ಟಾಕ್ಸಿಕ್ ಕಥೆಯ ನಿಜವಾದ ಹೀರೋ ಯಾರು? ರಾಕಿಂಗ್ ಸ್ಟಾರ್ ಯಶ್ ಹೇಳಿದ ಉತ್ತರವೇ ಹೈಲೈಟ್

Published : Jul 29, 2026, 09:23 PM IST
Yash Toxic

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ..

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ ಮತ್ತು ಅದ್ಧೂರಿ ಆ್ಯಕ್ಷನ್‌ನ ಝಲಕ್ ನೀಡಿರುವ ಚಿತ್ರ, ಕೇವಲ ಆ್ಯಕ್ಷನ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಸ್ವತಃ ಯಶ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ‘ಟಾಕ್ಸಿಕ್’ ಚಿತ್ರದ ಕಥೆಯ ಹೃದಯವೇ ಭಾವನೆಗಳು ಎಂದು ಹೇಳಿದ್ದು, ಪ್ರೇಕ್ಷಕರಿಗೆ ಮರೆಯಲಾಗದ ಅನುಭವ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಆ್ಯಕ್ಷನ್ ಜೊತೆಗೆ ಭಾವನೆ ಇದ್ದಾಗಲೇ ಸಿನಿಮಾ ಗೆಲ್ಲುತ್ತದೆ"

ಚಿತ್ರದ ಬಗ್ಗೆ ಮಾತನಾಡಿದ ಯಶ್, "‘ಟಾಕ್ಸಿಕ್’ ಒಂದು ರೋಲರ್‌ಕೋಸ್ಟರ್ ಅನುಭವ. ಕಥೆ ತುಂಬಾ ಆಳವಾಗಿದೆ, ಅದ್ದೂರಿಯಾಗಿದೆ ಮತ್ತು ಜೀವನಕ್ಕಿಂತ ದೊಡ್ಡ ಕ್ಯಾನ್ವಾಸ್ ಹೊಂದಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾವನೆಗಳಿಂದ ಕೂಡಿದ ಸಿನಿಮಾ. ಆ್ಯಕ್ಷನ್ ಮತ್ತು ಎಮೋಷನ್‌ನ ಈ ಸಂಯೋಜನೆಯೇ ಚಿತ್ರದ ದೊಡ್ಡ ಶಕ್ತಿ. ಸಿನಿಮಾ ನೋಡಿ ಹೊರಬರುವವರು ‘ಏನಿದು ಅದ್ಭುತ ಅನುಭವ!’ ಎಂದು ಹೇಳುತ್ತಾರೆ ಎಂಬ ನಂಬಿಕೆ ಇದೆ," ಎಂದು ಹೇಳಿದ್ದಾರೆ. ಟೀಸರ್‌ನಲ್ಲಿ ಚಿತ್ರದ ಸ್ಟೈಲಿಷ್ ಆ್ಯಕ್ಷನ್ ಮತ್ತು ಗಾಢ ವಾತಾವರಣ ಗಮನ ಸೆಳೆದಿದ್ದರೂ, ಅದರ ಹಿಂದಿರುವ ಭಾವನಾತ್ಮಕ ಕಥೆಯೇ ಚಿತ್ರದ ಆತ್ಮ ಎಂದು ಯಶ್ ತಿಳಿಸಿದ್ದಾರೆ.

ಜಾನ್ ವಿಕ್ ಖ್ಯಾತಿಯ ಜೆಜೆ ಪೆರಿಗೆ ಯಶ್ ಮೆಚ್ಚುಗೆ

‘ಟಾಕ್ಸಿಕ್’ ಚಿತ್ರದ ಆ್ಯಕ್ಷನ್ ದೃಶ್ಯಗಳನ್ನು ಸಂಯೋಜಿಸಿರುವ ಜೆಜೆ ಪೆರಿ ಬಗ್ಗೆ ಕೂಡ ಯಶ್ ವಿಶೇಷವಾಗಿ ಮಾತನಾಡಿದರು. ‘ಜಾನ್ ವಿಕ್’ ಸರಣಿಯ ಆ್ಯಕ್ಷನ್ ದೃಶ್ಯಗಳಿಗೆ ಖ್ಯಾತರಾಗಿರುವ ಜೆಜೆ ಪೆರಿಯ ಕೆಲಸವನ್ನು ತಾವು ಬಹಳ ಹಿಂದಿನಿಂದಲೇ ಮೆಚ್ಚಿಕೊಂಡಿದ್ದಾಗಿ ಹೇಳಿದರು. "ನನಗೆ ಆ್ಯಕ್ಷನ್ ಸಿನಿಮಾಗಳೆಂದರೆ ತುಂಬಾ ಇಷ್ಟ. ಆ್ಯಕ್ಷನ್ ದೃಶ್ಯಗಳಲ್ಲಿ ಅಭಿನಯಿಸುವಾಗ ನಾನು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುತ್ತೇನೆ. ಜೆಜೆ ಪೆರಿ ಅದ್ಭುತ ಕೆಲಸ ಮಾಡಿದ್ದಾರೆ. ಅವರು ವಿನ್ಯಾಸಗೊಳಿಸಿರುವ ಆ್ಯಕ್ಷನ್ ಸೀಕ್ವೆನ್ಸ್‌ಗಳು ನನಗೆ ಯಾವಾಗಲೂ ಸ್ಫೂರ್ತಿ ನೀಡಿವೆ," ಎಂದು ಯಶ್ ಹೇಳಿದ್ದಾರೆ.

