ಮಹಿರದಲ್ಲಿ ದುರ್ಗಾಷ್ಟಮಿ!

By Kannadaprabha NewsFirst Published Nov 9, 2018, 10:54 AM IST
Highlights

ಅಮ್ಮ- ಮಗಳು
ಪೊಲೀಸು - ಕ್ರೈಮು....

ನಿಮ್ಮ ಚಿತ್ರದ ಕತೆ ಏನು ಎಂದು ಕೇಳುವ ಮುನ್ನವೇ ಅದರ ಟೀಸರ್ ಹೇಳಿದ ನಾಲ್ಕು ಅಂಶಗಳಿವು. ಇಂಥ ಥ್ರಿಲ್ಲರ್ ಉತ್ತರ ಕೊಟ್ಟಿದ್ದು ‘ಮಹಿರ’ ಚಿತ್ರ. ಇದೆಲ್ಲ ಸರಿ, ಈ ಚಿತ್ರದ ಶೀರ್ಷಿಕೆಯೇ ಒಂದು ರೀತಿಯಿದೆಯಲ್ಲ, ಇದರ ಅರ್ಥವೇನು? ಅಲ್ಲಿದ್ದ ಬಹುತೇಕರ ಆಲೋಚನೆಯಲ್ಲಿ ಇದೇ ಪ್ರಶ್ನೆ ಗಟ್ಟಿಯಾಗಿ ಕೂತಿತ್ತು. 

ಇದನ್ನು ಅರಿತವರಂತೆ ಮೊದಲಿಗೆ ಶೀರ್ಷಿಕೆಗೊಂದು ಪೀಠಿಕೆ ಹಾಕಿದರು ನಿರ್ದೇಶಕ ಮಹೇಶ್ ಗೌಡ. ಅವರ ಪ್ರಕಾರ ಇದು ಸಂಸ್ಕೃತ ಪದ. ಹೆಣ್ಣಿನ ಶಕ್ತಿ ಮತ್ತು ಆಕೆಯ ಬುದ್ದಿ ಮಟ್ಟವನ್ನು ತೋರುತ್ತದೆ. ತಾನು ದಿಟ್ಟೆ ಎನ್ನುವ ಅರ್ಥವನ್ನು ಒಳಗೊಂಡಿರು ಮತ್ತು ತನ್ನತನವನ್ನು ಎಂದಿಗೂ ಬಿಟ್ಟುಕೊಡದ ಹೆಣ್ಣಿನ ಮನಸ್ಥಿತಿಯನ್ನು ಶೀರ್ಷಿಕೆ ಒಳಗೊಂಡಿದೆ. ಇಲ್ಲಿ ಹೆಣ್ಣು ಮಕ್ಕಳು ಹೀರೋಗಳಂತೆ ಫೈಟ್ ಮಾಡುತ್ತಾರೆ. ಗಂಡು ಮಕ್ಕಳು ಕೈಯಲ್ಲಿ ಪಿಸ್ತೂಲು ಹಿಡಿದು ತನಿಖೆಗೆ ಇಳಿಯುತ್ತಾರೆ. ಇಬ್ಬರು ತನಿಖಾಧಿಕಾರಿಗಳು, ಒಬ್ಬ ಮಹಿಳೆ, ಒಂದು ಕ್ರೈಮ್‌ನ ಹತ್ತು ಮುಖಗಳು, ಒಂಚೂರು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಇವು ಮೊನ್ನ ಚಿತ್ರದ ಟೀಸರ್ ನೋಡಿದರೆ ಕಣ್ಣ ಮುಂದೆ ರಪ್ಪೆಂದು ಹಾದು ಹೋದ ಸಂಗತಿಗಳು. 

ರಾಜ್ ಬಿ ಶೆಟ್ಟಿ, ವರ್ಜಿನಿಯಾ ರಾಡ್ರಿಗಸ್, ಬಾಲಾಜಿ ಮನೋಹರ್, ಚೈತ್ರಾ ‘ಮಹಿರ’ನ ಮುಖ್ಯ ಪಿಲ್ಲರ್‌ಗಳು. ನಿರ್ಮಾಪಕ ವಿವೇಕ್ ಕೊಂಡಪ್ಪ ಹಾಗೂ ನಿರ್ದೇಶಕ ಮಹೇಶ್ ಗೌಡ ಇಬ್ಬರು ಲಂಡನ್‌ನಲ್ಲಿ ನೆಲೆಸಿರುವ ಕನ್ನಡಿಗರು. ಕನ್ನಡ ಸಿನಿಮಾ ಮೇಲಿನ ಪ್ರೀತಿಯ ಫಲವಾಗಿ ಬಿತ್ತಿದ್ದ ಕತೆಯೇ ‘ಮಹಿರ’. ಮೂರು ದಿನದಲ್ಲಿ ನಡೆಯುವ ಕತೆಯಲ್ಲಿ ಮುಖ್ಯವಾಗಿ ಅಮ್ಮ-ಮಗಳ ಸಂಬಂಧ ಪ್ರಾರಂಭದಲ್ಲಿ ಸೈಲೆಂಟ್ ಆಗಿದ್ದು, ವಿರಾಮದ ನಂತರ ವೈಲೆಂಟ್, ಮುಂದೆ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ರೂಪ ಪಡೆಯುವುದರೊಂದಿಗೆ ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮೂರು ದಿನದ ಕತೆಗೆ ತಕ್ಕಂತೆ ಭಿನ್ನ ರೀತಿಯ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವುದಕ್ಕೆ ಹೊರಟಿದೆ ಚಿತ್ರತಂಡ. 

