‘ಪೊಗರು’ ಖದರ್ ತೋರಿಸೋದು ಯಾವಾಗ?

By Kannadaprabha NewsFirst Published Oct 6, 2018, 10:16 AM IST
Highlights

ಇಂದು ಧ್ರುವ ಸರ್ಜಾ ಹುಟ್ಟುಹಬ್ಬ. ‘ಪೊಗರು’ ಚಿತ್ರದ ಸ್ಟ್‌ಲುಕ್ ಟೀಸರ್ ಇಂದು ರಿಲೀಸ್ ಆಗುತ್ತಿದೆ. ಎಂದಿನಂತೆ ಧ್ರುವ ಸರ್ಜಾ ನಟನೆಯ ಸಿನಿಮಾ ಕೂಡ ತಡವಾಗುತ್ತಿದೆ. ಇಂಥಾ ಸಂದರ್ಭದಲ್ಲಿ ಬರ್ತ್‌ಡೇ ಬಾಯ್ ಜತೆ ಮಾತುಕತೆ.

ಈ ಬಾರಿ ನಿಮ್ಮ ಹುಟ್ಟುಹಬ್ಬದ ವಿಶೇಷತೆಗಳೇನು?
ತುಂಬಾ ಸ್ಪೆಷಲ್ ಅಂತೇನು ಇಲ್ಲ. ನನ್ನ ನಟನೆಯ ‘ಪೊಗರು’ ಚಿತ್ರದ ಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ಚಿತ್ರದ ಪೋಸ್ಟರ್ ಬಂದಿದ್ದು, ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಅದೇ ಕುತೂಹಲ ಟೀಸರ್ ಮೇಲಿದೆ. ಎಂದಿನಂತೆ ಅಭಿಮಾನಿಗಳ ಜತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಮಾಡಿಕೊಳ್ಳುತ್ತೇವೆ.

ಟೀಸರ್‌ನಲ್ಲಿ ಏನೆಲ್ಲ ವಿಶೇಷತೆಗಳಿವೆ?
ಚಂದನ್ ಶೆಟ್ಟಿ ಹಾಡು ಇರುತ್ತದೆ. ನಾನು ಚಿತ್ರರಂಗಕ್ಕೆ ಬರುವುದಕ್ಕೆ ಮೊದಲು ಚಂದನ್ ಶೆಟ್ಟಿ ಅವರ ಆಲ್ಬಂನಲ್ಲಿ ಹೆಜ್ಜೆ ಹಾಕಿದ್ದೆ. ಆ ನಂತರ ಅವರ ಆಲ್ಬಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹತ್ತು ವರ್ಷಗಳ ನಂತರ ಚಂದನ್ ಶೆಟ್ಟಿ ಹಾಡಿನಲ್ಲಿ ನಾನು ಕಾಣಿಸುತ್ತಿದ್ದೇನೆ. ಅದೇ ಸ್ಪೆಷಲ್.

ಚಿತ್ರದ ಕತೆಗಿಂತ ನಿಮ್ಮ ತಯಾರಿಗಳೇ ಜೋರಾಗಿರುತ್ತವೆ ಅನ್ನಿ?
ನಿರ್ದೇಶಕರು ಕತೆ ಪೂರ್ತಿ ಬರೆದು ಮುಗಿಸಿದ ಮೇಲೆ, ನಾನು ರೀಡಿಂಗ್ ತೆಗೆದುಕೊಂಡ ನಂತರವೇ ನಾನು ತಯಾರಾಗುವುದಕ್ಕೆ ಹೊರಡುತ್ತೇನೆ. ಹೀಗಾಗಿ ಒಂದು ಕತೆಯ ಪಾತ್ರಧಾರಿಯಾಗಿ ನನ್ನ ತಯಾರಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇನೋ ಅಷ್ಟೇ ಮಹತ್ವ ಕತೆಗೂ ಕೊಡುತ್ತೇನೆ. ಅಲ್ಲದೆ ಸಿನಿಮಾಗಳು ತಡವಾಗುವುದು ಕೇವಲ ನಾಯಕನೊಬ್ಬನಿಂದಲೇ ಅಲ್ಲ.

