ಧೋನಿ ಕಾಲಿಗೆರಗಿದ ಮಗು ಮನಸ್ಸಿನ, ನಿನ್ನಿಂದಲೇ ಸಿನಿಮಾ ಗಾಯಕ ಅರಿಜಿತ್ ಸಿಂಗ್‌ ಗುಡ್‌ ಬೈ ಹೇಳಿದ್ದೇಕೆ?

Kannadaprabha News   | Kannada Prabha
Published : Jan 30, 2026, 10:48 AM IST
Arijit Singh

ಸಾರಾಂಶ

ಬಾಲಿವುಡ್‌ನ ಖ್ಯಾತ ಗಾಯಕ ಅರಿಜಿತ್ ಸಿಂಗ್ ತಮ್ಮ ಗಾಯನ ಕ್ಷೇತ್ರಕ್ಕೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. 'ಆಶಿಕಿ 2' ಚಿತ್ರದ 'ತುಮ್ ಹಿ ಹೋ' ಹಾಡಿನ ಮೂಲಕ ಜಗದ್ವಿಖ್ಯಾತರಾದ ಅವರು, ಬೋರ್ ಆಗಿದೆ ಎಂಬ ಕಾರಣ ನೀಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.  

-ಪ್ರಿಯಾ ಕೆರ್ವಾಶೆ, ಕನ್ನಡಪ್ರಭ

ರೆಕಾರ್ಡಿಂಗ್‌ ಮುಗಿಸಿ ಬೈ ಹೇಳಿ ಹೊರಟಷ್ಟೇ ಸಲೀಸಾಗಿ ಅರಿಜಿತ್‌ ಸಿಂಗ್‌ ಗಾಯನ ಕ್ಷೇತ್ರಕ್ಕೆ ಗುಡ್‌ ಬೈ ಹೇಳಿದ್ದಾರೆ. ಮೂರು ದಿನ ಕೆಳಗೆ ‘ಐ ಯ್ಯಾಮ್‌ ಕಾಲಿಂಗ್ ಇಟ್‌ ಆಫ್‌, ಇಟ್‌ ವಾಸ್‌ ಎ ವಂಡರ್‌ಫುಲ್‌ ಜರ್ನಿ’ ಎಂದಾಗ ಇವರೆಲ್ಲೋ ಜೋಕ್‌ ಮಾಡ್ತಿದ್ದಾರೆ ಅಂತ ಭಾವಿಸಿದವರೇ ಬಹಳ ಮಂದಿ. ಆದರೆ ತಾನು ಜೋಕ್‌ ಮಾಡ್ತಿಲ್ಲ, ಯಾಕೋ ಬೋರ್‌ ಆಯ್ತು, ನಿವೃತ್ತಿ ತಗೊಳ್ತಿದ್ದೀನಿ ಅಂತ ಅರಿಜಿತ್‌ ಸ್ಪಷ್ಟವಾಗಿ ಹೇಳಿದಾಗ ಹಲವರಿಗೆ ದಿಗ್ಭ್ರಮೆ. ನಿಧಾನಕ್ಕೆ ಅವರ ಈ ನಿರ್ಧಾರಕ್ಕೆ ನಿಜ ಕಾರಣ ಏನಿರಬಹುದು ಅಂತ ಶೋಧಿಸುವ ಕೆಲಸವೂ ಸೋಷಲ್‌ ಮೀಡಿಯಾಗಳಲ್ಲಿ ನಡೆಯತೊಡಗಿತು.

ಎರಡೆರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದು, ಬಾಲಿವುಡ್‌ನ ಅತೀ ಹೆಚ್ಚು ಸಂಭಾವನೆ ಪಡೆಯುವ ಹಾಡುಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು ಅರಿಜಿತ್‌ ಸಿಂಗ್. ಅವರು ತೀರಾ ಇತ್ತೀಚೆಗೆ ಶ್ರೇಯಾ ಘೋಷಾಲ್‌ ಜೊತೆಗೆ ಹಾಡಿರುವ ಸಲ್ಮಾನ್‌ ಖಾನ್‌ ನಟನೆಯ ‘ಬ್ಯಾಟಲ್‌ ಆಫ್‌ ಗಲ್ವಾನ್‌’ ಸಿನಿಮಾದ ಹಾಡು ಗಣರಾಜ್ಯೋತ್ಸವದಂದು ಬಿಡುಗಡೆಯಾಗಿತ್ತು. ಕೊಂಚ ನಾಸಿಕದ ಸ್ವರ ಬೆರೆಸಿ ತನ್ನ ಅನನ್ಯ ಧ್ವನಿ ಮೂಡಿಸಿಕೊಂಡ ಈ ಛಲಗಾರ ಗಾಯಕ ಏಕಾಏಕಿ ನಿವೃತ್ತಿಯ ನಿರ್ಧಾರಕ್ಕೆ ಯಾಕೆ ಬಂದರು ಅನ್ನುವುದೇ ಸದ್ಯದ ಮಿಲಿಯನ್‌ ಡಾಲರ್‌ ಪ್ರಶ್ನೆ.

ಕೇವಲ 38ಕ್ಕೆ ಹಾಡು ನಿಲ್ಲಿಸಿದ ಗಾನ ಕೋಗಿಲೆ

ಅರಿಜಿತ್‌ ವೃತ್ತಿ ಬದುಕಿನ ಗ್ರಾಫ್‌ ನೋಡಿದರೆ ಅವರ ಜಾಗದಲ್ಲಿ ಯಾರಿದ್ದರೂ 38ಕ್ಕೆ ನಿವೃತ್ತಿ ಘೋಷಿಸುತ್ತಿರಲಿಲ್ಲ. ತನ್ನ 18ನೇ ವಯಸ್ಸಲ್ಲಿ ರಿಯಾಲಿಟಿ ಶೋ ಒಂದರಲ್ಲಿ ಹಾಡುತ್ತ ವೃತ್ತಿ ಬದುಕು ಆರಂಭಿಸಿದ ಪಶ್ಚಿಮ ಬಂಗಾಲ ಮೂಲದ ಈ ಪಂಜಾಬಿ ಗಾಯಕನಿಗೆ ಆರಂಭದ ದಿನಗಳು ಬಹಳ ಚಾಲೆಂಜಿಂಗ್‌ ಆಗಿದ್ದವು. ರಿಯಾಲಿಟಿ ಶೋಗಳ ಬಳಿಕ ಸಂಜಯ್‌ಲೀಲಾ ಬನ್ಸಾಲಿ ಅವರ ‘ಸಾವರಿಯಾ’ ಸಿನಿಮಾದಲ್ಲಿ ಅವಕಾಶ ಸಿಕ್ಕರೂ ಕೊನೇ ಕ್ಷಣದಲ್ಲಿ ಆ ಹಾಡೇ ಸಿನಿಮಾದಿಂದ ಹೊರಬಿತ್ತು. ಮುಂದೆ ಜಾಹೀರಾತು, ಟಿವಿ, ರೇಡಿಯೋ ಇತ್ಯಾದಿಗಳಲ್ಲೆಲ್ಲ ಸಂಗೀತ ನಿರ್ದೇಶನ, ಗಾಯನ ಮಾಡುತ್ತ ಗುರುತಿಸಿಕೊಳ್ಳಲು ಹರಸಾಹಸ ಮಾಡತೊಡಗಿದರು. ಒಂದಿಷ್ಟು ಸಿನಿಮಾಗಳಲ್ಲೂ ಹಾಡತೊಡಗಿದರು.

