ಯಶ್‌ ‘ಟಾಕ್ಸಿಕ್‌’ ನೋಡಿ ಫ್ಯಾನ್ಸ್‌ ಫಿದಾ: ನೆಟ್ಟಿಗರು ಮಾತ್ರ ‘KGF on Steroids’ ಅಂತಿದ್ದಾರೆ!

Published : Aug 08, 2026, 10:23 PM IST
Yash Toxic

ಸಾರಾಂಶ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಾಲ್ಕು ನಿಮಿಷಕ್ಕೂ ಹೆಚ್ಚು ಅವಧಿಯ ಈ ಟ್ರೇಲರ್‌ನಲ್ಲಿ ಯಶ್‌ ಹಲವು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಾಲ್ಕು ನಿಮಿಷಕ್ಕೂ ಹೆಚ್ಚು ಅವಧಿಯ ಈ ಟ್ರೇಲರ್‌ನಲ್ಲಿ ಯಶ್‌ ಹಲವು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದು, ಆ್ಯಕ್ಷನ್‌, ಕ್ರೈಮ್‌, ರಕ್ತಪಾತ ಹಾಗೂ ಗ್ಯಾಂಗ್‌ಸ್ಟರ್‌ ಜಗತ್ತಿನ ಕರಾಳ ಮುಖವನ್ನು ಪರಿಚಯಿಸಲಾಗಿದೆ. ಟ್ರೇಲರ್‌ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ಯಶ್‌ ಅಭಿಮಾನಿಗಳು ಹಾಗೂ ಸಿನಿಪ್ರಿಯರಿಂದ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಒಂದೆಡೆ ಯಶ್‌ ಅವರ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರೆ, ಮತ್ತೊಂದೆಡೆ ಅತಿಯಾದ ಹಿಂಸೆ, ರಕ್ತಪಾತ ಹಾಗೂ ಕಥೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದಕ್ಕೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಕೆಲವರು ‘ಟಾಕ್ಸಿಕ್‌’ ಅನ್ನು ಯಶ್‌ ಅವರದೇ ‘ಕೆಜಿಎಫ್‌’ಗೆ ಹೋಲಿಸಿದರೆ, ಇನ್ನು ಕೆಲವರು ಸಂದೀಪ್‌ ರೆಡ್ಡಿ ವಂಗಾ ಅವರ ಸಿನಿಮಾಗಳ ಛಾಯೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಟಾಕ್ಸಿಕ್‌’ನಲ್ಲಿ ಯಶ್‌ ಭಯಾನಕ ಗ್ಯಾಂಗ್‌ಸ್ಟರ್‌!

ಟ್ರೇಲರ್‌ನಲ್ಲಿ ಯಶ್‌ ಯಾವುದೇ ನಿಯಮ, ನಿಷ್ಠೆ ಅಥವಾ ಭಯಕ್ಕೆ ಒಳಗಾಗದ ರಗಡ್‌ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎದುರಾಳಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸುವುದು, ಕ್ರೈಮ್‌ ಲಾರ್ಡ್‌ಗಳ ವಿರುದ್ಧ ಸೆಣಸಾಡುವುದು ಹಾಗೂ ಹಿಂಸಾತ್ಮಕ ಆ್ಯಕ್ಷನ್‌ ಮೂಲಕ ಅಬ್ಬರಿಸುವ ದೃಶ್ಯಗಳು ಟ್ರೇಲರ್‌ನುದ್ದಕ್ಕೂ ಕಾಣಿಸುತ್ತವೆ.

