
ನಟ, ನಿರ್ದೇಶಕ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪೇಂದ್ರ' ಸಿನಿಮಾ ತೆರೆಕಂಡಾಗ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಆ ಸಮಯದಲ್ಲಿ ಈ ಚಿತ್ರ ನೋಡಿದ ಬಹಳಷ್ಟು ಜನ ಇದೊಂದು ಹುಚ್ಚು ಸಿನಿಮಾ ಎಂದು ಭಾವಿಸಿದ್ದರು. ಆದರೆ, ಸರಿಯಾಗಿ ಅರ್ಥಮಾಡಿಕೊಂಡರೆ ಈ ಸಿನಿಮಾದಲ್ಲಿ ಜೀವನಕ್ಕೆ ಬೇಕಾದ ದೊಡ್ಡ ಪಾಠವೇ ಅಡಗಿದೆ.
ಉಪೇಂದ್ರ ಸಾಮಾನ್ಯ ಸಿನಿಮಾವಲ್ಲ..
ಉಪೇಂದ್ರ ಒಂದು ಸಾಮಾನ್ಯ ಕಮರ್ಷಿಯಲ್ ಚಿತ್ರವಲ್ಲ. ಇದು ಮನುಷ್ಯನ ಜೀವನ, ಅವನ ಆಸೆ, ಅಹಂಕಾರ ಮತ್ತು ಸಂಬಂಧಗಳನ್ನು ಬಹಳ ಆಳವಾಗಿ ಪ್ರಶ್ನಿಸುವ ಒಂದು ಸೈಕಲಾಜಿಕಲ್ ಡ್ರಾಮಾ. ಆಗ ಈ ಸಿನಿಮಾ ನೋಡಿದವರಿಗೆ ಇದೊಂದು ಶಾಕ್ ರೀತಿ ಅನಿಸಿತ್ತು. ಈಗ ನೋಡಿದರೆ ಇದರ ಅರ್ಥ ಇನ್ನಷ್ಟು ಅದ್ಭುತವಾಗಿ ತಿಳಿಯುತ್ತದೆ. ಈ ಸಿನಿಮಾದಲ್ಲಿ ನಾಯಕನ ಹೆಸರು 'ನಾನು'. ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಲ್ಲಿಯೂ 'ನಾನು' ಎಂಬ ಭಾವನೆ ಇರುತ್ತದೆ. ಅದೇ ಅಹಂಕಾರ, ಸ್ವಾರ್ಥ ಮತ್ತು ಬಯಕೆಗಳ ಮೂಲ.
ನಿರ್ದೇಶಕರು ಈ 'ನಾನು' ಎಂಬ ಭಾವನೆಯನ್ನು ಮೂವರು ಮಹಿಳಾ ಪಾತ್ರಗಳ ಮೂಲಕ ಜೀವನದ ಮೂರು ಪ್ರಮುಖ ಆಯಾಮಗಳೊಂದಿಗೆ ಜೋಡಿಸಿ ತೋರಿಸಿದ್ದಾರೆ. ಸಿನಿಮಾದಲ್ಲಿ 'ನಾನು' ಎಂಬ ನಾಯಕ ತನಗೆ ಇಷ್ಟಬಂದಂತೆ ಬದುಕುವ ವ್ಯಕ್ತಿ. ಅವನು ಸಮಾಜದ ಕಪಟತನವನ್ನು ದ್ವೇಷಿಸುತ್ತಾನೆ. ಸತ್ಯವನ್ನೇ ಮಾತನಾಡುತ್ತಾನೆ. ಆದರೆ ಅದೇ ಸಮಯದಲ್ಲಿ ಅವನು ತೀರಾ ಸ್ವಾರ್ಥಿ ಕೂಡ. ತನ್ನ ಆಸೆಗಳಿಗಾಗಿ ಯಾರ ಭಾವನೆಗಳನ್ನಾದರೂ ಬಳಸಿಕೊಳ್ಳುತ್ತಾನೆ. ಅವನ ಜೀವನದಲ್ಲಿ ಮೂವರು ಮಹಿಳೆಯರು ಬರುತ್ತಾರೆ:
* ಸ್ವಾತಿ – ಜವಾಬ್ದಾರಿಗಳ ಸಂಕೇತ
* ಆರತಿ – ಸೌಂದರ್ಯ, ಪ್ರೀತಿ, ಸಂತೋಷದ ಸಂಕೇತ
* ಕೀರ್ತಿ – ಹಣ, ಹೆಸರು, ಗೌರವದ ಸಂಕೇತ
ಈ ಮೂವರನ್ನೂ ಒಂದೇ ಬಾರಿಗೆ ಪಡೆಯಲು ನಾಯಕ ಪ್ರಯತ್ನಿಸುತ್ತಾನೆ. ಅದೇ ಸಮಯದಲ್ಲಿ ತನ್ನ 'ನಾನು' ಎಂಬ ಅಹಂಕಾರವನ್ನು ಬಿಡುವುದಿಲ್ಲ. ಕೊನೆಗೆ ಆ ಅಹಂಕಾರವೇ ಅವನನ್ನು ನಾಶ ಮಾಡುವ ಸ್ಥಿತಿಗೆ ತರುತ್ತದೆ. 'ನಾನು' ಎಂಬ ಭಾವನೆ ಇರುವವರೆಗೂ ಮನುಷ್ಯನಿಗೆ ನೆಮ್ಮದಿ ಸಿಗುವುದಿಲ್ಲ ಎಂಬ ಸತ್ಯ ಸಿನಿಮಾದ ಕೊನೆಯಲ್ಲಿ ನಾಯಕನಿಗೆ ಅರಿವಾಗುತ್ತದೆ.
ಮೂವರು ನಾಯಕಿಯರಲ್ಲ… ಮೂರು ಜೀವನ ಸತ್ಯಗಳು
ನಿರ್ದೇಶಕರು ಈ ಸಿನಿಮಾದಲ್ಲಿ ನಾಯಕಿಯರ ಪಾತ್ರಗಳನ್ನು ಸಾಮಾನ್ಯ ಪ್ರೇಮಕಥೆಯಂತೆ ತೋರಿಸಿಲ್ಲ. ಪ್ರತಿ ಪಾತ್ರದ ಹಿಂದೆ ಒಂದು ದೊಡ್ಡ ತಾತ್ವಿಕ ಅರ್ಥವಿದೆ.
ಸ್ವಾತಿ - ಜವಾಬ್ದಾರಿಗಳ ರೂಪ: ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕುಟುಂಬ, ಪೋಷಕರು, ಹೆಂಡತಿ, ಮಕ್ಕಳು, ಹೀಗೆ ಜವಾಬ್ದಾರಿಗಳು ಇದ್ದೇ ಇರುತ್ತವೆ. ಮನುಷ್ಯ ಎಷ್ಟೇ ದೊಡ್ಡವನಾದರೂ ಅವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆ ಭಾವನೆಯ ಪ್ರತಿರೂಪವೇ ಸ್ವಾತಿ ಪಾತ್ರ. ನಾಯಕ ಯಾವಾಗಲೂ ಕೀರ್ತಿಗಾಗಿ ಓಡಿದರೂ, ಕೊನೆಗೆ ಜವಾಬ್ದಾರಿಗಳು ಅವನನ್ನು ಹಿಂಬಾಲಿಸುತ್ತಲೇ ಇರುತ್ತವೆ. ಸಿನಿಮಾದಲ್ಲಿ ಸ್ವಾತಿ ಹಲವು ಬಾರಿ ನಾಯಕನನ್ನು ಕಾಪಾಡುತ್ತಾಳೆ. ಇದರರ್ಥ, ಮನುಷ್ಯನನ್ನು ಕೊನೆಗೆ ನಿಲ್ಲಿಸುವುದು ಜವಾಬ್ದಾರಿಗಳೇ.
