ಸಂತು'ಗೆ ಯಶ್ ಫುಲ್ ಸೈಲೆಂಟ್ : ನನ್ನನ್ನೇ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದೇನೆ

Published : Oct 26, 2016, 06:58 PM ISTUpdated : Apr 11, 2018, 12:38 PM IST
ಸಂತು'ಗೆ ಯಶ್ ಫುಲ್ ಸೈಲೆಂಟ್ : ನನ್ನನ್ನೇ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದೇನೆ

ಸಾರಾಂಶ

ಸಂತು ಸ್ಟ್ರೈಟ್ ಫಾರ್ವರ್ಡ್’ ಬಿಡುಗಡೆ (ಅ.28) ಹತ್ತಿರ ಬಂದರೂ ಯಶ್- ರಾಕಾ ಯಾಕೆ ಚಿತ್ರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ? ಚಿತ್ರದ ಪ್ರಚಾರಕ್ಕೇಕೆ ಬರುತ್ತಿಲ್ಲ? ಈ ಮೌನಕ್ಕೆ ಕಾರಣ ಬೇರೆಯದೇ ಇದೆ!

-ದೇಶಾದ್ರಿ ಹೊಸ್ಮನೆ, ಕನ್ನಡ ಪ್ರಭ

ಈ ವಾರ ಸ್ಟಾರ್ ಚಿತ್ರಗಳದ್ದೇ ಅಬ್ಬರ. ಉಪೇಂದ್ರ, ಸುದೀಪ್ ನಟನೆಯ ‘ಮುಕುಂದ ಮುರಾರಿ’ ಎದುರು ಭಾವಿ ದಂಪತಿ ಯಶ್ ಹಾಗೂ ರಾಕಾ ಪಂಡಿತ್ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಆಗಿ ನಿಂತಿದ್ದಾರೆ. ಇವೆರಡರ ಪೈಕಿ ‘ಮುಕುಂದ ಮುರಾರಿ’ಯ ಪ್ರಚಾರದ ಹವಾ ಜೋರಾಗಿದೆ. ರಿಯಲ್ ಸ್ಟಾರ್ ಮತ್ತು ಕಿಚ್ಚ ಇಬ್ಬರೂ ತಮ್ಮದೇ ಶೈಲಿಯಲ್ಲಿ ಪ್ರಚಾರದಲ್ಲಿದ್ದಾರೆ. ಆದರೆ, ‘ಸಂತು ಸ್ಟ್ರೈಟ್ ಾರ್ವರ್ಡ್’ ಕಡೆಯಿಂದ ಯಶ್- ರಾಕಾ ಪಂಡಿತ್ ಇಲ್ಲಿಯ ತನಕ ತುಟಿಯನ್ನೇ ಬಿಚ್ಚಿಲ್ಲ!

