'ಈ ಸಿನಿಮಾ ಇಷ್ಟವಾಗದಿದ್ರೆ ನಡುರಸ್ತೆಯಲ್ಲೇ ತಲೆ ಬೋಳಿಸಿಕೊಳ್ತೀನಿ': ನಟಿ ಶ್ವೇತಾ ಲಕ್ಷ್ಮಣ್‌ ಚಾಲೆಂಜ್‌

Published : Aug 28, 2026, 06:00 PM IST
Actress Shwetha Lakshman

ಸಾರಾಂಶ

‘ಸಹ: ಲೈಫ್‌ ಆಫ್‌ ಸಂಜು’ ಸಿನಿಮಾ ಬಗ್ಗೆ ಯಂಗ್‌ ಹೀರೋಯಿನ್‌ ಶ್ವೇತಾ ಲಕ್ಷ್ಮಣ್‌ ಸಖತ್‌ ಕಾನ್ಫಿಡೆನ್ಸ್‌ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿ ಪ್ರೇಕ್ಷಕರು ಡಿಸಪ್ಪಾಯಿಂಟ್‌ ಆದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಚಾಲೆಂಜ್‌ ಹಾಕಿದ್ದಾರೆ.

ಸಿನಿಮಾ ಗೆಲ್ಲೋಕೆ ದೊಡ್ಡ ಸ್ಟಾರ್‌ಗಳು, ಕೋಟಿ ಕೋಟಿ ಬಜೆಟ್‌ ಅಥವಾ ಗ್ಲಾಮರ್‌ ಹಾಡುಗಳೇ ಬೇಕು ಅನ್ನೋ ಕಾಲ ಇದಲ್ಲ. ಕಥೆ ಮತ್ತು ಕಂಟೆಂಟ್‌ ಚೆನ್ನಾಗಿದ್ದರೆ ಸಾಕು, ಸಣ್ಣ ಸಿನಿಮಾಗಳೂ ಪ್ರೇಕ್ಷಕರ ಮನ ಗೆಲ್ಲಬಲ್ಲವು. ಇದೀಗ ಇದೇ ನಂಬಿಕೆಯೊಂದಿಗೆ ತನ್ನ ಸಿನಿಮಾದ ಬಗ್ಗೆ ಯಂಗ್‌ ಹೀರೋಯಿನ್‌ ಶ್ವೇತಾ ಲಕ್ಷ್ಮಣ್‌ ಸಖತ್‌ ಕಾನ್ಫಿಡೆನ್ಸ್‌ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನೋಡಿ ಪ್ರೇಕ್ಷಕರು ಡಿಸಪ್ಪಾಯಿಂಟ್‌ ಆದರೆ ನಡುರಸ್ತೆಯಲ್ಲಿ ನಿಂತು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಸೆಪ್ಟೆಂಬರ್‌ 4ರಂದು ತೆರೆಗೆ ಬರಲು ಸಜ್ಜಾಗಿರುವ ಸಿನಿಮಾಗಳ ಪೈಕಿ ‘ಸಹ: ಲೈಫ್‌ ಆಫ್‌ ಸಂಜು’ ಕೂಡ ಒಂದು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಟ್ರೇಲರ್‌ ಲಾಂಚ್‌ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ನಿರ್ಮಾಪಕ ಬನ್ನಿ ವಾಸ್‌ ಸೇರಿದಂತೆ ಚಿತ್ರತಂಡದ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ನಾಯಕಿ ಶ್ವೇತಾ ಲಕ್ಷ್ಮಣ್‌ ಮಾತನಾಡಿದ ರೀತಿ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು, ಮಾಧ್ಯಮದವರು, ಕುಟುಂಬಸ್ಥರು ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ಅವರು, ವಂಶಿ ನಂದಿಪಾಟಿ, ಬನ್ನಿ ವಾಸ್‌ ಸೇರಿದಂತೆ ಚಿತ್ರಕ್ಕೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಿರ್ಮಾಪಕ ತೇಜ ವೆಲ್ಪುಚರ್ಲ, ನಿರ್ದೇಶಕ ನಿಶಾಂತ್‌ ದೋತಿ, ನಾಯಕ ಕುಮಾರ್‌ ಕಾಸರಂ ಸೇರಿದಂತೆ ಇಡೀ ಚಿತ್ರತಂಡದ ಪರಿಶ್ರಮವನ್ನು ಅವರು ನೆನಪಿಸಿಕೊಂಡರು.

