
ಪುಷ್ಪಾ ಅರುಣ್‌ಕುಮಾರ್ (Pushpa Arunkumar) ಅಂದ್ರೆ ಈಗ ಆಲ್‌ಮೋಸ್ಟ್ ಕರ್ನಾಟಕಕ್ಕೇ ಗೊತ್ತು. ಗೊತ್ತಿಲ್ಲದವರಿಗೆ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅಮ್ಮ ಅಂದ್ರೆ ಗೊತ್ತಾಗುತ್ತೆ, ಇತ್ತೀಚೆಗೆ 'ಕೊತ್ತಲವಾಡಿ' ಸಿನಿಮಾ ಮಾಡಿ ಸಾಕಷ್ಟು ಫೇಮಸ್ ಆಗಿದ್ದಾರೆ. ಸಿನಿಮಾ ಬಜೆಟ್ ಎಷ್ಟಾಯ್ತು? ಕಲೆಕ್ಷನ್ ಎಷ್ಟಾಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅದನ್ನು ನಿರ್ಮಾಪಕರಾದ ಪುಷ್ಪಾ ಅರುಣ್‌ಕುಮಾರ್ ಅವರು ಹಂಚಿಕೊಂಡಿಲ್ಲ. ಅದನ್ನು ಅವರೇನೂ ಹೇಳಲೇಬೇಕೆಂದಿಲ್ಲ. ಕಾರಣ, ಲಾಭ-ನಷ್ಟ ಅನ್ನೋದು ಅವರಿಗೆ ಬಿಟ್ಟಿದ್ದು. ಅದನ್ನೇ ಅವರೂ ಹೇಳಿದ್ದಾರೆ.
'ನಾನು ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಬರಬೇಕೆಂದು ನಿರ್ಧರಿಸಿ ಬಂದಿದ್ದೇನೆ. ಇಲ್ಲಿ ನಾನು ಲಾಭ-ನಷ್ಟದ ಲೆಕ್ಕಾಚಾರ ಮಾಡುತ್ತ ಕುಳಿತುಕೊಳ್ಳಲಾರೆ. ಕೊತ್ತಲವಾಡಿ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಮೊದಲ ಹೆಜ್ಜೆ ಇಟ್ಟಿದ್ದೇನೆ. ಸಿನಿಮಾ ಅನ್ನೋದು ಒಂದು ವ್ಯಾಪಾರ ಹಾಗೂ ವ್ಯವಹಾರ. ಇಲ್ಲಿಗೆ ಬಂದ ಮೇಲೆ ಲಾಭ-ನಷ್ಟ ಅನ್ನೋದೆಲ್ಲಾ ಇದ್ದಿದ್ದೇ. ಅದಕ್ಕೆಲ್ಲಾ ತಲೆ ಕೆಡಿಸಿಕೊಂಡು ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ. ಒಂದು ಸಿನಿಮಾದಲ್ಲಿ ಲಾಭ ಬರಬಹುದು, ಇನ್ನೊಂದರಲ್ಲಿ ನಷ್ಟ ಆಗಬಹುದು, ಇನ್ನೊಂದು ಅಲ್ಲಿಂದಲ್ಲಿಗೆ ಸರಿ ಹೋಗಬಹುದು.
