ಮಳೆ ಬಂದರೆ ಇನ್ಮುಂದೆ ಭಯವಾಗುತ್ತೆ: ನೆಟ್‌ಫ್ಲಿಕ್ಸ್‌ನ ಈ ಸಿನಿಮಾ ನೋಡಿದ್ರೆ ಹನಿಹನಿಯೂ ಚುಚ್ಚಿದಂತಾಗುತ್ತೆ!

Published : Aug 10, 2026, 05:20 PM IST
The Last House

ಸಾರಾಂಶ

ಮಳೆಗಾಲ ಅಂದ್ರೆ ಹಲವರಿಗೆ ಖುಷಿ. ತಂಪಾದ ವಾತಾವರಣ, ಕಿಟಕಿಯಿಂದ ಕಾಣಿಸುವ ಮಳೆಯ ದೃಶ್ಯ, ಬಿಸಿ ಬಿಸಿ ಕಾಫಿ.. ಹೀಗೆ ಮಳೆಗಾಲದ ಅನುಭವವೇ ವಿಭಿನ್ನ. ಆದರೆ, ನೆಟ್‌ಫ್ಲಿಕ್ಸ್‌ನಲ್ಲಿರುವ ಈ ಸಿನಿಮಾ ನೋಡಿದ ಬಳಿಕ..

ಮಳೆಗಾಲ ಅಂದ್ರೆ ಹಲವರಿಗೆ ಖುಷಿ. ತಂಪಾದ ವಾತಾವರಣ, ಕಿಟಕಿಯಿಂದ ಕಾಣಿಸುವ ಮಳೆಯ ದೃಶ್ಯ, ಬಿಸಿ ಬಿಸಿ ಕಾಫಿ.. ಹೀಗೆ ಮಳೆಗಾಲದ ಅನುಭವವೇ ವಿಭಿನ್ನ. ಆದರೆ, ನೆಟ್‌ಫ್ಲಿಕ್ಸ್‌ನಲ್ಲಿರುವ ಈ ಸಿನಿಮಾ ನೋಡಿದ ಬಳಿಕ ಮಳೆ ಬಂದರೂ ಒಂದು ಕ್ಷಣ ಯೋಚಿಸುವಂತಾಗಬಹುದು! ಸೈನ್ಸ್‌ ಫಿಕ್ಷನ್‌, ಹಾರರ್‌ ಮತ್ತು ಥ್ರಿಲ್ಲರ್‌ ಅಂಶಗಳನ್ನು ಬೆರೆಸಿರುವ ‘ದಿ ಲಾಸ್ಟ್‌ ಹೌಸ್‌’ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸದ್ದು ಮಾಡುತ್ತಿದೆ. ಕೇವಲ 1 ಗಂಟೆ 50 ನಿಮಿಷಗಳ ಈ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಕುತೂಹಲದಲ್ಲೇ ಕೂರಿಸುತ್ತದೆ. ಅದರಲ್ಲೂ ಸಿನಿಮಾದಲ್ಲಿ ಬರುವ ವಿಚಿತ್ರ ಮಳೆಯ ಪರಿಕಲ್ಪನೆ ನೋಡುಗರಿಗೆ ಹೊಸ ಅನುಭವ ನೀಡುತ್ತದೆ.

ಮಳೆಯೇ ಮನೆಯನ್ನೇ ಜೈಲಾಗಿ ಮಾಡಿಬಿಟ್ಟರೆ?

