ಮಗು ಮಾಡ್ಕೊಳ್ಳಲ್ಲ ಅಂದ ಅಣ್ಣಯ್ಯ, ಈಗ ಫಸ್ಟ್‌ನೈಟ್‌ ಮಾಡ್ಕೊಳ್ತಿದ್ದಾರಲ್ಲಾ, ಕಥೆ ಬೇರೇ ಉಂಟು ಸ್ವಾಮಿ!

Published : Sep 01, 2025, 08:57 PM IST
annayya

ಸಾರಾಂಶ

ಅಣ್ಣಯ್ಯ ಸೀರಿಯಲ್‌ನ ಬಿಸಿ ಬಿಸಿ ಪ್ರೋಮೋವೊಂದು ಅಭಿಮಾನಿಗಳ ದಿಲ್‌ ಧಸಕ್ಕೆನ್ನುವಂತೆ ಮಾಡಿದೆ. ಅಷ್ಟಕ್ಕೂ ಮೊನ್ನೆ ಮೊನ್ನೆ ತನಕ ಮಕ್ಕಳು ಬೇಡ ಅಂದಿದ್ದ ಜೋಡಿಯ ಹೊಸ ಕತೆ ಸಖತ್ ಇಂಟರೆಸ್ಟಿಂಗ್. 

ಬ್ಯಾಗ್ರೌಂಡಲ್ಲಿ ವಿಜಯ ಪ್ರಕಾಶ್ ದನಿಯಲ್ಲಿ 'ಶೃಂಗಾರದ ಹೊಂಗೇ ಮರ ಹೂ ಬಿಟ್ಟಿದೆ, ನಾಚಿಕೆ ನನ್ನ ಜೊತೆ ಟೂ ಬಿಟ್ಟಿದೆ' ಅನ್ನೋ ಸಾಂಗ್. ಈ ಸಾಂಗ್ ಬರೆದದ್ದು ಯೋಗರಾಜ ಭಟ್ಟರು. 'ಪಂಚತಂತ್ರ' ಅನ್ನೋ ಸಿನಿಮಾಕ್ಕೆ. ಅದೊಂದು ರೊಮ್ಯಾಂಟಿಕ್ ಲವ್‌ ಸ್ಟೋರಿ. ಈ ಸಾಂಗ್‌ ಬರುವ ಸನ್ನಿವೇಶ ಯಾವುದು ಅನ್ನೋದನ್ನು ಆ ಸಿನಿಮಾ ನೋಡದವರೂ ಊಹಿಸಬಹುದು. ಸಿನಿಮಾದಲ್ಲೇನೋ ಮದುವೆಗೂ ಮೊದಲಿನಲ್ಲೇ ಫಸ್ಟ್‌ನೈಟ್‌ ಮಾಡ್ಕೊಂಡ ಜೋಡಿಗೆ ಹಿನ್ನೆಲೆಯಾಗಿ ಈ ಸಾಂಗ್ ಬರುತ್ತೆ. ಆದರೆ 'ಅಣ್ಣಯ್ಯ' ಸೀರಿಯಲ್‌ನಲ್ಲಿ ಈ ಹಾಡು ಪಾರು ಮತ್ತು ಶಿವಣ್ಣ ಆಲಿಯಾಸ್‌ ಮಾರಿಗುಡಿ ಶಿವ ಆಲಿಯಾಸ್‌ ಮಾವ ನಡುವೆ ಮೂಡಿ ಬರುತ್ತಿದೆ. ಅಷ್ಟಕ್ಕೂ ಇದು ಮೇಲ್ನೋಟಕ್ಕೆ ಶಿವು ಮತ್ತು ಪಾರು ನಡುವಿನ ಫಸ್ಟ್ ನೈಟ್‌ ಸಾಂಗ್‌ನಂತೆ ಕಂಡರೂ ಒಳಗೆ ಕಥೆ ಬೇರೇ ಇದೆ.

