ಕನ್ನಡ ಸಿನಿದುನಿಯಾದಲ್ಲಿ ‘ಟೈಟಲ್ ಸಾಂಗ್ ಗಾಯಕ ’ ಎನ್ನುವ ಖ್ಯಾತಿ ಶಶಾಂಕ್ ಶೇಷಗಿರಿ ಅವರದ್ದು. ಬಹುತೇಕ ಸ್ಟಾರ್ ಸಿನಿಮಾಗಳ ಇಂಟ್ರಡಕ್ಷನ್ ಸಾಂಗ್‌ಗೆ ಶಶಾಂಕ್ ಖಾಯಂ ಗಾಯಕ. ಏರು ಧ್ವನಿ, ಕಂಚಿನ ಕಂಠ ಮೂಲಕ ಬಹುಬೇಡಿಕೆಯ ಗಾಯಕ ಆಗಿದ್ದು ಯುವ ಪ್ರತಿಭೆ ಶಶಾಂಕ್ ಹಿರಿಮೆ.
ಇಲ್ಲಿತನಕ ಸುಮಾರು 480ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಧ್ವನಿ ನೀಡಿದ್ದಾರೆ. ಇದೀಗ ಅವರು ಬಿಗ್‌ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರಾಂಧವ’ ಮೂಲಕ ಶಶಾಂಕ್ ಸಂಗೀತ ನಿರ್ದೇಶಕರಾಗಿದ್ದಾರೆ.
ರಾಂಧವ ಚಿತ್ರಕ್ಕಾಗಿ 3 ತಿಂಗಳು ಏಕಾಂತದಲ್ಲಿದ್ರು ಭುವನ್!
‘ರಾಂಧವ ನನಗೆ ತುಂಬಾ ಸ್ಪೆಷಲ್ ಸಿನಿಮಾ. ಮೊದಲಿಗೆ ಈ ಚಿತ್ರ ನನ್ನ ಬಹುದಿನದ ಕನಸು ನನಸಾಗಿಸಿದೆ. ಮತ್ತೊಂದೆಡೆ ಅದ್ಭುತವಾದ ಎರಡು ಹಾಡುಗಳಿಗೆ ಧ್ವನಿ ನೀಡುವ ಅವಕಾಶವೂ ನನಗಿಲ್ಲಿ ಸಿಕ್ಕಿದೆ. ಚಿತ್ರದಲ್ಲಿರುವ ಆರು ಹಾಡುಗಳೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಎಲ್ಲಾ ಹಾಡುಗಳಿಗೂ ಕನ್ನಡ ಗಾಯಕರೇ ಧ್ವನಿ ನೀಡಿದ್ದಾರೆ. ಈಗಾಗಲೇ ಹಾಡುಗಳ ಸಾಹಿತ್ಯ ಮತ್ತು ಸಂಗೀತ ಹಾಗೂ ಗಾಯಕರ ಕಂಠಸಿರಿಗೆ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಹೊಸ ಬಗೆಯ ಸಂಗೀತ ನೀಡಿದ್ದೀರಿ ಅಂತಲೂ ಮೆಚ್ಚುಗೆ ಸಿಕ್ಕಿದೆ. ಹಾಡಿಗೆ ಸಿಕ್ಕಿರುವ ಪ್ರತಿಕ್ರಿಯೆ ಚಿತ್ರಕ್ಕೂ ಸಿಕ್ಕರೆ, ನಮ್ಮ ಶ್ರಮ ಸಾರ್ಥಕವಾಗುತ್ತದೆ. ಸಂಗೀತ ನಿರ್ದೇಶಕನಾಗಿ ನನಗೂ ಒಂದು ವಿಶ್ವಾಸ ಮೂಡಲಿದೆ’ ಎನ್ನುತ್ತಾರೆ ಗಾಯಕ ಶಶಾಂಕ್ ಶೇಷಗಿರಿ.
ರಾಂಧವ ಚಿತ್ರದಲ್ಲಿ ಕರ್ನಾಟಕದ 7 ಅದ್ಭುತಗಳು!
ಮಂಗಳವಾರ ‘ರಾಂಧವ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಿತು. ಅಲ್ಲಿ ಮಾತಿಗೆ ಸಿಕ್ಕ ಶಶಾಂಕ್, ‘ನಾನು ಗಾಯಕನಾಗಿದ್ದು ಅಪ್ಪನ ಆಸೆ ಈಡೇರಿಸುವುದಕ್ಕೆ. ನನ್ನಪ್ಪನಿಗೆ ತರುಣನಾಗಿದ್ದ ದಿನಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ ಹಾಡಬೇಕೆನ್ನುವ ಆಸೆ ಇತ್ತಂತೆ. ನಾನಾ ಕಾರಣದಿಂದ ಅದು ಸಾಧ್ಯವಾಗದೆ ಹೋಗಿತ್ತಂತೆ. ಆ ಕಾರಣಕ್ಕೆ ನನ್ನ ಮಗನಾದರೂ ಗಾಯಕ ಆಗಬೇಕೆನ್ನುವ ಅವರೊಳಗಿನ ತುಡಿತಕ್ಕೆ ನಾನು ಗಾಯಕನಾಗಬೇಕಾಗಿ ಬಂತು. ಅದು ಬಿಟ್ಟರೆ ಈಗ ನಾನು ಸಂಗೀತ ನಿರ್ದೇಶಕನಾಗಿದ್ದು ನನ್ನೊಳಗಿನ ಹಂಬಲಕ್ಕೆ ಮಾತ್ರ’ ಎನ್ನುತ್ತಾ ಚೂಪಾದ ಮೀಸೆ ತೀಡುತ್ತಾ ನಕ್ಕರು.