ ಶಾಕ್ ನೀಡಿದ್ದರು. ಹಾಗಿದ್ರೆ ಅಂದು ಏನಾಗಿತ್ತು ಅಲ್ಲಿ..?
ರಂಗಭೂಮಿ, ಕಿರಿತೆರೆ, ಹಾಗೂ ಸಿನಿಮಾ ಅವರ ಸಾಧನೆಯ ಕ್ಷೇತ್ರ. ಯದ್ವಾ ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳಲ್ಲಿ ನಟಿಸಿದ್ದು, ಕೆಲವು ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಚಲನಚಿತ್ರಗಳಲ್ಲಿಯೂ ತಮ್ಮ ಕಲೆ ಪ್ರದರ್ಶಿಸಿರುವ ಅವರು ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶ್ಯಾಮಭಾಮ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ನಟನಷ್ಟೇ ಅಲ್ಲದೆ ನಿರ್ಮಾಪಕರೂ ಆಗಿರುವ ಅವರು 'ಐಡಿಯಾ ಮಾಡ್ಯಾರ' ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ರಾಮ ಶ್ಯಾಮ ಭಾಮ ಚಿತ್ರಕ್ಕೆ ಸಂಭಾಷಣೆ ಬರೆದು, ಕಮಲಹಾಸನ್ ಅವರ ಪಾತ್ರಕ್ಕೆ ಉತ್ತರ ಕರ್ನಾಟಕದ ಆಡುಭಾಷೆ ಬಳಸುವ ಮೂಲಕ ಹೊಸ ಭಾಷೆಯ ಪ್ರಯೋಗ ಮಾಡಿದ್ದಾರೆ.
ರಾಜಕೀಯ ಚಟುವಟಿಕೆ
2008ರ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಭಾರತೀಯ ಜನತಾ ಪಕ್ಷದ ಪರವಾಗಿ ತಮ್ಮ ನಾಟಕಗಳ ಮೂಲಕ ಪ್ರಚಾರ ನಡೆಸಿ ರಾಜಕೀಯ ವೇದಿಕೆಯಲ್ಲೂ ತಮ್ಮ ಕಲೆಯನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ರಾಜಕೀಯದಲ್ಲೂ ಕೈ ಆಡಿಸಿದ್ದಾರೆ.
ಅಭಿನಯ ಮತ್ತು ಸಂಭಾಷಣಾ ಕೌಶಲ್ಯಕ್ಕಾಗಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸನ್‌ಫೀಸ್ಟ್ ಉದಯ ಟಿವಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಯೂರ ಪ್ರಶಸ್ತಿ, ನಗೆಸರದಾರ ಪ್ರಶಸ್ತಿ ಮುಂತಾದ ಗೌರವಗಳು ಅವರ ಸಾಧನೆಗೆ ಸಂದಿವೆ.
ಹಾಸ್ಯವನ್ನು ಸಮಾಜದ ಮುಂದೆ ಇಟ್ಟು, ಅದನ್ನು ಪೋಷಿಸಿ, ಬೆಳೆಸದ ಯಶವಂತ ಸರದೇಶಪಾಂಡೆ, ಕನ್ನಡ ರಂಗಭೂಮಿ ಹಾಗೂ ಕಲಾರಂಗದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ. ನಿರ್ದೇಶಕ, ನಟ, ನಾಟಕಕಾರ, ಸಂಭಾಷಣಾಕಾರ ಎಂಬ ಹಣೆಪಟ್ಟಿಗಳ ಹಿಂದೆ ಅವರು ಜನಮನ ಗೆದ್ದ ಕಲಾವಿದ, ನಗುವಿನ ಸರದಾರ. ಅವರ ಕಲಾಪ್ರಯಾಣವು ಇಂದಿಗೂ ಕನ್ನಡ ಪ್ರೇಕ್ಷಕರಿಗೆ ಪ್ರೇರಣೆ ನೀಡುತ್ತಿದೆ. ವ್ಯಕ್ತಿಗತವಾಗಿ ಅವರಿನ್ನು ಇಲ್ಲದಿದ್ದರೂ ಸಾಧನೆ, ನಗುವಿನ ನೆನಪುಗಳ ಮೂಲಕ ಅವರು ಜನಮಾನಸದಲ್ಲಿ ಕಲಾರಸಿಕರೊಂದಿಗೆ ಶಾಶ್ವತವಾಗಿ ಇರಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.