
ರಾಷ್ಟ್ರ ರಾಜಧಾನಿ ದೆಹಲಿಯ ವಸತಿ ಸಮುಚ್ಛಯ ಪ್ರದೇಶಗಳಿಂದ ಎಲ್ಲಾ ಬೀದಿ ನಾಯಿಗಳನ್ನು ಹೊರವಲಯದ ಆಶ್ರಯ ತಾಣಗಳಿಗೆ ಶಾಶ್ವತವಾಗಿ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೇ ದೆಹಲಿ ಮಾತ್ರವಲ್ಲದೇ ಹಲವಾರು ಕಡೆಗಳಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆದರೆ ಹಲವಾರು ಪ್ರಾಣಿ ಪ್ರಿಯರು ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಶ್ರಯ ತಾಣಗಳೇ ಇಲ್ಲದೇ, ಮನಸೋ ಇಚ್ಛೆ ನಾಯಿಗಳನ್ನು ಸಾಗಿಸಲಾಗುತ್ತಿದೆ, ಇದರಿಂದ ಇನ್ನಷ್ಟು ಸಮಸ್ಯೆ ಉಲ್ಭಣ ಆಗ್ತಿದೆ ಎಂದ ಹಲವರು ಬೀದಿಗಿಳಿದು ಪ್ರತಿಭಟನೆ ಕೂಡ ಮಾಡುತ್ತಿದ್ದಾರೆ. ಹಲವಾರು ಸಿನಿಮಾ ತಾರೆಯರು ಕೂಡ ಈ ಆದೇಶ ವಿರುದ್ಧ ಮಾತನಾಡಿದ್ದಾರೆ. ಇದೀಗ ನಟಿ ಸುಧಾರಾಣಿ ಕೂಡ ನಾಯಿಯ ಅವೈಜ್ಞಾನಿಕ ಸ್ಥಳಾಂತರದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಟಿ ಸುಧಾರಾಣಿ, ನಾಯಿ ಮತ್ತು ಮನುಷ್ಯರ ಸಂಬಂಧ ಅವಿನಾಭಾವವಾದದ್ದರು, ಈ ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಿಗೂ ಇದೆ. ನಾಯಿಗಳನ್ನು ಅವುಗಳನ್ನು ಏಕಾಏಕಿ ತೆರವುಗೊಳಿಸಿದರೆ ಅದರಿಂದ ಆಗುವ ಸಮಸ್ಯೆ ಏನು? ಅವುಗಳ ಮಾನಸಿಕ ಸ್ಥಿತಿ ಏನು ಏನನ್ನೂ ತಿಳಿದುಕೊಳ್ಳದೇ ಅವೈಜ್ಞಾನಿಕ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರತಿ ಜೀವಿಗಳಿಗೂ ಬದುಕುವ ಹಕ್ಕು ಇದೆ. ಪ್ರಕೃತಿಯೇ ಈ ಕೊಡುಗೆಯನ್ನು ನೀಡಿದೆ. ಆದರೆ ಮನುಷ್ಯ ತನ್ನ ಸ್ವಾರ್ಥದಿಂದ ಈ ಬ್ಯಾಲೆನ್ಸ್ ತಲೆಕೆಳಗೆ ಆಗುವ ಹಾಗೆ ಮಾಡುತ್ತಿದ್ದಾನೆ. ಕಾಡು ಪ್ರಾಣಿಗಳಿಂದ ಸಮಸ್ಯೆ ಆಗ್ತಿದೆ. ತೋಟ- ಗದ್ದೆ ನಾಶ ಮಾಡ್ತಿದೆ ಎನ್ನುತ್ತೇವೆ. ಆದರೆ ನಿಜವಾಗಿಯೂ ಅವು ಹೀಗೆ ಮಾಡ್ತಿರೋದು ಅಲ್ಲ, ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡಾಗ ಅವು ಎಲ್ಲಿಗೆ ಹೋಗಬೇಕು, ಅದನ್ನು ನಾವು ಯೋಚನೆಯೇ ಮಾಡುವುದಿಲ್ಲ.ಮನುಷ್ಯನ ಸ್ವಾರ್ಥಕ್ಕೆ ಮೂಕ ಜೀವಿಗಳು ನೋವು ತಿನ್ನಬೇಕಾಗಿ ಬಂದಿವೆ ಎಂದು ನಟಿ ನೊಂದು ನುಡಿದಿದ್ದಾರೆ.
