
ನಟ ಸುದೀಪ್ ಕೆರಿಯರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಕೊಟ್ಟಸಿನಿಮಾ ‘ಕೆಂಪೇಗೌಡ'. ಈ ಚಿತ್ರದ ಮುಂದುವರಿದ ಭಾಗ ಬರುತ್ತದೆಂದು ಕೆಲವು ದಿನಗಳ ಹಿಂದೆ ಸುದ್ದಿ ಆಗಿತ್ತು. ಆದರೆ ಯಾವಾಗ ಸೆಟ್ಟೇರುತ್ತದೆಂಬ ಬಗ್ಗೆ ಮಾಹಿತಿ ಇರಲಿಲ್ಲ. ಈಗಷ್ಟೆಅಧಿಕೃತವಾಗಿ ಬಂದಿರುವ ಮಾಹಿತಿಯಂತೆ ಇದೇ ಶುಕ್ರವಾರ ಅದ್ಧೂರಿಯಾಗಿ ‘ಕೆಂಪೇಗೌಡ-2' ಸಿನಿಮಾ ಲಾಂಚ್ ಆಗುತ್ತಿದೆ. ಅಂದು ಚಿತ್ರದ ಹೆಸರಿನ ಜತೆಗೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲು ನಿರ್ಮಾಪಕ ಶಂಕರೇಗೌಡ ನಿರ್ಧರಿಸಿದ್ದಾರೆ.
ಇದೆಲ್ಲ ಓಕೆ, ‘ಕೆಂಪೇಗೌಡ-2' ಚಿತ್ರದ ಹೀರೋ ಯಾರು? ಎನ್ನುವ ಪ್ರಶ್ನೆ ಆಗಲೇ ಶುರುವಾಗಿದೆ. ‘ಕೆಂಪೇಗೌಡ' ಹೆಸರು ಕೇಳಿ ಈ ಚಿತ್ರಕ್ಕೆ ಸುದೀಪ್ ಹೀರೋ ಆಗುತ್ತಾರೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಯಾಕೆಂದರೆ ‘ಕೆಂಪೇಗೌಡ' ಅಂದ ತಕ್ಷಣ ಅವರ ಮೀಸೆ, ಆರ್ಭಟ, ಖಾಕಿ ಖದರ್ ಎಲ್ಲಾ ಜೊತೆಗೇ ಬರುತ್ತದೆ.
‘ಕೆಂಪೇಗೌಡ-2' ಚಿತ್ರಕ್ಕೆ ‘ಪಕ್ಕಾ ವರಿಜಿನಲ್' ಎನ್ನುವ ಟ್ಯಾಗ್'ಲೈನ್ ಇದೆ. ಹೀಗಾಗಿ ‘ಪಕ್ಕಾ ವರಿಜಿನಲ್' ಎಂದ ಮೇಲೆ ‘ಕೆಂಪೇಗೌಡ'ನ ಮುಂದುವರಿದ ಭಾಗವಲ್ಲ, ಇದೇ ಬೇರೆ ಅಂತಾಯಿತು. ಅಷ್ಟೇ ಅಲ್ಲ, ಸುದೀಪ್ ಅವರೇ ಆ ದಿನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ. ಹಾಗಿದ್ದರೆ ‘ಕೆಂಪೇಗೌಡ-2'ಗೆ ಸುದೀಪ್ ಹೀರೋ ಅಲ್ವಾ ಎನ್ನುವ ಪ್ರಶ್ನೆ ಹುಟ್ಟುವುದು ಸಹಜವಾಗಿ ಹುಟ್ಟುವ ಪ್ರಶ್ನೆ. ಆದರೆ ಈ ಬಗ್ಗೆ ಶಂಕರೇಗೌಡ ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ. ‘ಹೀರೋ ಯಾರು, ನಾಯಕಿ ಯಾರು ಎಂಬುದನ್ನು ಶುಕ್ರವಾರದ ತನಕ ಕಾಯಿರಿ' ಎನ್ನುತ್ತಾರೆ ಅವರು. ಎಲ್ಲಿಗೆ ಈ ಚಿತ್ರದ ಮೂಲಕ ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರೆಯೇ? ಅಥವಾ ಸುದೀಪ್ ಅವರನ್ನೇ ಖಾಯಂ ಮಾಡಿಕೊಳ್ಳುತ್ತಾರೆಯೇ? ಇದಕ್ಕೆ ಉತ್ತರ ಸಿನಿಮಾ ಲಾಂಚ್ ಆದ ದಿನವೇ ಸಿಗಲಿದೆ.
ವರದಿ: ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.