ಉದ್ಘರ್ಷ ಹೀರೋಯಿನ್ ಗೆ ಮೈ ತುಂಬಾ ಗಾಯ!

By Kannadaprabha NewsFirst Published Oct 22, 2018, 9:52 AM IST
Highlights

ಮಡಿಕೇರಿ ಸಮೀಪದ ಶುಂಠಿಕೊಪ್ಪ ದೊರೆ ಎಸ್ಟೇಟ್ ನಲ್ಲಿ ಚಿತ್ರೀಕರಣ ನಡೆಯುತ್ತಿದ ಸ್ಥಳದಲ್ಲಿ ಈ ಘಟನೆ

ವಿಶಾಲವಾದ ಕಾಫಿ ಎಸ್ಟೇಟ್. ಆ ಎಸ್ಟೇಟ್ ಮಧ್ಯೆ ಎಕರೆಯಷ್ಟು ವಿಸ್ತೀರ್ಣದಲ್ಲಿ ಎದ್ದು ನಿಂತ ಎರಡು ಅಂತಸ್ತಿನ ಒಂಟಿ ಮನೆ. ಆ ಮನೆಯ ಎರಡನೇ ಮಹಡಿಯಲ್ಲಿ ಒಬ್ಬರೇ ಇದ್ದರು ಕಂಬಾಲಿ ಸುಂದರಿ ಸಾಯಿ ಧನ್ಸಿಕಾ. ಭಯದಲ್ಲಿದ್ದ ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಹರ ಸಾಹಸ ಪಡುತ್ತಿ ದ್ದರು. ಕಿಟಿಕಿಯ ಮೂಲಕ ಚಾವಣಿಗಿಳಿದು, ನೇತಾಡುತ್ತಾ ಕೂಗಾ ಡುತ್ತಿದ್ದರು. ಮೈ, ಕೈಯಲ್ಲಿ ಗಾಯವಾಗಿ, ರಕ್ತದ ಕಲೆಗಳಿದ್ದವು.

ಅಚ್ಚರಿ ಅಂದ್ರೆ, ಅವರು ಪರಾರಿ ಆಗಲು ಯತ್ನಿಸುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗುತ್ತಿತ್ತು. ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಆ್ಯಕ್ಷನ್ ಕಟ್ ಹೇಳುತ್ತಿದ್ದರು. ಅಂದ ಹಾಗೆ, ಈ ದೃಶ್ಯ ಕಂಡಿದ್ದು ‘ಉದ್ಘರ್ಷ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭ. ಇದು ಆಗಿದ್ದು ಮಡಿಕೇರಿ ಹೊರವಲಯದ ಶುಂಠಿಕೊಪ್ಪ ಸಮೀಪದ ದೊರೆ ಎಸ್ಟೇಟ್ ಮನೆಯೊಂದರಲ್ಲಿ. ಇದು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ವಿಶೇಷ. 

ಕನ್ನಡ ಚಿತ್ರರಂಗದ ಲ್ಲಿ ಸುನೀಲ್ ಕುಮಾರ್ ದೇಸಾಯಿ ಹೆಸರು ಕೇಳಿದರೆ ಸಾಕು, ಹೊಸ ಬಗೆಯ ಪ್ರಯೋಗದ ಜನ ಮೆಚ್ಚುಗೆಯ ಸಿನಿಮಾಗಳ ಸಾಲೇ ಕಣ್ಮುಂದೆ ಬರುತ್ತವೆ. ತಾವು ನಿರ್ದೇಶಕನಾಗಿ ಬಂದ ನಂತರ ಜನ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡುತ್ತಾ, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಾ ಬಂದಿರುವುದು ದೇಸಾಯಿ ಸಿನಿಜರ್ನಿಯ ವಿಶೇಷ. ಈಗ ಅಂತಹುದೇ ಕಥಾಹಂದರ ಮೂಲಕ ಮತ್ತೆ ಮೈ ಕೊಡವಿ ಎದ್ದು ನಿಂತಿದ್ದಾರೆ.ಉದ್ಘರ್ಷ ಚಿತ್ರ ಈಗ ಅದೇ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.ಈಗ ಇದರ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣದ ರೀತಿ ನೋಡಿದರೆ ಸುನೀಲ್ ಕುಮಾರ್ ದೇಸಾಯಿ ಹಳೇ ಖದರ್ ಮೂಲಕ ಮತ್ತೆ ಗಮನ ಸೆಳೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ವಿಶಿಷ್ಟವಾದ ಜಾಗವನ್ನೇ ಆಯ್ಕೆ ಮಾಡಿಕೊಂಡಿ ದ್ದಾರೆ. ಮಡಿಕೇರಿ ಸಮೀಪದ ಶುಂಠಿಕೊಪ್ಪ ದೊರೆ ಎಸ್ಟೇಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಆ ಜಾಗವೇ ವಿಶೇಷ. 