‘ದಿ ಲಾಸ್ಟ್‌ ಹೌಸ್‌’ ಕಥೆ ಕೇಳುವುದಕ್ಕೆ ಸರಳವಾಗಿದ್ದರೂ, ಸಿನಿಮಾ ಮುಂದುವರಿದಂತೆ ಅದರ ಭಯಾನಕತೆ ಹೆಚ್ಚುತ್ತಾ ಹೋಗುತ್ತದೆ. ಕಥೆಯ ಕೇಂದ್ರದಲ್ಲಿ ಒಂದು ಕುಟುಂಬ. ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳು ತಮ್ಮ ಮನೆಯೊಳಗೆ ಇದ್ದಕ್ಕಿದ್ದಂತೆ ಸಿಲುಕಿಕೊಳ್ಳುತ್ತಾರೆ. ಇದು ಕೇವಲ ಅವರ ಮನೆಯ ಸಮಸ್ಯೆಯಲ್ಲ. ಇಡೀ ನಗರವೇ ತಮ್ಮ ತಮ್ಮ ಮನೆಗಳೊಳಗೆ ಸಿಕ್ಕಿಹಾಕಿಕೊಂಡಿರುತ್ತದೆ. ಏನಾಗುತ್ತಿದೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಮನೆಯ ಬಾಗಿಲು ತೆರೆಯುವುದಿಲ್ಲ. ಕಿಟಕಿಗಳನ್ನೂ ತೆರೆಯಲು ಅಥವಾ ಒಡೆಯಲು ಸಾಧ್ಯವಾಗುವುದಿಲ್ಲ. ಮೊಬೈಲ್‌ ಫೋನ್‌, ಇಂಟರ್‌ನೆಟ್‌ ಸೇರಿದಂತೆ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವ ಎಲ್ಲ ಮಾರ್ಗಗಳೂ ಬಂದ್‌ ಆಗುತ್ತವೆ.

ಅಷ್ಟರಲ್ಲಿ ಶುರುವಾಗುತ್ತದೆ ಆ ವಿಚಿತ್ರ ಮಳೆ!

ಮಳೆಯ ಜೊತೆ ಬರುತ್ತವೆ ಭಯಾನಕ ಜೀವಿಗಳು! ಈ ಸಿನಿಮಾದ ಅಸಲಿ ಟ್ವಿಸ್ಟ್‌ ಇದೇ. ಸಾಮಾನ್ಯ ಮಳೆಯಂತೆ ಕಾಣಿಸುವ ಆ ಮಳೆ ಕುಟುಂಬವನ್ನು ಮನೆಯೊಳಗೆ ಬಂಧಿಸುವುದಷ್ಟೇ ಅಲ್ಲ, ಅದರೊಂದಿಗೆ ವಿಚಿತ್ರ ಜೀವಿಗಳೂ ಕಾಣಿಸಿಕೊಳ್ಳುತ್ತವೆ. ಮೊದಲಿಗೆ ಇದು ಕೆಲ ದಿನಗಳಲ್ಲಿ ಸರಿಹೋಗಬಹುದು ಎಂದು ಕುಟುಂಬ ಭಾವಿಸುತ್ತದೆ. ಆದರೆ, ಸಮಯ ಕಳೆದಂತೆ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿಯಾಗುತ್ತದೆ. ತಾವು ಎದುರಿಸುತ್ತಿರುವುದು ಸಾಮಾನ್ಯ ಪ್ರಕೃತಿ ವಿಕೋಪವಲ್ಲ ಎಂಬುದು ಅವರಿಗೆ ನಿಧಾನವಾಗಿ ಅರ್ಥವಾಗುತ್ತದೆ. ಹೊರಗೆ ಹೋಗಲು ಸಾಧ್ಯವಿಲ್ಲ. ಯಾರನ್ನೂ ಸಂಪರ್ಕಿಸಲು ಸಾಧ್ಯವಿಲ್ಲ. ಆಹಾರ, ನೀರು ಸೇರಿದಂತೆ ಬದುಕಲು ಬೇಕಾದ ವಸ್ತುಗಳನ್ನು ಸಂಗ್ರಹಿಸಿಕೊಳ್ಳಬೇಕು. ಅದರ ನಡುವೆ ತಮ್ಮನ್ನು ಸುತ್ತುವರಿದಿರುವ ಆ ವಿಚಿತ್ರ ಜೀವಿಗಳ ರಹಸ್ಯವನ್ನೂ ಅರ್ಥಮಾಡಿಕೊಳ್ಳಬೇಕು. ಹೀಗಾಗಿ ಇಡೀ ಕುಟುಂಬ ಬದುಕುಳಿಯಲು ಒಟ್ಟಾಗಿ ಹೋರಾಡಬೇಕಾಗುತ್ತದೆ.