ಅರಿಜಿತ್‌ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮೋಹಿತ್‌ ಸೂರಿಗೆ ಸಲ್ಲುತ್ತದೆ

ಹೌದು, ಅರಿಜಿತ್‌ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ‘ಆಶಿಕಿ 2’, ‘ಸಯ್ಯಾರ’ದಂಥ ಸಿನಿಮಾ ಮಾಡಿದ ನಿರ್ದೇಶಕ ಮೋಹಿತ್‌ ಸೂರಿ ಅವರಿಗೆ ಸಲ್ಲುತ್ತದೆ. ‘ಆಶಿಕಿ 2’ನಲ್ಲಿ ‘ತುಮ್‌ ಹಿ ಹೋ’ ಎಂಬ ಮಾರ್ದವ ಕಂಠದ ಅರಿಜಿತ್‌ ಗಾಯನ ರಾತ್ರಿ ಕಳೆಯುವುದರೊಳಗೆ ಇವರ ದೆಸೆ ತಿರುಗಿಸಿತ್ತು. ಅವರ ಹಾಡಿನ ಮಾಧುರ್ಯಕ್ಕೆ ಮನಸೋತವರೆಷ್ಟೋ. ಅಂದು ಆ ಸಿರಿಕಂಠಕ್ಕೆ ಮರುಳಾದವರು ಇಂದಿಗೂ ಅವರ ಹಾಡಿನ ಗುಂಗಿನಿಂದ ಹೊರಬಂದಿಲ್ಲ.

ಹೀಗೆ ಮೋಡಿ ಮಾಡಿದ ಅರಿಜಿತ್‌ ಈವರೆಗೆ 800ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅಂದರೆ ವರ್ಷಕ್ಕೆ ಸರಾಸರಿ 53 ಹಾಡುಗಳಿಗೆ ಜೀವ ತುಂಬಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ‘ನಿನ್ನಿಂದಲೇ’ ಸಿನಿಮಾದ ‘ಮೌನ ತಾಳಿತೇ’ ಎಂಬ ಗೀತೆ ಸೇರಿದಂತೆ ಒಂದಿಷ್ಟು ಕನ್ನಡ ಸಿನಿಮಾಗಳಿಗೂ ಹಾಡಿದ್ದಾರೆ.

ಧೋನಿ ಕಾಲಿಗೆರಗಿದ್ದ ಮಗು ಮನಸ್ಸಿನ ಗಾಯಕ

ಇಷ್ಟೆಲ್ಲ ಮಾಡಿದ ಅರಿಜಿತ್‌ ವ್ಯಕ್ತಿತ್ವದಲ್ಲಿ ಎದ್ದು ಕಾಣುತ್ತಿದ್ದದ್ದು ವಿನಯ. ಮೂರು ವರ್ಷದ ಕೆಳಗಿನ ಘಟನೆ ನೆನಪಿಸಿಕೊಳ್ಳಿ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ನ ಓಪನಿಂಗ್‌ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಧೋನಿ ಸ್ಟೇಜ್‌ ಮೇಲೆ ಬಂದಿದ್ದೇ ಅರಿಜಿತ್‌ ಅವರ ಪಾದಗಳಿಗೆ ಎರಗಿಬಿಟ್ಟರು. ಕಕ್ಕಾಬಿಕ್ಕಿಯಾದ ಧೋನಿ ಗಾಯಕನನ್ನು ಮೇಲಕ್ಕೆತ್ತಿ ತಬ್ಬಿಕೊಂಡರು. ಇದು ಭಾರೀ ವೈರಲ್‌ ಆಯ್ತು. ಸರಸ್ವತೀ ಪುತ್ರನಂಥಾ ಜಗತ್ಪ್ರಸಿದ್ಧ ಗಾಯಕ, ಆಟಗಾರನ ಕಾಲಿಗೆ ಎರಗಬೇಕೇ ಎಂದೆಲ್ಲ ಚರ್ಚೆಯಾಯ್ತು. ಆದರೆ ಕೊನೆಗೂ ಗೆದ್ದದ್ದು ಅರಿಜಿತ್‌ ಅವರ ಮಗು ಮನಸ್ಸು.

