
ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ 'ಟಾಕ್ಸಿಕ್' ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಮಿಂಚುತ್ತಿರುವ ಯಶ್ ಸಿನಿಮಾ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಟಿಸ್ಟಾರ್ ಗ್ಯಾಂಗ್‌ಸ್ಟರ್ ಡ್ರಾಮಾ ಮೂಲಕ ಮಹಿಳಾ ಕಲಾವಿದರೇ ಹೆಚ್ಚು ನಟಿಸಿರುವ ಸಿನಿಮಾದಲ್ಲಿ, ಮಹಿಳೆಯರನ್ನು ಅತ್ಯಂತ ಆಕ್ಷೇಪಾರ್ಹವಾಗಿ, ಲೈಂಗಿಕ ದೃಷ್ಟಿಯಿಂದ, ಸ್ತ್ರೀ ದ್ವೇಷಿ ಅಂಶಗಳೇ ತುಂಬಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಸದ್ಯ ಈ ಸಾಲಿಗೆ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ, 'ವಿ ದಿ ಲೀಡರ್ಸ್' ಸಂಘಟನೆಯ ನಾಯಕ ಕೆ ಅಣ್ಣಾಮಲೈ ಬೇಸರ ಹೊರ ಹಾಕಿದ್ದಾರೆ. ಈ ಸಿನಿಮಾದಲ್ಲಿ ಸ್ತ್ರೀಯರ ವಿರುದ್ಧ ಅಂಶಗಳೇ ತುಂಬಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಸಿನಿಮಾಗೆ ಸರ್ಟಿಫಿಕೇಟ್ ನೀಡಿದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್ (ಸಿಬಿಎಫ್ಸಿ) ವಿರುದ್ಧ ಸಿಡಿದ್ದೆದಿದ್ದಾರೆ.
'ನಿಯಮಗಳು ಹಾಗೂ ನಿರ್ಬಂಧಗಳು ಮತ್ತಷ್ಟು ಕಠಿಣ ಮಾಡಬೇಕು, ಸ್ಟಾರ್ ಸಿನಿಮಾಗಳಾರೂ ಯಾವ ರೀತಿಯ ದೃಶಗಳಿಗೆ ಅನುಮತಿ ನೀಡಬೇಕು ಎಂಬ ಬಗ್ಗೆ ಸೆನ್ಸಾರ್ ಬೋರ್ಡ್ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ಮಾಜಿ ಐಪಿಎಸ್ ಅಧಿಕಾರಿ ಹೇಳಿದ್ದಾರೆ. ಈ ಸಿನಿಮಾ ಗೆಲುವಿನ ಬಗ್ಗೆಯೂ ಆತಂಕ ಹೊರ ಹಾಕಿರುವ ಅವರು, 'ಮಹಿಳೆಯರನ್ನು ಈ ರೀತಿ ತೋರಿಸುವ ಸಿನಿಮಾಗಳನ್ನು ಮಕ್ಕಳು ನೋಡಿದರೆ, ಅದು ಅವರ ಮೇಲೆ ತೀವ್ರ ಪರಿಣಾಮ ಬೀರಲಿದೆ' ಎಂದು ಬೇಸರ ಹೊರಹಾಕಿದ್ದಾರೆ.
'ಈ ಸಿನಿಮಾ ಮೊದಲ ದಿನವೇ 104 ಕೋಟಿ ವಸೂಲಿ ಮಾಡಿದೆ. ಮಹಿಳೆಯರನ್ನ ಒಂದು ದೃಷ್ಟಿಕೋನದಲ್ಲಿ ತೋರಿಸಿದ್ದಾರೆ. ನಮ್ಮ ಮಕ್ಕಳೊಂದಿಗೆ ಇಂತಹ ದೃಶ್ಯಗಳನ್ನು ನೋಡಿದರೆ, ದೇಶದಲ್ಲಿ ಮಹಿಳೆಯರ ಪರಿಸ್ಥಿತಿ ಏನಾಗುತ್ತದೆ' ಎಂದು ಪ್ರಶ್ನಿಸಿದ್ದಾರೆ.