ಕುಟುಂಬವನ್ನು ಉಳಿಸಲು ಹೋರಾಡುವ ಅಪ್ಪ-ಅಮ್ಮ!

ಚಿತ್ರದಲ್ಲಿ ಗ್ರೇಟಾ ಲೀ ಅವರು ಆ್ಯನ್‌ ಪಾತ್ರದಲ್ಲಿ ಹಾಗೂ ವಾಗ್ನರ್‌ ಮೌರಾ ಅವರು ಜೇಸನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಈ ಅಪಾಯಕಾರಿ ಪರಿಸ್ಥಿತಿಯಿಂದ ರಕ್ಷಿಸಲು ಇಬ್ಬರೂ ಪೋಷಕರು ಹೋರಾಡುತ್ತಾರೆ. ಕುಟುಂಬದ ಭಾವನೆ, ಸರ್ವೈವಲ್‌ ಥ್ರಿಲ್ಲರ್‌, ಸೈನ್ಸ್‌ ಫಿಕ್ಷನ್‌ ಹಾಗೂ ಹಾರರ್‌ ಅಂಶಗಳನ್ನು ಒಂದೇ ಕಥೆಯಲ್ಲಿ ಬೆರೆಸಿರುವುದು ಚಿತ್ರದ ಪ್ರಮುಖ ಆಕರ್ಷಣೆ. ಪ್ರೇಕ್ಷಕರಿಗೆ ಆರಂಭದಲ್ಲೇ ಎಲ್ಲವನ್ನೂ ಹೇಳಿಬಿಡದೆ, ಒಂದೊಂದೇ ರಹಸ್ಯವನ್ನು ತೆರೆದಿಡುವ ರೀತಿಯಲ್ಲಿ ಕಥೆ ಸಾಗುತ್ತದೆ. ಹೀಗಾಗಿ “ಅಸಲಿಗೆ ಇಲ್ಲಿ ಆಗುತ್ತಿರುವುದೇನು?” ಎಂಬ ಪ್ರಶ್ನೆ ಸಿನಿಮಾ ಮುಗಿಯುವವರೆಗೂ ಕಾಡುತ್ತದೆ.

ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌.. ರೇಟಿಂಗ್‌ ಮಾತ್ರ ಹೀಗಿದೆ!

2026ರಲ್ಲಿ ಬಿಡುಗಡೆಯಾಗಿರುವ ಈ ಸೈನ್ಸ್‌ ಫಿಕ್ಷನ್‌ ಹಾರರ್‌ ಥ್ರಿಲ್ಲರ್‌ ಸಿನಿಮಾವನ್ನು ಫ್ರೆಂಚ್‌ ನಿರ್ದೇಶಕ ಲೂಯಿ ಲೆಟೆರಿಯರ್‌ ನಿರ್ದೇಶಿಸಿದ್ದಾರೆ. ‘ದಿ ಇನ್‌ಕ್ರೆಡಿಬಲ್‌ ಹಲ್ಕ್‌’, ‘ನೌ ಯು ಸೀ ಮೀ’ ಮತ್ತು ‘ಫಾಸ್ಟ್‌ ಎಕ್ಸ್‌’ ಸಿನಿಮಾಗಳ ನಿರ್ದೇಶನಕ್ಕಾಗಿ ಅವರು ಪರಿಚಿತರು. ಚಿತ್ರದ ಕಥೆಯನ್ನು ಮ್ಯಾಥ್ಯೂ ರಾಬಿನ್ಸನ್‌ ಬರೆದಿದ್ದು, ಅವರು ‘ಲವ್‌ ಆ್ಯಂಡ್‌ ಮಾನ್ಸ್ಟರ್ಸ್‌’, ‘ಡೋರಾ ಆ್ಯಂಡ್‌ ದಿ ಲಾಸ್ಟ್‌ ಸಿಟಿ ಆಫ್‌ ಗೋಲ್ಡ್‌’ ಸೇರಿದಂತೆ ಹಲವು ಸಿನಿಮಾಗಳಿಗೆ ಕಥೆ ಬರೆದಿದ್ದಾರೆ. ಸುಮಾರು 1 ಗಂಟೆ 50 ನಿಮಿಷಗಳ ಅವಧಿಯ ಈ ಸಿನಿಮಾಗೆ IMDbಯಲ್ಲಿ 5.6 ರೇಟಿಂಗ್‌ ಸಿಕ್ಕಿದೆ. ಆದರೂ ನೆಟ್‌ಫ್ಲಿಕ್ಸ್‌ಗೆ ಬಂದ ಬೆನ್ನಲ್ಲೇ ಸಿನಿಮಾ ಟ್ರೆಂಡಿಂಗ್‌ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಸೈನ್ಸ್‌ ಫಿಕ್ಷನ್‌ ಹಾಗೂ ಹಾರರ್‌ ಪ್ರಿಯರ ಗಮನ ಸೆಳೆಯುತ್ತಿದೆ.