ತಾರಾ ಜೋಡಿ ಮೌನ

ಪತ್ರಿಕಾಗೋಷ್ಠಿ ಬಿಡಿ, ಚಿತ್ರದ ಕುರಿತು ಮಾಧ್ಯಮಗಳ ಖಾಸಗಿ ಸಂದರ್ಶನಕ್ಕೂ ಯಶ್ ಒಪ್ಪುತ್ತಿಲ್ಲ. ಅಷ್ಟೇ ಏಕೆ, ಆ ಚಿತ್ರದ ಒಂದೇ ಒಂದು ಸ್ಟಿಲ್ ಅಥವಾ ಟ್ರೈಲರ್ ವಿಡಿಯೋ ಕೂಡ ಯಶ್ ಅವರ ೇಸ್‌ಬುಕ್ ಅಥವಾ ಟ್ವಿಟರ್ ಖಾತೆಯಲ್ಲಿ ಕಾಣಿಸುತ್ತಿಲ್ಲ. ನಾಯಕಿ ರಾಕಾ ಪಂಡಿತ್ ಅನಾರೋಗ್ಯದ ಕಾರಣಕ್ಕೆ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಹಾಗಾದ್ರೆ ಚಿತ್ರದ ಪ್ರಚಾರದ ವಿಚಾರದಲ್ಲಿ ಆಗಿದ್ದೇನು? ನಾಯಕ, ನಾಯಕಿ ಇಬ್ಬರೂ ಪ್ರಚಾರದ ಚಟುವಟಿಕೆಗಳಿಂದ ದೂರ ಉಳಿದಿದ್ದೇಕೆ? ಇದು ನಿರ್ಮಾಪಕರ ಜತೆಗಿನ ವೈಮನಸ್ಸಾ? ಹೀಗೆ ಹುಟ್ಟುವ ಪ್ರಶ್ನೆಗಳಿಗೆ ನಟ ಯಶ್ ತಮ್ಮ ಆಪ್ತರ ಬಳಿ ಹೇಳಿಕೊಂಡ ಮಾತುಗಳು ಬಹಿರಂಗವಾಗಿವೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ತಮ್ಮ ಸುತ್ತ ಹುಟ್ಟಿಕೊಂಡ ವಿವಾದವೇ ಈ ವೌನಕ್ಕೆ ಕಾರಣವಂತೆ. ಜನರ ನಡುವೆ ತಮ್ಮನ್ನೇ ತಾವು ಪರೀಕ್ಷೆಗೆ ಒಡ್ಡಿಕೊಳ್ಳಲು ಯಶ್ ನಿರ್ಧರಿಸಿದ್ದಾರಂತೆ. ಚಿತ್ರ ಬಿಡುಗಡೆಯ ನಂತರವೇ ಈ ಆರೋಪ ಮತ್ತು ಚಿತ್ರದ ಬಗ್ಗೆ ಮಾತನಾಡಲಿದ್ದಾರಂತೆ.

ಏನಿದು ವಿವಾದ?

ಕಾವೇರಿ ವಿಚಾರದಲ್ಲಿ ತಮಿಳುನಾಡು ವಿರುದ್ಧ ಚಿತ್ರೋದ್ಯಮ ಪ್ರತಿಭಟನೆ ನಡೆಸಿದ್ದ ವೇಳೆ, ಯಶ್ ಹಾಗೂ ರಾಕಾ ಕರ್ನಾಟಕದಲ್ಲಿರಲಿಲ್ಲ. ‘ಅಕ್ಕ’ ಸಮ್ಮೇಳನಕ್ಕೆ ಹೋದವರು, ಅಮೆರಿಕದಲ್ಲಿದ್ದರು. ಅವರ ಅನುಪಸ್ಥಿತಿ ಇಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೆಲವು ಮಾಧ್ಯಮಗಳು ಅವರ ರೈತಪರ ಕಾಳಜಿಯನ್ನು ಕೆಣಕಿದ್ದವು. ಇದು ಯಶ್ ಅವರ ಮುನಿಸಿಗೆ ಕಾರಣವಾಯಿತು. ಅಮೆರಿಕದಿಂದ ಬಂದ ನಂತರ, ಮಾಧ್ಯಮದ ತಕರಾರುಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಯಶ್ ಹೀಗೆ ಪ್ರತಿಕ್ರಿಯಿಸಿದ್ದರು; ‘ನನ್ನ ರೈತಪರ ಕಾಳಜಿ ಪ್ರಶ್ನಿಸುವವರು, ತಾವೆಷ್ಟು ರೈತರ ಪರವಾಗಿದ್ದೇವೆ ಎಂಬುದನ್ನು ಸಾಬೀತು ಮಾಡಬೇಕು. ಪ್ರೈಮ್‌ಟೈಮ್‌ನಲ್ಲಿ ರೈತರ ಪರ ಸಂವಾದ ಏರ್ಪಡಿಸಿದರೆ ಬಹಿರಂಗ ಚರ್ಚೆಗೆ ನಾನು ಸಿದ್ಧ’ ಎನ್ನುವ ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು. ಮತ್ತೆ ಇದು ಮಾತಿನ ಸಮರಕ್ಕೂ ಕಾರಣವಾಯಿತು. ಯಶ್ ಇದು ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಪ್ರಚಾರಕ್ಕಾಗಿ ನಡೆಸುತ್ತಿರುವ ತಂತ್ರ ಅಂತಲೂ ಟೀಕೆಗೆ ಗುರಿಯಾಯಿತು.

