ರಿಲೀಫ್‌ ಬೆನ್ನಲ್ಲೇ, 'ರಕ್ತ ಕಣ್ಣೀರು' ಡೈಲಾಗ್‌ ಧಾಟಿಯಲ್ಲಿ ತಿರುಗೇಟು ಕೊಟ್ಟ ಉಪೇಂದ್ರ!

By Santosh Naik  |  First Published Aug 14, 2023, 6:50 PM IST

ಫೇಸ್‌ಬುಕ್‌ ಲೈವ್‌ನಲ್ಲಿ ತಾವು ಆಡಿದ ಒಂದು ಗಾದೆ ಮಾತು ಇಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಲಿದೆ ಎಂದು ಸ್ವತಃ ಉಪೇಂದ್ರಗೂ ಗೊತ್ತಿರಲಿಲ್ಲ. ಸೋಮವಾರ ಹೈಕೋರ್ಟ್‌ ರಿಲೀಫ್‌ ನೀಡುತ್ತಿದ್ದಂತೆ ಉಪೇಂದ್ರ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 


ಬೆಂಗಳೂರು (ಆ.14): 'ಫ್ಯೂಚರ್‌ ಇಲ್ದಿರೋ ದೇಶ, ನೇಚರ್‌ ಇಲ್ದಿರೋ ನಾಡು, ಟೀಚರ್ಸ್‌ ಇಲ್ದಿರೋ ಸ್ಕೂಲ್ಸ್‌, ಲೀಡರ್ಸ್‌ ಇಲ್ದಿರೋ ಪಾರ್ಟೀಸ್‌, ಪ್ಲ್ಯಾನಿಂಗ್‌ ಇಲ್ದಿರೋ ಫ್ಯಾಮೀಲಿಸು, ಒಬ್ಬೊಬ್ಬನಿಗೆ ಡಜನ್‌ ಡಜನ್‌ ಮಕ್ಳು, ಅದ್ರಲ್ಲಿ ಅರ್ಧ ಪುಕ್ಲು, ಇನ್ನರ್ಧ ತಿಕ್ಲು ತಿಕ್ಲು..' ಥೇಟ್‌ ಇದೇ ಧಾಟಿಯಲ್ಲಿ ನಟ ಉಪೇಂದ್ರ ಆಗಿರೋ ಕಾಂಟ್ರವರ್ಸಿಗೆ ಇನ್ನೊಂದು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಫೇಸ್‌ಬುಕ್‌ ಲೈವ್‌ನಲ್ಲಿ ಉಪೇಂದ್ರ ಮಾತನಾಡುವ ಭರದಲ್ಲಿ ಗಾದೆ ಮಾತನ್ನು ಬಳಕೆ ಮಾಡಿದ್ದರು. ಇದು ಜಾತಿ ನಿಂದನೆ ಎಂದು ಹೇಳಿದ್ದ ದಲಿತ ಪರ ಸಂಘಟನೆಗಳೂ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಲ್ಲದೆ, ಪೊಲೀಸರಿಗೆ ದೂರು ನೀಡಿದ್ದರು. ಬೆಂಗಳೂರಿನ ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಇದರ ಬೆನ್ನಲ್ಲಿಯೇ ಎಫ್‌ಐಆರ್‌ ಅನ್ನು ರದ್ದು ಮಾಡುವಂತೆ ಕೋರಿ ಸೋಮವಾರ ಉಪೇಂದ್ರ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕೋರ್ಟ್‌ ಕೂಡ ಪ್ರಕರಣದಲ್ಲಿ ಉಪೇಂದ್ರ ಪರವಾಗಿ ಆದೇಶ ನೀಡಿದ್ದು, ಸ್ಯಾಂಡಲ್‌ವುಡ್‌ ಬುದ್ಧಿವಂತನಿಗೆ ರಿಲೀಫ್‌ ಸಿಕ್ಕಂತಾಗಿದೆ.

