ದಿ ವಿಲನ್ : ಬುಕಿಂಗ್ ಮಾಡುವರಿಗೆ ಸಿಹಿ ಸುದ್ದಿ

By Kannadaprabha NewsFirst Published Oct 5, 2018, 10:57 AM IST
Highlights

ಆ್ಯಮಿ ಬರಲಿಲ್ಲ, ಸುದೀಪ್ ಇರಲಿಲ್ಲ, ಹೀರೋ ಶಿವಣ್ಣ 

ಆ್ಯಮಿ ಜಾಕ್ಸನ್ ಕಿದರ್ ಹೈ?
-ವೇದಿಕೆ ಹತ್ತಿರ ನಿಂತಿದ್ದ ನಿರ್ದೇಶಕ ಪ್ರೇಮ್‌ಗೆ ಯಾರೋ ಹೀಗೆ ಕಾಲೆಳೆದರು. ಡೌಟು ಅಂತ ನಕ್ಕರು ಪ್ರೇಮ್. ಸುದೀಪ್ ಹೈದರಾಬಾದ್‌ನಲ್ಲಿ ಚಿತ್ರೀಕರಣದ ವೇಳೆ ಸಣ್ಣದೊಂದು ಪೆಟ್ಟು ಬಿದ್ದು, ಟ್ರಾವೆಲ್ ಮಾಡ್ಲಿಕ್ಕೆ ಆಗ್ತಿಲ್ಲ. ಹಾಗಾಗಿ ಬಂದಿಲ್ಲ ಅಂತ ಶಿವರಾಜ್ ಕುಮಾರ್ ಅವರೇ ಹೇಳಿದ್ರು. ಹಾಗಾಗಿ ಅವತ್ತಿನ ಲೀಡರ್ ಶಿವರಾಜ್ ಕುಮಾರ್. ಅದು ‘ದಿ ವಿಲನ್’ ಟೀಸರ್ ಲಾಂಚ್ ಹಾಗೂ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ.

ಸಿಆರ್ ಮನೋಹರ್ ಈ ಚಿತ್ರದ ಹೀರೋ
ಶಿವರಾಜ್ ಕುಮಾರ್ ಪ್ರಕಾರ ಈ ಚಿತ್ರದ ನಿಜವಾದ ಹೀರೋ ನಿರ್ಮಾಪಕ ಸಿ.ಆರ್. ಮನೋಹರ್. ‘ಮನೋಹರ್ ಜಾಗದಲ್ಲಿ ಬೇರೆ ಯಾರೇ ಇದಿದ್ದರೂ ಈ ಸಿನಿಮಾ ಆಗುತ್ತಿರಲಿಲ್ಲ. ನಿರ್ದೇಶಕ ಪ್ರೇಮ್ ಸಹವಾಸ ಸಾಕು ಅಂತ ಅರ್ಧದಲ್ಲೇ ಕೈ ಮುಗಿದು ಹೋಗಿ ಬಿಡುತ್ತಿದ್ದರು. ಯಾಕಂದ್ರೆ ಅವರ ಡೈರೆಕ್ಷನ್‌ಗೆ ಸಿನಿಮಾ ಮಾಡೋದು ತುಂಬಾ ಕಷ್ಟ. ಅವ್ರ ಕೇಳಿದಾಗೆಲ್ಲ ಬಂಡವಾಳ ಹಾಕುವವರಿಗೂ ಗಟ್ಟಿ ಗುಂಡಿಗೆ ಬೇಕು. ಹಾಗೆ ಗುಂಡಿಗೆ ಗಟ್ಟಿ ಇರೋದ್ರಿಂದಲೇ ಮನೋಹರ್ ಈ ಸಿನಿಮಾ ಮಾಡಿದ್ರು. ಅದು ಇಲ್ಲಿ ತನಕ ಬಂತು. ಇಲ್ಲಿ ನಿಜವಾದ ಹೀರೋ ಅವರೇ’ ಎಂದರು ಶಿವಣ್ಣ.

