
‘ಹೌದು, ಮದ್ವೆಯಾಗ್ತಿದ್ದೀನಿ. ಬರೋ ತಿಂಗಳು 6, 7ಕ್ಕೆ ಮದ್ವೆ' ಅಂದರು ಇಂದುಶ್ರೀ. ಈ ಇಂದುಶ್ರೀ ಯಾರು ಗೊತ್ತಾ? ಡಿಂಕು ಜೊತೆಗೆ ಬರ್ತಾರಲ್ಲ, ಅದೇ ಇಂದುಶ್ರೀ.
ಇವರ ಡಿಂಕು ಶೋ ನೋಡದೇ ಇರೋರು ಕಡಿಮೆ. ಇವರೇ ಹೇಳೋ ಪ್ರಕಾರ 22 ವರ್ಷಗಳಿಂದ ಡಿಂಕು ಜೊತೆಗೆ ಶೋ ಕೊಡ್ತಿದ್ದಾರೆ. ಇಲ್ಲಿಯವರೆಗೆ 3500ಕ್ಕೂ ಹೆಚ್ಚು ಧ್ವನಿಮಾಯೆ ಪ್ರದರ್ಶನಗಳಾಗಿವೆ.
ಡಿಂಕೂಗೆ ಮಾರುಹೋಗದವರಿಲ್ಲ ..
ಕೆಕ್ಕರಿಸಿ ನೋಡುವ, ಸರಕ್ಕನೆ ಕತ್ತು ತಿರುಗಿಸಿ ಏನೋ ಸಂಜ್ಞೆ ಮಾಡುವ, ಹೊಟ್ಟೆಹುಣ್ಣಾಗುವಂತೆ ನಗಿಸುವ ಡಿಂಕು ಜೊತೆಗೆ ಈಗ ಅಜ್ಜ ಅಜ್ಜಿ ಗೊಂಬೆಗಳೂ ಸೇರ್ಕೊಂಡು ಮಜಾ ಹೆಚ್ಚಿದೆ. ಇಂದುಶ್ರೀ ಶೋಗೆ ಹೋಗೋ ಮೊದಲು ಸ್ಕ್ರಿಪ್ಟ್ ಮಾಡ್ಕೊಳಲ್ಲ, ಸ್ಟೇಜ್ ಮೇಲೆ ಹತ್ತಿದ್ರೆ ಸಾಕು, ತಮಾಷೆ, ವಿಡಂಬನೆಯ ಮಾತುಗಳು ಅವಾಗವೇ ಬರುತ್ತವೆ. ಇದಕ್ಕೆ ಇಂದುಶ್ರೀಗೆ ‘ನೀವು ಕೇಳಿದಿರಿ'ಯ ಎನ್. ರಂಗನಾಥ್ ಅವರೇ ಸ್ಫೂರ್ತಿ. ಇವ್ರು ಮಾಡುವ ಜೋಕ್‌ಗೆ ಜನ ಬಿದ್ದೂ ಬಿದ್ದೂ ನಗುವಾಗ ಮುಖದಲ್ಲಿ ಸೀರಿಯಸ್‌ನೆಸ್ ಮೆಂಟೇನ್ ಮಾಡೋದೇ ದೊಡ್ಡ ಸವಾಲಂತೆ. ಎಷ್ಟೋ ಸಲ ತಡೆಯಲಾರದೇ ನಕ್ಕಿದ್ದೂ ಇದ್ಯಂತೆ.
ಗಿನ್ನೆಸ್ ರೆಕಾರ್ಡ್ ಮಾಡ್ಬೇಕಂತೆ!
ಈ ಥರ ಧ್ವನಿಮಾಯೆ ಪ್ರದರ್ಶನ ನೀಡುತ್ತಿರೋ ದೇಶದ ಏಕೈಕ ಕಲಾವಿದೆ ಇಂದುಶ್ರೀ. ನಾಲ್ಕು ಬೊಂಬೆಗಳ ಜೊತೆಗೆ ಇವರು ನೀಡಿದ ಪ್ರದರ್ಶನ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದೆ. ತಾಂತ್ರಿಕ ಕಾರಣಕ್ಕೆ ಗಿನ್ನೆಸ್ ರೆಕಾರ್ಡ್ ಮಾಡೋದಕ್ಕೆ ಕಷ್ಟವಾಗ್ತಿದೆ. ಆದರೂ ಐದು ಬೊಂಬೆಗಳ ಜೊತೆಗೆ ಗಿನ್ನೆಸ್ ದಾಖಲೆ ಮಾಡುವ ಮನಸ್ಸು ಇದೆ.
