
ಇದೊಂದು ವಿಚಿತ್ರ ಕತೆ. ಇದು ಬಾಲಿವುಡ್‌ನ ಮೊದಲ ಲೇಡಿ ಸೂಪರ್‌ಸ್ಟಾರ್ ಎನಿಸಿಕೊಂಡ ಶ್ರೀದೇವಿ ಹಾಗೂ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ನಡುವಿನ ಪ್ರಣಯ ಕಥೆ. ಅವರಿಬ್ಬರೂ ಹೇಳಿಕೊಂಡಿದ್ದಲ್ಲ, ಇನ್ಯಾರದೋ ಬಾಯಿಯಿಂದ ಕೇಳಿದ್ದು. ಇನ್ಯಾರೋ ಎಂದರೆ ಅವರಿಬ್ಬರನ್ನು ಚೆನ್ನಾಗಿ ಬಲ್ಲ, ಇಬ್ಬರನ್ನೂ ಮೊದಲ ಬಾರಿಗೆ ಒಟ್ಟಿಗೇ ತೆರೆಯ ಮೇಲೆ ಚಿತ್ರದಲ್ಲಿ ತಂದ ಲೆಜೆಂಡರಿ ಡೈರೆಕ್ಟರ್ ಕೆ. ಬಾಲಚಂದರ್ ಹೇಳಿದ್ದು. ಹೀಗಾಗಿ ನಾವದನ್ನು ನಂಬಲೇಬೇಕು.
ಅವರ ಪ್ರಕಾರ ರಜನಿಕಾಂತ್, ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ, ಆರಾಧಿಸುತ್ತಿದ್ದ. ಆಕೆಗೆ ಪ್ರಪೋಸ್ ಮಾಡಲು ಅವಳ ಮನೆಗೂ ಭೇಟಿ ನೀಡಿದ್ದ. ಆದರೆ ಒಂದೇ ಒಂದು ಅಪಶಕುನದಿಂದಾಗಿ ಅದನ್ನು ಮಾಡಲಾಗಲಿಲ್ಲ.
ಶ್ರೀದೇವಿಯನ್ನು ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದು ಹೇಳಲಾಗುತ್ತೆ. ಚಿಕ್ಕ ವಯಸ್ಸಿನಲ್ಲೇ ಸಿನಿಮಾ ಉದ್ಯಮದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದಳು ಆಕೆ. ತನ್ನ ಅಪ್ರತಿಮ ಸೌಂದರ್ಯ, ಸ್ಮರಣೀಯ ಡ್ಯಾನ್ಸ್ ಪ್ರತಿಭೆ, ಕಾಲಾತೀತ ಹಾಡುಗಳಿಂದ ಪ್ರೇಕ್ಷಕರನ್ನು ಮೋಡಿ ಮಾಡಿದಳು. ಲಕ್ಷಾಂತರ ಜನರ ಹೃದಯಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಿದಳು. ಪೀಳಿಗೆಗಳನ್ನೂ ಮೀರಿ ಪ್ರಭಾವಿಸಿದಳು. ಹೆಚ್ಚು ಕಡಿಮೆ ಆ ಕಾಲದ ಎಲ್ಲಾ ನಟರೊಂದಿಗೆ ಜೋಡಿಯಾದಳು.
ಅವರಲ್ಲಿ ರಜನಿಕಾಂತ್ ಜೊತೆಗೆ ಶ್ರೀದೇವಿಯ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಅದ್ಭುತವಾಗಿತ್ತು. ಈ ಜೋಡಿ ವಿವಿಧ ಭಾಷೆಗಳಲ್ಲಿ 17 ಹೆಚ್ಚು ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿತು. ಭಾರತೀಯ ಚಿತ್ರರಂಗದ ಅತ್ಯಂತ ಜನಮೆಚ್ಚಿನ ಜೋಡಿಗಳಲ್ಲಿ ಒಂದು ಎನಿಸಿತು. ಶ್ರೀದೇವಿ ಮತ್ತು ರಜನಿಕಾಂತ್ ಮೊದಲ ಬಾರಿಗೆ 1976 ರಲ್ಲಿ ಕೆ. ಬಾಲಚಂದರ್ ನಿರ್ದೇಶಿಸಿದ ತಮಿಳು ಚಿತ್ರ ʼಮೂಂಡ್ರು ಮುಡಿಚುʼಗೆ ಒಟ್ಟಿಗೆ ಕೆಲಸ ಮಾಡಿದರು. ಆಗ ಶ್ರೀದೇವಿಗೆ ಕೇವಲ 13 ವರ್ಷ ವಯಸ್ಸು. ಆದರೆ ಆಕೆ ಆ ಚಿತ್ರದಲ್ಲಿ ರಜನಿಕಾಂತ್ ಅವರ ಮಲತಾಯಿಯ ಪಾತ್ರವನ್ನು ನಿರ್ವಹಿಸಿದರು! ಮೊದಲ ಚಿತ್ರದಲ್ಲಿ ಅದೊಂದು ವಿಲಕ್ಷಣ, ವಿಚಿತ್ರ ಪಾಲುದಾರಿಕೆ. ಇದರ ಹೊರತಾಗಿಯೂ ಅವರ ಕೆಮಿಸ್ಟ್ರಿ ಎದ್ದು ಕಂಡಿತು. ಅನೇಕ ಚಿತ್ರಗಳಲ್ಲಿ ಮುಂದುವರಿಯಿತು.
