
ಇಂಥ ಆಕಸ್ಮಿಕಗಳು ಚಿತ್ರರಂಗದಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಇದಕ್ಕೆ ಹೊಸ ಸೇರ್ಪಡೆ ನಟ ಸರ್ದಾರ್ ಸತ್ಯ ದಂಪತಿ. ನಿರ್ದೇಶಕ ಶಿವರುದ್ರಯ್ಯ ಅವರು ‘ಮಾರಿಕೊಂಡವರು’ ಸಿನಿಮಾ ಮಾಡುವ ಹೊತ್ತಿಗೆ ಒಂದಿಷ್ಟು ಕಲಾವಿದರನ್ನು ಆಡಿಷನ್‌ಗೆ ಕರೆದಿದ್ದರಂತೆ. ಆಗಷ್ಟೆ ‘ತಲ್ಲಣ’ ಚಿತ್ರಕ್ಕೆ ಅತ್ಯುತ್ತಮ ನಟಿ ವಿಭಾಗದಲ್ಲಿ ಸತ್ಯ ಅವರ ಪತ್ನಿ ನಿರ್ಮಾಲಾ ಚೆನ್ನಪ್ಪ ರಾಜ್ಯ ಪ್ರಶಸ್ತಿ ತೆಗೆದುಕೊಂಡಿದ್ದರು.
ತಮ್ಮ ಪತಿ ಜತೆ ‘ಮಾರಿಕೊಂಡವರು’ ಚಿತ್ರದ ಆಡಿಷನ್‌ಗೆ ಹೋದವರನ್ನು ನೋಡಿದ ಶಿವರುದ್ರಯ್ಯ ‘ನೀವು ರಾಜ್ಯ ಪ್ರಶಸ್ತಿ ನಟಿ ನೀವು ಯಾಕೆ ಆಡಿಷನ್‌ಗೆ ಬಂದ್ರಿ’ ಅಂದರೂ ಕೇಳದೆ ಆಡಿಷನ್ ಕೊಟ್ಟಿದ್ದಾರೆ. ಹಾಗೆ ಆಡಿಷನ್ ಕೊಡುವಾಗ ನಿರ್ದೇಶಕರು ಸರ್ದಾರ್ ಸತ್ಯ ಅವರನ್ನೇ ಗಮನಿಸಿದ್ದಾರೆ. ‘ಮಾರಿಕೊಂಡವರು ಚಿತ್ರದ ಬಹು ಮುಖ್ಯ ಪಾತ್ರಕ್ಕೆ ಈ ಮುಖ ತುಂಬಾ ಸೂಕ್ತ ಅನಿಸುತ್ತಿದೆಯಲ್ಲ’ ಎನ್ನುವ ಯೋಚನೆ ಹೊಳೆದಿದ್ದೇ ತಡ, ‘ಮಾರಿಕೊಂಡವರು’ ಚಿತ್ರದಲ್ಲಿ ದಲಿತ ಕೂಲಿಗಾರನ ಪಾತ್ರ ಮಾಡುವಂತೆ ಕೇಳಿದ್ದಾರೆ ಶಿವರುದ್ರಯ್ಯ.
ಸತ್ಯ ಕೂಡ ಹಿಂದೆ ಮುಂದೆ ಯೋಚಿಸದೆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ. ಯಾವ ಚಿತ್ರಕ್ಕೆ ತಮ್ಮ ಪತ್ನಿಯನ್ನು ಆಡಿಷನ್‌ಗೆ ಅಂತ ಕರೆದುಕೊಂಡು ಹೋಗಿದ್ದರೋ ಆ ಚಿತ್ರಕ್ಕೆ ಪತ್ನಿಗೆ ಬದಲಾಗಿ ಪತಿಯೇ ನಟನಾಗಿ ಆಯ್ಕೆ ಆದ ಈ ಆಸಕ್ತಿಕರ ಕತೆಯನ್ನು ಸ್ವತಃ ಸರ್ದಾರ್ ಸತ್ಯ ಅವರೇ ಹೇಳಿಕೊಂಡರು. ಇದೇ ಶುಕ್ರವಾರ ‘ಮಾರಿಕೊಂಡವರು’ ಸಿನಿಮಾ ತೆರೆಗೆ ಬರುತ್ತಿದೆ.
ಒಂದು ವಿಚಿತ್ರ ಮತ್ತು ಆಕಸ್ಮಿಕ ತಿರುವಿನಲ್ಲಿ ಈ ಚಿತ್ರಕ್ಕೆ ಆಯ್ಕೆಯಾದ ಸರ್ದಾರ್ ಸತ್ಯ ಪಾತ್ರ ಹೇಗಿರುತ್ತದೆ ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.
-ಸಿನಿವಾರ್ತೆ, ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.