ಅಯ್ಯೋ! ಇದೇನಾಯ್ತು ಶಿವಣ್ಣಗೆ?

By Kannadaprabha NewsFirst Published Nov 9, 2018, 11:22 AM IST
Highlights

ಸ್ಯಾಂಡಲ್‌ವುಡ್ ಚಕ್ರವರ್ತಿ ಶಿವಣ್ಣ ತಾಯಿಗೆ ಒಳ್ಳೆಯ ಮಗನಾಗಿ, ಲಾಂಗ್ ಹಿಡಿದು ಅಪ್ಪಟ ಫೈಟರ್ ಆಗಿ, ತಂಗಿಗೆ ಒಳ್ಳೆಯ ಅಣ್ಣನಾಗಿ, ಲವ್ವರ್ ಬಾಯ್ ಆಗಿ, ಕಣ್ಣಲ್ಲೇ ನಟಿಸುವ ಭೈರತಿ ರಣಗಲ್ ಆಗಿ ಕಾಣಿಸಿಕೊಂಡಿದ್ದು ಹೊಸ ಟ್ರೆಂಡ್‌ಗಳನ್ನು ಕ್ರಿಯೇಟ್ ಮಾಡಿದ್ದು ಸುಳ್ಳಲ.

ಈಗ ಅಂತಹುದೇ ಮತ್ತೊಂದು ಟ್ರೆಂಡ್ ಕ್ರಿಯೇಟ್ ಮಾಡಲು ಹೊರಟಿದ್ದಾರೆ ಶಿವಣ್ಣ. ಅದು ಕುರುಡನಾಗಿ ಕಾಣಿಸಿಕೊಳ್ಳುವುದರ ಮೂಲಕ. ಇದಕ್ಕೆ ಸಾಕ್ಷಿಯಾಗಿದ್ದು ಜಯನಗರದ ಶ್ರೀ ರಮಣ ಮಹರ್ಷಿ ಅಂಧರ ಶಾಲೆ. ‘ಕವಚ’ ಚಿತ್ರದಲ್ಲಿ ಶಿವಣ್ಣ ಮೊದಲ ಬಾರಿಗೆ ಕುರುಡನಾಗಿ ಕಾಣಿಸಿಕೊಳ್ಳುತ್ತಿರುವುದರ ಹಿನ್ನೆಲೆಯಲ್ಲಿ ಅಂಧ ಮಕ್ಕಳಿಂದಲೇ ಚಿತ್ರದ ಟ್ರೇಲರ್ ಬಿಡುಗಡೆಗೆ ಪ್ಲ್ಯಾನ್ ಮಾಡಿತ್ತು ಚಿತ್ರತಂಡ.

‘ನಾನು ಎಲ್ಲಾ ರೀತಿಯ ಪಾತ್ರ ಮಾಡ್ತೇನೆ. ಕೆಲವು ಚೆನ್ನಾಗಿರುತ್ತವೆ, ಮತ್ತೆ ಕೆಲವು ಡಬ್ಬಾ ಆಗ್ತವೆ. ಆದರೆ ಸೆಟ್‌ಗೆ ಹೋದಾಗ ನಿರ್ದೇಶಕ ಏನು ಹೇಳ್ತಾನೋ ಹಾಗೆ ಕೇಳ್ತೀನಿ, ಒಬ್ಬ ನಟನಾಗಿ ನಿರ್ದೇಶಕ ಹೇಳಿದ್ದನ್ನು ಮಾಡುವುದು, ಅವರ ಐಡಿಯಾಗಳಿಗೆ ಜೀವ ತುಂಬುವುದೇ ನನ್ನ ಕೆಲಸ. ಕುರುಡನ ಪಾತ್ರ ಮಾಡುವುದು ತುಂಬಾ ಕಷ್ಟ. ಕಣ್ಣಲ್ಲಿ ನಟಿಸಿ ತೋರಿಸಿಬಿಡಬಹುದು, ಆದರೆ ಕಣ್ಣೇ ಇಲ್ಲದ ಪಾತ್ರ ನಿರ್ವಹಣೆ ದೊಡ್ಡ ಸಾಹಸ. ಈ ಸಾಹಸ ಮಾಡುತ್ತಲೇ ನನಗೆ ಕಣ್ಣಿಲ್ಲದವರ ನೋವು ಅರ್ಥವಾಯಿತು. ಇದಕ್ಕೆ ಇರಬೇಕು ಅಪ್ಪಾಜಿ ಮತ್ತು ಅಮ್ಮ ತಾವು ಸತ್ತಮೇಲೆ ತಮ್ಮ ಕಣ್ಣು ದಾನ ಮಾಡಿದರು. ನಾವು ಇಡೀ ದೇಹವನ್ನೇ ದಾನ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಕಣ್ಣುಗಳು ಇಬ್ಬರು ಅಂಧರಿಗೆ ಕವಚವಾಗಲಿ’ ಎಂದು ಹೇಳಿಕೊಂಡರು ಶಿವಣ.

‘ನಾನು ಕಂಡ ಹಾಗೆ ಶಿವಣ್ಣ ಎಲ್ಲಾ ರೀತಿಯ ಪಾತ್ರ ಮಾಡಲು ಶಕ್ತರು. ಅವರೊಂದಿಗೆ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರ ಮಾಡುವಾಗಲೇ ಶಿವಣ್ಣನನ್ನು ಇಟ್ಟುಕೊಂಡು ನನ್ನ ಮೊದಲ ಚಿತ್ರ ಮಾಡಬೇಕು ಎಂದು ನಿರ್ಧರಿಸಿದೆ. ಆ ಆಸೆ ಈಗ ಕೈಗೂಡಿದೆ’ ಎನ್ನುವ ಸಂತೋಷದಲ್ಲಿದ್ದರು ನಿರ್ದೇಶಕ ವಾಸು.

ನಾಯಕಿ ಕೃತಿಕಾಗೆ ಇದು ಎರಡನೇ ಚಿತ್ರ. ಶಿವಣ್ಣನ ಜೊತೆಗೆ ನಿಲ್ಲುವ ಪಾತ್ರ. ಮತ್ತೊಬ್ಬ ರಾಜಸ್ಥಾನಿ ಬೆಡಗಿ ಇತಿ ಇಲ್ಲಿ ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ವಶಿಷ್ಟ ಸಿಂಹ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಮತ್ತೊಂದು ಮುಖ್ಯ ಪಾತ್ರ ನಿರ್ವಹಿಸಿರುವ ಮೀನಾಕ್ಷಿ ನಟನೆಯ ಬಗ್ಗೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾಲಿ ಧನಂಜಯ್ ನಾಲ್ಕು ಒಳ್ಳೆಯ ಮಾತಾಡಿದರು. ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿದ್ದು, ತಿಂಗಳ ಕೊನೆಗೆ ಆಡಿಯೋ, ಡಿಸೆಂಬರ್ ಕೊನೆಗೆ ಚಿತ್ರ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ.

click me!