‘ನಮ್ಮ ಬಳಿ ದೊಡ್ಡ ಬಜೆಟ್‌ ಇಲ್ಲ.. ಆದರೆ ಕಥೆಯ ಮೇಲೆ ನಂಬಿಕೆ ಇದೆ’

ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ಶ್ವೇತಾ ಲಕ್ಷ್ಮಣ್‌, ‘ಸಹ’ ಚಿತ್ರಕ್ಕೆ ದೊಡ್ಡ ಬಜೆಟ್‌ ಅಥವಾ ದೊಡ್ಡ ಸ್ಟಾರ್‌ ಕಾಸ್ಟ್‌ ಇಲ್ಲದಿರಬಹುದು. ಆದರೆ ತಮ್ಮ ಬಳಿ ಇರುವ ದೊಡ್ಡ ಶಕ್ತಿ ಕಥೆಯ ಮೇಲಿನ ನಂಬಿಕೆ ಎಂದು ಹೇಳಿದ್ದಾರೆ. ಇದು ಕೇವಲ ಒಂದು ಸಾಮಾನ್ಯ ಲವ್‌ಸ್ಟೋರಿ ಅಲ್ಲ. ನಮ್ಮ ಜೀವನದಲ್ಲಿ ನಡೆಯುವ, ನಡೆದಿರುವ, ಮುಂದೆ ನಡೆಯಬಹುದಾದ ಹಾಗೂ ನಡೆಯಬಾರದು ಎಂದುಕೊಳ್ಳುವ ಹಲವು ಭಾವನೆಗಳನ್ನು ಸಿನಿಮಾ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರೀತಿ ಎಂದರೆ ಕೇವಲ ರೊಮ್ಯಾಂಟಿಕ್‌ ಹಾಡುಗಳು, ಮಾಂಟೇಜ್‌ಗಳು ಮಾತ್ರವಲ್ಲ. ಅದರ ಹಿಂದೆ ನೋವು, ತ್ಯಾಗ ಹಾಗೂ ಸಾಕಷ್ಟು ಆಳವಾದ ಭಾವನೆಗಳಿರುತ್ತವೆ. ನಾವು ತೆಗೆದುಕೊಳ್ಳುವ ಒಂದು ಸಣ್ಣ ನಿರ್ಧಾರ ಕೂಡ ಕೆಲವೊಮ್ಮೆ ಇಡೀ ಜೀವನವನ್ನೇ ಬದಲಿಸಿಬಿಡಬಹುದು. ಇಂತಹ ಭಾವನೆಗಳನ್ನು ಸಿನಿಮಾದಲ್ಲಿ ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದೇವೆ ಎಂದು ಶ್ವೇತಾ ಲಕ್ಷ್ಮಣ್‌ ವಿವರಿಸಿದ್ದಾರೆ.

‘ವಿನಂತಿ ಮಾಡ್ತಿಲ್ಲ.. ಚಾಲೆಂಜ್‌ ಮಾಡ್ತಿದ್ದೀನಿ!’

ತಮ್ಮ ಮಾತುಗಳಲ್ಲೇ ಸಿನಿಮಾದ ಮೇಲಿನ ವಿಶ್ವಾಸವನ್ನು ತೋರಿಸಿದ ಶ್ವೇತಾ ಲಕ್ಷ್ಮಣ್‌, ಪ್ರೇಕ್ಷಕರಿಗೆ ಕೇವಲ ಸಿನಿಮಾ ನೋಡಿ ಎಂದು ಮನವಿ ಮಾಡುತ್ತಿಲ್ಲ, ಬದಲಿಗೆ ಚಾಲೆಂಜ್‌ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಸಿನಿಮಾ ನೋಡಿದ ಮೇಲೆ, ಎಂಥಾ ಒಳ್ಳೆಯ ಸಿನಿಮಾ ಮಾಡಿದ್ದಾರೆ ಇವರು ಅಂತ ನೀವೆಲ್ಲರೂ ಅಂದುಕೊಳ್ತೀರಾ. ಥಿಯೇಟರ್‌ನಿಂದ ಹೊರಬರುವಾಗ ಯಾರೂ ಡಿಸಪ್ಪಾಯಿಂಟ್‌ ಆಗಲ್ಲ.