ನಾಯಿಗಳಿಂದ ತೊಂದರೆಗೆ ಒಳಗಾದವರಿಗೆ, ದುರಂತ ಆದವರ ಬಗ್ಗೆ ನನಗೂ ನೋವಿದೆ. ಅವರ ನೋವು ಗೊತ್ತು. ಆದರೆ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸುವುದು ಆ ಸಮಸ್ಯೆ ಪರಿಹಾರ ಅಲ್ಲ. ಒನ್ ಸೈಡೆಡ್ ಆಗಿ ಯೋಚನೆ ಮಾಡುತ್ತಿದ್ದೇವೆ. ಇದು ಸರಿಯಲ್ಲ. ಏಕಾಏಕಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಆದರೆ ಅವುಗಳಿಗೆ ಸರಿಯಾದ ಆಶ್ರಯ ತಾಣಗಳು ಇವೆಯೆ ಎನ್ನುವುದನ್ನು ಯೋಚಿಸಿಲ್ಲ. ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಇತ್ಯಾದಿಗಳನ್ನು ಕಾಲಕಾಲಕ್ಕೆ ಮಾಡುತ್ತಿದ್ದರೆ ಈ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ. ಆದರೆ ನಮ್ಮದೇ ನೂರೆಂಟು ತಪ್ಪು ಇಟ್ಟುಕೊಂಡು ಹೀಗೆ ಅವುಗಳಿಗೆ ತೊಂದರೆ ಮಾಡುವುದು ತುಂಬಾ ನೋವಿನ ಸಂಗತಿ ಎಂದು ನಟಿ ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ನಮ್ಮ ಮನೆಯ ನಾಯಿಯನ್ನೂ ಹೀಗೆಯೇ ಮಾಡಿದ್ದರು. ಕೊನೆಗೆ ನಿಮ್ಮೆಲ್ಲರ ಸಹಕಾರದಿಂದ ಅದು ಸಿಕ್ಕಿತು. ಇದೀಗ ನಮ್ಮ ಇಡೀ ಏರಿಯಾವನ್ನು ಅದು ಕಾಪಾಡ್ತಿದೆ. ಹೆಣ್ಣುಮಕ್ಕಳ ರಕ್ಷಣೆನೂ ಮಾಡ್ತಿದೆ. ನಾಯಿಗಳಿಗೆ ಅಂಥ ಶಕ್ತಿ ಇದೆ ಎಂದಿದ್ದಾರೆ. ನಟಿಯ ಮಾತಿಗೆ ಹಲವರು ಸಹಮತಿ ವ್ಯಕ್ತಪಡಿಸಿದ್ದಾರೆ. ಆದರೆ ಮತ್ತೆ ಕೆಲವರು ಬೀದಿ ನಾಯಿಗಳಿಂದ ತುಂಬಾ ತೊಂದರೆ ಆಗ್ತಿದೆ ಮೇಡಂ. ನೀವು ನಾಯಿ ಪ್ರಿಯರು ಆಗಿರಬಹುದು. ಆದರೆ ರಾತ್ರಿಯ ಸಮಯದಲ್ಲಿ ಓಡಾಡುವಾಗ ತುಂಬಾ ಭಯ ಆಗುತ್ತದೆ, ತುಂಬಾ ಜನರಿಗೆ ಸುಖಾ ಸುಮ್ಮನೇ ಅವು ಕಾಟ ಕೊಡುತ್ತವೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.