ಪ್ರೇಮ್ ಜತೆಗೆ ಮತ್ತೆರಡು ಸಿನಿಮಾ: ಮನೋಹರ್
ಮೊದಲ ಪತ್ರಿಕಾಗೋಷ್ಠಿಯ ಮೊದಲ ಮಾತೇ ನಿರ್ಮಾಪಕ ಮನೋಹರ್ ಅವರದ್ದು. ‘ನನಗೆ ತಿಳಿದಿರುವ ಹಾಗೆ ಇದುವರೆಗೂ ಕನ್ನಡದಲ್ಲಿ ಯಾರೂ ಖರ್ಚು ಮಾಡದಷ್ಟು ಬಂಡವಾಳ ಹಾಕಿ ಈ ಸಿನಿಮಾ ಮಾಡಿದ್ದೇನೆ. ಪ್ರೇಮ್ ಕೂಡ ಅದನ್ನು ಅಷ್ಟೇ ಅದ್ಧೂರಿ ಆಗಿ ತೆರೆಗೆ ತಂದಿದ್ದಾರೆ. ತುಸು ಹೆಚ್ಚೇ ಸಮಯ ತೆಗೆದುಕೊಂಡರು ಎನ್ನುವ ಬೇಸರ ಬಿಟ್ಟರೆ, ಸಿನಿಮಾ ಅದ್ಭುತವಾಗಿ ಬಂದಿದೆ. ಅದಕ್ಕೆ ಶಿವಣ್ಣ, ಸುದೀಪ್ ಬೆಂಬಲವೇ ಕಾರಣ. ಪ್ರೇಮ್ ಸಿನಿಮಾ ಮಾಡುವ ರೀತಿಯೇ ಹಾಗೆ. ಹಣ ಬೇಕು ಅಂತಾರೆ, ಅದನ್ನು ತೆರೆ ಮೇಲೆ ತೋರಿಸ್ತಾರೆ. ಅವರ ಸ್ಟೈಲ್ ತುಂಬಾ ಇಷ್ಟವಾಗುತ್ತೆ. ಮುಂದೆ ಮತ್ತೆರಡು ಸಿನಿಮಾ ಅವರೊಂದಿಗೆ ಮಾಡುತ್ತೇನೆ’ ಎಂದರು ಮನೋಹರ್.

ಅರ್ಜುನ್ ಜನ್ಯಾಗೆ ಹೆರಿಗೆ ನೋವು
‘ಗಂಡಸ್ರಿಗೆ ಹೆರಿಗೆ ಆಗಿರೋದ್ರ ಬಗ್ಗೆ ನಂಗೆ ಅಷ್ಟಾಗಿ ಗೊತ್ತಿಲ್ಲ. ಹಾಗೆನಾದ್ರೂ ಆಗೋದಾದ್ರೆ ಅದು ನನಗೀಗ ಆಗುತ್ತಿದೆ’ - ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹೀಗೆಂದಾಗ ಅಲ್ಲಿದ್ದವರು ಗೊಳ್ಳೆಂದು ನಕ್ಕರು. ಅವರು ಹಾಗೆ ಹೇಳಿದ್ದು ನಿರ್ದೇಶಕ ಪ್ರೇಮ್ ಜತೆಗೆ ತಾವು ಕೆಲಸ ಮಾಡಿದ ಅನುಭವದ ಕುರಿತು. ‘ಪ್ರೇಮ್ ಅವರ ಜತೆಗೆ ಕೆಲಸ ಮಾಡೋದು ಕಷ್ಟ ಅಂತ ಹೇಳ್ತಾರೆ. ಅದ್ರೆ ನಂಗೇನು ಅಂತ ಅನುಭವ ಆಗಿಲ್ಲ. ಆದ್ರೆ, ತಾವು ಬಯಸಿದ ಸಂಗೀತವೇ ಬರೋವರೆಗೂ ಅವರು ಬಿಡೋದಿಲ್ಲ. ನಾವು ಏನೇ ಮಾಡಿದ್ರು ಡಿಲೀಟ್ ಅಂದು ಬಿಡುತ್ತಾರೆ. ಈ ಸಿನಿಮಾಕ್ಕೆ ಸಂಗೀತ ನೀಡುವಾಗ ಅದೆಷ್ಟು ಬಾರಿ ಡಿಲೀಟ್ ಪದ ಕೇಳಿದ್ದೆನೋ ಗೊತ್ತಿಲ್ಲ’ ಅಂತ ಹೇಳಿ ನಗಿಸಿದರು. 

click me!