ಒಂದೆಡೆ ಯಶ್‌ ಕಿಲ್ಲಿಂಗ್‌ ಮೆಷಿನ್‌ನಂತೆ ಕಾಣಿಸಿಕೊಂಡರೆ, ಮತ್ತೊಂದೆಡೆ ಮಹಿಳೆಯರನ್ನು ತನ್ನತ್ತ ಸೆಳೆಯುವ ಮೋಹಕ ವ್ಯಕ್ತಿಯ ಛಾಯೆಯೂ ಕಾಣಿಸುತ್ತದೆ. ಟ್ರೇಲರ್‌ನಲ್ಲಿ ಯಶ್‌ ಪಾತ್ರದ ಸುತ್ತ ಮಹಿಳೆಯರು ಜಗಳವಾಡುವುದು, ಕಣ್ಣೀರು ಹಾಕುವುದು ಸೇರಿದಂತೆ ಹಲವು ದೃಶ್ಯಗಳಿವೆ. ಇದೇ ವೇಳೆ ಯಶ್‌ ತಂದೆ-ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ ಎಂಬ ಕುತೂಹಲವನ್ನೂ ಟ್ರೇಲರ್‌ ಹುಟ್ಟುಹಾಕಿದೆ. ಆದರೆ ಚಿತ್ರತಂಡ ಕಥೆಯ ಪ್ರಮುಖ ಅಂಶಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ.

‘ಕೆಜಿಎಫ್‌ ಆನ್‌ ಸ್ಟಿರಾಯ್ಡ್ಸ್‌’ ಎಂದ ನೆಟ್ಟಿಗರು!

ಟ್ರೇಲರ್‌ ಬಿಡುಗಡೆಯಾದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ‘ಟಾಕ್ಸಿಕ್‌’ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಅದರಲ್ಲೂ ಯಶ್‌ ಅವರ ಮಾಸ್‌ ಲುಕ್‌ ಮತ್ತು ಆ್ಯಕ್ಷನ್‌ ನೋಡಿ ಹಲವರು ‘ಕೆಜಿಎಫ್‌’ ನೆನಪಾಗಿದೆ ಎಂದು ಹೇಳಿದ್ದಾರೆ. “KGF on Steroid” ಎಂದು ಒಬ್ಬ ನೆಟ್ಟಿಗ ಕಾಮೆಂಟ್‌ ಮಾಡಿದ್ದಾನೆ. ಮತ್ತೊಬ್ಬರು ಟ್ರೇಲರ್‌ ನೋಡಿದ ಬಳಿಕ, ಸಿನಿಮಾದ ಕಥೆ ಅರ್ಥವಾಗಲು ಇನ್ನೂ ಒಂದು ಮೆದುಳು ಬೇಕಾಗಬಹುದು ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಕೆಲವರು ಯಶ್‌ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಓವರ್‌ ಆ್ಯಕ್ಷನ್‌ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಸಿನಿಮಾದಲ್ಲಿನ ಮಹಿಳಾ ಪಾತ್ರಗಳು ಕೇವಲ ಯಶ್‌ ಪಾತ್ರದ ಸುತ್ತ ಅಳುವುದು ಮತ್ತು ಕಿರುಚುವುದಕ್ಕೆ ಸೀಮಿತವಾಗಿರುವಂತೆ ಕಾಣುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

‘ಸ್ವಲ್ಪ KGF, ಸ್ವಲ್ಪ Animal, ಸ್ವಲ್ಪ Kabir Singh..!’

‘ಟಾಕ್ಸಿಕ್‌’ ಟ್ರೇಲರ್‌ ನೋಡಿದ ಬಳಿಕ ಕೆಲವರು ಇದನ್ನು ಯಶ್‌ ಅವರ ‘ಕೆಜಿಎಫ್‌’ ಮಾತ್ರವಲ್ಲದೆ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್‌’ ಮತ್ತು ‘ಕಬೀರ್‌ ಸಿಂಗ್‌’ ಸಿನಿಮಾಗಳಿಗೂ ಹೋಲಿಸಿದ್ದಾರೆ. ಒಬ್ಬ ನೆಟ್ಟಿಗನ ಪ್ರತಿಕ್ರಿಯೆ ಹೀಗಿತ್ತು-‘ಸ್ವಲ್ಪ ಕೆಜಿಎಫ್‌, ಸ್ವಲ್ಪ ಅನಿಮಲ್‌, ಸ್ವಲ್ಪ ಕಬೀರ್‌ ಸಿಂಗ್‌.. ಇನ್ನಷ್ಟು ಗರಂ ಮಸಾಲಾ ಹಾಕಿದ್ರೆ ಟಾಕ್ಸಿಕ್‌ ರೆಡಿ!’ ಇನ್ನು ಕೆಲವರು ಟ್ರೇಲರ್‌ನಲ್ಲಿ ಹೊಸತನ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ. ಸಿನಿಮಾದಲ್ಲಿ ಎಲ್ಲವೂ ಈಗಾಗಲೇ ನೋಡಿರುವ ಸಿನಿಮಾಗಳಿಂದ ಪ್ರೇರಣೆ ಪಡೆದಂತೆ ಕಾಣುತ್ತಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