ಅಣ್ಣಯ್ಯ ಸೀರಿಯಲ್‌ ಟಿಆರ್‌ಪಿ ಲಿಸ್ಟ್‌ನಲ್ಲಿ ಹಿಂದೆ ಬೀಳೋದು ಕಡಿಮೆ. ಯಾವಾಗಲೂ ಟಾಪ್‌ 3 ಅಥವಾ ಟಾಪ್‌ 5ನಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತೆ. ಸಣ್ಣ ತಮಾಶೆ, ಅಲ್ಲಲ್ಲಿ ಎಮೋಶನ್‌, ಅಣ್ಣ ತಂಗಿ, ಅತ್ತಿಗೆಯರ ಬಾಂಧವ್ಯ, ಅಲ್ಲಲ್ಲಿ ವಿಲನ್‌ಗಳ ಮನೆಹಾಳು ಕೆಲಸಗಳು, ಅವಕ್ಕೆಲ್ಲ ತಿರುಗೇಟು ನೀಡುವ ಹೀರೋಯಿನ್‌ ಅಥವಾ ಹೀರೋ, ಎಲ್ಲಕ್ಕಿಂತ ಮುಖ್ಯವಾಗಿ ರೊಮ್ಯಾಂಟಿಕ್‌ ಸೀನ್‌ಗಳು ಈ ಸೀರಿಯಲ್‌ನ ನೋಡುಗರನ್ನು ಅತ್ತಿತ್ತ ಅಲ್ಲಾಡದ ಹಾಗೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದೆ. ಈ ಕಾರಣಕ್ಕೇ ಈ ಬಾರಿ ಟಿಆರ್‌ಪಿ ಲಿಸ್ಟ್‌ನಲ್ಲಿ ಈ ಸೀರಿಯಲ್‌ ಟಾಪ್‌ 3ಯಲ್ಲಿ ಒಂದಾಗಿ ಗುರುತಿಸಿಕೊಂಡಿದೆ. 9.0 ಟಿವಿಆರ್ ದಾಖಲಿಸಿರುವ ‘ಅಣ್ಣಯ್ಯ’ ಸೀರಿಯಲ್‌ ಮೂರನೇ ಸ್ಥಾನದಲ್ಲಿ ನಿಂತಿದೆ. ಕರ್ಣ ಮೊದಲ ಸ್ಥಾನದಲ್ಲಿ, ಲಕ್ಷ್ಮೀ ನಿವಾಸ ಎರಡನೇ ಸ್ಥಾನದಲ್ಲಿವೆ.

