'ಎಲ್ಲೇ ಹೋಗಲಿ ಕನ್ನಡವೇ ಚೆಂದ' ಎಂದ ನ್ಯೂಜಿಲ್ಯಾಂಡ್ ಕನ್ನಡತಿ!

Published : Jun 09, 2017, 09:31 AM ISTUpdated : Apr 11, 2018, 01:04 PM IST
'ಎಲ್ಲೇ ಹೋಗಲಿ ಕನ್ನಡವೇ ಚೆಂದ' ಎಂದ ನ್ಯೂಜಿಲ್ಯಾಂಡ್ ಕನ್ನಡತಿ!

ಸಾರಾಂಶ

ಹುಟ್ಟಿದ್ದು ಶಿರಸಿ, ಬೆಳೆದಿದ್ದು ನ್ಯೂಜಿಲ್ಯಾಂಡ್. ಓದಿದ್ದು ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಆಗಿದ್ದು ನಟಿ! ಇದು ಎನ್ಆರ್ಐ ಹುಡುಗಿ ಲತಾ ಹೆಗಡೆ ಒನ್ಲೈನ್ ಬಯೋಡೇಟಾ. ಊರು ಇಲ್ಲಿದ್ದರೂ ಹೋಗಿ, ಬೆಳೆದಿದ್ದು ವಿದೇಶದಲ್ಲಿ. ಅಲ್ಲಿಯೇ ಉನ್ನತ ವಿದ್ಯಾಭ್ಯಾಸ ಮಾಡಿಯೂ ನಟಿಯಾಗಬೇಕೆಂದು ಭಾರತಕ್ಕೆ, ಕರ್ನಾಟಕಕ್ಕೆ ಓಡೋಡಿ ಬಂದಾಕೆ. ತೆಲುಗು, ತಮಿಳು ಓಡಾಟದ ನಡುವೆ ಕನ್ನಡದಲ್ಲಿ ‘ಅತಿರಥ' ಚಿತ್ರಕ್ಕೆ ಬಂದು, ದಿಗಂತ್ ಜೊತೆ ಒಂದು ಸಿನಿಮಾ ಸೇರಿದಂತೆ ಕೈತುಂಬ ಆಫರ್ ಪಡೆದಾಕೆ. ‘ಕನ್ನಡಪ್ರಭ'ದಲ್ಲೇ ಮಾತಿಗೆ ಸಿಕ್ಕಿ ಹಲವು ವಿಷಯಗಳ ಬಗ್ಗೆ ಲತಾ ಹೆಗಡೆ ಮನ ಬಿಚ್ಚಿ ಮಾತಾಡಿದ್ದಾರೆ.

1) ನಿಮ್ಮ ಫ್ಯಾಮಿಲಿ ಹಿನ್ನೆಲೆ ಏನು?

ಅಪ್ಪನ ಊರು ಶಿರಸಿ. ಈಗಲೂ ಅಜ್ಜಿ ಮನೆ ಅಲ್ಲಿದೆ. ನಾನು ಹುಟ್ಟಿದ್ದೂ ಕೂಡ ಅಲ್ಲಿಯೇ. ಉದ್ಯೋಗದ ನಿಮಿತ್ತ ಅಪ್ಪ ಬೆಂಗಳೂರಿಗೆ ಬಂದ್ರು. ಅಲ್ಲಿಂದ ನ್ಯೂಜಿಲ್ಯಾಂಡ್ನ ಆಕ್ಲೆಂಡ್ಗೆ ಹೋದ್ರು. ಫ್ಯಾಮಿಲಿ ಅಲ್ಲಿಯೇ ಸೆಟಲ್ ಆಗಿದೆ. ಸಾಕಷ್ಟುವರ್ಷಗಳೇ ಆಗಿ ಹೋದವು. ಚಿಕ್ಕಪ್ಪ ಬೆಂಗಳೂರಿನಲ್ಲಿದ್ದಾರೆ. ಆಗಾಗ ಇಲ್ಲಿಗೆ ಬಂದು ಹೋಗುವುದು ಮಾಮೂಲು. ವರ್ಷದಲ್ಲಿ ಒಂದೆರೆಡು ಬಾರಿ ಮಾತ್ರ. ಶಿರಸಿಗೆ ಒಂದೇ ಬಾರಿ ಹೋಗಿದ್ದೇನೆ. ಹೆಚ್ಚು ಹೋಗ್ಲಿಕ್ಕೆ ಆಗಿಲ್ಲ. ಆ ಬಗ್ಗೆ ಬೇಸರ ವಿದೆ.