ಕಾಡಿನೊಂದಿಗೆ ಬೆಸೆದುಕೊಂಡಂತಿರುವ ಕಾಫಿ ತೋಟ. ಅದರ ಮಧ್ಯದಲ್ಲೊಂದು ಬ್ರಿಟಿಷರ ಕಾಲದ ಪಳೆಯುಳಿಕೆಯಂತಿರುವ ದೊಡ್ಡ ಬಂಗಲೆ. ಅದರ ಇಕ್ಕೆಲದಲ್ಲಿಯೇ ಕಾಡೊಳಗಿಂದ ತಪ್ಪಿಸಿ ಕೊಂಡು ಬಂದಂತಿರೋ ಹುಡುಗಿ. ಮೈಗೆ ಗೋಣಿ ಚೀಲವನ್ನೇ ಹೊದ್ದುಕೊಂಡಿರೋ ಆಕೆಯ ಮೈತುಂಬಾ ರಕ್ತಸಿಕ್ತ ಗಾಯ. ಆ ವೇಳೆಗಾಗಲೇ ಚಿತ್ರದ ನಾಯಕ ಠಾಕೂರ್ ಅನೂಪ್ ಸಿಂಗ್ ಹಾಗೂ ಖಳನಟ ಕಬೀರ್ ದುಹಾನ್ ಸಿಂಗ್ ನಡುವೆ ಫೈಟ್ ಸೀಕ್ವೆನ್ಸ್ ನಡೆದು ಹೋಗಿದೆ. ಆ ನಂತರ ನಾಯಕಿ ಧನ್ಸಿಕಾ ಆ ಮನೆಯಿಂದ ತಪ್ಪಿಸಿಕೊಂಡು ಹೋಗುವ ಸನ್ನಿವೇಶವದು. ತುಂಬಾನೆ ರೋಚಕವಾಗಿ ಚಿತ್ರೀಕರಿಸುತ್ತಿದ್ದರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ.

‘ಇದೊಂದು ಜರ್ನಿಯ ಕತೆ. ಬೆಂಗಳೂರು, ಅಲ್ಲಿಂದ ಹೈದರಾಬಾದ್, ಮತ್ತೆ ಅಲ್ಲಿಂದ ಮಡಿಕೇರಿಗೆ ಕನೆಕ್ಟ್ ಆಗುತ್ತದೆ. ಬಹುತೇಕ ಕತೆ ಮಡಿಕೇರಿಯಲ್ಲೇ ನಡೆಯುತ್ತದೆ. ಹಾಗಾಗಿಯೇ ಆರು ತಿಂಗಳ ಹಿಂದೆ ಚಿತ್ರದ ಮುಹೂರ್ತ ಮಡಿಕೇರಿಯಲ್ಲೇ ಆಗಿತ್ತು. ಆಗ ಮಡಿಕೇರಿಮಳೆಯ ಪ್ರಭಾವಕ್ಕೆ ಸಿಲುಕಿರಲಿಲ್ಲ. ಆಗ ಇಲ್ಲಿನ ಸೌಂದರ್ಯ ಸಹಜವಾಗಿಯೇ ಇತ್ತು. ಆ ಜಾಗಗಳಲ್ಲಿ ನಾವು ಚಿತ್ರೀಕರಣ ಮಾಡಿದ್ದೇವೆ. ಈಗ ಕ್ಲೈಮ್ಯಾಕ್ಸ್ ಕೂಡ ಇಲ್ಲಿಯೇ ನಡೆಯುತ್ತಿದೆ.ಇಲ್ಲಿ ಸುಮಾರು ನೂರೈವತ್ತು ಚಿತ್ರಗಳ ಚಿತ್ರೀಕರಣ ಆಗಿದೆ. ಆದರೆ ಈ ಸಿನಿಮಾದಲ್ಲಿ ಹೊಸದಾದ ಲೋಕೇಷನ್ ತೋರಿಸಲಾಗಿದೆ. ಅದೊಂದು ಈ ಸಿನಿಮಾದ ವಿಶೇಷ’ ಎಂದರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ.

ದೇವರಾಜ್ ನಿರ್ಮಾಣದಲ್ಲಿ ಈ ಚಿತ್ರ ಕನ್ನಡದ ಜತೆಗೆ ತೆಲುಗು,ತಮಿಳು ಭಾಷೆಗಳಲ್ಲೂ ನಿರ್ಮಾಣವಾಗುತ್ತಿದೆ. ಈಗಾಗಲೇ ೬೫ ದಿನಗಳ ಚಿತ್ರೀಕರಣ ಮುಗಿದಿದೆ. ಹೈದರಾಬಾದ್, ಬೆಂಗಳೂರು ನಂತರವೀಗ ಮಡಿಕೇರಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ೬ ದಿನಗಳ ಕಾಲ ಚಿತ್ರೀಕರಣ ಮಾತ್ರ ಬಾಕಿಯಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಪರಭಾಷೆಗಳಲ್ಲಿಯೂ ಬಾರೀ ಬೇಡಿಕೆ ಹೊಂದಿರುವ ನಟ ಠಾಕೂರ್ ಅನೂಪ್ ಸಿಂಗ್ ಕನ್ನಡಕ್ಕೆ ಬರುತ್ತಿದ್ದಾರೆ. ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿಯೂ ಖಳನಾಗಿ ಅಭಿನಯಿಸಿದ್ದಾರೆ. ಕಬಾಲಿ ಖ್ಯಾತಿನಟಿ ಧನ್ಸಿಕಾ ನಾಯಕಿ. ‘ಕಬಾಲಿ’ ಚಿತ್ರದಲ್ಲಿ ರಜನೀಕಾಂತ್ ಮಗಳಾಗಿ ನಟಿಸಿದ್ದರು. ಅವರೊಂದಿಗೆ ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್, ಹರ್ಷಿಕಾ ಪೂಣಚ್ಚ ಮತ್ತಿತರರು ಚಿತ್ರದಲ್ಲಿದ್ದಾರೆ. ಸಂಜೋಯ್ ಜೋಷಿ ಹಿನ್ನೆಲೆ ಸಂಗೀತ ನೀಡಿದ್ದಾರೆ. 

click me!