ಆರತಿ – ಸೌಂದರ್ಯ, ಪ್ರೀತಿ, ಸಂತೋಷದ ಸಂಕೇತ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಪ್ರೀತಿ, ಸೌಂದರ್ಯ, ದೈಹಿಕ ಆಕರ್ಷಣೆ ಮತ್ತು ಸಂತೋಷವನ್ನು ಬಯಸುತ್ತಾನೆ. ಮನಸ್ಸಿಗೆ ಇಷ್ಟವಾದ ವ್ಯಕ್ತಿಯೊಂದಿಗೆ ಬದುಕಲು ಆಸೆಪಡುತ್ತಾನೆ. ಆ ಭಾವನೆಯ ಪ್ರತಿರೂಪವೇ ಆರತಿ. ನಾಯಕ ಅವಳನ್ನು ಪ್ರೀತಿಸುತ್ತಾನೆ, ಆದರೆ ನಿಜವಾಗಿ ಗೌರವಿಸುವುದಿಲ್ಲ. ಅವಳನ್ನು ತನ್ನ ಆಸೆಗಳ ಒಂದು ಭಾಗವಾಗಿ ಮಾತ್ರ ನೋಡುತ್ತಾನೆ. ಸಂತೋಷಕ್ಕಾಗಿ ಮಾತ್ರ ಬದುಕಿದರೆ, ಅದು ಕೊನೆಗೆ ನಮ್ಮನ್ನು ನಾಶಮಾಡುತ್ತದೆ ಎಂಬುದನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ.
ಕೀರ್ತಿ – ಹಣ, ಹೆಸರು, ಗೌರವದ ಸಂಕೇತ: ಮನುಷ್ಯನ ಜೀವನದಲ್ಲಿ ಒಂದು ಹಂತದ ನಂತರ ಹಣ, ಹೆಸರು, ಸಮಾಜದಲ್ಲಿ ಮನ್ನಣೆ ಬೇಕೆನಿಸುತ್ತದೆ. ಅದಕ್ಕಾಗಿಯೇ ನಾಯಕ ಕೀರ್ತಿಗಾಗಿ ಹುಚ್ಚನಂತೆ ಓಡುತ್ತಾನೆ. ಕೀರ್ತಿ ಪಾತ್ರದ ಮೂಲಕ ನಿರ್ದೇಶಕರು ಅದ್ಭುತ ವಿಷಯಗಳನ್ನು ಹೇಳಿದ್ದಾರೆ. ಹೆಸರು ಯಾರೊಬ್ಬರ ಸ್ವತ್ತಲ್ಲ, ಹಣಕ್ಕಾಗಿ ಮನುಷ್ಯರು ಕೀರ್ತಿಯನ್ನು ಬೆನ್ನಟ್ಟುತ್ತಾರೆ. ಸಮಾಜದಲ್ಲಿ ಮನ್ನಣೆಗಾಗಿ ಮನುಷ್ಯ ತನ್ನ ನಿಜವಾದ ಸ್ವಭಾವವನ್ನು ಕಳೆದುಕೊಳ್ಳುತ್ತಾನೆ. 'ಒಂದು ರಾತ್ರಿಯಾದರೂ ಅವಳೊಂದಿಗೆ ಇರಬೇಕು' ಎಂಬ ನಾಯಕನ ಡೈಲಾಗ್‌ನ ನಿಜವಾದ ಅರ್ಥ, ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಕನಿಷ್ಠ ಒಂದು ದಿನವಾದರೂ ದೊಡ್ಡವನಾಗಿ ಗುರುತಿಸಿಕೊಳ್ಳಬೇಕು ಎಂದು ಬಯಸುತ್ತಾನೆ.