2) ವಿದ್ಯಾಭ್ಯಾಸದ ಬಗ್ಗೆ ಹೇಳಿ?

ಎಂಬಿಎ ಮುಗಿದಿದೆ. ಓದಿದ್ದೆಲ್ಲವೂ ನ್ಯೂಜಿಲ್ಯಾಂಡ್ನಲ್ಲಿಯೇ. ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಮುಗಿಸಿ, ಒಂದಷ್ಟುದಿನ ಕಂಪನಿಯಲ್ಲಿ ಕೆಲಸ ಮಾಡಿದೆ. ಆನಂತರ ಮಾಡೆಲಿಂಗ್ ಶುರುವಾಯಿತು. ಅದು ನನ್ನ ಇಷ್ಟದ ಕ್ಷೇತ್ರ. ಕೆಲಸಕ್ಕೆ ಗುಡ್ಬೈ ಹೇಳಿದೆ. ಅಲ್ಲಿಂದ ಸ್ಟಾರ್ಟ್ ಆಗಿದ್ದು ಸಿನಿಮಾ ಜರ್ನಿ.

3) ಸಿನಿಮಾ ನಟಿ ಆಗುವ ಆಸಕ್ತಿ ಹುಟ್ಟಿಕೊಂಡಿದ್ದು ಹೇಗೆ?

ಇದು ನಿಜಕ್ಕೂ ಆಕಸ್ಮಿಕ. ನಟಿ ಆಗಬೇಕೆಂದು ಕನಸಲ್ಲೂ ಎಣಿಸಿರಲಿಲ್ಲ. ಯಾಕಂದ್ರೆ, ಆ ರೀತಿಯ ಕನಸು ಅಥವಾ ಆಸಕ್ತಿ ಹುಟ್ಟಿಕೊಳ್ಳುವುದಕ್ಕೆ ನನಗೆ ಯಾವುದೇ ಹಿನ್ನೆಲೆ ಇಲ್ಲ. ಫ್ಯಾಮಿಲಿನಲ್ಲಿ ಆ ರೀತಿಯ ನಂಟು ಇದ್ದವರು ಯಾರೂ ಇಲ್ಲ. ಅಷ್ಟೆಅಲ್ಲ, ನಾನು ಇದ್ದಿದ್ದು ನ್ಯೂಜಿಲ್ಯಾಂಡ್. ಅಲ್ಲಿ ಸಿನಿಮಾ, ಸೀರಿಯಲ್ ಯಾವುದೇ ಪ್ರಭಾವ ಇರಲಿಲ್ಲ. ಹಾಗೆ ನೋಡಿದ್ರೆ ನಟಿಯಾಗುವ ಅವಕಾಶ ಬಂದಿದ್ದು ಮಾಡೆಲಿಂಗ್ ಮೂಲಕ. ಟಾಲಿವುಡ್ ನಿರ್ದೇಶಕ ಕುಮಾರ್ ನಾಗೇಂದ್ರ ಅವರು, ಫೇಸ್ಬುಕ್ನಲ್ಲಿದ್ದ ನನ್ನ ಫೋಟೋ ನೋಡಿ ಆನ್ಲೈನ್ ಮೂಲಕವೇ ಸಂಪರ್ಕ ಮಾಡಿದ್ರು. ಅಲ್ಲಿಂದ ನೇರವಾಗಿ ನ್ಯೂಜಿಲ್ಯಾಂಡ್ಗೆ ಬಂದು ಭೇಟಿ ಮಾಡಿ, ‘ತುಂಟರಿ' ಸಿನಿಮಾಕ್ಕೆ ನಾಯಕಿ ಆಗಿ ಆಯ್ಕೆ ಮಾಡಿಕೊಂಡ್ರು.