ಹೈಕೋರ್ಟ್‌ ಆದೇಶದ ಬಳಿಕ ಉಪೇಂದ್ರ ತಮ್ಮ ರಕ್ತ ಕಣ್ಣೀರು ಚಿತ್ರದ ಜನಪ್ರಿಯ ಡೈಲಾಗ್‌ ಶೈಲಿಯಲ್ಲಿಯೇ ಪ್ರಾಸಬದ್ಧವಾಗಿ ತಮ್ಮ ವಿರುದ್ಧ ತೊಡೆತಟ್ಟಿದವರಿಗೆ ತಿರುಗೇಟು ನೀಡಿದ್ದಲ್ಲದೆ, ಈ ಹೋರಾಟದಲ್ಲಿ ಸಾಥ್‌ ನೀಡಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

'ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ.
ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ.
ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ.
ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ… ನನಗೆ ಕೊಡೆ
ಧನ್ಯವಾದಗಳು ಥ್ಯಾಂಕ್‌ ಯು ಆಲ್‌'

ತಮ್ಮ ಸೋಶಿಯಲ್‌ ಮೀಡಿಯಾ ಪುಟದಲ್ಲಿ ಉಪೇಂದ್ರ ಈ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅದರೊಂದಿಗೆ ಇಡೀ ಪ್ರಕರಣದ ಎನ್ನುವುದು ನನ್ನ ವಿರುದ್ಧದ ದ್ವೇಷದ ಆಟ ಎಂದು ಉಪೇಂದ್ರ ತಿಳಿಸಿದ್ದಾರೆ.

ಇನ್ನು ಉಪೇಂದ್ರ ಅವರ ಈ ಟ್ವೀಟ್‌ಗೂ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. 'ನಿನ್ನೆ ನಿಮ್ಮ ಮೇಲೆ ಸಿಟ್ಟೇರಿತ್ತು ಆ ಕಡೆ. ಇವತ್ತು ನಿಮ್ಮ ಮೇಲಿನ ಆರೋಪಕ್ಕೆ ಹೈ ಕೋರ್ಟ್ ತಡೆಯಾಜ್ನೆ ನೀಡಿತು ಈ ಕಡೆ. ನಿನ್ನಯಿಂದ ಭದ್ರತೆ ಕೊಡುತ್ತಿರುವ ಪೊಲೀಸ್ ಪಡೆ. ಕ್ಷಮೆ ಕೋರಿದರೂ ನಿಂತಿಲ್ಲ ಪ್ರತಿಭಟನಾಪಡೆ. ಕೆಲವು ದಿನ ಹೀಗೆ ಈ ನಡೆ' ಎಂದು ಕಾಮೆಂಟ್‌ ಮಾಡಿದ್ದಾರೆ. 'ಸರ್‌ ನೀವು ಬ್ರಾಹ್ಮಣ ಅನ್ನೋ ಕಾರಣಕ್ಕೆ ನಿಮ್ಮ ಮೇಲೆ ಮುಗಿಬಿದ್ದಿದ್ದಾರೆ ಅಷ್ಟೇ' ಎಂದು ಡಿಎಸ್‌ಎಚ್‌ (@team_dsh_1) ಎನ್ನುವ ಟ್ವೀಟರ್‌ ಹ್ಯಾಂಡಲ್‌ನಿಂದ ಕಾಮೆಂಟ್‌ ಬಂದಿದೆ.

ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ 🙏
ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ 🙏
ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ 🙏
ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ… 🙏 ನನಗೆ ಕೊಡೆ 🙏
ಧನ್ಯವಾದಗಳು Thank you…

— Upendra (@nimmaupendra)

Tap to resize

Latest Videos

ಪೊಲೀಸರ ಕೈಗೆ ಸಿಗದ ಬುದ್ಧಿವಂತ ನಟ ಉಪೇಂದ್ರ: ನೋಟಿಸ್‌ ನೀಡಿದರೂ ವಿಚಾರಣೆಗೆ ಗೈರು

'ಸಹಜವಾಗಿ ಮಾತನಾಡುವಾಗ ಉಪಯೋಗಿಸಿದ ಒಂದು ಪದ ಇಷ್ಟು ಅವಾಂತರ ಮಾಡುತ್ತೆ ಅಂತ ತಿಳಿದಿರಲಿಲ್ಲ. ಇದು ಒಂದು ಪಾಠ ಬ್ರಾಹ್ಮಣರಿಗೆ ಮತ್ತು ಇತರ ಜಾತಿಯವರಿಗೆ. ಬ್ರಾಹ್ಮಣರಿಗೆ ಮತ್ತು ಇತರ ಜಾತಿಯವರೆಗೆ ಈ ದಲಿತರು ಏನು ಬೇಕಾದರೂ ಹೇಳುತ್ತಾರೆ ಲೇವಾಡಿ ಮಾಡುತ್ತಾರೆ. ಆವಾಗ ಎಲ್ಲರೂ ಒಂದುಗೂಡಿ ಅವರಿಗೂ ಇದೇ ತರ ಪಶ್ಚಾತಾಪ ಮಾಡಿಸೋಣ. ಧೈರ್ಯ ಇರಲಿ' ಎಂದು ಭರತ್‌ ಕುಮಾರ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ. 'ಈಗ ನೀನು ಬ್ರಾಹ್ಮಣನಾಗಿ ಹುಟ್ಟಿದ್ದೀನಿ ಅಂತ ಜಂಬ ಪಡಬೇಡ ,ಒಂದ್ಸಲ ದಲಿತನಾಗಿ ಹುಟ್ಟಿ ಜೀವನ ಮಾಡಿ ಸಾಕು,ಅವರ ಮಾನಸಿಕ ಹಿಂಸೆ ನಿಂಗೆ ಗೊತ್ತಾಗುತ್ತೆ' ಎಂದು ಅಂಬರೀಷ್‌ ಎನ್ನುವರು ಪ್ರತಿಕ್ರಿಯೆ ನೀಡಿದ್ದಾರೆ.

ನಟ ಉಪೇಂದ್ರನಿಗೆ ಬಿಗ್‌ ರಿಲೀಫ್‌ ಕೊಟ್ಟ ಹೈಕೋರ್ಟ್‌: ಎಫ್‌ಐಆರ್‌ಗೆ ತಡೆ

'ಉಪೇಂದ್ರ ಅವರೇ ನ್ಯಾಯಾಲಯ ಕೊಟ್ಟಿರುವ ಅವಕಾಶವನ್ನು ಒರಟುತನ ತೋರದೆ. ಲೈವ್ ಬಂದು ಅಸ್ಪ್ರಶ್ಯ ಬಂಧುಗಳ ಕ್ಷಮೆಯಾಚಿಸಿ, ಮುಂದೆ ಮಾತಿನ ಅರ್ಥ ತಿಳಿದು ಮಾತಾಡಿ. ಮಾಸ್ತಿ ಯಾರು ಗೊತ್ತಿಲ್ಲ, ಅಂಬೇಡ್ಕರ್ ಅವರ ಮಾತುಗಳು ತಿಳಿದಿಲ್ಲ, ಪ್ರಜಾಪ್ರಭುತ್ವದ ಅರಿವಿಲ್ಲ ಚುನಾವಣೆ ಬಗ್ಗೆ ಗೊತ್ತಿಲ್ಲ. ಮತ್ತೆ ತಪ್ಪು ಮಾಡಿದರೆ ಪದೇ ಪದೇ ಕ್ಷಮಿಸಲಾಗದು' ಎಂದು ಇನ್ನೊಬ್ಬರು ಎಚ್ಚರಿಕೆ ಕಾಮೆಂಟ್‌ ಮಾಡಿದ್ದಾರೆ.

click me!