
ಬೆಂಗಳೂರು (ಜು.14): ಭಾರತೀಯ ಚಿತ್ರರಂಗದಲ್ಲಿ ಅಭಿನಯ ಸರಸ್ವತಿ ಎಂದೇ ಹೆಸರು ಮಾಡಿದ ಹಿರಿಯ ನಟಿ ಬಿ.ಸರೋಜಾ ದೇವಿ ನಿಧನಕ್ಕೆ ನಟ ಜಗ್ಗೇಶ್ ಅವರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಜೊತೆಗೆ, ನಟಿ ಸರೋಜಾ ದೇವಿ ಅವರು ಕನ್ನಡ ಚಿತ್ರರಂಗಕ್ಕಿಂತ ತಮಿಳು ಸಿನಿಮಾದಲ್ಲಿಯೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಈಗಲೂ ತಮಿಳುನಾಡಿನಲ್ಲಿ ಯಾರಾದರೂ ಹುಡುಗಿಯರು ಅಥವಾ ಮಹಿಳೆಯರು ವಯ್ಯಾರ ಮಾಡಿದರೆ ಅವರನ್ನು ಸರೋಜಾದೇವಿಗೆ ಹೋಲಿಕೆ ಮಾಡಲಾಗುತ್ತದೆ ಎಂಬ ಗುಟ್ಟೊಂದನ್ನು ನಟ ಜಗ್ಗೇಶ್ ಹೇಳಿದ್ದಾರೆ.
ನಟಿ ಸರೋಜಾದೇವಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಟ ಹಾಗೂ ಸಂಸದ ಜಗ್ಗೇಶ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, ನಟಿ ಸರೋಜಾದೇವಿ ಅವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಾದ ಎಂ.ಜಿ.ಆರ್ ಹಾಗೂ ಡಾ.ರಾಜ್ ಕುಮಾರ್ ಕಾಲದ ದಿಗ್ಗಜ ನಟಿ ಆಗಿದ್ದರು. ರಾಜಕುಮಾರಿ ಪಾತ್ರದಿಂದ ಪ್ರಾರಂಭವಾಗಿ ಅಪಾರ ಪ್ರಶಸ್ತಿಗಳನ್ನು ಪಡೆದವರು. ನಾನು ಅವರ ನಟನೆಗೆ ನಾನು ದೊಡ್ಡ ಅಭಿಮಾನಿಯಾಗಿದ್ದೆ. ಅವರು ನಮ್ಮ ಒಳ್ಳೆಯ ನೆರೆಮನೆಯವರೂ ಆಗಿದ್ದರು ಎಂದು ನೆನಪು ಮಾಡಿಕೊಂಡರು.
ತಮಿಳುನಾಡಿನಲ್ಲಿ ಸರೋಜಾ ದೇವಿ ವಯ್ಯಾರದ ಉದಾಹರಣೆ:
ಇವತ್ತಿಗೂ ತಮಿಳುನಾಡಿನಲ್ಲಿ ಯಾರಾದರೂ ಸೌಂದರ್ಯ ಅಥವಾ ವೈಭವದ ಅಭಿನಯ (ವಯ್ಯಾರ) ಮಾಡಿದರೆಂದರೆ ಅವರಿಗೆ 'ಸರೋಜಾ ದೇವಿ ತರ ವಯ್ಯಾರ ಮಾಡ್ತಿದ್ಯಾ?' ಅನ್ನೋದು ಸಾಮಾನ್ಯ ಮಾತು. ಅವರು ತಮಿಳು ಚಿತ್ರರಂಗದಲ್ಲೂ ದೊಡ್ಡ ಹೆಸರು ಮಾಡಿದ್ದರು. ಸರೋಜಮ್ಮ ಅವರ ಹೆಸರು ನಾಡಿನಾದ್ಯಾಂತ ಮನೆಮಾತಾಗಿತ್ತು. ಇನ್ನು ಕನ್ನಡ ಚಿತ್ರರಂಗಕ್ಕೆ ನಾನು ಬಂದಾಗ ಅವರು ನಮ್ಮ ನೆರೆಮನೆಯಲ್ಲಿಯೇ ಇದ್ದರು. 'ನನಗೂ ಸರೋಜಾದೇವಿ ಅವರಿಗೂ ಒಳ್ಳೆಯ ಬಾಂಧವ್ಯ ಇತ್ತು. ಅವರು ಆಗಾಗ ಮನೆಗೆ ಕರೆದು ದೋಸೆ ಮಾಡಿ ತಿನ್ನಲು ಕೊಡುತ್ತಿದ್ದರು. ಅವರ ವೃತ್ತಿಪರ ಬದುಕು ಮಾತ್ರವಲ್ಲದೇ, ವೈಯಕ್ತಿಕ ಬದುಕಿನಲ್ಲೂ ಸರಳತೆ ಮತ್ತು ಆತ್ಮೀಯತೆ ಕಾಣಸಿಗುತ್ತಿತ್ತು' ಎಂದು ನಟ ಜಗ್ಗೇಶ್ ಹೇಳಿದರು.
ಅಂತ್ಯಕ್ರಿಯೆ ಕುರಿತು ನಿರ್ಧಾರ ಬಾಕಿ:
ಅವರು ಕೊಡಿಗೇಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಯೋಚನೆ ಮಾಡಿಕೊಂಡಿದ್ದಾರೆ. ಆದರೆ, ಅಕ್ಕಪಕ್ಕ ಅಪಾರ್ಟ್ಮೆಂಟ್‌ಗಳು ಇರುವ ಕಾರಣದಿಂದ ಕೆಲವು ತಾಂತ್ರಿಕ ಅಡೆತಡೆಗಳು ಎದುರಾಗಬಹುದು. ಅಲ್ಲದೆ, ಬೇರೊಂದು ತೋಟವೂ ಇದೆ ಎಂದು ಕೇಳಿದ್ದೇನೆ. ಅಂತ್ಯಸಂಸ್ಕಾರ ಕೊನೆಗೆ ಎಲ್ಲಿ ನಡೆಯುತ್ತದೆ ಎಂಬ ನಿರ್ಧಾರ ಇನ್ನೂ ಮಾಡುತ್ತಿದ್ದಾರೆ. ಬಿ.ಸರೋಜಾ ದೇವಿಯವರ ನಿಧನ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ತಮ್ಮ ಶ್ರೇಷ್ಠ ಅಭಿನಯ, ಶಿಸ್ತುಮಯ ಜೀವನ ಹಾಗೂ ಸಹಜ ವ್ಯಕ್ತಿತ್ವದಿಂದಾಗಿ ಅವರು ಕೋಟ್ಯಂತರ ಚಲನಚಿತ್ರ ಪ್ರೇಮಿಗಳಿಗೆ ಪ್ರೀತಿಯ ಪಾತ್ರರಾಗಿದ್ದರು ಎಂದು ನಟ ಜಗ್ಗೇಶ್ ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.