ಒಂದು ವೇಳೆ ಡಿಸಪ್ಪಾಯಿಂಟ್‌ ಆದರೆ, ನೆನಪಿಟ್ಟುಕೊಳ್ಳಿ.. ನಾನು ನಡುರಸ್ತೆಯಲ್ಲಿ ನಿಂತು ತಲೆ ಬೋಳಿಸಿಕೊಳ್ತೀನಿ. ಅಷ್ಟು ಸ್ಟ್ರಾಂಗ್‌ ಕಂಟೆಂಟ್‌ ನಮ್ಮ ಸಿನಿಮಾದಲ್ಲಿದೆ ಎಂದು ಶ್ವೇತಾ ಲಕ್ಷ್ಮಣ್‌ ಸವಾಲು ಹಾಕಿದ್ದಾರೆ. ನಾಯಕಿಯ ಈ ಮಾತುಗಳು ಟ್ರೇಲರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಭಾರೀ ಸದ್ದು ಮಾಡಿದ್ದು, ಇದೀಗ ಸೋಷಿಯಲ್‌ ಮೀಡಿಯಾದಲ್ಲೂ ಚರ್ಚೆಗೆ ಕಾರಣವಾಗಿವೆ.

‘ಸಹ’ ಸಿನಿಮಾ ಮಾತ್ರವಲ್ಲ.. 50-60 ಜನರ ಕನಸು!

ತೆಲುಗು ಪ್ರೇಕ್ಷಕರು ಉತ್ತಮ ಸಿನಿಮಾಗಳನ್ನು ಮನಸಾರೆ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ ಶ್ವೇತಾ ಲಕ್ಷ್ಮಣ್‌, ಅದಕ್ಕಾಗಿಯೇ ಉತ್ತಮ ಕಂಟೆಂಟ್‌ನೊಂದಿಗೆ ಸಿನಿಮಾ ತರುತ್ತಿದ್ದೇವೆ ಎಂದಿದ್ದಾರೆ. ಉತ್ತಮ ಥಿಯೇಟರ್‌ಗಳಲ್ಲಿ, ಕೈಗೆಟುಕುವ ದರದಲ್ಲಿ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

‘ಸಹ: ಲೈಫ್‌ ಆಫ್‌ ಸಂಜು’ ಕೇವಲ ಒಂದು ಸಿನಿಮಾ ಅಲ್ಲ. ಇದರ ಹಿಂದೆ ಕೆಲಸ ಮಾಡಿರುವ ಸುಮಾರು 50ರಿಂದ 60 ಮಂದಿ ಹೊಸ ಪ್ರತಿಭೆಗಳ ಜೀವನ, ಕಠಿಣ ಪರಿಶ್ರಮ, ಡೆಡಿಕೇಷನ್‌, ಪ್ಯಾಷನ್‌ ಮತ್ತು ಕನಸುಗಳಿವೆ. ಇವೆಲ್ಲವೂ ಸೇರಿ ‘ಸಹ’ ಸಿನಿಮಾ ರೂಪುಗೊಂಡಿದೆ ಎಂದು ಶ್ವೇತಾ ಲಕ್ಷ್ಮಣ್‌ ಹೇಳಿದ್ದಾರೆ.

ಇನ್ನು ನಿಶಾಂತ್‌ ದೋತಿ ನಿರ್ದೇಶನದ ಈ ಚಿತ್ರಕ್ಕೆ ಶೇಖರ್‌ ಚಂದ್ರ ಸಂಗೀತ ನೀಡಿದ್ದಾರೆ. ಕುಮಾರ್‌ ಕಾಸರಂ, ಶ್ವೇತಾ ಲಕ್ಷ್ಮಣ್‌, ಪ್ರಜ್ಞಾ ಪಾಂಡ್ಯ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸುಮೈರಾ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ತೇಜ ವೆಲ್ಪುಚರ್ಲ ನಿರ್ಮಿಸಿರುವ ‘ಸಹ: ಲೈಫ್‌ ಆಫ್‌ ಸಂಜು’ ಸೆಪ್ಟೆಂಬರ್‌ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಟಾಕ್ಸಿಕ್' ಸಿನಿಮಾ ವಿರುದ್ಧ ಆಕ್ರೋಶ, ಸೆನ್ಸಾರ್ ಮಂಡಳಿ ವಿರುದ್ಧ ಸಿಡಿದೆದ್ದ ಅಣ್ಣಾಮಲೈ
Raksha Bandhan: ಟಾಕ್ಸಿಕ್ ಹೈಪ್ ನಡುವೆಯೂ ತಂಗಿಗೆ ಸಮಯ ಕೊಟ್ಟ ಯಶ್: ನಂದಿನಿ ಜೊತೆ ರಕ್ಷಾ ಬಂಧನ