4) ವಿದೇಶದಲ್ಲಿದ್ದವರು ನೀವು, ಸಿನಿಮಾ ನಟಿಯಾಗುವುದಕ್ಕೆ ಪೋಷಕರು ಒಪ್ಪಿಗೆ ನೀಡಿದ್ರಾ?

ನಾನು ಚೆನ್ನಾಗಿ ಓದ್ಬೇಕು ಅನ್ನೋದು ಅಪ್ಪ -ಅಮ್ಮನ ಆಸೆ ಆಗಿತ್ತು. ಎಂಬಿಎ ಮುಗಿಸಿ ಅವರ ಆಸೆ ಪೂರೈಸಿದ್ದೆ. ಅಲ್ಲಿಂದ ಮುಂದೇನಾಗಬೇಕೆಂದು ಅವ್ರು ಯಾವತ್ತಿಗೂ ನನಗೆ ಫೋರ್ಸ್ ಮಾಡಿರಲಿಲ್ಲ. ಬಯಸಿದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರ ಕೊಟ್ಟಿದ್ರು. ನಟಿ ಆಗಬೇಕೆಂದು ಹೇಳಿದೆ. ಓಕೆ ಅಂದ್ರು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಹುಟ್ಟಿದ ಊರಿನ ಕಡೆ ಬರುತ್ತಿದ್ದೇನೆ ಅಂಥ ಖುಷಿಯಾದ್ರು. ಇವತ್ತು ಅವರ ಸಪೋರ್ಟ್ನಿಂದಲೇ ನಾನಿಲ್ಲಿದ್ದೇನೆ.

5) ಮೊದಲು ಅಭಿನಯಿಸಿದ್ದು ತೆಲುಗು ಸಿನಿಮಾ, ಅಲ್ಲಿ ಭಾಷೆ ಸಮಸ್ಯೆ ಆಗಲಿಲ್ವಾ?

ಆರಂಭದಲ್ಲಿಯೇ ಅದು ನನ್ನನ್ನು ಕಾಡಿದ್ದು ನಿಜ. ತೆಲುಗು ಗೊತ್ತಿಲ್ಲ, ಅರ್ಥವೂ ಆಗುತ್ತಿಲ್ಲ. ಶೂಟಿಂಗ್ ಟೈಮ್್ನಲ್ಲಿ ಸೆಟ್ಬಾಯ್ ಜತೆಗೆಲ್ಲ ಮಾತನಾಡುವಾಗ ಕಷ್ಟವಾಯ್ತು. ಆರ್ಟಿಸ್ಟ್ ಹಾಗೂ ಟೆಕ್ನಿಷಿಯನ್ಗೆ ಇಂಗ್ಲಿಷ್ ಬರುತ್ತಿದ್ದ ಕಾರಣಕ್ಕೆ ಒಂದಷ್ಟುಸುಲಭವಾಯ್ತು. ದಿನ ಕಳೆದಂತೆ ಸರಿ ಹೋಯ್ತು. ಈಗೀಗ ತೆಲುಗು, ತಮಿಳು ಅರ್ಥವಾಗುತ್ತಿವೆ. ಅಷ್ಟೇನು ಕಷ್ಟಆಗುತ್ತಿಲ್ಲ. ಭಾಷೆ ಗೊತ್ತಿದ್ರೆ ಡಬ್ಬಿಂಗ್ ಮಾಡುವುದಕ್ಕೂ ಅನುಕೂಲವಾಗುತ್ತೆ. ಎರಡನ್ನು ಕಲಿಯುತ್ತಿದ್ದೇನೆ. ಕನ್ನಡ ಮಾತೃಭಾಷೆ. ಅದರ ಸಮಸ್ಯೆ ಇಲ್ಲ.