ಮಳೆ ನೋಡಿದಾಗ ಈ ಸಿನಿಮಾ ನೆನಪಾಗಬಹುದು!

‘ದಿ ಲಾಸ್ಟ್‌ ಹೌಸ್‌’ನ ವಿಶೇಷತೆ ಎಂದರೆ ಭಯ ಹುಟ್ಟಿಸಲು ಕೇವಲ ಜಂಪ್‌ ಸ್ಕೇರ್‌ಗಳನ್ನು ಅವಲಂಬಿಸದೇ, ಮಳೆ, ಮನೆ ಮತ್ತು ಹೊರಗಿನ ಜಗತ್ತಿನಿಂದ ಸಂಪೂರ್ಣ ಸಂಪರ್ಕ ಕಡಿತ ಎಂಬ ಪರಿಕಲ್ಪನೆಯನ್ನೇ ಭಯದ ಮೂಲವನ್ನಾಗಿ ಮಾಡಿರುವುದು. ಹೀಗಾಗಿ ಮಳೆಗಾಲದಲ್ಲಿ ಒಂದು ವಿಭಿನ್ನ ಸೈನ್ಸ್‌ ಫಿಕ್ಷನ್‌ ಥ್ರಿಲ್ಲರ್‌ ನೋಡಬೇಕು ಎನ್ನುವವರಿಗೆ ಈ ಸಿನಿಮಾ ಹೊಸ ಅನುಭವ ನೀಡಬಹುದು. ಒಮ್ಮೆ ‘ದಿ ಲಾಸ್ಟ್‌ ಹೌಸ್‌’ ನೋಡಿದ ಮೇಲೆ ಹೊರಗೆ ಮಳೆ ಸುರಿಯುವಾಗ ಕಿಟಕಿಯಾಚೆ ನೋಡಲು ಕೂಡ ಒಂದು ಕ್ಷಣ ಯೋಚಿಸುವಂತಾದರೆ ಅಚ್ಚರಿಯಿಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿಯಾರಾ ಬಗ್ಗೆ ಯಶ್ ಹೇಳಿರೋ 'ಈ ಮಾತನ್ನು' ಇಡೀ ಜಗತ್ತು ಗಮನಿಸಿದೆ.. 'ಗೂಡಾರ್ಥ' ನಿಮಗೆ ಅರ್ಥವಾಯ್ತಾ?
‘ಕಾಲವನ್ನು ತಡೆಯೋರು ಯಾರು ಇಲ್ಲ’.. ಜಗ್ಗೇಶ್‌ರ ಬುಲೆಟ್‌ ಕಥೆ ಹೇಳಿದ ಜೀವನ ಪಾಠವೇನು?