ನಮ್ಮ ಕುಟುಂಬ ಏನೇ ಪಡೆದಿದ್ದರೂ ಅದನ್ನು ಇಲ್ಲಿಂದಲೇ ಅಂದರೆ ಕನ್ನಡ ಚಿತ್ರರಂಗದ ಮೂಲಕವೇ ಪಡೆದಿದೆ. ಗಳಿಸಿದ ಹಣವನ್ನು ಇಲ್ಲೇ ಹಾಕಿ ಸಿನಿಮಾ ಮಾಡುತ್ತೇನೆ. ಗೆಲುವು-ಸೋಲು ಅಂತ ಸುಮ್ಮನೇ ಕುಳಿತುಕೊಳ್ಳೋದಿಲ್ಲ. ನಾನು ಮುಂದೊಂದು ದಿನ ಖಂಡಿತ ಗೆಲುವು ಪಡೆಯುತ್ತೇನೆ. ಈಗಷ್ಟೇ ಸಿನಿಮಾ ಉದ್ಯಮಕ್ಕೆ ಬಂದು ಇಲ್ಲಿನ ವ್ಯವಹಾರ, ಆಗುಹೋಗುಗಳನ್ನು ಕಲಿಯುತ್ತೇನೆ. ಈಗಾಗಲೇ ಸಾಕಷ್ಟು ಕಲಿತಿದ್ದೇನೆ, ಇನ್ನೂ ಕಲಿಯುವುದು ಸಾಕಷ್ಟಿದೆ. ಸಿನಿಮಾ ಮಾಡುವುದಕ್ಕಿಂತ ಅದನ್ನು ರಿಲೀಸ್ ಮಾಡೋದು, ಜನರಿಗೆ ರೀಚ್ ಮಾಡೋದ್ರಲ್ಲಿ ತುಂಬಾ ಚಾಲೆಂಜ್ ಇದೆ.
ನಮಗೆ ಬೇಕಾದ ಥೀಯೇಟರ್‌ಗಳು ಸಿಗಲಿಲ್ಲ. ಎಲ್ಲೆಲ್ಲಿಯೋ ಹೋಗಿ ಸಿನಿಮಾ ಪ್ರೇಕ್ಷಕರು ಸಿನಿಮಾ ನೋಡೋಕೆ ಆಗೋದಿಲ್ಲ. ಆದರೆ, ನನಗೂ ಈ ವ್ಯವಹಾರ ಹೊಸತು. ಹೀಗಾಗಿ ನಮಗೆ ಅನುಕೂಲಕರವಾಗಿ ಸಿನಿಮಾ ಥಿಯೇಟರ್‌ಗಳು ಸಿಗಲಿಲ್ಲ. ಕೆಲವು ಕಡೆ ಹೌಸ್‌ಫುಲ್ ಪ್ರದರ್ಶನ ಕಂಡರೆ ಇನ್ನೂ ಕೆಲವು ಕಡೆ ಜನರು ಹೋಗಿ ನೋಡಿಲಿಕ್ಕೆ ಆಗದ ವಾತಾವರಣ ನಿರ್ಮಾಣ ಆಗಿತ್ತು. ಏನೇ ಆಗಿದ್ದರೂ ನನಗೆ ಹಾಕಿರುವ ಬಂಡವಾಳ ವಾಪಸ್ ಬಂದಿದೆ, ಜನರ ಪ್ರೀತಿ ಸಿಕ್ಕಿದೆ.
ಸಿನಿಮಾ ಉದ್ಯಮದಲ್ಲಿ ನಿರ್ಮಾಪಕರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಈ ಬಗ್ಗೆ ನನಗೆ ಈಗ ಅನುಭವ ಆಗಿದೆ. ಹೇಗೂ ಮುಂದಿನ ಸಿನಿಮಾಗಳಲ್ಲಿ ಹೆಚ್ಚಿನ ಬಂಡವಾಳ ಹಾಗೂ ಭಾಷೆಗಳಲ್ಲಿ ಸಿನಿಮಾ ಮಾಡಲಿದ್ದೇನೆ. ಆಗ ಸಮಸ್ಯೆ ಏನಾದ್ರೂ ಬಂದರೆ, ಮುಖ್ಯಮಂತ್ರಿಗಳು ಹಾಗೂ ಪ್ರಧಾನಿಗಳ ಬಳಿಗೂ ಹೋಗಲು ನಾನು ಸಿದ್ಧ. ಮೋದಿ ಬಳಿಯೂ ಈ ಬಗ್ಗೆ ಮಾತನ್ನಾಡುತ್ತೇನೆ. ಏಕೆಂದರೆ, ನಾವು ವೋಟು ಹಾಕಿದ್ದೇವೆ, ನಮ್ಮ ಸಮಸ್ಯೆಯನ್ನು ಅವರ ಬಳಿ ಹೇಳಿಕೊಳ್ಳುವ ಹಕ್ಕು ನಮಗೆಲ್ಲರಿಗೂ ಇದೆ. ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಮಾತ್ರ ಮುಂದಿನ ಹೆಜ್ಜೆಯಲ್ಲಿನ ಸವಾಲು ಕಡಿಮೆ ಆಗುತ್ತದೆ.