6) ಟಾಲಿವುಡ್ನಿಂದ ಸ್ಯಾಂಡಲ್ವುಡ್ಗೆ ಬಂದಿದ್ದು ಹೇಗೆ?

ತೆಲುಗಿನ ಖ್ಯಾತ ನಿರ್ದೇಶಕ ಮೇಹರ್ ರಮೇಶ್ ಇದಕ್ಕೆ ಮೂಲ ಕಾರಣ. ಅಲ್ಲಿ ನಾನು ‘ ತುಂಟರಿ' ಸಿನಿಮಾ ಮಾಡುವಾಗ ಪರಿಚಯವಾಗಿದ್ರು. ಅವರು ಕನ್ನಡದ ನಿರ್ದೇಶಕ ಮಹೇಶ್ ಬಾಬು ಸ್ನೇಹಿತರು. ಅವರ ಬಳಿ ಮಹೇಶ್ ಬಾಬು ಒಂದು ದಿನ ಹೊಸ ಪ್ರಾಜೆಕ್ಟ್ ಶುರು ಮಾಡುತ್ತಿರುವ ಬಗ್ಗೆ ಹೇಳಿದ್ರಂತೆ. ಆಗ ಮೇಹರ್ ರಮೇಶ್ ಅವರು ಬಾಬು ಅವರಿಗೆ ನನ್ನನ್ನು ರೆಫರ್ ಮಾಡಿದ್ರು. ಭೇಟಿ ಮಾಡಿ ಮಾತನಾಡಿದೆ. ಕತೆ ಕೇಳಿದೆ. ಆಡಿಷನ್ ನಡೆಸಿದ್ರು. ಬಾಬು ನಿರ್ದೇಶನದ ‘ ಅತಿರಥ'ಕ್ಕೆ ನಾಯಕಿ ಆಗಿ ಆಯ್ಕೆ ಆದೆ. ಕನ್ನಡದ ಎಂಟ್ರಿಗೆ ಹೀಗೊಂದು ವೇದಿಕೆ ಸಿಕ್ಕಿತು. ನಿಜಕ್ಕೂ ಖುಷಿ ಆಯ್ತು. ನನ್ನೂರಿನಲ್ಲಿಯೇ ನಟಿಯಾಗಿ ಪರಿಚಯವಾಗುತ್ತಿದ್ದೇನೆ ಅನ್ನುವುದು ಹೆಮ್ಮೆ ಎನಿಸಿತು.

7) ನಿರ್ದೇಶಕ ಮಹೇಶ್ ಬಾಬು ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಹೇಳಿ..

ಮಹೇಶ್ ಬಾಬು ಸರ್ ಬಗ್ಗೆ ಹೇಳುವುದಕ್ಕೆ ತುಂಬ ಇದೆ. ‘ಮೆರವಣಿಗೆ' ಮೂಲಕ ಐಂದ್ರಿತಾ ರೇ, ‘ಚಿರು' ಚಿತ್ರದ ಮೂಲಕ ಕೃತಿ ಕರಬಂಧ, ‘ಕ್ರೇಜಿಬಾಯ್' ಮೂಲಕ ಆಶಿಕಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಇವತ್ತು ನನಗೆ ಆ ಅವಕಾಶ ಸಿಕ್ಕಿದೆ. ಸಿನಿಮಾ ವಿಷಯದಲ್ಲಿ ತುಂಬಾನೆ ಶಿಸ್ತು. ಶೂಟಿಂಗ್ ಸಮಯದಲ್ಲಿ ಅಷ್ಟೇ ಸೀರಿಯಸ್.

8) ನಟ ಚೇತನ್ ಹಾಗೂ ನಿಮ್ಮ ಕಾಂಬಿನೇಷನ್ ಹೇಗಿತ್ತು?

