ವಿಶ್ವ ಸಂಗೀತ ದಿನ: ವೈರಲ್ ಆದ ಕನ್ನಡ ಹಾಡು

First Published Jun 21, 2018, 8:46 PM IST
Highlights

ಜೂ. 21 ವಿಶ್ವ ಸಂಗೀತ ದಿನ  | 1982 ಜೂನ್​ 21 ರಂದು ಫ್ರಾನ್ಸ್ ನ ಪ್ಯಾರಿಸ್‌ನಿಂದ ಶುರು | ವೈರಲ್ ಆದ ‘ಮಗಳು ಜಾನಕಿ’ ಹಾಡು

ಸಂಗೀತ...

ಯೋಗ ದೇಹದ ಆರೋಗ್ಯ ಕಾಪಾಡಿದ್ರೇ ಸಂಗೀತ ಮಾನಸಿಕ ಚೈತನ್ಯ ತುಂಬುತ್ತದೆ. ಸಂಗೀತವೆಂಬುವುದೇ ಅದ್ಭುತ! ನುಡಿಸಿದಷ್ಟು ನೂತನ, ಹಾಡಿದಷ್ಟು ಹೊಸತು! ಈ ಸ್ಫೂರ್ತಿಸೆಲೆಗೆ ಗಡಿ-ಗುಡಿಗಳ ಹಂಗಿಲ್ಲ, ಅದು ಮನುಷ್ಯನ ಸಂಕುಚಿತ ವಿಚಾರಗಳನ್ನು ಮೀರಿ ವಿಶಾಲವಾದುದ್ದು. ಎಲ್ಲಾ ಋಣಾತ್ಮಕ ಮನೋಭಾವಗಳಿಗೆ ಅತೀತವಾದುದ್ದು, ಹಾಗೂ ಮಾನವೀಯ ಭಾವನೆಗಳಿಗೆ ಆತ್ಮೀಯವಾದುದ್ದು ಸಂಗೀತ.  

ಸಂಗೀತ ದಿನ ಸಂಗೀತ ಪ್ರಿಯರ ಕಿವಿ ಮನಸ್ಸಿಗೆ ಒಂದು ರೀತಿಯ ಹಬ್ಬ. ಸಂತೋಷದಲ್ಲಿಯೂ, ನೋವಿನಲ್ಲಿಯೂ ಮನಸ್ಸಿಗೆ ಮುದ ನೀಡೋದು ಇದೇ ಸಂಗೀತ.. ಸಂಗೀತ ಶಕ್ತಿ ಬಲ್ಲವನೇ ಬಲ್ಲ..! ತೇತ್ರಾಯುಗದಲ್ಲಿ ಕೃಷ್ಣನ ಕೊಳಲಿನ ದನಿಗೆ ಹಸುಗಳು ಹುಡುಕಿಕೊಂಡು ಬರ್ತಿದ್ವಂತೆ. ಕಲಿಯುಗದಲ್ಲಿ ಪಂಚಾಕ್ಷರಿ ಗವಾಯಿಗಳು ಹಾಡ್ತಿದ್ರೇ ಆಕಾಶದಿಂದ ವರುಣ ಧರೆಗಿಳಿಯುತ್ತಿದ್ದನಂತೆ. ಸಂಗೀತಕ್ಕೆ ಇರುವ ಶಕ್ತಿ ಅಂತಹದ್ದು. 

ವಿಶ್ವದ ಬೇರೆ ಬೇರೆ ಭಾಗದಲ್ಲಿ, ಬೇರೆ ಬೇರೆ ಜನ-ಸಮುದಾಯಗಳಲ್ಲಿ, ಬೇರೆ ಬೇರೆ ಸಂಸ್ಕೃತಿಗಳಲ್ಲಿ  ಬೇರೆ ಬೇರೆ ಸ್ವರೂಪದಲ್ಲಿ. ಯುಗ-ಯುಗಗಳಿಂದ ಸಂಗೀತ ಸುಧೆ ಹರಿಯುತ್ತಿದೆ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಮಾತನಾಡುವ ಭಾಷೆ ಅರ್ಥವಾಗದೇ ಇರಬಹುದು, ಆದರೆ ಸಂಗೀತದ ಭಾಷೆ ಎಲ್ಲಿ ಹೋದರೂ ಮನವರಿಕೆಯಾಗುವಂತಹದ್ದು.     

ಸಂಗೀತ ದಿನದ ಹುಟ್ಟು....

ಇತರ ವಿಶೇಷ ದಿನಗಳಂತೆ  ಸಂಗೀತಕ್ಕೂ ಇಂದಿನ ದಿನ ಮೀಸಲು. ಹೌದು, ಜೂ. 21 ವಿಶ್ವ ಸಂಗೀತ ದಿನ.

1982 ಜೂನ್​ 21 ರಂದು ಫ್ರಾನ್ಸ್‌ನ ಪ್ಯಾರಿಸ್‌ನಿಂದ  ಶುರುವಾದ ಈ ಸಂಗೀತ ದಿನವನ್ನು ಸಂಗೀತ ದಿನವನ್ನು ಮೊತ್ತಮೊದಲ ಬಾರಿಗೆ ಆರಂಭಿಸಿದ್ದು ಫ್ರೆಂಚ್ ಸಂಸ್ಕೃತಿ ಇಲಾಖೆ,  ಜ್ಯಾಕ್ ಲ್ಯಾಂಗ್ ಮತ್ತು ಮಾರಿಸ್ ಫ್ಲ್ಯುರೆಟ್. ಈಗ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.  

ಸುಮಾರು 120 ದೇಶಗಳು, 700 ನಗರಗಳಲ್ಲಿ ಈ ದಿನವನ್ನು ಬಹಳ ಹುಮ್ಮಸ್ಸಿನಿಂದ ಆಚರಿಸಲಾಗುತ್ತದೆ. ಈ ದಿನದಂದು ಸಂಗೀತಪ್ರಿಯರು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತಾರೆ. ಹೊಸ ತಲೆಮಾರಿನ ಸಂಗೀತಕಾರರಿಗೆ ಈ ಸಂದರ್ಭದಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ. 

ವೈರಲ್ ಆದ ‘ಮಗಳು ಜಾನಕಿ’ ಟೈಟಲ್ ಸಾಂಗ್:

‘ಮಗಳು ಜಾನಕಿ’ ಧಾರಾವಾಹಿಯ ಹಾಡಿನ ಧ್ವನಿಗ್ರಹಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಚ್ಎಸ್ವಿಯವರು ಬರೆದ, ಪ್ರವೀಣ್ ಡಿ. ರಾವ್ ಅತ್ಯಂತ ಸುಂದರವಾಗಿ ಸಂಯೋಜನೆ ಮಾಡಿರುವ, ಮೋಡಿ ಸೃಷ್ಟಿಸುವ ಗಾಯಕ ವಿಜಯಪ್ರಕಾಶ್ ಹಾಡಿರುವ ’ಊರ ಸೇರಬಹುದೇ ನೀನು ದಾರಿ ಮುಗಿಯದೇ...’ ಹಾಡನ್ನು ನಿರ್ದೇಶಕ ಟಿ.ಎಸನ್. ಸೀತರಾಮ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ವೈರಲ್ ಆಗಿದೆ.

click me!