ಈ ಟೀಕೆಯನ್ನೇ ಯಶ್ ಈಗ ಸೀರಿಯಸ್ಸಾಗಿ ತೆಗೆದ್ಕೊಂಡಿದ್ದಾರಂತೆ. ಚಿತ್ರದ ಪ್ರಚಾರಕ್ಕೆ ಈ ಕಾರಣಕ್ಕಾಗಿಯೇ ಹೊರಗೆಬರುತ್ತಿಲ್ಲ ಎನ್ನಲಾಗುತ್ತಿದೆ. ‘ಇದು ನನ್ನನ್ನು ನಾನು ಪರೀಕ್ಷಿಸಿಕೊಳ್ಳುವ ಕಾಲ. ಜನರ ಮಧ್ಯೆ ನಾನು ಎಷ್ಟರ ಮಟ್ಟಿಗೆ ಇದ್ದೇನೆ ಎನ್ನುವುದು ಗೊತ್ತಾಗಬೇಕಿದೆ. ನಿಜವಾಗಿಯೂ ರೈತರ ಪರವಾಗಿ ಮಾತನಾಡಿದ್ದನ್ನು ಅಪಪ್ರಚಾರ ಮಾಡಲಾಗಿದೆ. ಅದರ ಸತ್ತ್ವ ಪರೀಕ್ಷೆಯ ದೃಷ್ಟಿಯಿಂದಲೇ ಬಿಡುಗಡೆ ಪೂರ್ವ ಪ್ರಚಾರದಿಂದ ದೂರ ಉಳಿದಿದ್ದೇನೆ’ ಎಂದು ಯಶ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಹಾಗಾದ್ರೆ, ಯಶ್ ಸಿನಿಮಾ ಬಗ್ಗೆ ಮಾತನಾಡೋದು ಯಾವಾಗ? ಅ.28ರ ನಂತರ ಎಲ್ಲ ಗೊತ್ತಾಗುತ್ತೆ!

---

ಮಾಧ್ಯಮಗಳ ಮೇಲೆ ನನಗೆ ಅಪಾರ ಗೌರವವಿದೆ. ನನ್ನ 10 ವರ್ಷಗಳ ಈ ಪಯಣದಲ್ಲಿ ಅವರ ಸಹಕಾರ ಮರೆಯಲು ಸಾಧ್ಯವಿಲ್ಲ. ಆದರೆ, ಕೆಲವರ ಹೇಳಿಕೆಗಳು ನೋವುಂಟುಮಾಡಿವೆ. ನಿಜವಾಗಿಯೂ ಜನರು ನನನ್ನು ಪ್ರೀತಿಸುತ್ತಾರೋ, ಇಲ್ಲವೋ ಎನ್ನುವುದು ಗೊತ್ತಾಗಬೇಕಿದೆ. ಅದಕ್ಕಾಗಿಯೇ ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು ಮುಂದಾಗಿದ್ದೇನೆ. ಅ.28ರ ನಂತರವೇ ನಾನು ಮಾತನಾಡುವೆ.

- ಯಶ್, ಚಿತ್ರನಟ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವರ್ಷಾಂತ್ಯದಲ್ಲಿ ಸೆನ್ಸಾರ್‌ ಬೋರ್ಡ್‌ಗೆ ತಲೆನೋವು! ಒತ್ತಡ, ಧಮಕಿ, ಭಾವನಾತ್ಮಕ ಗುಂಗು ಹೆಚ್ಚಳ
ಪ್ರೀತಿಯ ಮತ್ತಲ್ಲಿ ತೇಲುವಂತೆ ಮಾಡಿದ 2025ರ Romantic Kannada Songs