‘ನಿನ್ನನ್ನು ನಾಶಮಾಡ್ತೀನಿ!’ ಅಂತ Mahesh Bhattಗೆ ಬೆದರಿಕೆ ಹಾಕಿದ್ದ ಓಶೋ ರಜನೀಶ್!

Published : Feb 03, 2026, 10:01 AM IST
osho rajneesh

ಸಾರಾಂಶ

ವಿವಾದಿತ ಗುರು ಓಶೋ ರಜನೀಶ್, ನಿರ್ದೇಶಕ ಮಹೇಶ್ ಭಟ್‌ಗೆ 'ನಿನ್ನನ್ನು ನಾಶ ಮಾಡುವೆ' ಎಂದು ನಟ ವಿನೋದ್ ಖನ್ನಾ ಮೂಲಕ ಬೆದರಿಕೆ ಹಾಕಿದ್ದರಂತೆ. ಅದ್ಯಾಕೆ ಹಾಗೆ ಮಾಡಿದರು ಓಶೋ? ಮಹೇಶ್‌ ಭಟ್‌ರ ಯಾವ ಕೃತ್ಯ ಅವರಿಗೆ ಕೋಪ ತರಿಸಿತ್ತು? ಇಲ್ಲಿದೆ ಓದಿ.  

ವಿವಾದಿತ ದೇವಮಾನವ ಓಶೋ ರಜನೀಶ್ ಒಮ್ಮೆ ಬಾಲಿವುಡ್‌ ನಿರ್ದೇಶಕ ಮಹೇಶ್ ಭಟ್‌ಗೆ ನಟ ವಿನೋದ್‌ ಖನ್ನಾ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದರಂತೆ. ಇದೊಂದು ವಿಶಿಷ್ಟ, ವಿಚಿತ್ರ ಕತೆ.

ಬಾಲಿವುಡ್ ಇತಿಹಾಸದಲ್ಲಿ ಆಧ್ಯಾತ್ಮಿಕ ಅನ್ವೇಷಣೆ ಮತ್ತು ವಿವಾದಗಳು ಒಂದಾಗಿ ಬೆರೆತ ಅಧ್ಯಾಯವೇ ಓಶೋ ರಜನೀಶ್–ವಿನೋದ್ ಖನ್ನಾ–ಮಹೇಶ್ ಭಟ್ ನಡುವಿನ ಸಂಬಂಧ. 1980ರ ದಶಕದಲ್ಲಿ ತಮ್ಮ ವೃತ್ತಿಜೀವನದ ಶಿಖರದಲ್ಲಿದ್ದ ನಟ ವಿನೋದ್ ಖನ್ನಾ ಚಿತ್ರರಂಗವನ್ನು ತೊರೆದು ಓಶೋ ರಜನೀಶ್ ಶಿಷ್ಯರಾಗಿದ್ದ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಆಧ್ಯಾತ್ಮಿಕ ಪಯಣದ ಹಿಂದೆ ಇರುವ ತೀವ್ರ ಸಂಘರ್ಷ, ಬೆದರಿಕೆ ಮತ್ತು ಮುರಿದುಬಿದ್ದ ಸ್ನೇಹದ ಕಥೆ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.

ವಿನೋದ್ ಖನ್ನಾಗಿಂತ ಮೊದಲು ಓಶೋ ರಜನೀಶ್ ಪ್ರಭಾವಕ್ಕೆ ಒಳಗಾಗಿದ್ದ ಬಾಲಿವುಡ್ ಸೆಲೆಬ್ರಿಟಿ ಎಂದರೆ ಖ್ಯಾತ ನಿರ್ದೇಶಕ ಮಹೇಶ್ ಭಟ್. ಅಷ್ಟೇ ಅಲ್ಲ, ಓಶೋಗೆ ವಿನೋದ್ ಖನ್ನಾರನ್ನು ಪರಿಚಯಿಸಿದವರೂ ಮಹೇಶ್ ಭಟ್‌ರೇ. ಅರ್ಬಾಜ್ ಖಾನ್ ಅವರ ಚಾಟ್ ಶೋದಲ್ಲಿ ಮಾತನಾಡುವಾಗ ಮಹೇಶ್ ಭಟ್, ತಮ್ಮ ಜೀವನದ ಆ ಹಂತವನ್ನು ವಿವರಿಸಿದ್ದರು.