ವಿಶೇಷ ಅಂದ್ರೆ ಇಬ್ಬರು ಎನ್ಆರ್ಐ. ನಾವಿಬ್ಬರೂ ಹೊಸಬ್ರು ಅಂತ ಅನ್ನಿಸಲೇ ಇಲ್ಲ. ಚೇತನ್ ತುಂಬಾನೆ ಡೀಸೆಂಟ್. ಸೆಟ್ನಲ್ಲಿ ಎಂದಿಗೂ ಅನಗತ್ಯವಾಗಿ ಮಾತನಾಡಿದ್ದಿಲ್ಲ. ಯಾವುದಕ್ಕೂ ಕಿರಿಕ್ ಮಾಡಿದ್ದಿಲ್ಲ. ತಾವಾಯ್ತು ತಮ್ಮ ಕೆಲಸವಾಯ್ತು ಎನ್ನುವ ವ್ಯಕ್ತಿ. ಆ್ಯಕ್ಟಿಂಗ್ ಸೇರಿದಂತೆ ಅನೇಕ ವಿಚಾರಗಳಲ್ಲಿ ನನಗೆ ಗೈಡ್ ಮಾಡಿದ್ರು. ರಾಗಿ ಮುದ್ದೆ ತಿನ್ನೋದು ಹೇಗೆ ಅಂಥ ನಂಗೆ ಹೇಳಿಕೊಟ್ಟಿದ್ದೇ ಚೇತನ್. ಈಗ ನನ್ನ ಫೆವರೇಟ್ ಫುಡ್ ರಾಗಿ ಮುದ್ದೆ!

9) ಅದು ಸರಿ, ಕನ್ನಡದಲ್ಲಿ ನಿಮಗೆ ಸಿನಿಮಾ ಅವಕಾಶಗಳು ಹೇಗಿವೆ?

ನಟಿಯಾಗಿದ್ದು ಆಕಸ್ಮಿಕ, ಹಾಗೇ ಏಕಾಏಕಿ ಬ್ಯುಸಿ ಆಗಬೇಕು, ಸ್ಟಾರ್ ನಟಿ ಅಂಥ ಮೆರೆಯಬೇಕು ಅಂಥೇನು ಇಲ್ಲ. ಒಳ್ಳೆಯ ನಟಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವುದು ನನ್ನ ಟಾರ್ಗೆಟ್. ಆ ನಿಟ್ಟಿನಲ್ಲಿ ಸಿನಿಮಾ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಸಾಕಷ್ಟುಆಫರ್ ಬಂದಿವೆ. ಮೂರು ಚಿತ್ರಗಳಿಗೆ ಕಾಲಶೀಟ್ ನೀಡಿದ್ದೇನೆ. ‘ಅತಿರಥ' ಶೂಟಿಂಗ್ ಮುಗಿದು ರಿಲೀಸ್ಗೆ ರೆಡಿ ಇದೆ. ‘ಉತ್ಸವ' ಚಿತ್ರೀಕರಣದ ಹಂತದಲ್ಲಿದೆ. ‘ಗೆಳೆಯನ ಗೆಳತಿ' ಎನ್ನುವ ಚಿತ್ರದ ಮಾತುಕತೆ ಫೈನಲ್ ಹಂತದಲ್ಲಿದೆ. ತಮಿಳಿನಲ್ಲೂ ಒಂದು ಸಿನಿಮಾದ ಚಿತ್ರೀಕರಣ ಮುಗಿದಿದೆ.

10) ಓದಿದ್ದು ಬ್ಯುಸಿನೆಸ್ ಅಂತೀರಾ, ನಟನೆಯನ್ನೇ ವೃತ್ತಿಯಾಗಿ ತೆಗೆದುಕೊಳ್ಳುತ್ತೀರಾ ಅಥವಾ ಬ್ಯಾಕ್ ಟು ನ್ಯೂಜಿಲ್ಯಾಂಡ್ ಅಂತೀರಾ?