ಫಿಯಾನ್ಸಿನೂ ಡಿಂಕೂ ಅಭಿಮಾನಿನಾ?
ಅಂದಹಾಗೆ ಈಗ ಇಂದುಶ್ರೀ ಮದುಮಗಳು. ಹುಡುಗ ಅಶ್ವತ್ಥ ಬೆರೆಕೆ ಎಚ್‌ಪಿ ಕಂಪೆನಿಯಲ್ಲಿ ಉದ್ಯೋಗಿ. ಅವರಿಗೂ ಇಂದುಶ್ರೀ ಶೋಗಳನ್ನು ನೋಡಿ ಗೊತ್ತು, ಹಾಗಾದ್ರೆ ಅವ್ರು ಡಿಂಕು ಅಭಿಮಾನಿಯಾ, ಗೊತ್ತಿಲ್ಲ. ಇವರು ಅದನ್ನು ಕೇಳಿಲ್ಲ. ಅವರೂ ಹೇಳಿಲ್ಲ! ‘ಮದ್ವೆ ಆದಮೇಲೆ ಬೇರೆ ಊರಿಗೆ ಹೋಗ್ತೀರಾ?' ಅಂತ ಕೇಳಿದರೆ, ‘ನಮ್ಮನೆಗಿಂತ 700 ಮೀಟರ್ ದೂರದಲ್ಲಿರೋದು ಅವ್ರ ಮನೆ' ಅಂತ ಜೋರಾಗಿ ನಕ್ಕರು ಇಂದುಶ್ರೀ.
ಹೊಸತೇನು ಮಾಡ್ತಾರೆ?
ಮದ್ವೆ ಆಗೋ ಹುಡುಗಂಗೆ ಇವರ ಕಲೆಯ ಬಗ್ಗೆ ಗೌರವ ಇದೆಯಂತೆ. ಮದುವೆ ಆದ್ಮೇಲೆ ಇನ್ನಷ್ಟುಕ್ರಿಯೇಟಿವ್ ಶೋಗಳನ್ನು ಮಾಡುವ ಹಂಬಲ ಇವರದು. ಕನ್ನಡದಲ್ಲಿ ಮಾತ್ರ ಮಾಡ್ತಿರೋ ಈ ಶೋವನ್ನು ಬೇರೆ ಬೇರೆ ಭಾಷೆಗಳಲ್ಲೂ ಮಾಡಬೇಕು. ಹೊಸ ಕಾಮಿಡಿಯನ್‌ಗಳಿಗಿರುವ ಅವಕಾಶವನ್ನು ಬಳಸಿಕೊಳ್ಳಬೇಕು ಅನ್ನೋ ಯೋಚನೆ ಇದೆ.
‘ಈಗ ಗೌರಿಬಿದನೂರಿಗೆ ಹೋಗ್ತಾ ಇದೀನಿ. ನಾಡಿದ್ದು ತುಮಕೂರಲ್ಲಿ ಶೋ. ಅದಾದ್ಮೇಲೆ ಕೊಯಮತ್ತೂರಿಗೆ ಹೋಗ್ಬೇಕು, 6ನೇ ತಾರೀಕಿಗೇ ಮದ್ವೆ, ಸಖತ್ ಟೆನ್ಶನ್ ಆಗ್ತಿದೆ, ತಯಾರಿಗೆ ಟೈಮೇ ಸಿಕ್ತಿಲ್ಲ. ಈ ಇನ್ವಿಟೇಶನ್ ಹಂಚೋದೇ ದೊಡ್ಡ ಜವಾಬ್ದಾರಿ..'
ಗೌರಿಬಿದನೂರಿಗೆ ಹೋಗುವಾಗ ಕಾರು ಡ್ರೈವ್ ಮಾಡ್ತಾ ಇಂದುಶ್ರೀ ಮಾತಾಡಿದ್ದಿಷ್ಟು. ಅವರ ಮದುವೆಗೆ ನಮ್ಮದು ಅಡ್ವಾನ್ಸ್‌ಡ್ ವಿಷಸ್.
(ಕನ್ನಡಪ್ರಭ ವಾರ್ತೆ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.