“ಆಗ ನನ್ನ ಚಿತ್ರಗಳು ಫ್ಲಾಪ್ ಆಗುತ್ತಿದ್ದವು. ನಾನು ಆಂತರಿಕವಾಗಿ ಅಶಾಂತನಾಗಿದ್ದೆ. ಆ ಸಮಯದಲ್ಲಿ ಓಶೋ ರಜನೀಶ್ ಆಕರ್ಷಕ ಗುರುವಾಗಿದ್ದರು. ನಾನು ಅವ ಶಿಷ್ಯಬಳಗದಲ್ಲಿ ಸೇರಿಕೊಂಡೆ. ಕೇಸರಿ ವಸ್ತ್ರ ಧರಿಸಿ ದಿನಕ್ಕೆ ಐದು ಬಾರಿ ಧ್ಯಾನ ಮಾಡುತ್ತಿದೆ. ನಾನು ಸಂಪೂರ್ಣವಾಗಿ ತಲ್ಲೀನನಾಗಿದ್ದೆ. ಆದರೆ ಒಂದು ಹಂತದಲ್ಲಿ ಭ್ರಮನಿರಸನವಾಯಿತು. ನಾನು ಹೊರಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದೆ, ಆದರೆ ಒಳಗೊಳಗೆ ಅಸೂಯೆ ಎಲ್ಲ ಇತ್ತು. ನನಗೆ ನಾನೇ ಕಪಟಿಯಂತೆ ಅನಿಸಿತು. ನಂತರ ನಾನು ಜಪಮಾಲೆಯನ್ನು ತುಂಡು ಮಾಡಿ ಕಮೋಡ್‌ಗೆ ಎಸೆದೆ” ಎಂದು ಭಟ್‌ ಬಹಿರಂಗವಾಗಿ ಹೇಳಿದ್ದರು.

ಕೋಪದಿಂದ ಸಂದೇಶ ಕಳಿಸಿದ ಓಶೋ

ಮಹೇಶ್ ಭಟ್ ಓಶೋರಿಂದ ದೂರ ಸರಿದ ನಿರ್ಧಾರ, ರಜನೀಶ್ ಅವರಿಗೆ ತೀವ್ರ ಅಸಮಾಧಾನ ತಂದಿತ್ತು. ತಮ್ಮ ಕೋಪದ ಸಂದೇಶವನ್ನು ವಿನೋದ್ ಖನ್ನಾ ಅವರ ಮೂಲಕ ಭಟ್‌ಗೆ ತಲುಪಿಸಿದರು. “ಫಿಲ್ಮಿಸ್ತಾನ್‌ನಿಂದ ವಿನೋದ್ ಖನ್ನಾ ಕರೆ ಮಾಡಿ, ‘ಭಗವಾನ್ ತುಂಬಾ ಕೋಪದಲ್ಲಿದ್ದಾರೆ. ನೀನು ಜಪಮಾಲೆಯನ್ನು ಕಮೋಡ್‌ಗೆ ಎಸೆದಿದ್ದೀಯಾ?’ ಎಂದು ಕೇಳಿದರು. ನಾನು ‘ಹೌದು’ ಎಂದೆ. ಆಗ ವಿನೋದ್‌, ‘ಭಗವಾನ್ ಹೇಳಿದ್ದು, ನೀನು ಸ್ವತಃ ಬಂದು ಮಾಲೆಯನ್ನು ಹಿಂತಿರುಗಿಸಬೇಕು. ಇಲ್ಲದಿದ್ದರೆ, ಅವರು ನಿನ್ನನ್ನು ನಾಶ ಮಾಡುತ್ತಾರಂತೆ’ ಎಂದ” ಎನ್ನುತ್ತಾರೆ ಮಹೇಶ್‌ ಭಟ್.

ತಮ್ಮ ಪುಸ್ತಕ The 99 Names of Nothingness ನಲ್ಲಿ ಓಶೋ ರಜನೀಶ್, ಮಹೇಶ್ ಭಟ್ ಅವರು ತಮ್ಮನ್ನು ತ್ಯಜಿಸಿದ್ದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದರು. ʼʼಭಟ್ ತಮ್ಮ ಸಂಗಾತಿಯ ಪ್ರಭಾವಕ್ಕೆ ಒಳಗಾಗಿ ‘ಸನ್ಯಾಸಿ’ಯಾಗಲು ವಿಫಲರಾದರು. ಆತನೊಬ್ಬ ಇಲಿ. ಸಿಂಹವಾಗಿದ್ದವನೊಳಗೆ ಇಲಿ ಹುಟ್ಟಿದೆ. ಯಾವ ಮಹಿಳೆಯೂ ಇಲಿಯನ್ನು ಪ್ರೀತಿಸುವುದಿಲ್ಲ,” ಎಂದು ಬರೆದರು.