ಸಿನಿಮಾದಲ್ಲಿ ಮಹಿಳೆಯರನ್ನು 'ಅಸಭ್ಯವಾಗಿ' ತೋರಿಸಿದರೆ, ಅವರ ಭದ್ರತೆ ಮತ್ತು ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಗಳು ವಿಫಲವಾಗುತ್ತವೆ. ಇಂತಹ ಸಿನಿಮಾಗಳಿಗೆ ಅನುಮತಿ ನೀಡಿರುವ ಸೆನ್ಸಾರ್ ಬೋರ್ಡ್ ಬಗ್ಗೆಯೂ ಬೇಸರ ಹೊರಹಾಕಿರುವ ಅವರು, 'ನಾವು ಪ್ರತಿ ಊರಿಗೆ, ಶಾಲೆ-ಕಾಲೇಜುಗಳಿಗೆ ಹೋಗಿ ಮಹಿಳೆಯರ ಭದ್ರತೆ ಬಗ್ಗೆ ಮಾತನಾಡುತ್ತೇವೆ. ಆದರೆ ಸೆನ್ಸಾರ್ ಬೋರ್ಡ್ ಇಂತಹ ಸಿನಿಮಾಗಳಿಗೆ ಅನುಮತಿ ನೀಡುತ್ತಿದೆ. ಈ ಸಿನಿಮಾ ಮಹಿಳೆಯರಿಗೆ ಗೌರವ ನೀಡುತ್ತಾ? ಸಿನಿಮಾದಲ್ಲಿ ಹಲವು ಸಂಗತಿಗಳನ್ನು ತೋರಿಸುತ್ತಾರೆ. ಅವುಗಳು ಸಮಾಜದ ಮೇಲೆ ಪ್ರಭಾವ ಉಂಟು ಮಾಡುತ್ತವೆ' ಎಂದು ಅಣ್ಣಾಮಲೈ ಹೇಳಿದ್ದಾರೆ.
ಇನ್ನು, ಟಾಕ್ಸಿಕ್ ಪ್ರೀ ರಿಲೀಜ್ ಸಮಾರಂಭದಲ್ಲಿ ಸಿನಿಮಾ ವಿರುದ್ಧ ಕೇಳಿ ಬಂದ ವಿಮರ್ಶೆಗಳ ಕುರಿತು ಮಾತನಾಡಿದ್ದ ಯಶ್, ನಿರ್ದೇಶಕಿ ಗೀತು ಮೋಹನ್ ದಾಸ್ಗೆ ಬೆಂಬಲವಾಗಿ ಮಾತನಾಡಿದ್ದರು. 'ಸಮಾಜ ಏನೇ ಹೇಳಬಹುದು ಅಥವಾ ತನ್ನ ಒಪ್ಪಿಗೆಯನ್ನು ನೀಡದಿರಬಹುದು. ಆದರೆ ಎಲ್ಲರ ದೃಷ್ಟಿ ನಿಮ್ಮ ಮೇಲೆಯೇ ಇರುತ್ತೆ. ನನಗೆ ನನ್ನ ಬಳಿ ಇರುವ ಹಣಕ್ಕಾಗಿ ಗೌರವ ಸಿಗೋದಿಲ್ಲ, ಬದಲಿಗೆ ನನ್ನ ಕೆಲಸಕ್ಕಾಗಿ ಗೌರವ ಸಿಗುತ್ತದೆ. ಪ್ರತಿಯೊಬ್ಬ ಮಹಿಳೆ ಮತ್ತು ಯುವತಿಯೂ ಯಾವುದೇ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಬಲ್ಲರು, ತಮ್ಮ ಆಲೋಚನೆ ಹಾಗೂ ದೃಷ್ಟಿಕೋನಗಳನ್ನು ವ್ಯಕ್ತಪಡಿಸಬಲ್ಲರು ಮತ್ತು ಈ ಸಮಾಜದಲ್ಲಿ ಯಶಸ್ಸನ್ನು ಸಾಧಿಸಬಲ್ಲರು ಎಂಬುದನ್ನು ಈ ಚಿತ್ರದ ನಿರ್ದೇಶಕರು ಸಾಬೀತುಪಡಿಸಿದ್ದಾರೆ' ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.