ನಾನಿಲ್ಲಿಗೆ ಬಂದಿದ್ದೇ ಆಕಸ್ಮಿಕವಾಗಿ. ಅವಕಾಶಗಳು ಸಿಗುವ ತನಕ ನಟಿನೆಯೇ ನನ್ನ ವೃತ್ತಿ. ಆ ನಂತರ ಏನು ಎನ್ನುವುದನ್ನು ಈಗಲೇ ಹೇಳುವುದಕ್ಕೆ ಆಗುವುದಿಲ್ಲ.

11) ಕನ್ನಡ, ತೆಲುಗು, ತಮಿಳು..ಇದ್ರಲ್ಲಿ ನಿಮ್ಮ ಆದ್ಯತೆ ಯಾವುದು?

ನಾನು ಈಗಾಗಲೇ ಈ ಮೂರು ಭಾಷೆಯಲ್ಲೂ ಸಿನಿಮಾ ಮಾಡಿದ್ದೇನೆ. ಕಲಾವಿದೆಯಾಗಿ ಆ ಮೂರು ಭಾಷೆಯನ್ನು ಇಷ್ಟಪಡುತ್ತೇನೆ. ಆದ್ರೆ ಮಾತೃಭಾಷೆ ಕನ್ನಡ. ಇಲ್ಲಿಯೇ ನನಗೆ ಹೆಚ್ಚು ಕಂಫರ್ಟ್. ಆದ್ಯತೆ ಅಂಥ ಬಂದಾಗ ಕನ್ನಡವೇ ನನ್ನ ಮೊದಲ ಆಯ್ಕೆ. ಅದಕ್ಕೆ ತಕ್ಕಂತೆ ಅವಕಾಶಗಳು ಬರಬೇಕು ಅಷ್ಟೆ.

12) ನಟಿಯಾಗಿ ಎಂತಹ ಪಾತ್ರ ಬೇಕು ಅಂತ ಬಯಸುತ್ತೀರಾ?

ಸಿನಿಮಾ ನೋಡಿದ್ದು ತುಂಬಾ ಕಮ್ಮಿ. ಈಗೀಗ ನೋಡ್ತಾ ಇದ್ದೇನೆ. ನ್ಯೂಜಿಲ್ಯಾಂಡ್ನಲ್ಲಿದ್ದಾಗ ನನಗೆ ಕನ್ನಡ ಸಿನಿಮಾ ನೋಡುವ ಅವಕಾಶ ಸಿಕ್ಕಿಲ್ಲ. ಹಿಂದಿ ಸಿನಿಮಾ ಬರುತ್ತಿದ್ದವು. ‘ಜಬ್ ವಿ ಮೆಟ್' ಚಿತ್ರದಲ್ಲಿ ಕರೀನಾ ಕಪೂರ್ ಮಾಡಿದಂತಹ ಪಾತ್ರ ಮಾಡಬೇಕೆನ್ನುವ ಆಸೆ.

13) ಕನ್ನಡದಲ್ಲಿ ನಿಮ್ಮ ನೆಚ್ಚಿನ ಸ್ಟಾರ್ ಯಾರು?

ನಟಿಯಾಗಿ ಎಲ್ಲ ಸ್ಟಾರ್ಗಳ ಜತೆಗೂ ತೆರೆ ಹಂಚಿಕೊಳ್ಳುವ ಹಂಬಲವಿದೆ. ಆದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನನ್ನ ನೆಚ್ಚಿನ ನಟ. ಅವರ ಜತೆಗೆ ಸಿನಿಮಾ ಮಾಡುವುದು ನನ್ನ ಬಹು ದೊಡ್ಡ ಆಸೆ.

-ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Sudeep with Suvarna: ಕೂದ್ಲಲ್ಲ ಸರ್​, ಏನ್ ಬೇಕಾದ್ರೂ ತಗೀತಿನಿ ಅಂದೆ, ಎಲ್ಲ ರಿಜೆಕ್ಟ್​ ಮಾಡಿದ ಚಿತ್ರ ಒಪ್ಪಿದೆ!
ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್‌ ಡೇಟಿಂಗ್‌?