ಸರಿ, ಪೊಗರು ಚಿತ್ರದಲ್ಲಿ ನೀವು ಏನಾಗಿರುತ್ತೀರಿ?
ಈ ಹಿಂದಿನ ಮೂರು ಚಿತ್ರಗಳಲ್ಲಿ ಕಾಣಿಸಿಕೊಳ್ಳದವನಾಗಿರುತ್ತೇನೆ. ತುಂಬಾ ಸ್ಮಾರ್ಟ್ ಆ್ಯಂಡ್ ಫ್ಯಾಮಿಲಿ ಹುಡುಗನಾಗಿರುತ್ತೇನೆ. ಕೇವಲ ಆ್ಯಕ್ಷನ್‌ಗೆ ಮಾತ್ರವಲ್ಲ, ಕೌಟುಂಬಿಕ ಕತೆಗೂ ಈ ಚಿತ್ರದಲ್ಲಿ ಮಹತ್ವ ಇದೆ.
ಹೀಗಾಗಿ ಚಿತ್ರದಲ್ಲಿ ಎರಡು ರೀತಿಯ ಪಾತ್ರಗಳು ಬರುತ್ತವೆ. ಕಾಲೇಜು ಹುಡುನಾಗಿ ಮಾತ್ರ ನಟಿಸುತ್ತಿಲ್ಲ. ಕಾಲೇಜು ಆಚೆ ನಿಂತವನಾಗಿರುತ್ತೇನೆ. ಪಕ್ಕಾ ಮಾಸ್ ಲುಕ್‌ನಲ್ಲೇ ಇಡೀ ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್ ಇರುತ್ತದೆ. ನಿರ್ದೇಶಕ ನಂದಕಿಶೋರ್ ಅವರು ತುಂಬಾ ಚೆನ್ನಾಗಿ ಇಡೀ ಸಿನಿಮಾ ರೂಪಿಸುತ್ತಿದ್ದಾರೆ.

ಈಗ ಚಿತ್ರೀಕರಣ ಎಲ್ಲಿವರೆಗೂ ಬಂದಿದೆ?
ಶೇ. 35ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಇನ್ನೂ 50 ರಿಂದ 52 ದಿನ ಶೂಟಿಂಗ್ ಮಾಡಿದರೆ ಪೊಗರು ಶೂಟಿಂಗ್ ಮುಕ್ತಾಯಗೊಳ್ಳಲಿದೆ. ಇಲ್ಲಿವರೆಗೂ ಹೆಚ್ಚಾಗಿ ಬಾಲಕನಾಗಿದ್ದಾಗಿನ ದೃಶ್ಯಗಳ ಚಿತ್ರೀಕರಣ ಆಗಿದೆ. ಚಿತ್ರ ಅದ್ದೂರಿಯಾಗಿ ಬರುವುದಕ್ಕೆ ನಿರ್ಮಾಪಕ ಗಂಗಾಧರ್ ಅವರು ಎಲ್ಲ ರೀತಿಯಲ್ಲೂ ಸಾಥ್ ನೀಡುತ್ತಿದ್ದಾರೆ.

ಚಿತ್ರೀಕರಣ ಅರ್ಧ ಮುಗಿಯುತ್ತಿದ್ದರೂ ನಾಯಕಿನೇ ಸಿಕ್ಕಿಲ್ಲ. ನಿಜ ಜೀವನದಲ್ಲೂ ಹುಡುಗಿನಾ ಹುಡುಕಕ್ಕೆ ಇಷ್ಟೇ ಕಷ್ಟ ಕೊಡ್ತೀರಾ?
ಹ್ಹಹ್ಹಹ್ಹ.... ಅಯ್ಯೋ ಇಲ್ಲ. ನಿಜ ಜೀವನದಲ್ಲಿ ನನ್ನ ಸಂಗಾತಿ ಹುಡುಕಿಕೊಳ್ಳುವುದಕ್ಕೆ ಇಷ್ಟು ಕಾಯಿಸಲ್ಲ ಬಿಡಿ. ಆದರೆ, ಯಾಕೋ ಈ ಚಿತ್ರಕ್ಕೆ ಸೂಕ್ತ ನಾಯಕಿ ಇನ್ನೂ ಸಿಕ್ಕಿಲ್ಲ. ಖಂಡಿತ ಸದ್ಯದಲ್ಲೇ ಸಿಗುವ ಸಾಧ್ಯತೆಗಳಿವೆ.

ಪೊಗರು ಮುಗಿದ ಮೇಲೆ ಯಾವ ಸಿನಿಮಾ?
ಈಗಾಗಲೇ ಗೊತ್ತು ಮಾಡಿರುವಂತೆ ಉದಯ್ ಕೆ ಮಹ್ತಾ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತೇನೆ. ಇದರ ನಿರ್ದೇಶಕರು ಇನ್ನೂ ಅಂತಿಮಗೊಂಡಿಲ್ಲ. ಆದರೆ, ಕತೆ ಮಾತ್ರ ತೆಲುಗಿನ ಕೋನಾ ವೆಂಕಟ್ ಬರುತ್ತಿದ್ದಾರೆ. 

click me!