ಸ್ಯಾಂಡಲ್’ವುಡ್ ಸ್ಟಾರ್’ಗಳು ಮಿಸ್ಸಿಂಗ್!

Published : Jun 22, 2018, 09:44 AM IST
ಸ್ಯಾಂಡಲ್’ವುಡ್ ಸ್ಟಾರ್’ಗಳು ಮಿಸ್ಸಿಂಗ್!

ಸಾರಾಂಶ

ಈ ಆರು ತಿಂಗಳಲ್ಲಿ ಚಿತ್ರರಂಗವನ್ನು ಅತ್ಯಂತ  ಮುತುವರ್ಜಿಯಿಂದ ಸಾಕಿಕೊಂಡು ಬಂದಿದ್ದು ಹೊಸಬರ ಸಿನಿಮಾಗಳು. ಕ್ಲಾಸ್ ರೂಮ್‌ನಲ್ಲಿ ಶಿಕ್ಷಕ ಇಲ್ಲದಿದ್ದಾಗ ವಿದ್ಯಾರ್ಥಿಯೇ ಕ್ಲಾಸ್ ಮಾಸ್ಟರ್ ಆದಂತೆ, ಮನೆ ಯಜಮಾನ ಇಲ್ಲದಿದ್ದಾಗ ಆ ಮನೆಯ ಮಕ್ಕಳೇ ಯಜಮಾನಿಕೆ ಮುಂದುವರಿಸಿದಂತೆ ಸಿನಿಮಾ ಥಿಯೇಟರ್‌ಗಳತ್ತ ದೊಡ್ಡ ನಟರು ಬಾರದಿದ್ದಾಗ ಅವರ ಅನುಪಸ್ಥಿತಿಯಲ್ಲಿ ಹೊಸ ನಟ- ನಟಿಯರು ಥಿಯೇಟರ್‌ಗಳನ್ನು ಕ್ರಿಯಾಶೀಲವಾಗಿಡುವ ಜವಾಬ್ದಾರಿಯನ್ನು ಕಳೆದ ಆರು ತಿಂಗಳುಗಳಿಂದ ಮಾಡುತ್ತ ಬಂದಿದ್ದಾರೆ.

ದಯವಿಟ್ಟು ಗಮನಿಸಿ, ನೀವು ನೋಡಲು ಬಯಸುವ ಸ್ಟಾರ್ ನಟರ ಚಿತ್ರಗಳು  ಸದ್ಯಕ್ಕಿಲ್ಲ!

- ಕನ್ನಡ ಸಿನಿಮಾ ಹೆಬ್ಬಾಗಿಲಲ್ಲಿ ಇಂಥದ್ದೊಂದು ಬೋರ್ಡ್ ಬಿದ್ದು ಆರು ತಿಂಗಳು  ಕಳೆಯುತ್ತಿವೆ. ಹಾಗಂತ ಸಿನಿಮಾ ನೋಡುಗರು ಸ್ಟಾರ್‌ಗಳಿಗಾಗಿಯೇ ಕಾಯುತ್ತಿದ್ದಾರೆಯೇ ಎಂದರೆ ಅದು ಮತ್ತೊಂದು ಸಮೀಕ್ಷೆಯಾದಿತು. ಆದರೆ, ಕಳೆದ ಆರು ತಿಂಗಳುಗಳಿಂದ ಒಂದಿಬ್ಬರು ಹೊರತಾಗಿ  ಒಬ್ಬೇ ಒಬ್ಬ ಸ್ಟಾರ್ ನಟನ ಚಿತ್ರ ತೆರೆ ಮೇಲೆ ಬಂದಿಲ್ಲ. ಹೀಗಾಗಿ ತಮ್ಮ ನೆಚ್ಚಿನ ಸ್ಟಾರ್ ನಟರ ಸಿನಿಮಾಗಳ ಕನವರಿಕೆಯಲ್ಲಿದ್ದ ಅವರವರ ಅಭಿಮಾನಿಗಳಿಗೆ ‘ನಾಳೆ  ಬರುತ್ತೇವೆ’ ಅಥವಾ ‘ಸದ್ಯಕ್ಕಿಲ್ಲ’ ಎನ್ನುವ ಬೋರ್ಡ್ ಟೈಟಲ್ ಕಾರ್ಡ್‌ನಂತೆ ಕಾಣುತ್ತಿದೆ.