ವಿನೋದ್ ಖನ್ನಾಗೂ ಭ್ರಮನಿರಸನ

ಮಹೇಶ್ ಭಟ್ ಓಶೋರಿಂದ ದೂರ ಉಳಿದರೆ, ವಿನೋದ್ ಖನ್ನಾ ಮಾತ್ರ ಸಂಪೂರ್ಣವಾಗಿ ಅವರ ಜೊತೆಗೇ ಉಳಿದರು. ಅಮೆರಿಕದ ಒರೆಗಾನ್‌ನ ಆಶ್ರಮಕ್ಕೆ ತೆರಳಿ, ಐದು ವರ್ಷಗಳ ಕಾಲ ಚಿತ್ರರಂಗದಿಂದ ಸಂಪೂರ್ಣ ವಿರಾಮ ಪಡೆದರು. ಆದರೆ ಒಂದು ಹಂತದಲ್ಲಿ ಓಶೋ ಆಶ್ರಮ ಕುಸಿಯಿತು. ಓಶೋರನ್ನು ಅಮೆರಿಕ ಬಂಧಿಸಿ ಜೈಲಿಗೆ ಹಾಕಿತು. ನಂತರ ಅವರು ಅಲ್ಲಿಂದ ಭಾರತಕ್ಕೆ ಬಂದರು. ನಂತರ ಕೆಲವೇ ವರ್ಷಗಳಲ್ಲಿ ಮೃತರಾದರು.

ಇದಾದ ನಂತರ ಖನ್ನಾ ಮುಂಬೈಗೆ ಮರಳಿದರು. “ಅವರು ಸಂಪೂರ್ಣವಾಗಿ ಹತಾಶರಾಗಿದ್ದರು. ಜಸ್ಲೋಕ್ ಆಸ್ಪತ್ರೆ ಎದುರಿನ ಸಣ್ಣ ಫ್ಲಾಟ್‌ನಲ್ಲಿ ಅವರನ್ನು ನೋಡಿದೆ. ನಾವು ಜೊತೆಯಾಗಿ ಕುಡಿದೆವು. ಆದರೆ ಅವರು ಬಹಳ ಕಡಿಮೆ ಮಾತನಾಡಿದರು. ಹಳೆಯ ಚೈತನ್ಯ ಕಾಣೆಯಾಗಿತ್ತು,” ಎಂದು ಭಟ್ ನೆನಪಿಸಿಕೊಂಡಿದ್ದರು.

ಮರುಪ್ರವೇಶ, ರಾಜಕೀಯ ಮತ್ತು ಅಂತ್ಯ

ಚಿತ್ರರಂಗಕ್ಕೆ ಮರಳಿದ ನಂತರ ವಿನೋದ್ ಖನ್ನಾ ಇನ್ಸಾಫ್, ಸತ್ಯಮೇವ ಜಯತೆ ಸೇರಿದಂತೆ ಕೆಲ ಹಿಟ್ ಚಿತ್ರಗಳಲ್ಲಿ ನಟಿಸಿದರು. ನಂತರ ಚಾಂದನಿ, ದಯಾವಾನ್, ದಬ್ಬಾಂಗ್ ಮುಂತಾದ ಚಿತ್ರಗಳಲ್ಲಿ ಪಾತ್ರ ಮಾಡಿದರು. ಆದರೆ ಮುನ್ನ ಇದ್ದಂತಹ ಸೂಪರ್‌ಸ್ಟಾರ್ ಸ್ಥಾನವನ್ನು ಅವರು ಮತ್ತೆ ಪಡೆಯಲಿಲ್ಲ. ನಂತರ ರಾಜಕೀಯ ಪ್ರವೇಶಿಸಿದ ಖನ್ನಾ ಸಂಸದರಾಗಿಯೂ ಸೇವೆ ಸಲ್ಲಿಸಿದರು. 2003ರಲ್ಲಿ ನಿಧನರಾದರು.

ಈ ಕಥೆ ಕೇವಲ ಸೆಲೆಬ್ರಿಟಿಗಳ ಸಂಘರ್ಷವಲ್ಲ. 80ರ ದಶಕದ ಭಾರತದ ಆಧ್ಯಾತ್ಮಿಕ ಅಲೆ, ಸಿನಿಮಾ ಜಗತ್ತಿನ ಒಳನೋಟ ಮತ್ತು ಮಾನಸಿಕ ಸಂಘರ್ಷಗಳ ಪ್ರತಿಬಿಂಬವೂ ಹೌದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕರ್ಣ ಕೊಟ್ಟ ಟಕ್ಕರ್‌ಗೆ ದುಷ್ಟ ರಮೇಶ್ ವಿಲವಿಲ; ಇತ್ತ ಸೀರಿಯಲ್‌ಗೆ ಹೊಸ ಚೆಲುವೆಯ ಆಗಮನ
BBK 12: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ: 15 ದಿನಗಳ ನಂತ್ರ ರಕ್ಷಿತಾ ಶೆಟ್ಟಿ ಪೋಸ್ಟ್