ಪ್ರಬುದ್ಧ ಗಾಯಕನೊಳಗಿನ ಮಗು ಮನಸ್ಸೇ ಅವರನ್ನೀಗ ಜನಪ್ರಿಯತೆಯ ಬಲೆಯಿಂದ ಪಾರುಮಾಡಿ ಹೊಸ ಆರಂಭದತ್ತ ಕರೆದೊಯ್ಯುತ್ತಿದೆ ಎಂಬುದು ಅವರ ಆಪ್ತರ ಮಾತು. ಈ ಕಾರಣಕ್ಕೇ ಅವರನ್ನು ಬಲ್ಲ ಅವರ ಒಡನಾಡಿಗಳಿಗೆ ಈ ನಿರ್ಧಾರ ಅಂಥಾ ಶಾಕಿಂಗ್‌ ಏನೂ ಆಗಿಲ್ಲ.

ಜೊತೆಗೆ ಕೇವಲ 15 ವರ್ಷಗಳಲ್ಲಿ ಹಲವು ಜನ್ಮಕ್ಕಾಗುವಷ್ಟು ಹಾಡಿದ್ದು, ಮ್ಯೂಸಿಕ್‌ ಜಗತ್ತಿನ ಹಲವು ಮಗ್ಗಲುಗಳಲ್ಲಿ ಕೆಲಸ ಮಾಡಿದ್ದು ಗಾಯಕನನ್ನು ದಣಿಸಿರಬಹುದು. ಸಿನಿಮಾದಲ್ಲಿ ಹಾಡುವಾಗ ಗಾಯಕನಿಗೆ ಸ್ವಾತಂತ್ರ್ಯ ಇರೋದಿಲ್ಲ. ಆತ ನಿರ್ದೇಶಕರ, ನಿರ್ಮಾಪಕರ, ಸಂಗೀತ ನಿರ್ದೇಶಕರ ಕೈಗೊಂಬೆಯಾಗಬೇಕಿರುತ್ತದೆ. ಇದರಿಂದ ತನ್ನ ದನಿಯನ್ನೇ ಮರೆಯುವ ಅಪಾಯವಿದೆ. ಈ ಕಾರಣ ಅರಿಜಿತ್‌ ಇಂಥಾ ನಿರ್ಧಾರ ಕೈಗೊಂಡಿರಬಹುದು.

ಹೀಗೆ ಕಾರಣಗಳೇನೇ ಇರಬಹುದು, ಆದರೆ ಅರಿಜಿತ್ ಧ್ವನಿ ಇಲ್ಲದೇ ದಿನ ಕಳೆಯುವುದನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಕಷ್ಟ. ಅವರ ಈ ಕಷ್ಟಕ್ಕೆ ಅರಿಜಿತ್‌ ಸರಿಯಾದ ಬಗೆಯಲ್ಲಿ ಸ್ಪಂದಿಸಬಲ್ಲರು ಎಂಬ ಭರವಸೆಯಲ್ಲಿ ಅವರು ಅರಿಜಿತ್‌ ಹೊಸ ಸಾಹಸವನ್ನು ಎದುರು ನೋಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈರಲ್‌ ಬೈಗುಳದ ರಹಸ್ಯ ತಿಳಿಸಿದ ಸುದೀಪ್‌, 'ಜೋಗಿ ಪ್ರೇಮ್‌ನಿಂದಲೇ ಕಲಿತಿದ್ದು' ಎಂದ ಕಿಚ್ಚ!
ಅಕ್ಷಯ್ ಕುಮಾರ್ ಹೆಂಡ್ತಿ ಟ್ವಿಂಕಲ್ ಖನ್ನಾ ಹೀಗ್ ಮಾಡಿದ್ಯಾಕೆ? 'ಮಗನಿಗೆ ಒಂದು ರೀತಿ, ಮಗಳಿಗೆ ಇನ್ನೊಂದು ರೀತಿ; ಶಾಕಿಂಗ್!