ಅಣ್ಣಯ್ಯ ಸೀರಿಯಲ್‌ ಕಥೆ ನೋಡಿದರೆ ಒಂದು ಕಡೆ ಮದುವೆಯಾದ ತಂಗಿಯರ ಲೈಫು ಕಣ್ಣಂಚು ಒದ್ದೆ ಮಾಡುತ್ತೆ. ಶಿವಣ್ಣನ ಮನೆಯ ಆಧಾರಸ್ತಂಭದಂತೆ ಇದ್ದ ತಂಗಿಯೊಬ್ಬಳು ಗಂಡನ ಮನೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ, ಇನ್ನೊಬ್ಬಳು ತಂಗಿಯದು ಮತ್ತೊಂದು ಸಮಸ್ಯೆ. ಇನ್ನೊಂದು ಕಡೆ ರಶ್ಮಿಯ ಮಾವ, ಶಿವಣ್ಣನ ಪ್ರೀತಿಯ ಮಾದಪ್ಪಣ್ಣ ಶಿವು, ಪಾರು ಮಕ್ಕಳು ಮಾಡ್ಕೊಳ್ಳೇ ಬೇಕು ಅಂತ ಕೂತಿದ್ದಾರೆ. ಅವರಿಗೆ ಮಕ್ಕಳಾದರೆ ತನ್ನ ಮಗ, ಸೊಸೆಗೂ ಮಕ್ಕಳಾಗುತ್ತೆ, ಮನೆ ದೀಪ ಬೆಳಗುತ್ತೆ ಅನ್ನೋ ಆಸೆ ಅವರದ್ದು. ಇಲ್ಲೀತನ ಶಿವು ಮತ್ತು ಪಾರು ಒಂದು ತೀರ್ಮಾನಕ್ಕೆ ಬಂದಿದ್ದರು. ಅದು ಮಕ್ಕಳು ಮಾಡ್ಕೊಳ್ಳೋದು ಬೇಡ ಅನ್ನೋ ಡಿಸಿಶನ್. ಈಗ ಮಾದಪ್ಪಣ್ಣನ ಬಿಗಿಪಟ್ಟಿಗೆ ಈ ಮುದ್ದಾದ ಜೋಡಿ ಕರಗಿದ ಹಾಗೆ ಕಾಣಿಸುತ್ತದೆ. ತಮಗೆ ಮಕ್ಕಳಾದರೆ ಎಲ್ಲಿ ತಂಗಿಯರ ಮೇಲಿನ ಜವಾಬ್ದಾರಿಗೆ ಸಮಸ್ಯೆ ಆಗುತ್ತೋ ಅಂತ ಶಿವು ಮತ್ತು ಪಾರು ಹೆದರಿಕೊಂಡಿದ್ದರು. ಆದರೆ ಇದೀಗ ತಮಗೆ ಮಕ್ಕಳಾದರೇ ತಂಗಿಯರ ಮನೆಯಲ್ಲೂ ಹೊಸ ಜೀವ ಬರುತ್ತೆ ಅನ್ನೋ ಮಾತು ಕೇಳಿದ ಮೇಲೆ ಈ ಜೋಡಿ ಮನಸ್ಸು ಬದಲಿಸಿ ಮಕ್ಕಳನ್ನು ಮಾಡಲು ತೀರ್ಮಾನಿಸಿದಂತಿದೆ.

ಸೋ ಈ ಬಾರಿ ಟಿಆರ್‌ಪಿ ಹೆಚ್ಚಿಸುವ ಭರ್ಜರಿ ಹಾಡೊಂದು ಸೋಷಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗ್ತಿದೆ. ಇವರಿಬ್ಬರ ಕೆಮೆಸ್ಟ್ರಿ ನೋಡಿ ಅನೇಕರು ಈ ಜೋಡಿ ರಿಯಲ್‌ ಲೈಫಲ್ಲೂ ಹೀಗೇ ಇರಲಿ ಅಂತ ಹಾರೈಸಿದ್ದಾರೆ. ವಿಶೇಷ ಅಂದರೆ ಸೀರಿಯಲ್‌ನಲ್ಲಿ ಸೀರೆಯಲ್ಲಷ್ಟೇ ಕಾಣಿಸಿಕೊಳ್ಳುವ ಶಿವು, ಪಾರು ಈ ಹಾಡಿನಲ್ಲಿ ಭರ್ಜರಿ ಮಾಡರ್ನ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಅದು ಈ ಜೋಡಿಯ ಬೋಲ್ಡ್‌ನೆಸ್‌ ಹೆಚ್ಚಿಸಿದೆ ಅಂತಲೇ ಹೇಳಬಹುದು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕುಟುಂಬದೊಂದಿಗೆ ರಣಬೀರ್-ಆಲಿಯಾ ಕ್ರಿಸ್‌ಮಸ್ ಸಂಭ್ರಮ: ಫ್ಯಾನ್ಸ್ ಮನಗೆದ್ದ ಆ ಕ್ಯೂಟ್ ಫೋಟೋಗಳು ಇಲ್ಲಿವೆ!
Gowri Shankara: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಖಡಕ್ ಡಿಸಿ ಆಗಿ ಎಂಟ್ರಿ ಕೊಟ್ಟ ಅಶ್ವಿನಿ