‘ಧುರಂಧರ್‌ 2’ ಕ್ಲ್ಯಾಶ್‌ ತಪ್ಪಿಸಲು ಸಿನಿಮಾ ಮುಂದೂಡಿದ್ದೇಕೆ ಗೊತ್ತಾಯ್ತು!

‘ಟಾಕ್ಸಿಕ್‌’ ಸಿನಿಮಾ ಈ ಹಿಂದೆ ಬಿಡುಗಡೆಯನ್ನು ಹಲವು ಬಾರಿ ಮುಂದೂಡಿತ್ತು. ಈ ಪೈಕಿ ರಣವೀರ್‌ ಸಿಂಗ್‌ ಅಭಿನಯದ ‘ಧುರಂಧರ್‌ 2’ ಜೊತೆ ಬಾಕ್ಸ್‌ ಆಫೀಸ್‌ ಕ್ಲ್ಯಾಶ್‌ ತಪ್ಪಿಸಲು ಸಿನಿಮಾ ಮುಂದೂಡಲಾಗಿದೆ ಎಂಬ ಚರ್ಚೆಯೂ ನಡೆದಿತ್ತು. ಇದೀಗ ಟ್ರೇಲರ್‌ ನೋಡಿದ ಬಳಿಕ ಒಬ್ಬ ನೆಟ್ಟಿಗ ಇದೇ ವಿಚಾರವನ್ನು ತಮಾಷೆಯಾಗಿ ಕೆಣಕಿದ್ದಾನೆ. “ಈಗ ಸಿನಿಮಾ ಯಾಕೆ ಮುಂದೂಡಲಾಯ್ತು ಅನ್ನೋದು ಗೊತ್ತಾಯ್ತು. ಅವರಿಗೂ ಗೊತ್ತಿತ್ತು” ಎಂದು ಕಾಮೆಂಟ್‌ ಮಾಡಿದ್ದಾನೆ. ಈ ಕಾಮೆಂಟ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

ಎಲ್ಲರೂ ಟೀಕಿಸಿಲ್ಲ.. ಯಶ್‌ಗೆ ಭರ್ಜರಿ ಸಪೋರ್ಟ್‌!

ಟ್ರೇಲರ್‌ಗೆ ಬಂದ ಪ್ರತಿಕ್ರಿಯೆಗಳೆಲ್ಲವೂ ನೆಗೆಟಿವ್‌ ಆಗಿಲ್ಲ. ಯಶ್‌ ಅಭಿಮಾನಿಗಳ ಒಂದು ದೊಡ್ಡ ವರ್ಗ ಟ್ರೇಲರ್‌ ಅನ್ನು ಭರ್ಜರಿಯಾಗಿ ಮೆಚ್ಚಿಕೊಂಡಿದೆ. “ಟಾಕ್ಸಿಕ್‌ ಟ್ರೇಲರ್‌ ತುಂಬಾ ಫ್ರೆಶ್‌ ಆಗಿದೆ. ಸಂಪೂರ್ಣ ಹೊಸ ವೈಬ್‌ ನೀಡುತ್ತಿದೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಅಭಿಮಾನಿ, ಸಂದೀಪ್‌ ರೆಡ್ಡಿ ವಂಗಾ ಅವರ ಸಿನಿಮಾಗಳಿಗೆ ಹೋಲಿಕೆ ಮಾಡಿರುವುದನ್ನು ತಮಾಷೆಯಾಗಿ ಉಲ್ಲೇಖಿಸಿ, “ಅಸಲಿ ಸ್ಪಿರಿಟ್‌ ಅನಿಮಲ್‌ ಇಲ್ಲಿದೆ” ಎಂಬರ್ಥದಲ್ಲಿ ಯಶ್‌ ಅವರ ಮಾಸ್‌ ಅವತಾರವನ್ನು ಹೊಗಳಿದ್ದಾರೆ.

