
ನಟಿ ಶ್ರುತಿ ಮತ್ತೊಂದು ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಆ ಮೂಲಕ ಇನ್ನೇನು ನಿಂತೇ ಹೋಗುವ ಹಂತದಲ್ಲಿದ್ದ ಚಿತ್ರಕ್ಕೆ ಜೀವ ತುಂಬಿದ್ದಾರೆ. ಹೌದು, ವಿಜಯ್ ಪ್ರಸಾದ್ ನಿರ್ದೇಶನದ ‘ಲೇಡೀಸ್ ಟೈಲರ್’ ಚಿತ್ರಕ್ಕೆ ನಾಯಕಿ ಸಿಗದೆ ಸಿನಿಮಾ ಮೂಲೆ ಸೇರಿತ್ತು. ಒಂದು ಹಂತದಲ್ಲಿ ಚಿತ್ರದ ನಾಯಕ ಯಾರೆಂಬುದೇ ದೊಡ್ಡ ಗೊಂದಲದಲ್ಲಿತ್ತು ಚಿತ್ರತಂಡ. ಈಗ ನಾಯಕ ಸಿಲ್ಲಿ ಲಲ್ಲಿ ರವಿಶಂಕರ್ ಪಕ್ಕಾ ಆಗಿದ್ದಾರೆ. ಆದರೂ ನಾಯಕಿ ಸಿಗದೆ ಪರದಾಡುತ್ತಿದ್ದ ನಿರ್ದೇಶಕರಿಗೆ ಶ್ರುತಿ ಹರಿಹರನ್ ಸಿಕ್ಕಿದ್ದಾರೆ.
ಚಿತ್ರದ ನಾಯಕಿ ಆದವರು ಸಿಕ್ಕಾಪಟ್ಟೆ ದಪ್ಪ ಆಗಬೇಕು. ಕನಿಷ್ಠ 120 ಕೆಜಿ ತೂಕ ಇರಬೇಕೆಂಬುದು ಕತೆಯ ಬೇಡಿಕೆಯಂತೆ. ಪಾತ್ರದ ಈ ಬೇಡಿಕೆಯನ್ನು ಈಡೇರಿಸುವುದಕ್ಕೆ ಕನ್ನಡದಲ್ಲಿ ಸಾಕಷ್ಟು ನಟಿಯರು ಹಿಂದೇಟು ಹಾಕುತ್ತಿದ್ದಾಗ ಶ್ರುತಿ ಹರಿಹರನ್ ತಾನು ಈ ಪಾತ್ರ ಮಾಡುವುದಾಗಿ ಹೇಳುವ ಮೂಲಕ ‘ಲೇಡೀಸ್ ಟೈಲರ್’ಗೆ ಮತ್ತೆ ಜೀವ ಬರುವಂತೆ ಮಾಡಿದ್ದಾರೆ.
ಶ್ರುತಿ ಹರಿಹರನ್ ಅವರೆನೋ ನಾಯಕಿ ಯಾಗಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಹಾಗಾದರೆ ನಿರ್ದೇಶಕರು ಬಯಸಿದಂತೆ 120 ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆಯೇ? ಅಥವಾ ನಿರ್ದೇಶಕರೇ ತೂಕದ ವಿಚಾರದಲ್ಲಿ ರಾಜಿಯಾಗಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ. ‘ಹೌದು, ನಾಯಕಿಯಾಗಿ ಶ್ರುತಿ ಹರಿಹರನ್ ಕಾಣಿಸಿಕೊಳ್ತಿದ್ದಾರೆ. ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದು ನನ್ನ ನಿರ್ದೇಶನದ ಮೂರನೇ ಸಿನಿಮಾ. ಹೀಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ವಿಜಯ್ ಪ್ರಸಾದ್.
ಶ್ರುತಿ ಹರಿಹರನ್ ಹಾಗೂ ರವಿಶಂಕರ್ ಗೌಡ ಜೋಡಿಯಾಗಿದ್ದು, ಸುಮನ್ ರಂಗನಾಥ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ವೀಣಾ ಸುಂದರ್ ಹಾಗೂ ವೆಂಕಟ್ ರಾವ್ ನಟಿಸಲಿದ್ದಾರೆ. ನ.10 ರಿಂದ ಚಿತ್ರೀಕರಣ ನಡೆಯಲಿದ್ದು, ನಿರ್ಮಾಪಕ ಸ್ಕಂದ ಪ್ರಸನ್ನ ಅವರು ಈ ಬಾರಿಯೂ ‘ನೀರ್ ದೋಸೆ’ಯಂತೆ ಗೆಲುವು ಕಾಣುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ಒಂದು ಪ್ರಯೋ ಗಾತ್ಮಕ ಹಾಗೂ ಭಿನ್ನ ಚಿತ್ರಕ್ಕೆ ನಾಯಕಿ ಸಿಕ್ಕಿರುವ ಕಾರಣ ನಿಂತೇ ಹೋಗಲಿದೆ ಎನ್ನುವ ಸಿನಿಮಾ ಸೆಟ್ಟೇರುವ ಭಾಗ್ಯ ಪಡೆದುಕೊಂಡಿರುವುದು ನಟಿ ಶ್ರುತಿ ಹರಿಹರನ್ ಅವರೇ ಕಾರಣ ಎನ್ನುವುದು ಚಿತ್ರತಂಡದ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.