
ಪ್ರಭಾಸ್ ಸಂಭಾವನೆ ಎಷ್ಟು?
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ (Darling Prabhas) ಬಗ್ಗೆ ಹೇಳೋದೇನೂ ಇಲ್ಲ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದ ಚಿತ್ರರಂಗದಲ್ಲಿ ಸಹ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ನಟ ಡಾರ್ಲಿಂಗ್ ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್ ತಾವು 'ಬಾಕ್ಸಾಫೀಸ್ ಕಿಂಗ್' ಸಹ ಹೌದು. ಅವರ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲೂ ಮೇಕಿಂಗ್ ಆಗುತ್ತವೆ, ಸದ್ದು ಮಾಡುತ್ತವೆ.
ಬಾಹುಬಲಿ ಬಳಿಕ ಹಲವು ದಾಖಲೆ ಮಾಡಿದ ಪ್ರಭಾಸ್
ಪ್ರಭಾಸ್ ಕೇವಲ ಸೌತ್ ಸ್ಟಾರ್ ಮಾತ್ರವಲ್ಲ, ನ್ಯಾಷನಲ್ ಸ್ಟಾರ್ ಆಗಿ ಕೂಡ ಹೊರ ಹೊಮ್ಮಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಹಾಗೂ ಬಿಗ್ ಬಜೆಟ್ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ ಪ್ರಭಾಸ್. ಅವರ ಸಿನಿಮಾಗಳು ಅದೆಷ್ಟೋ ಅಟ್ಟರ್ ಫ್ಲಾಪ್ ಎಂದರೂ ಹಾಕಿದ ಬಂಡವಾಳಕ್ಕೆ ಮೋಸವಾಗಲ್ಲ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು ಎನ್ನಲಾಗಿದೆ. ಹೀಗಾಗಿ, ನಟ ಪ್ರಭಾಸ್ ಅವರ ಸಿನಿಮಾಗಳು ಬರುತ್ತಲೇ ಇವೆ.
ಇಂಥ ನಟ ಪ್ರಭಾಸ್ ಅವರು ಸಾಮಾನ್ಯವಾಗಿ ಒಂದು ಚಿತ್ರಕ್ಕೆ ₹150 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತು ಇದೆ. ಈ ಮಾತು ನಿಜಾನಾ ಅಥವಾ ಸುಳ್ಳಾ..? ಆ ಬಗ್ಗೆ ನಿಖರವಾಗಿ ಬೇರೆಯವರು ಹೇಳೋದು ಕಷ್ಟ ಎನ್ನಬಹುದು. ಹಲವು ಮಾಧ್ಯಮಗಳಲ್ಲಿ ಚಿತ್ರವೊಂದಕ್ಕೆ ಪ್ರಭಾಸ್ ₹150 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದೇ ವರದಿಯಾಗಿದೆ. ಹೀಗಾಗಿ "ದಿ ರಾಜಾ ಸಾಬ್" ಚಿತ್ರಕ್ಕೂ ಪ್ರಭಾಸ್ 150ಕೋಟಿಯನ್ನೇ ಸಂಭಾವನೆ ಪಡೆದಿರಬಹುದು ಎಂದು ಇವರ ಅಭಿಮಾನಿಗಳು ಅಂದುಕೊಂಡಿದ್ದರು.
ಆದರೆ.. ಈ ಬಾರಿ ಪ್ರಭಾಸ್ ಹಾಗೆ ಮಾಡಿಲ್ಲವಂತೆ. ನಿರ್ಮಾಪಕರ ಕಷ್ಟದ ಅರಿವು ಇದೆ ಎಂಬಂತೆ, ಅವರು " ದಿ ರಾಜಾ ಸಾಬ್" ಚಿತ್ರಕ್ಕಾಗಿ 33% ಸಂಭಾವನೆಯನ್ನು ಇಳಿಸಿಕೊಂಡಿದ್ದಾರೆ ಎನ್ನುವ ಮಾತು ಸದ್ಯ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ. ಮಾಧ್ಯಮಗಳಲ್ಲಿ ಕೂಡ ಪ್ರಭಾಸ್ ಸಂಭಾವನೆ ವಿಚಾರ ಚರ್ಚೆಗೀಡಾಗುತ್ತಿದೆ.
ಹೌದು, ಮೊನ್ನೆ (ಜನವರಿ 9) ಬಿಡುಗಡೆಯಾದ "ದಿ ರಾಜಾ ಸಾಬ್" ಚಿತ್ರಕ್ಕೆ ಪ್ರಭಾಸ್ ₹150 ಕೋಟಿ ಅಲ್ಲ ಬದಲಿಗೆ ₹100 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು "ನ್ಯೂಸ್ 18" ವರದಿ ಮಾಡಿದೆ. ನಿರ್ಮಾಪಕರ ಹಿತದೃಷ್ಟಿಯಿಂದ ಮತ್ತು ಚಿತ್ರದ ಅದ್ದೂರಿತನಕ್ಕೆ ತಮ್ಮಿಂದ ಧಕ್ಕೆಯಾಗದಿರಲಿ ಎಂದು ಪ್ರಭಾಸ್ ಈ ನಿರ್ಧಾರವನ್ನು ಮಾಡಿದ್ದರು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ, ಈ ಮಾತನ್ನು ಸ್ವತಃ ಪ್ರಭಾಸ್ ಹೇಳಿಲ್ಲ.
