
ಹೌದು, ಅವರ ನಿರ್ಧಾರವೊಂದು ಬದಲಾಗಿದೆ. ಯಾಕೆಂದರೆ ‘ನೀವು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸುತ್ತೀರಾ?' ಎಂಬ ಪ್ರಶ್ನೆ ಕೇಳಿದಾಗೆಲ್ಲಾ ದರ್ಶನ್, ‘ನಮಗೆ ಯಾಕ್ ಸಾರ್ ಬೇಕು ಅದೆಲ್ಲ.
ಪ್ರಯೋಗ ಮುಖ್ಯ ಅಲ್ಲ. ಗಳಿಕೆ ಮುಖ್ಯ. ಒಂದು ಪ್ರಯೋಗ ಮಾಡಿಯೇ ಸಾಕಾಗಿದೆ' ಅನ್ನುತ್ತಿದ್ದರು. ಅದು ‘ನಮ್ಮ ಪ್ರೀತಿಯ ರಾಮು' ಬಗ್ಗೆ. ಆ ಸಿನಿಮಾ ನಂತರ ಮತ್ತೆ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಖಡಕ್ ಆಗಿಯೇ ಹೇಳುತ್ತಿದ್ದ ದರ್ಶನ್ ಈಗ, ತಮ್ಮ ನಿರ್ಧಾರ ಬದಲಾಯಿಸಿಕೊಂಡಿದ್ದಾರೆ. ಈ ಪ್ರಶ್ನೆಯನ್ನು ಮತ್ತೆ ಕೇಳಿದ್ದು ‘ಚಕ್ರವರ್ತಿ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ.
ಈ ಸಲ ಉತ್ತರ ಭಿನ್ನವಾಗಿತ್ತು. ದರ್ಶನ್ ಈಗ ಪ್ರಯೋಗಾತ್ಮಕ ಸಿನಿಮಾಗಳಲ್ಲೂ ನಟಿಸುವುದಕ್ಕೆ ಸಿದ್ಧರಾಗಿದ್ದಾರಂತೆ. ‘ಮತ್ತೆ ಆ ರೀತಿಯ ಸಿನಿಮಾಗಳು ನನ್ನ ಮುಂದೆ ಬರಲಿಲ್ಲ. ಬಂದರೆ ಖಂಡಿತ ನಟಿಸುತ್ತೇನೆ' ಎನ್ನುವ ಮೂಲಕ ತಾವು ಇನ್ನು ಮುಂದೆ ಕಮರ್ಷಿಯಲ್ ಚಿತ್ರಗಳಿಗೆ ಮಾತ್ರ ಸೀಮಿತವಲ್ಲ ಎನ್ನುವ ಸಂದೇಶ ಕೊಟ್ಟಿದ್ದಾರೆ. ಚಿಂತನ್ ನಿರ್ದೇಶನದ ‘ಚಕ್ರವರ್ತಿ' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.
ದರ್ಶನ್ ಇಲ್ಲಿವರೆಗೂ 47 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಯಾವ ಚಿತ್ರವೂ ಬೆಂಗಳೂರಿನಲ್ಲಿ ನಡುರಾತ್ರಿ ಬಿಡುಗಡೆಯಾದ ಉದಾಹರಣೆಗಳಿಲ್ಲ. ಇದೇ ಮೊದಲ ಬಾರಿಗೆ ‘ಚಕ್ರವರ್ತಿ' ಸಿನಿಮಾ ಬೆಂಗಳೂರು, ಮೈಸೂರು, ಶಿವಮೊಗ್ಗ ಮುಂತಾದ ಕಡೆ ರಾತ್ರಿ 12 ಗಂಟೆಗೇ ಪ್ರದರ್ಶನಗಳು ಶುರುವಾಗುತ್ತಿವೆ. ‘ನನ್ನ ಸಿನಿಮಾ ಕೆರಿಯರ್‌ನಲ್ಲಿ ಇದೇ ಮೊದಲು ನಡುರಾತ್ರಿ ಶೋ ಶುರುವಾಗುತ್ತಿರುವುದು' ಎಂದು ಹೇಳಿಕೊಂಡರು ದರ್ಶನ್. ಅಂದಹಾಗೆ ಸಿದ್ಧಾಂತ್ ಈ ಚಿತ್ರದ ನಿರ್ಮಾಪಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.