ಮುಂದಿನ ವರ್ಷಗಳಲ್ಲಿ ಅವರ ವೃತ್ತಿಪರ ಸಂಬಂಧವು ಹೆಚ್ಚು ವೈಯಕ್ತಿಕವಾಯಿತು. ತೆರೆಯಾಚೆಗೂ ಅವರು ಗಾಢವಾದ ಸಂಬಂಧವನ್ನು ಹಂಚಿಕೊಂಡಿದ್ದಾರೆ ಎಂದು ವರದಿಗಳು ಹೇಳಿದವು. ರಜನಿಕಾಂತ್ ಶ್ರೀದೇವಿಯ ಬಗ್ಗೆ ಹೆಚ್ಚು ಹೆಚ್ಚು ಪೊಸೆಸಿವ್ ಆದರು. ಅವರು ಶ್ರೀದೇವಿಯ ಕುಟುಂಬಕ್ಕೆ, ವಿಶೇಷವಾಗಿ ಅವರ ತಾಯಿಗೆ ಹತ್ತಿರವಾದರು. ಸಮಯ ಕಳೆದಂತೆ, ರಜನಿಕಾಂತ್ ಅವರ ಶ್ರೀದೇವಿಯ ಮೇಲಿನ ಭಾವನೆಗಳು ತೀವ್ರಗೊಂಡವು. ವರದಿಗಳ ಪ್ರಕಾರ, ಅವರು ಶ್ರೀದೇವಿಯನ್ನು ಮದುವೆಯಾಗಲು ಬಯಸುವುದಾಗಿ ತಮ್ಮ ಕುಟುಂಬದಲ್ಲಿ ಹೇಳಿದ್ದರು.
ಆದರೆ ಏಕೆ ರಜನಿಕಾಂತ್ ಶ್ರೀದೇವಿಯೊಂದಿಗೆ ಮದುವೆಗೆ ಪ್ರಸ್ತಾಪಿಸಲಿಲ್ಲ? ಒಮ್ಮೆ ಸಂದರ್ಶನವೊಂದರಲ್ಲಿ ಕೆ. ಬಾಲಚಂದರ್ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ರಜನಿಕಾಂತ್ ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ಪ್ರೇಮ ನಿವೇದನೆ ಮಾಡಲು ಶ್ರೀದೇವಿಯ ಮನೆಗೂ ಹೋಗಿದ್ದರು. ಆಗ ಶ್ರೀದೇವಿ ರಜನಿಗಿಂತ 13 ವರ್ಷ ಚಿಕ್ಕವಳು. ರಜನಿ ಶ್ರೀದೇವಿಯ ಮನೆಗೆ ಭೇಟಿ ನೀಡಿದಾಗ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಂಡು ಇಡೀ ಮನೆ ಕತ್ತಲೆಯಲ್ಲಿ ಮುಳುಗಿತು. ಈ ಅನಿರೀಕ್ಷಿತ ಘಟನೆಯಿಂದ ರಜನಿ ತಬ್ಬಿಬ್ಬಾದರು. ರಜನಿ ಯಾವಾಗಲೂ ಶಕುನಗಳಲ್ಲಿ, ಆಧ್ಯಾತ್ಮಿಕತೆ- ಧಾರ್ಮಿಕತೆಯಲ್ಲಿ ನಂಬಿಕೆಯಿಟ್ಟವರು. ಅವರು ವಿದ್ಯುತ್ ಕಡಿತವನ್ನು ಕೆಟ್ಟ ಸಂಕೇತವೆಂದು ಪರಿಗಣಿಸಿದರು. ಈ ಘಟನೆ ರಜನಿಕಾಂತ್ ಅವರ ಮನಸ್ಸನ್ನು ಬದಲಾಯಿಸಿತು. ಭಾವನೆಗಳ ಬದಲು ನಂಬಿಕೆಯ ದಾರಿಯಲ್ಲಿ ಅವರು ಹೋದರು. ಶ್ರೀದೇವಿಗೆ ಪ್ರಪೋಸ್ ಮಾಡದೇ, ಏನನ್ನೂ ಹೇಳದೆ ಹೊರಟುಬಂದರು!
ರಜನಿಕಾಂತ್ ಎಂದಿಗೂ ತಮ್ಮ ಭಾವನೆಗಳನ್ನು ಅವರಿಗೆ ಹೇಳಿಕೊಳ್ಳದಿದ್ದರೂ, ಅವರು ಮತ್ತು ಶ್ರೀದೇವಿ ಸುದೀರ್ಘಕಾಲ ಸ್ನೇಹಿತರಾಗಿದ್ದರು. 2018ರಲ್ಲಿ ಶ್ರೀದೇವಿ ಅವರ ಹಠಾತ್ ನಿಧನದವರೆಗೂ ಅವರ ಬಾಂಧವ್ಯ ಬಲವಾಗಿತ್ತು. ಶ್ರೀದೇವಿ 1996 ರಲ್ಲಿ ನಿರ್ಮಾಪಕ-ನಿರ್ದೇಶಕ ಬೋನಿ ಕಪೂರ್ ಅವರನ್ನು ವಿವಾಹವಾದರು, ಮತ್ತೊಂದೆಡೆ, ರಜನಿಕಾಂತ್ ತಮ್ಮ ಜೀವನದಲ್ಲಿ ಮುಂದುವರೆದು 1981 ರಲ್ಲಿ ಲತಾ ಅವರನ್ನು ವಿವಾಹವಾದರು. ರಜನಿಕಾಂತ್ ಶ್ರೀದೇವಿ- ತಮ್ಮ ಬಗ್ಗೆ ಎಂದಿಗೂ ಸಾರ್ವಜನಿಕವಾಗಿ ಮಾತನಾಡಲಿಲ್ಲ. ಆದರೆ ಅವರ ಆಪ್ತರಿಗೆ ಶ್ರೀದೇವಿಯನ್ನು ಅವರು ತುಂಬಾ ಹಚ್ಚಿಕೊಂಡಿದ್ದರು ಎಂದು ತಿಳಿದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.