ಇಂಥದ್ದೊಂದು ಸಿನಿಮಾ ಮಾಡುವುದಕ್ಕೆ ಮಹೇಶ್ ಗೌಡ ಅವರಿಗೆ ಸಾಧ್ಯವಾಗಿದ್ದು, ಸುನಿಲ್ ಕುಮಾರ್ ದೇಸಾಯಿ ಜತೆಗಿನ ಕೆಲಸದ ಅನುಭವ. ಲಂಡನ್‌ನಲ್ಲಿ ಇಂಜಿನಿಯರ್ ಆಗಿದ್ದ ಇವರು ಕೆಲಸದ ಬಿಡುವಿನ ವೇಳೆ ಕತೆ ಬರೆದರು. ಕೊನೆಗೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ದೇಸಾಯಿ ಕ್ಯಾಂಪ್ ಸೇರಿಕೊಂಡರು. ಇಲ್ಲಿ ನಿರ್ದೇಶನದ ಪಾಠಗಳನ್ನು ಕಲಿತು, ತಾವು ಮಾಡಿಕೊಂಡ ಕತೆಗೆ ದೃಶ್ಯ ರೂಪ ಕೊಟರು. ಸಮುದ್ರ ದಡದಲ್ಲಿ ಅಂಗಡಿ ನಡೆಸುವ ಹೆಣ್ಣಿನ ಬದುಕಿನ ಒಂದು ದಿನ ಒಂದು ಘಟನೆ ನಡೆಯುತ್ತದೆ. ಅದೇ ಇಡೀ ಚಿತ್ರದ ಕತೆಯನ್ನು ಮುನ್ನೆಡೆಸುತ್ತದೆ. ಆ ಘಟನೆ ಏನು ಎಂಬುದು ಚಿತ್ರದ ಅಸಲಿ ವಿಷಯ. ತಾಯಿ ಮತ್ತು ಮಗಳ ನಡುವಿನ ಕತೆಯಾಗಿ ತೆರೆದುಕೊಂಡರೂ ಇಬ್ಬರ ಜಗಳಕ್ಕೂ ಕಾರಣವಾಗುವಂತಹ ಗುಟ್ಟುಗಳು ರಟ್ಟಾಗುತ್ತ ಹೋಗುತ್ತವೆ. ಅನಿರೀಕ್ಷಿತ ತಿರುವುಗಳು, ತೆರೆ ಮೇಲೆ ಪಾತ್ರಗಳನ್ನು ಪರಿಚಯಿಸುವ ರೀತಿ, ನಿರೂಪಣೆ ಶೈಲಿ ಹೊಸದಾಗಿದೆಯಂತೆ.

ನಟ ರಾಜ್ ಬಿ ಶೆಟ್ಟಿ ತನಿಖಾಧಿಕಾರಿಯಾಗಿದ್ದಾರೆ. ಅವರ ಕ್ಯಾರೆಕ್ಟರ್ ಕ್ಲಾಸಿಕ್ ಆಗಿದೆಯಂತೆ. ‘ನನ್ನ ಇಮೇಜ್ ಆಚೆಗಿನ ಪಾತ್ರ ಎನ್ನುವ ಕಾರಣಕ್ಕೆ ನನಗೆ ಸವಾಲು ಒಡ್ಡಿದ ಕತೆ ಇದು. ಒಂದು ಮೊಟ್ಟೆಯ ಕತೆಯಲ್ಲಿ ಬೊಕ್ಕ ತಲೆಯ ಪ್ರಸ್ತಾಪ ಇಲ್ಲೂ ಇದೆ. ಅದೇ ಕತೆ ಅಲ್ಲ’ ಎಂದು ಬಿಟ್ಟು ಬಿಡದಂತೆ ತಮ್ಮ ಪಾತ್ರದ ಕುರಿತು ಹೇಳಿಕೊಂಡರು ರಾಜ್ ಬಿ ಶೆಟ್ಟಿ. ವರ್ಜಿನಿಯಾ ರಾಡ್ರಿಗೆಸ್ ಅವರು ಮಂಗಳೂರು ಮೂಲದವರು. ರಂಗಭೂಮಿ ಕಲಾವಿದೆ.

ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಜತೆಗೆ ಅವರಿಗೆ ಇಲ್ಲಿ ಆ್ಯಕ್ಷನ್ ದೃಶ್ಯಗಳಿದ್ದು, ಯಾವುದೇ ರೀತಿಯ ಡ್ಯೂಪ್ ಇಲ್ಲದೆ ಆ ದೃಶ್ಯಗಳಲ್ಲಿ ನಟಿಸಿರುವುದು ವರ್ಜಿನಿಯಾ ಅವರ ಹೆಗ್ಗಳಿಕೆಯಂತೆ. ಬಾಲಿವುಡ್ ಸಿನಿಮಾಗಳ ದಾಟಿಯಲ್ಲಿ ‘ಮಹಿರ’ ಚಿತ್ರವನ್ನು ರೂಪಿಸಲಾಗಿದೆ ಎಂಬುದು ನಿರ್ದೇಶಕರು ಕೊಡುವ ಪುಟ್ಟ ವಿವರಣೆ. ಬೆಂಗಳೂರು, ಪುತ್ತೂರು, ಹೊನ್ನಾವರ, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತವಿದೆ. ಶ್ರೇಯಾ ಆಚಾರ್ ತಮ್ಮ ಕುಂಚ ಕಲೆಯಿಂದ ದ ರಾ ಬೇಂದ್ರ ಅವರ ರೂಪವನ್ನು ಅನಾವರಣ ಮಾಡುವ ಮೂಲಕ ‘ಮಹಿರ’ ಮಾತುಗಳಿಗೆ ಚಾಲನೆ ಕೊಟ್ಟಿದ್ದು ವಿಶೇಷವಾಗಿತ್ತು.  

 


 

 

 

 

click me!