"ಪ್ರತಿ ಆ್ಯಕ್ಷನ್ ಹಿಂದೆ ಭಾವನೆ ಇರಬೇಕು"

ಆದರೆ, ಆ್ಯಕ್ಷನ್ ಮಾತ್ರವೇ ಸಿನಿಮಾದ ಗುರಿಯಾಗಿರಲಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. "ನನಗೆ ಆ್ಯಕ್ಷನ್ ಜೊತೆಗೆ ಭಾವನೆಗಳು ಇರಬೇಕು. ‘ಟಾಕ್ಸಿಕ್’ ಚಿತ್ರದ ಮೂಲ ಅಂಶವೂ ಅದೇ. ಪ್ರತಿಯೊಂದು ಆ್ಯಕ್ಷನ್ ದೃಶ್ಯದ ಹಿಂದೆ ಪ್ರಬಲ ಭಾವನೆ ಇರಬೇಕು. ಆಗ ಮಾತ್ರ ಅದು ಪ್ರೇಕ್ಷಕರನ್ನು ನಿಜವಾಗಿ ತಟ್ಟುತ್ತದೆ," ಎಂದು ಅವರು ಹೇಳಿದರು.

‘ರಾಮಾಯಣ’ದಲ್ಲೂ ಇದೇ ಮ್ಯಾಜಿಕ್

ಯಶ್ ತಮ್ಮ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ ಬಗ್ಗೆಯೂ ಮಾತನಾಡಿದ್ದು, ಆ ಚಿತ್ರದಲ್ಲೂ ಅದ್ದೂರಿ ಆ್ಯಕ್ಷನ್ ಜೊತೆಗೆ ಭಾವನಾತ್ಮಕ ಕಥೆಗೆ ಸಮಾನ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. "‘ರಾಮಾಯಣ’ದಲ್ಲೂ ಅದ್ಭುತ ಆ್ಯಕ್ಷನ್ ದೃಶ್ಯಗಳನ್ನು ನೋಡಬಹುದು. ಆದರೆ ಅಲ್ಲಿಯೂ ಭಾವನೆಗಳೇ ಕಥೆಯನ್ನು ಮುನ್ನಡೆಸುವ ಶಕ್ತಿ," ಎಂದು ಯಶ್ ಹೇಳಿದ್ದಾರೆ.

ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆ

ನಿರ್ದೇಶಕಿ ಗೀತು ಮೋಹನದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿವೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಿರುವ ಈ ಸಿನಿಮಾ, ಬಹುಭಾಷೆಗಳಲ್ಲಿ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಮೇಲೆ ಭಾರೀ ನಿರೀಕ್ಷೆ ನಿರ್ಮಾಣವಾಗಿದ್ದು, ಯಶ್ ಅಭಿಮಾನಿಗಳು ಈ ಪ್ಯಾನ್‌ವರ್‌ಲ್ಡ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹಿಂದೂ ಆಗಿ ಹುಟ್ಟಿ, ಕ್ರಿಶ್ಚಿಯನ್ ಆಗಿ, ಪ್ರೀತಿಗಾಗಿ ಇಸ್ಲಾಂಗೆ ಮತಾಂತರವಾದ ಈ ನಟಿ ಯಾರು ಗೊತ್ತೇ!
'ಇಂತಹ ನಿರ್ದೇಶಕರನ್ನು ನಾನು ನೋಡಿಲ್ಲ': ರಿಷಬ್ ಕೆಲಸದ ಶೈಲಿಗೆ ಫಿದಾ ಆದ ಹಿರಿಯ ನಟ ಜಯರಾಮ್