ನಿರ್ದೇಶಕರು ಹೇಳಿದ ಅಸಲಿ ಸಂದೇಶ
ಈ ಇಡೀ ಸಿನಿಮಾ ಒಂದು ತಾತ್ವಿಕ ಪಯಣ. ನಿರ್ದೇಶಕ ಉಪೇಂದ್ರ ಹೇಳಲು ಹೊರಟ ಪ್ರಮುಖ ವಿಷಯವೇನೆಂದರೆ, 'ಮನುಷ್ಯನ ಎಲ್ಲಾ ಸಮಸ್ಯೆಗಳಿಗೂ ಮೂಲ 'ನಾನು' ಎಂಬ ಭಾವನೆಯೇ.' ಮನುಷ್ಯನಿಗೆ ಜೀವನದಲ್ಲಿ ಜವಾಬ್ದಾರಿ ಬೇಕು, ಪ್ರೀತಿ ಬೇಕು, ಹಣ, ಹೆಸರು ಎಲ್ಲವೂ ಬೇಕು. ಆದರೆ ಇವೆಲ್ಲವೂ ತನ್ನ ಸ್ವಾರ್ಥಕ್ಕಾಗಿ ಮಾತ್ರ ಬೇಕು ಎಂದುಕೊಂಡರೆ, ಅಲ್ಲಿಯೇ ಸಮಸ್ಯೆಗಳು ಶುರುವಾಗುತ್ತವೆ. ನಾಯಕ ಮೊದಲು ತನಗಿಷ್ಟ ಬಂದಂತೆ ಬದುಕುತ್ತಾನೆ, ಎಲ್ಲರನ್ನೂ ಬಳಸಿಕೊಳ್ಳುತ್ತಾನೆ, ತನ್ನ ಆಸೆಗಳೇ ಮುಖ್ಯ ಎಂದುಕೊಳ್ಳುತ್ತಾನೆ. ಆದರೆ ಕೊನೆಗೆ ಪ್ರೀತಿಯಲ್ಲಿ ಶಾಂತಿಯಿಲ್ಲ, ಹಣದಲ್ಲಿ ಸಂತೋಷವಿಲ್ಲ, ಅಹಂಕಾರದಲ್ಲಿ ಜೀವನವಿಲ್ಲ ಎಂದು ಅವನಿಗೆ ಅರಿವಾಗುತ್ತದೆ. ಅದಕ್ಕಾಗಿಯೇ ಕೊನೆಯಲ್ಲಿ ತನ್ನ ಮುಖವಿರುವ ಶರ್ಟ್ ಹರಿದುಹಾಕಿ 'ನಾನು' ಎಂಬ ಅಹಂಕಾರವನ್ನು ಕೊಲ್ಲುತ್ತಾನೆ. ಅದು ಕೇವಲ ಒಂದು ದೃಶ್ಯವಲ್ಲ, ಮನುಷ್ಯನಿಗೆ ಜ್ಞಾನೋದಯವಾದ ಕ್ಷಣ.
ಈ ಸಿನಿಮಾದ ಹಿಂದೆ ಮಾಸ್ಲೋ (Maslow) ಅವರ 'Hierarchy of Needs' ಸಿದ್ಧಾಂತದ ಪ್ರೇರಣೆ ಇದೆ. ಮನುಷ್ಯನ ಜೀವನದಲ್ಲಿ ಅಗತ್ಯಗಳು ಮೂಲಭೂತ ಅಗತ್ಯಗಳಿಂದ ಹಿಡಿದು, ಪ್ರೀತಿ, ಸಂಬಂಧಗಳು, ಗೌರವ, ಮನ್ನಣೆ ಮತ್ತು ಕೊನೆಗೆ ಆತ್ಮಜ್ಞಾನವಾಗಿ ಬದಲಾಗುತ್ತವೆ. ಈ ಸಂಪೂರ್ಣ ಪಯಣವನ್ನು ನಿರ್ದೇಶಕರು ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ನಾಯಕ ಮೊದಲು ಸಂತೋಷವನ್ನು ಹುಡುಕುತ್ತಾನೆ, ನಂತರ ಪ್ರೀತಿ, ಆಮೇಲೆ ಹಣ, ಕೀರ್ತಿ ಮತ್ತು ಕೊನೆಗೆ ತನ್ನನ್ನು ತಾನು ಅರಿತುಕೊಳ್ಳುತ್ತಾನೆ. ಇದು ಒಬ್ಬ ಮನುಷ್ಯನ ಅಂತರಂಗದ ಪಯಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.