ಇನ್ನು ಪ್ರಭಾಸ್ ಅವರನ್ನು ಹೊರತು ಪಡಿಸಿದರೆ ಅತೀ ಹೆಚ್ಚಿನ ಹಣ ಚಿತ್ರದ ನಿರ್ದೇಶಕ ಮಾರುತಿ ಅವರ ಪಾಲಾಗಿದೆ. ಚಿತ್ರಕ್ಕೆ ಹೆಚ್ಚು ಕಡಿಮೆ ಮೂರು ವರ್ಷ ಬೆವರು ಸುರಿಸಿರುವ ಮಾರುತಿ ಒಂದೆರಡು ಕೋಟಿಯಲ್ಲ ಬದಲಿಗೆ ₹18 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ. ಖುದ್ದು "ಗ್ರೇಟ್ ಆಂಧ್ರ"ಗೆ ನೀಡಿದ ಸಂದರ್ಶನದಲ್ಲಿ ಮಾರುತಿ ಈ ಮಾತನ್ನು ಒಪ್ಪಿಕೊಂಡಿದ್ದಾರೆ ಕೂಡ. ಹೀಗಾಗಿ ಇದನ್ನು ಅಧಿಕೃತ ಎನ್ನಬಹುದು.
ಚಿತ್ರದ ನಾಯಕಿಯರ ವಿಚಾರಕ್ಕೆ ಬಂದರೆ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಆ ಪೈಕಿ ಮಾಳವಿಕಾ ಮೋಹನನ್ ಅವರಿಗೆ ₹2 ಕೋಟಿ ಸಂಭಾವನೆ ನೀಡಲಾಗಿದ್ದರೆ, ನಿಧಿ ಅಗರ್‌ವಾಲ್ ಅವರಿಗೆ ₹1.5 ಕೋಟಿ ಮತ್ತು ರಿದ್ದಿ ಕುಮಾರ್ ಅವರಿಗೆ ₹3 ಕೋಟಿ ಸಂಭಾವನೆ ನೀಡಲಾಗಿದೆ ಎಂದು "ಸಿಯಾಸತ್.ಕಾಮ್" ವರದಿ ಮಾಡಿದೆ.
ಇನ್ನು "ದಿ ರಾಜಾ ಸಾಬ್" ಸಿನಿಮಾದಲ್ಲಿ ಬಾಲಿವುಡ್‌ನ ಸ್ಟಾರ್ ಕೂಡ ಇದ್ದಾರೆ. ಕನಕರಾಜು ಪಾತ್ರವನ್ನು ನಿರ್ವಹಿಸಿರುವ ಸಂಜಯ್ ದತ್ ಅವರಿಗೆ ₹5 ಕೋಟಿ ಸಂಭಾವನೆ ನೀಡಲಾಗಿದ್ದರೆ ಹಿರಿಯ ನಟ ಬೊಮನ್ ಇರಾನಿ ಅವರಿಗೆ ₹1 ಕೋಟಿ ಪೇಚೆಕ್ ನೀಡಲಾಗಿದೆ ಎಂಬ ಮಾಹಿತಿ ಇದೆ.
ಒಟ್ಟಿನಲ್ಲಿ, "ದಿ ರಾಜಾ ಸಾಬ್" ಚಿತ್ರಕ್ಕಾಗಿ 41,256 ಚದರ ಅಡಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು. 1200ಕ್ಕೂ ಅಧಿಕ ಕೆಲಸಗಾರರು ನಾಲ್ಕು ತಿಂಗಳಿಗೂ ಹೆಚ್ಚು ಶ್ರಮ ಹಾಕಿ ಈ ಸೆಟ್ ನಿರ್ಮಾಣ ಮಾಡಿದ್ದರು. ಇನ್ನು ವಿಎಫ್‌ಎಕ್ಸ್ ಕೆಲಸಗಳಿಗಾಗಿಯೇ ಹೆಚ್ಚು ಕಡಿಮೆ ಒಂದು ವರ್ಷವನ್ನು ಚಿತ್ರತಂಡ ಮೀಸಲಿಟ್ಟಿತ್ತು. ನಿರ್ಮಾಣದ ಈ ಖರ್ಚು ವೆಚ್ಚದ ಜೊತೆ ತಾರೆಯರ ಈ ಸಂಭಾವನೆ ಸೇರಿ ಚಿತ್ರದ ಬಜೆಟ್ ₹400 ಕೋಟಿಯ ಗಡಿಯನ್ನು ದಾಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಆದರೆ, ಈ ಚಿತ್ರವು ಹಾಕಿದ ಬಂಡವಾಳವನ್ನು ವಾಪಸ್ ಪಡೆಯುತ್ತಾ? ಕಾದು ನೋಡಬೇಕಾಗಿದೆ. ಏಕೆಂದರೆ, ಈ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಕಲೆಕ್ಷನ್ ಎರಡನೇ ದಿನವೇ ಡ್ರಾಪ್‌ಔಟ್ ಆಗಿದೆ ಎಂಬ ಮಾಹಿತಿ ಬಂದಿದ್ದು, ಸಿನಿಮಾ ಫ್ಲಾಪ್ ಆಗಲಿದೆ ಎಂಬ ಮ/ಾತು ದಟ್ಟವಾಗಿ ಕೇಳಿಬರುತ್ತಿದೆ. ಆದರೆ, ನಿಖರ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.