ಹಾಗಾದರೆ ಈ ಆರು ತಿಂಗಳು ಚಿತ್ರರಂಗವನ್ನು ಮುನ್ನಡೆಸಿದ್ದು ಯಾರು? ಸಿನಿಮಾ ವಹಿವಾಟುಗಳನ್ನು ನಿಭಾಯಿಸಿದ್ದು ಯಾರು? ಪ್ರೇಕ್ಷಕನ ಮನರಂಜನೆಯ ಮನಸ್ಸಿಗೆ ಸಮಾಧಾನ ಹೇಳಿದ್ದು ಯಾರೆಂದು ಹೊರಟರೆ ಅಪ್ಪಟ ಹೊಸ ಕಲಾವಿದರು. ಈ ಆರು ತಿಂಗಳಲ್ಲಿ ಚಿತ್ರರಂಗವನ್ನು ಅತ್ಯಂತ ಮುತುವರ್ಜಿಯಿಂದ ಸಾಕಿಕೊಂಡು ಬಂದಿದ್ದು ಹೊಸಬರ ಸಿನಿಮಾಗಳು. ಕ್ಲಾಸ್ ರೂಮ್‌ನಲ್ಲಿ ಶಿಕ್ಷಕ  ಇಲ್ಲದಿದ್ದಾಗ ವಿದ್ಯಾರ್ಥಿಯೇ ಕ್ಲಾಸ್ ಮಾಸ್ಟರ್ ಆದಂತೆ, ಮನೆ ಯಜಮಾನ ಇಲ್ಲದಿದ್ದಾಗ ಆ ಮನೆಯ ಮಕ್ಕಳೇ ಯಜಮಾನಿಕೆ ಮುಂದುವರಿಸಿದಂತೆ ಸಿನಿಮಾ ಥಿಯೇಟರ್‌ಗಳತ್ತ ದೊಡ್ಡ ನಟರು ಬಾರದಿದ್ದಾಗ ಅವರ ಅನುಪಸ್ಥಿತಿಯಲ್ಲಿ ಹೊಸ ನಟ- ನಟಿಯರು ಥಿಯೇಟರ್‌ಗಳನ್ನು ಕ್ರಿಯಾಶೀಲವಾಗಿಡುವ ಜವಾಬ್ದಾರಿಯನ್ನು ಕಳೆದ ಆರು ತಿಂಗಳುಗಳಿಂದ ಮಾಡುತ್ತ ಬಂದಿದ್ದಾರೆ.

ಹೊಸಬರಿಗೆ ಸ್ಪರ್ಧಿಗಳಿರಲಿಲ್ಲ
ಈ ಆರು ತಿಂಗಳಲ್ಲಿ ಒಟ್ಟು 75 ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ ಬಂದಿವೆ. ಇಷ್ಟು ಚಿತ್ರಗಳ ಪೈಕಿ ದೊಡ್ಡ ನಟರು ಎಂದೆಸಿಕೊಂಡವರ ಸಿನಿಮಾಗಳು ಮೈನಸ್ ಜೀರೋ. ಅಂದರೆ ಸುದೀಪ್, ಪುನೀತ್‌ರಾಜ್ ಕುಮಾರ್, ಯಶ್, ದರ್ಶನ್, ಧ್ರುವ ಸರ್ಜಾ, ಉಪೇಂದ್ರ ಮುಂತಾದ ಯಾವ ಸ್ಟಾರ್ ನಟರು ತೆರೆ ಮೇಲೆ ಬರಲೇ ಇಲ್ಲ. ಈ ಕೊರತೆಯನ್ನು ತುಂಬಿದ್ದು ಶಿವರಾಜ್‌ಕುಮಾರ್ ಮಾತ್ರ. ಶಿವಣ್ಣ ಜತೆ ದುನಿಯಾ ವಿಜಯ್, ಶರಣ್, ಚಿರಂಜೀವಿ ಸರ್ಜಾ, ನಿರೂಪ್ ಭಂಡಾರಿ ಬಂದರು. ಆದರೆ, ಕಮರ್ಷಿಯಲ್ ಹಿಟ್ ಅಂತ ಸಿಕ್ಕಿದ್ದು ಶಿವಣ್ಣನ ‘ಟಗರು’ ಹಾಗೂ ಶರಣ್ ಅವರ ‘ರ‌್ಯಾಂಬೋ 2’ಗೆ. ಇದರ ಹೊರತಾಗಿ ಈ ಆರು ತಿಂಗಳ ಸ್ಟಾರ್‌ಗಳ ಅನುಪಸ್ಥಿತಿಯಲ್ಲಿ ಚಿತ್ರರಂಗವನ್ನು ಮುನ್ನಡೆಸಿದ್ದು  ಬಹುತೇಕ ಹೊಸ ನಟರ ಸಿನಿಮಾಗಳೇ.

ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುವಾಗ ಹೊಸಬರು ಅಥವಾ ಒಂದೆರಡು ಸಿನಿಮಾಗಳನ್ನು ಮಾಡಿ ಗೆಲುವಿಗಾಗಿ ಕಾಯುತ್ತಿರುವವರು ‘ನಮಗೆ ಥಿಯೇಟರ್‌ಗಳು ಸಿಗುತ್ತಿಲ್ಲ. ಎಲ್ಲ ಚಿತ್ರಮಂದಿರಗಳು ದೊಡ್ಡ ನಟರ ಚಿತ್ರಗಳ ಪಾಲಾಗಿವೆ’ ಎಂದು ಅಳಲು ತೋಡಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಈ ಆರು ತಿಂಗಳಲ್ಲಿ ಅಂಥ ಯಾವುದೇ ತೊಳಲಾಟಗಳು ಕಾಣಲಿಲ್ಲ. ಯಾಕೆಂದರೆ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯ ಮೈದಾನಕ್ಕೆ  ಇಳಿಯಲಿಲ್ಲ. ಹೀಗಾಗಿ ತಮಗೆ ಯಾರೂ ಸ್ಪರ್ಧೆ ಇಲ್ಲ ಎನ್ನುವಂತೆ ವಾರಕ್ಕೆ ಐದಾರರ ಲೆಕ್ಕದಲ್ಲಿ ಥಿಯೇಟರ್‌ಗಳಿಗೆ ನುಗಿದ್ದು, ಹೊಸಬರು. ಆ ಮೂಲಕ ದೊಡ್ಡ ಸಿನಿಮಾಗಳ ಸ್ಪರ್ಧೆ ಇಲ್ಲದಿದ್ದರೂ ತಮಗೆ ತಾವೇ ಸ್ಪರ್ಧಿಗಳಂತೆ ಮುಗಿಬಿದ್ದರು.

ಸ್ಟಾರುಗಳಿಲ್ಲದೇ ಆರು ತಿಂಗಳು 
- ಹೀಗೆ ಸ್ಟಾರ್ ನಟರು ಬಾರದ ಆರು ತಿಂಗಳಲ್ಲಿ ಹೊಸಬರು ಅಥವಾ ಒಂದೆರಡು ಸಿನಿಮಾಗಳನ್ನು ಮಾಡಿ ಸೋಲು- ಗೆಲುವಿನ ನಡುವೆ ನಿಂತ ಹೀರೋಗಳೇ ಚಿತ್ರರಂಗವನ್ನು ಆಳಿದರು. ಸ್ಟಾರ್‌ಗಳ ಗೈರು ಹಾಜರಿಯ ಕೊರತೆಯನ್ನು ನೀಗಿಸುವಂತೆ ಬಂದಿದ್ದು ‘ಟಗರು’ ಚಿತ್ರ. ‘ಟಗರು’ ಧಮಾಕದಲ್ಲಿ ಡಾಲಿ ಜಾತ್ರೆ ಜೋರಾಗಿ ಸಾಗಿತು. ನಟ ಧನಂಜಯ್ ಅವರ ಮತ್ತೊಂದು ಇಮೇಜ್ ಅನಾವರಣಗೊಂಡಿತು. ನಿರ್ದೇಶಕ ಸೂರಿ ಎಂದಿನಂತೆ ಸಕ್ಸಸ್ ಟ್ರ್ಯಾಕ್‌ಗೆ ಮರಳಿದ್ದಾರೆ ಎನ್ನುವ ಮಾತುಗಳು ಶುರುವಾಯಿತು.

ಒಟ್ಟಿನಲ್ಲಿ ಅರ್ಧ ವರ್ಷ ಸ್ಟಾರ್ ನಟರು ಹಾಗೂ ದೊಡ್ಡ ಸಿನಿಮಾಗಳು ಥಿಯೇಟರ್‌ಗಳ ಪಾಲಿಗೆ ನಾಪತ್ತೆಯಾದಂತೆ ಕಂಡಿದ್ದು ಸುಳ್ಳಲ್ಲ. ಒಂದು ಮೂಲದ ಪ್ರಕಾರ ಆಗಸ್ಟ್ ತಿಂಗಳವರೆಗೂ ಇದೇ ಸ್ಥಿತಿ ಮುಂದುವರೆಯಲಿದೆ. ತಾಂತ್ರಿಕ ಕಾರಣ ಹಾಗೂ ಕೆಲ ನಂಬಿಕೆಗಳಿಂದ ಆಗಸ್ಟ್’ವರೆಗೂ ಸ್ಟಾರ್ ನಟರ ಸಿನಿಮಾಗಳನ್ನು ಬಿಡುಗಡೆ ಮಾಡದಿರಲು ಆಯಾ ಚಿತ್ರಗಳ ನಿರ್ಮಾಪಕರು ನಿರ್ಧರಿಸಿದ್ದು, ಇನ್ನೂ ಮೂರು ತಿಂಗಳು ಹೊಸಬರ ದರ್ಬಾರ್ ಮುಂದುವರೆಯಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!