ನಯನತಾರಾ, ಕಿಯಾರಾ ಸೇರಿದಂತೆ ದೊಡ್ಡ ತಾರಾಬಳಗ

‘ಟಾಕ್ಸಿಕ್‌’ನಲ್ಲಿ ಯಶ್‌ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಟ್ರೇಲರ್‌ನಲ್ಲಿ ದೊಡ್ಡ ತಾರಾಬಳಗ ಕಾಣಿಸಿಕೊಂಡಿದ್ದರೂ, ಕಥೆಯ ಪ್ರಮುಖ ಅಂಶಗಳನ್ನು ಚಿತ್ರತಂಡ ರಿವೀಲ್‌ ಮಾಡಿಲ್ಲ. ಹೀಗಾಗಿ ಯಶ್‌ ಪಾತ್ರದ ಅಸಲಿ ಕಥೆ ಏನು? ಅವರ ಸುತ್ತಲಿರುವ ಪಾತ್ರಗಳಿಗೂ ಅವರಿಗೂ ಇರುವ ಸಂಬಂಧವೇನು? ಎಂಬ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

‘ಟಾಕ್ಸಿಕ್‌’ಗೆ ಹೈಪ್‌ ಹೆಚ್ಚಿಸಿದ ಟ್ರೇಲರ್‌!

ಒಟ್ಟಿನಲ್ಲಿ ‘ಟಾಕ್ಸಿಕ್‌’ ಟ್ರೇಲರ್‌ ಸೋಶಿಯಲ್‌ ಮೀಡಿಯಾದಲ್ಲಿ ಒಂದೇ ರೀತಿಯ ಪ್ರತಿಕ್ರಿಯೆ ಪಡೆಯುತ್ತಿಲ್ಲ. ಕೆಲವರಿಗೆ ಇದು ‘ಕೆಜಿಎಫ್‌ಗಿಂತಲೂ ವೈಲ್ಡ್‌’ ಆಗಿ ಕಾಣಿಸಿದರೆ, ಇನ್ನು ಕೆಲವರಿಗೆ ಹಿಂಸೆ ಮತ್ತು ರಕ್ತಪಾತ ಅತಿಯಾಗಿ ಕಾಣಿಸಿದೆ. ಮತ್ತೊಂದೆಡೆ ಯಶ್‌ ಅವರ ಹೊಸ ಅವತಾರ, ಆ್ಯಕ್ಷನ್‌ ಹಾಗೂ ಸ್ಕ್ರೀನ್‌ ಪ್ರೆಸೆನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗಾದರೆ ‘ಟಾಕ್ಸಿಕ್‌’ ನಿಜಕ್ಕೂ ‘KGF on Steroid’ ಆಗುತ್ತಾ? ಅಥವಾ ಟ್ರೇಲರ್‌ಗಿಂತಲೂ ವಿಭಿನ್ನವಾದ ಕಥೆಯನ್ನು ಸಿನಿಮಾ ನೀಡುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಆಗಸ್ಟ್‌ 26ರಂದು ಸಿನಿಮಾ ಚಿತ್ರಮಂದಿರಕ್ಕೆ ಬಂದಾಗ ಸಿಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಿರ್ದೇಶಕಿ ಗೀತೂ ಮೋಹನ್‌ದಾಸ್ ಕಣ್ಣೀರು ಹಾಕಿದ್ದೇಕೆ? ಟಾಕ್ಸಿಕ್ 'ಸ್ಪೆಷಲ್ ಲೇಡೀಸ್' ನಾಯಕಿಯರು ಹೇಳಿದ್ದೇನು?
ರಾಕಿ ಬಳಗಕ್ಕೆ ಯಶ್‌ 'ರಾಕಿಂಗ್‌' ಗಿಫ್ಟ್‌..: 'ಟಾಕ್ಸಿಕ್‌' ಬಗ್ಗೆ ಮೊದಲ ಬಾರಿಗೆ ಮೌನ ಮುರಿದ 'ಅಣ್ತಮ್ಮ'