ಹುಡುಗಿಯರೇ ಇಲ್ಲದ ಚಿತ್ರ ಮಿಸ್ಡ್ ಕಾಲ್

By Kannadaprabha NewsFirst Published Jan 7, 2019, 11:05 AM IST
Highlights

ಸಿನಿಮಾ ಅಂದ್ಮೇಲೆ ಅಲ್ಲೊಂದು ಪ್ರೀತಿಯ ಕತೆ ಇದ್ದೇ ಇರುತ್ತೆ. ಹಾಗೆಯೇ ಆ ಕತೆ ಹೇಳಲು ನಾಯಕ ಹಾಗೂ ನಾಯಕಿಯೂ ಇರುತ್ತಾರೆ. ಅದು ಸಿನಿಮಾದ ಸಿದ್ಧ ಸೂತ್ರವೂ ಹೌದು. ಆದರೂ ಈ ಸಿನಿಮಾದಲ್ಲಿ ನಾಯಕಿ ಇಲ್ಲ. ಬದಲಿಗೆ ಒಂದು ಮೊಬೈಲ್ ಇದೆ. ಅದೇ ನಾಯಕಿ ಜಾಗದಲ್ಲಿ ಕಾಣಿಸಿಕೊಳ್ಳುತ್ತೆದೆ.

ಅದೇ ಈ ಚಿತ್ರದ ವಿಶೇಷ. ಆ ಚಿತ್ರದ ಹೆಸರು ‘ಮಿಸ್ಡ್ ಕಾಲ್’. 2013ರಲ್ಲೇ ಶುರುವಾದ ಸಿನಿಮಾವಿದು. ತಿಮ್ಮಪ್ಪಳ್ಳಿ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಸೆಟ್ಟೇರಿದ ಚಿತ್ರ. ಮುಹೂರ್ತ ಮುಗಿಸಿ ಸುಮಾರು ನಾಲ್ಕೈದು ವರ್ಷಗಳೇ ಆಗಿವೆ. ಇದೀಗ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ.

ಜನವರಿ ಮೂರನೇ ವಾರ ಚಿತ್ರವನ್ನು ತೆರೆಗೆ ಬರುವ ಸಾಧ್ಯತೆಗಳು ಇವೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿದ್ದ ನಿರ್ದೇಶಕ ತಿಮ್ಮಪ್ಪಳ್ಳಿ ಚಂದ್ರು, ಚಿತ್ರದ ವಿಶೇಷತೆ ಹೇಳಿಕೊಳ್ಳುವ ಮುನ್ನ, ಚಿತ್ರದ ಟ್ರೇಲರ್ ಹಾಗೂ ಎರಡು ಹಾಡು ತೋರಿಸಿ ಮಾತಿಗೆ ನಿಂತರು. ‘ಸಿನಿಮಾ ತಡವಾಯಿತು. ಅದಕ್ಕೆ ನಾನೇ ಕಾರಣ. ಹಣಕಾಸಿನ ಮುಗ್ಗಟ್ಟಿನ ನಡುವೆಯೂ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದೆ. ಅಂದುಕೊಂಡಂತೆ ಚಿತ್ರವನ್ನು ತೆರೆಗೆ ತರಬೇಕು ಅಂತ ಹೊರಟೆ. ಮೂಲ ಪ್ಲ್ಯಾನ್‌ಗಿಂತಲೂ ಹೆಚ್ಚು ಹಣ ಬೇಕಾಯಿತು. ಹಾಗಾಗಿ ತಡವಾಯಿತು’ ಅಂತ ಪತ್ರಕರ್ತರು ಪ್ರಶ್ನೆ ಕೇಳುವ ಮುನ್ನವೇ ಉತ್ತರಿಸಿಬಿಟ್ಟರು. ‘ಮೊಬೈಲ್ ಕ್ರಾಂತಿಯಾದ ನಂತರ ನಾವೆಲ್ಲ ಬದಲಾಗಿದ್ದೇವೆ. ಮನುಷ್ಯ ಮನುಷ್ಯರ ನಡುವೆಯೇ ಮಾತುಕತೆ ಕಮ್ಮಿ ಆಗಿದೆ. ಎಲ್ಲರಿಗೂ ಮೊಬೈಲ್ ಮೇಲೆಯೇ ಹೆಚ್ಚು ಪ್ರೀತಿ. ಸಂಬಂಧಗಳಲ್ಲಿ ಆತ್ಮೀಯತೆ ಕಮ್ಮಿ ಆಗಿದೆ. ನಾನು ಅನುಭವಿಸಿದ ಆ ರೀತಿಯ ಒಂದು ಕತೆಯೇ ಈ ಚಿತ್ರ. ಮೊಬೈಲ್ ಅನ್ನೇ ನಾಯಕಿ ಜಾಗದಲ್ಲಿಟ್ಟು, ಹೊಸ ಬಗೆಯ ಕತೆಯನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಇದು ಈ ಕಾಲದ ಪ್ರತಿಯೊಬ್ಬರಿಗೂ ಇಷ್ಟವಾಗುವುದು ಗ್ಯಾರಂಟಿ. ದುಡ್ಡು ಕೊಟ್ಟು ಸಿನಿಮಾ ನೋಡುವವರಿಗೆ ಚಿತ್ರ ಬೇಸರ ತರಲು ಸಾಧ್ಯವೇ ಇಲ್ಲ. ಯಾಕಂದ್ರೆ ಇದು ಪಕ್ಕಾ ಕಮರ್ಷಿಯಲ್ ಆ್ಯಂಡ್ ಎಂಟರ್ ಟೈನರ್ ಮೂವೀ’ ಅಂತ ಚಂದ್ರು ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರದ ನಾಯಕರಾದ ರಾಜ್ ಕಿರಣ್, ದಕ್ಷ, ಸಹ ನಿರ್ಮಾಪಕ ಕಮ್ ನಟ ಕಿಶೋರ್ ಕುಮಾರ್ ಪಾತ್ರದ ಜತೆಗೆ ಚಿತ್ರೀಕರಣದ ಅನುಭವ ಹಂಚಿಕೊಂಡರು.

ಕಾರ್ತಿಕ್ ಡ್ರಿಮ್ಸ್‌ಬ್ಯಾನರ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ವೆಂಕಟೇಶ್ ಕೂಡ ಸಾಥ್ ನೀಡಿದ್ದಾರೆ. ಹೆಸರಾಂತ ವಿತರಕ ರಾಂ ಪ್ರಕಾಶ್ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ಚಿತ್ರಕ್ಕೆ ಶುಭ ಕೋರಲು ಬಂದ ನಿರ್ಮಾಪಕ ಆರ್.ಎಸ್. ಗೌಡ , ಟ್ರೇಲರ್ ಲಾಂಚ್ ಮಾಡಿ, ನಿರ್ಮಾಪಕರ ಕಷ್ಟ ಹಂಚಿಕೊಂಡರು. ಹಾಗೆಯೇ ಒಳ್ಳೆಯ ಸಿನಿಮಾ ಮಾಡಿದ್ದಾರೆನ್ನುವ ಭರವಸೆ ವ್ಯಕ್ತಪಡಿಸಿದರು. ವಿಜಯ್ ಕೃಷ್ಣ ಸಂಗೀತ ಚಿತ್ರಕ್ಕಿದೆ.

 

click me!