‘ಕವಲುದಾರಿ’ ಚಿತ್ರದ ಸುಮನ್ ರಂಗನಾಥ್ ನರ್ತಿಸಿರುವ ಕ್ಯಾಬರೆ ಶೈಲಿಯ ಹಾಡಿನ ಲಿರಿಕಲ್‌ವಿಡಿಯೋ ಸೋಮವಾರ ಸಂಜೆ ಸೋಷಲ್ ಮೀಡಿಯಾದಲ್ಲಿ ಬಿಡುಗಡೆ ಆಗಿದ್ದು, ಚಿತ್ರ ರಸಿಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಡುಗೆಂಪು ಬಣ್ಣದ ದಿರಿಸಿನಲ್ಲಿ ಮಿರಿಮಿರಿ ಮಿಂಚುತ್ತಿರುವ ಸುಮನ್ ರಂಗನಾಥ್, ‘ಖಾಲಿ ಖಾಲಿ ಅನಿಸೋ ಕ್ಷಣಕ್ಕೆ ..’ ಅಂತ ಹಾಡುತ್ತಾ ಭರ್ಜರಿ ಆಗಿ ಕುಣಿದಿದ್ದಾರಂತೆ.
ಹೇಮಂತ್ ರಾವ್ ನಿರ್ದೇಶನದ, ಅನಂತ ನಾಗ್ ಅಭಿನಯದ, ಪುನೀತ್ ರಾಜ್‌ಕುಮಾರ್ ನಿರ್ಮಾಣದ ‘ಕವಲುದಾರಿ’ ಚಿತ್ರ ಏ.12ಕ್ಕೆ ರಾಜ್ಯಾದ್ಯಂತ ಈ ಚಿತ್ರ ತೆರೆಗೆ ಬರುತ್ತಿದೆ.
ಕಲಾ ನಿರ್ದೇಶಕ ವರದರಾಜ್ ಕಾಮತ್ ನಿರ್ಮಿಸಿದ್ದ ಈ ಕಲರ್‌ಫುಲ್ ಸೆಟ್‌ನಲ್ಲಿ ಖಾಲಿ ಖಾಲಿ ಅನ್ನಿಸೋ ಕ್ಷಣಕ್ಕೆ ಹಾಡನ್ನು ನಾಲ್ಕು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಈ ಹಾಡು 70-80ರ ದಶಕದಲ್ಲಿ ಕ್ರೈಮ್, ಥ್ರಿಲ್ಲರ್ ಚಿತ್ರಗಳ ಬರುತ್ತಿದ್ದ ಕ್ಯಾಬರೆ ಶೈಲಿಯಲ್ಲಿ ಪಡ್ಡೆಗಳ ಎದೆ ನಡುಗಿಸುವ ಹಾಗೆ ಮೂಡಿ ಬಂದಿದೆ.
‘ಹಾಲಿವುಡ್ ಅಥವಾ ಬಾಲಿವುಡ್‌ನಲ್ಲಿ ಇದಕ್ಕೆ ಜಾಜ್ ಶೈಲಿ ಅಂತಾರೆ. ಕನ್ನಡದಲ್ಲಿ ಕ್ಯಾಬರೆ ಅಂತಲೇ ಜನಪ್ರಿಯತೆ ಪಡೆದಿದೆ. ಹಾಗಂತ ಇದು ಕ್ಯಾಬರೆ ನೃತ್ಯವಲ್ಲ. ಜಾಜ್ ಶೈಲಿಯದ್ದು. ಕ್ರೈಮ್, ಥ್ರಿಲ್ಲರ್ ಸಿನಿಮಾಗಳಲ್ಲಿ ಇಂತಹ ಹಾಡುಗಳನ್ನು ತರುವುದು ಮಾಮೂಲು. ಕತೆಗೆ ತಕ್ಕಂತೆ ಇಂತಹದೊಂದು ಹಾಡು ಬೇಕಿತ್ತು. ಗೀತೆ ರಚನೆಕಾರ ಧನಂಜಯ್ ರಂಜನ್ ಬಳಿ ಚಿತ್ರದ ಸನ್ನಿವೇಶ ವಿವರಿಸಿದೆ. ಅವರು ಸೊಗಸಾದ ಸಾಹಿತ್ಯ ಬರೆದರು. ಚರಣ್ ರಾಜ್ ಅದಕ್ಕೆ ಇಂಪಾದ ಸಂಗೀತ ನೀಡಿದರು. ಶರಣ್ಯ ಗೋಪಿನಾಥ್ ಧ್ವನಿಯಲ್ಲಿ ಅದು ಅದ್ಭುತವಾಗಿ ಮೂಡಿ ಬಂತು. ನಟಿ ಸುಮನ್ ರಂಗನಾಥ್, ಅದರ ಇಂಪನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಹೀಗೆ ಎಲ್ಲರ ಕಾಂಬಿನೇಷನ್ ಮೂಲಕ ಆ ಹಾಡು ಅದ್ಭುತವಾಗಿ ಮೂಡಿ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ಹೇಮಂತ್ ರಾವ್.
ಸ್ಯಾಂಡಲ್‌ವುಡ್ ಗೆ ಕವಲುದಾರಿ ಮೂಲಕ ಬರುತ್ತಿದ್ದಾರೆ ರೋಶಿನಿ ಪ್ರಕಾಶ್!