ಈಗ ಯಶ್ ಇಡೀ ಇಂಡಿಯಾ ಸ್ಟಾರ್. ಹೀಗಾಗಿ ಕನ್ನಡದ ಜೊತೆಜೊತೆಗೇ ಮುಂದಿನ ದಿನಗಳಲ್ಲಿ ಇನ್ನೂ ಹಲವು ಭಾಷೆಗಳಲ್ಲಿ ಸಿನಿಮಾ ಮಾಡಲಿದ್ದೇನೆ. ಸ್ಟಾರ್‌ಗಳಿಗೆ ಸರಿಯಾದ ಬಜೆಟ್ ಹಾಕಿ ಸಿನಿಮಾ ಮಾಡಬೇಕಾಗುತ್ತದೆ, ನಮ್ಮ ಮಗ ಯಶ್‌ನನ್ನು ಹೀರೋ ಮಾಡಿಕೊಂಡರೆ ಏನೆಲ್ಲಾ ಅಂದ್ರೂ 2000 ಕೋಟಿ ಬಜೆಟ್ ಬೇಕು. ಸದ್ಯಕ್ಕೆ ನನಗೆ ಅಷ್ಟೊಂದು ಹಣ ಹಾಕಿ ಸಿನಿಮಾ ಮಾಡೋಕೆ ಆಗಲ್ಲ. ಅದಕ್ಕೇ ಬೇರೆ ನಟರ ಡೇಟ್ಸ್ ತೆಗೆದುಕೊಳ್ಳುತ್ತೇನೆ. ಆದರೆ, ಮುಂದೊಂದು ದಿನ ನಾನು ಖಂಡಿತವಾಗಿಯೂ ಯಶ್ ಸಿನಿಮಾವನ್ನೂ ನಿರ್ಮಾಣ ಮಾಡುತ್ತೇನೆ' ಎಂದಿದ್ದಾರೆ ಯಶ್ ಅಮ್ಮ ಪುಷ್ಪಾ ಅರುಣ್‌ಕುಮಾರ್.
ಪುಷ್ಪಾ ಅವರ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕೆಲವರು ಅವರನ್ನು ಬಗೆಬಗೆಯಾಗಿ, ತಮಾಷೆಯಾಗಿ ಟ್ರೋಲ್ ಮಾಡುತ್ತಿದ್ದಾರೆ. ಅವರ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಹಾಕುತ್ತಿದ್ದಾರೆ. ಆದರೆ ಆ ಬಗ್ಗೆ ಪುಷ್ಪಾ ಅವರಿಗೆ ಅರಿವಿದೆ. 'ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಕೆಲವರು ಹಣ ಪಡೆದು ನೆಗೆಟಿವ್ ಕಾಮೆಂಟ್ಸ್ ಹಾಕ್ತಾರಂತೆ. ಅವರಿಗೆ ಅದನೆಲ್ಲಾ ಮಾಡಲು ಹಣ ಕೊಡುವ ಒಂದು ವರ್ಗ ಇದೆಯಂತೆ. ಇನ್ನೂ ಏನೇನು ಸಮಸ್ಯೆಗಳಿವೆ ಎಂಬುದನ್ನು ಮುಂದಿನ ದಿನಗಳಲ್ಲಿ ಅರ್ಥ ಮಾಡಿಕೊಳ್ಳುತ್ತೇನೆ' ಎಂದಿದ್ದಾರೆ ಪುಷ್ಪಾ ಅರುಣ್‌ಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.